varthabharthi


ಕರ್ನಾಟಕ

ಹುಣಸೋಡು ಸ್ಫೋಟ ಪ್ರಕರಣ: ಐವರು ಆರೋಪಿಗಳಿಗೆ ಜಾಮೀನು

ವಾರ್ತಾ ಭಾರತಿ : 10 Jun, 2021

ಶಿವಮೊಗ್ಗ, ಜೂ.10: ದೇಶದ ಗಮನ ಸೆಳೆದಿದ್ದ ಹುಣಸೋಡು ಸ್ಫೋಟ ಪ್ರಕರಣದ ಐದು ಜನ ಆರೋಪಿಗಳಿಗೆ ಗುರುವಾರ ಜಾಮೀನು ಸಿಕ್ಕಿದ್ದು, ಐವರ ಅರ್ಜಿಯನ್ನು ವಜಾಗೊಳಿಸಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು ಒಂದೂವರೆ ತಿಂಗಳ ಹಿಂದೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳನ್ನು ಬಂಧಿಸಿ 130ಕ್ಕೂ ಅಧಿಕ ದಿನಗಳಾಗಿದ್ದು, ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಮುಸ್ತಫಾ ಹುಸೇನ್ ಅವರು, ಹುಣಸೋಡು ಸ್ಫೋಟ ನಡೆದ ಸ್ಥಳದ ಮಾಲಕ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದವರು ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಕ್ವಾರಿ ನಡೆಸುತ್ತಿದ್ದ ಭೂಮಿಯ ಮಾಲಕ ಎಸ್.ಟಿ.ಕುಲಕರ್ಣಿ, ಅವರ ಮಗ ಅವಿನಾಶ್ ಕುಲಕರ್ಣಿ ಮತ್ತು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಮಮ್ತಾಜ್ ಅಹಮ್ಮದ್, ರಶೀದ್ ಮತ್ತು ನರಸಿಂಹ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಆಂಧ್ರಪ್ರದೇಶದ ರಾಯದುರ್ಗದಲ್ಲಿರುವ ಸ್ಫೋಟಕ ದಾಸ್ತಾನು ಗೋದಾಮಿನ ಮಾಲಕ ಪಿ.ಶ್ರೀರಾಮಲು ಹಾಗೂ ಅವರ ಮಕ್ಕಳಾದ ಪಿ.ಮಂಜುನಾಥ್ ಸಾಯಿ, ಪೃಥ್ವಿರಾಜ್ ಸಾಯಿ, ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಹಾಗೂ ಕಲ್ಲು ಕ್ವಾರಿ ಮಾಲಕ ಸುಧಾಕರ್ ಅವರಿಗೆ ಜಾಮೀನು ಮಂಜೂರು ಮಾಡಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)