varthabharthi


ನಿಮ್ಮ ಅಂಕಣ

ಉತ್ತರಿಸಬೇಕಾದ ನಾಯಕರು

ವಾರ್ತಾ ಭಾರತಿ : 11 Jun, 2021
ಮನೋಜ್ ಕುಮಾರ್ ಝಾ, ರಾಜ್ಯಸಭಾ ಸದಸ್ಯರು

ಮೊದಲ ಕೋವಿಡ್-19 ಅಲೆಯಿಂದ ಎರಡನೇ ಅಲೆಯವರೆಗೆ ಕೆಲವು ಸಂಗತಿಗಳು, ವಿಷಯಗಳು ಭಾರತದಲ್ಲಿ ಬದಲಾಗದೆ ಇದ್ದ ಹಾಗೆಯೇ ಇವೆ; ಇದ್ದ ಹಾಗೆಯೇ ಮುಂದುವರಿದಿವೆ. ಮೊದಲನೆಯದಾಗಿ ಕೇಂದ್ರ ಹಾಗೂ ವಿಭಿನ್ನ ರಾಜ್ಯಗಳ ಸರಕಾರಗಳು ಕೊರೋನ ನಿರ್ವಹಣೆಯಲ್ಲಿ ತಮ್ಮ ಅಸಾಮರ್ಥ್ಯವನ್ನು ತೋರಿಸಿಕೊಟ್ಟಿವೆ. ಎರಡನೆಯದಾಗಿ, ನಾವು ಸಾಂಕ್ರಾಮಿಕವೊಂದರ ನಡುವಿನಲ್ಲೇ ಇರುವಾಗ, ಅಧಿಕಾರರೂಢ ಪಕ್ಷ ‘‘ರಾಜಕೀಯ ಮಾಡುವುದನ್ನು ನಿಲ್ಲಿಸಿ’’ ಎಂದು ಎಲ್ಲರಿಗೆ ಹೇಳುತ್ತಲೇ ಬಂದಿದೆ. ಮೊದಲ ಬಾರಿ ಹೇಳುವಾಗ ಸರಕಾರ ಹೀಗೆ ಹೇಳುವುದು ಸರಿಯೆಂದು ಅನಿಸುತ್ತದೆ. ಆದರೂ ಪುನಃ ಪುನಃ ಇಂತಹ ವಿನಂತಿಗಳು ಅವುಗಳ ಹಿಂದಿರುವ ಕಾರಣಗಳನ್ನು ಹುಡುಕುವಂತೆ ನಮ್ಮನ್ನು ಪ್ರೇರೇಪಿಸುತ್ತವೆ.

ಇದು ನಮ್ಮನ್ನು ‘ಹಾಗಾದರೆ ರಾಜಕೀಯ ಅಂದರೆ ಏನು?’ ಎಂಬ ಪ್ರಶ್ನೆ ಕೇಳುವಂತೆ ಮಾಡುತ್ತದೆ ರಾಜಕೀಯವೆಂದರೆ ಅದು ಅಸೆಂಬ್ಲಿಗಳಲ್ಲಿ ಹಾಗೂ ಸಂಸತ್‌ನಲ್ಲಿ ಏನು ನಡೆಯಿತೋ ಅದು ಅಷ್ಟೇ ಅಲ್ಲ. ರಾಜಕೀಯ ಅಂದರೆ ಅಧಿಕಾರ ದಾಹವನ್ನು ಸೂಚಿಸುವ ಒಂದು ಕೊಳಕು ಶಬ್ದ ಅಥವಾ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಇರುವ ಒಂದು ದಾರಿ ಎಂದು ಕೂಡ ತಿಳಿಯಕೂಡದು. ರಾಜಕೀಯದ ಒಂದು ಮುಖ್ಯ ಅಂಶವೆಂದರೆ ನಾಗರಿಕರ ಹಿತಾಸಕ್ತಿಗಳಿಗೆ ಪೂರಕವಾದ ದಾರಿಗಳನ್ನು, ಅವಕಾಶಗಳನ್ನು ಸೃಷ್ಟಿಸುತ್ತಲೇ ಇರುವುದು. ಪ್ರಜ್ಞಾವಂತ ನಾಗರಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಹಾಗೂ ತಾವೇ ಚುನಾಯಿತ ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದು ಇಂತಹ ದಾರಿಗಳಿದ್ದಾಗ ಮಾತ್ರ. ಈಗ ನಾವು ಎದುರಿಸುತ್ತಿರುವ ಕೊರೋನದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮವೊಂದರ ಮೂಲಕ ಭಯ, ಆಘಾತ, ಆತಂಕಗಳನ್ನು ಅಭಿವ್ಯಕ್ತಿಸುವ, ಹಂಚಿಕೊಳ್ಳುವ ಅವಕಾಶ ಜನರಿಗೆ ಇರಲೇಬೇಕು. ಇಂತಹ ಆತಂಕಗಳನ್ನು, ಪ್ರಶ್ನೆಗಳನ್ನು ದಮನಿಸುವ ಯಾವುದೇ ಸರಕಾರ ರಾಜಕಾರಣದ ಮೂಲ ಪರಿಕಲ್ಪನೆಗೇ ಹೊಡೆತ ನೀಡಿದಂತಾಗುತ್ತದೆ.

