ಭಾರತ-ಯುಎಇ ಪ್ರಯಾಣಿಕ ವಿಮಾನ ಹಾರಾಟ ನಿಷೇಧ ಜುಲೈ 6ವರೆಗೆ ವಿಸ್ತರಣೆ
ವಿಮಾನಯಾನ ಕಂಪೆನಿ ಎಮಿರೇಟ್ಸ್ ಘೋಷಣೆ
ದುಬೈ (ಯುಎಇ), ಜೂ. 10: ಭಾರತದಿಂದ ಯುಎಇಗೆ ಒಳಬರುವ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವು ಜುಲೈ 6ರವರೆಗೆ ಮುಂದುವರಿಯುವುದು ಎಂದು ದುಬೈಯ ವಿಮಾನಯಾನ ಕಂಪೆನಿ ಎಮಿರೇಟ್ಸ್, ಪ್ರಯಾಣಿಕರಿಗೆ ತಿಳಿಸಿದೆ.
‘‘ಭಾರತದಿಂದ ಪ್ರಯಾಣಿಕರನ್ನು ಹೊತ್ತು ತರುವ ನಮ್ಮ ವಿಮಾನಗಳ ಮೇಲಿನ ನಿಷೇಧವನ್ನು ನಾವು ಜುಲೈ 6ರವರೆಗೆ ವಿಸ್ತರಿಸುತ್ತಿದ್ದೇವೆ. ನಮ್ಮ ವೆಬ್ಸೈಟನ್ನು ಶೀಘ್ರವಾಗಿ ಪರಿಷ್ಕರಿಸುತ್ತೇವೆ. ನಿಮ್ಮ ಟಿಕೆಟ್ ಖರೀದಿಗೆ ಸಂಬಂಧಿಸಿ ಮಾಹಿತಿ ಬೇಕಿದ್ದರೆ ನಿಮ್ಮ ರೆಫರೆನ್ಸ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಟ್ವಿಟರ್ನಲ್ಲಿ ನೇರ ಸಂದೇಶ (ಡಿಎಮ್)ದ ಮೂಲಕ ನಮಗೆ ಕಳುಹಿಸಿ. ನಾವಿಲ್ಲಿ ನಿಮಗೆ ಸಹಾಯ ಮಾಡುವುದಕ್ಕಾಗಿ ಇದ್ದೇವೆ. ಸುರಕ್ಷಿತವಾಗಿರಿ’’ ಎಂದು ಪ್ರಯಾಣಿಕರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಟ್ವಿಟರ್ನಲ್ಲಿ ಹೇಳಿದೆ.
ಕೊರೋನ ವೈರಸ್ನ ಎರಡನೇ ಅಲೆ ಭಾರತದಲ್ಲಿ ಭಾರೀ ಪ್ರಾಣ ಹಾನಿಗೆ ಕಾರಣವಾದ ಬಳಿಕ, ಭಾರತದಿಂದ ಯುಎಇಗೆ ಒಳಬರುವ ಪ್ರಯಾಣಿಕ ವಿಮಾನಗಳ ಮೇಲೆ ಎಪ್ರಿಲ್ 24ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲಾಗಿತ್ತು. ಬಳಿಕ ಅದನ್ನು ಯುಎಇಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣೆ ಪ್ರಾಧಿಕಾರ (ಎನ್ಸಿಇಎಮ್ಎ)ವು ಮೇ 4ರಂದು ವಿಸ್ತರಿಸಿತ್ತು.
ಭಾರತದಿಂದ ಯುಎಇಗೆ ಹೋಗುವ ವಿಮಾನಗಳಲ್ಲಿ ಪ್ರಯಾಣಿಸಲು ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾಗಳನ್ನು ಹೊಂದಿರುವವರು ಮತ್ತು ರಾಜತಾಂತ್ರಿಕರಿಗೆ ಮಾತ್ರ ಈಗ ಅವಕಾಶ ನೀಡಲಾಗುತ್ತಿದೆ.
ಅದೇ ವೇಳೆ, ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕಾರ (ಜಿಸಿಎಎ)ದಿಂದ ಅನುಮೋದನೆ ಪಡೆದ ವಿಶೇಷ ವಿಮಾನಗಳಿಗೂ ಭಾರತದಿಂದ ಯುಎಇಗೆ ಹೋಗಲು ಅವಕಾಶ ನೀಡಲಾಗುತ್ತಿದೆ.