varthabharthi


ಕ್ರೀಡೆ

ಶ್ರೀಲಂಕಾ ವಿರುದ್ಧದ ಏಕದಿನ, ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಧವನ್ ಸಾರಥ್ಯ

ವಾರ್ತಾ ಭಾರತಿ : 10 Jun, 2021

ಹೊಸದಿಲ್ಲಿ: ಮುಂದಿನ ತಿಂಗಳು ನಿಗದಿಯಾಗಿರುವ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ.

ಜುಲೈ 13ರಿಂದ 25ರ ತನಕ ನಿಗದಿಯಾಗಿರುವ ಸೀಮಿತ ಓವರ್ ಗಳ ಸರಣಿಗೆ ಆರಂಭಿಕ ಬ್ಯಾಟ್ಸ್ ಮನ್  ಶಿಖರ್ ಧವನ್ ಗೆ ನಾಯಕತ್ವ ಹೊಣೆ ವಹಿಸಿಕೊಡಲಾಗಿದೆ. ವೇಗದ ಬೌಲರ್ ಭುವನೇಶ್ವರ ಕುಮಾರ್ ಉಪ ನಾಯಕನಾಗಿರುತ್ತಾರೆ. ಜುಲೈ ವೇಳೆ ಭಾರತದ ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲಿರುವ ಕಾರಣ ಧವನ್ ಗೆ ನಾಯಕತ್ವ ನೀಡಲಾಗಿದೆ.

ಚೇತನ್ ಸಕಾರಿಯ, ದೇವದತ್ತ ಪಡಿಕ್ಕಲ್ ಹಾಗೂ ಋತುರಾಜ್ ಗಾಯಕ್ವಾಡ್ ಸಹಿತ ಹಲವು ಆಟಗಾರರಿಗೆ ಮೊದಲ ಬಾರಿ ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಲಾಗಿದೆ.

ಭಾರತವು ಶ್ರೀಲಂಕಾ ಪ್ರವಾಸದ ವೇಳೆ ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ  ತಲಾ 3 ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನಾಡಲಿದೆ.

ಭಾರತ ತಂಡ: ಶಿಖರ್ ಧವನ್(ನಾಯಕ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್,ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಯಜುವೇಂದ್ರ ಚಹಾಲ್, ರಾಹುಲ್ ಚಹಾರ್, ಕೆ.ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ ಕುಮಾರ್(ಉಪ ನಾಯಕ), ದೀಪಕ್ ಚಹಾರ್, ನವದೀಪ್ ಸೈನಿ, ಚೇತನ್ ಸಕಾರಿಯ.

ನೆಟ್ ಬೌಲರ್ ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷದೀಪ್ ಸಿಂಗ್, ಸಾಯಿ ಕಿಶೋರ್, ಸಿಮ್ರಾನ್ ಜೀತ್ ಸಿಂಗ್.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)