ತಾವು ಸೃಷ್ಟಿಸಿದ ಅಸ್ತವ್ಯಸ್ತತೆಯನ್ನು ಇನ್ನೂ ತಮಗೆ ನಿಯಂತ್ರಿಸಲು, ನಿಭಾಯಿಸಲು ಸಾಧ್ಯವಿಲ್ಲವೆಂದು ಪ್ರಭುತ್ವಗಳಿಗೆ ಅನಿಸಿದಾಗಲೆಲ್ಲಾ ಅವುಗಳು ಮಾಡುವ ಮೊದಲ ಕೆಲಸ ತಮ್ಮ ತಂತ್ರವನ್ನು, ಗುರಿಗಂಬಗಳನ್ನು (ಗೋಲ್‌ಪೋಸ್ಟ್) ಬದಲಾಯಿಸಬಹುದೆಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಹೀಗಾಗಿ ರಾಜಕಾರಣ ಮಾಡಬೇಡಿ ಎಂಬುದು ಆಳುವವರ ಕೈಯಲ್ಲಿರುವ ಏಕೈಕ ಅಸ್ತ್ರವಾಗಿದೆ. ಕಳೆದ ಎಂಟು ವಾರಗಳಲ್ಲಿ ಅಸಂಖ್ಯ ಜನರಿಗೆ ಆಸ್ಪತ್ರೆ ಹಾಸಿಗೆಗಳ, ಆಮ್ಲಜನಕ ಅಥವಾ ಜೀವರಕ್ಷಕ ಔಷಧಿಗಳ ಅವಶ್ಯಕತೆ ಇತ್ತು. ಆದರೆ ಕೆಲವೇ ಸಾವಿರ ಮಂದಿಗಷ್ಟೇ ಇವುಗಳು ದೊರೆತವು. ಜೀವರಕ್ಷಕ ಉಪಕರಣ ಅಥವಾ ಔಷಧಿಯ ಅಲಭ್ಯತೆಯಿಂದಾಗಿ ಸಾವಿರಾರು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ವಿಪಕ್ಷಗಳ ಸದಸ್ಯರು, ನಾಗರಿಕ ಸಮಾಜದ ತಂಡಗಳು, ಕಾರ್ಯಕರ್ತರು, ನೂರಾರು ಮಂದಿ ವೈದ್ಯರು ಹಾಗೂ ಆರೋಗ್ಯ ಸೇವಾ ವೃತ್ತಿಪರರು ಕೊರೋನ ಎರಡನೇ ಅಲೆ ಆರಂಭವಾಗುವ ಮೊದಲೇ ಆರೋಗ್ಯಸೇವಾ ಮೂಲ ಚೌಕಟ್ಟಿನಲ್ಲಿರುವ ಭಾರೀ ಕೊರತೆ ಹಾಗೂ ದೋಷಗಳ ಬಗ್ಗೆ ತಮ್ಮ ಕಾಳಜಿ, ಆತಂಕ ವ್ಯಕ್ತಪಡಿಸಿದ್ದರು. ಆದರೆ ಅವರ ಕಾಳಜಿ, ಆತಂಕಗಳನ್ನು ಲೇವಡಿ ಮಾಡಿ ತಳ್ಳಿಹಾಕಲಾಯಿತು.

ಅವರೆಲ್ಲರ ಮಾತುಗಳನ್ನು, ಧ್ವನಿಗಳನ್ನು ರಾಜಕೀಯವೆಂದು ಹಣೆಪಟ್ಟಿ ಅಂಟಿಸಲು ಸರಕಾರ ತನ್ನ ಸಚಿವರನ್ನು ಹಾಗೂ ವಕ್ತಾರರನ್ನು ಬಳಸಿಕೊಂಡಿತು. ನೋವು, ಯಾತನೆ ಹಾಗೂ ದುಃಖ ಜನರಲ್ಲಿ ದೀರ್ಘಕಾಲ ಉಳಿಯುವ ಭಾವನೆಗಳೆಂಬುದನ್ನು ಜನರನ್ನು ಆಳುವ ಪ್ರಭುತ್ವ ಅರ್ಥಮಾಡಿಕೊಳ್ಳಬೇಕಾಗಿದೆ. ಸಾಂಕ್ರಾಮಿಕದ ತಪ್ಪು ನಿರ್ವಹಣೆಯಿಂದಾಗಿ ಅಸಮರ್ಪಕ ನಿಭಾವಣೆಯಿಂದಾಗಿ ದೇಶದಲ್ಲಿ ಸಾವಿರಾರು ಕುಟುಂಬಗಳು ಕಣ್ಣೀರು ಸುರಿಸುವಂತಾಗಿದೆ. ನಿಗದಿತವಾಗಿ ನಡೆಯುವ ಪತ್ರಿಕಾಗೋಷ್ಠಿಗಳು, ಅವುಗಳ ಮೂಲಕ ಸೋಂಕು ಗುಣಮುಖ ಪ್ರಮಾಣ ಹೆಚ್ಚಳವಾಗಿದೆ ಎಂದೋ ಅಥವಾ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ ಎಂದೋ ಜನರಿಗೆ ತಿಳಿಸುವುದು ಮುಖ್ಯ, ಹೌದು. ಆದರೆ ತಮ್ಮ ಪ್ರೀತಿಪಾತ್ರರನ್ನು ಸೋಂಕಿನಿಂದಾಗಿ ಅಷ್ಟೇ ಅಲ್ಲ ಅವರ ಜೀವಗಳನ್ನು ಉಳಿಸಬಹುದಾಗಿದ್ದ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಕಳೆದುಕೊಂಡಿರುವವರಿಗೆ ಇಂತಹ ಪತ್ರಿಕಾಗೋಷ್ಠಿಗಳು ಸಾಂತ್ವನ ನೀಡಲಾರವು. ದುಃಖತಪ್ತ ಕುಟುಂಬಗಳ ಸದಸ್ಯರ ಸಂದರ್ಶನ ನಡೆಸಿದಾಗ ತಮಗಾದ ತುಂಬಲಾಗದ ನಷ್ಟಕ್ಕೆ ಅವರು ರೋಗಾಣುಗಳನ್ನಷ್ಟೇ ಬಯ್ಯುವುದಲ್ಲ, ಸರಕಾರದ ನಿರ್ಲಕ್ಷ್ಯ ಹಾಗೂ ಭಾವಶೂನ್ಯ ತೆಗಾಗಿಯೂ ಬಯ್ಯುತ್ತಾರೆ.

ನಮ್ಮ ರಾಜಕೀಯ ನಾಯಕರು ದಿನಕಳೆದಂತೆ ಜನರಿಂದ ಹೆಚ್ಚು ದೂರವಾಗು ತ್ತಿದ್ದಾರೆ ಎಂದು ಫ್ರೆಂಚ್ ಸಮಾಜಶಾಸ್ತ್ರಜ್ಞ ಅಲೈನ್ ಟಾರೈನ್ ಹೇಳುತ್ತಾನೆ. ಈ ಮಾತು ನಮ್ಮ ಇಂದಿನ ಸರಕಾರದ ಬಗ್ಗೆ ಕೂಡ ಸತ್ಯ. ಸರಕಾರ ಜನರಿಗೆ ಉತ್ತರ ದಾಯಿ ಎಂದು ನಮ್ಮ ಸಂವಿಧಾನ, ಸಾಂವಿಧಾನಿಕ ಸಂಸ್ಥೆ ಹೇಳುತ್ತದೆ. ಕೊರೊನ ಬಿಕ್ಕಟ್ಟಿನ ತಪ್ಪುನಿರ್ವಹಣೆಯನ್ನು ಟೀಕಿಸುವ ಜನರ ಬಗ್ಗೆ ಸರಕಾರ ತೋರುವ ತಿರಸ್ಕಾರವೂ ನಮ್ಮ ಪ್ರಭುತ್ವದ ನಾಯಕರು ‘‘ನಾವು ಜನರು...’’ ಎಂಬುದರ ಬಗ್ಗೆ ಯೋಚಿಸುವುದಿಲ್ಲ; ಬದಲಾಗಿ ‘‘ನಾನೇ ಜನರು’’ ಅಥವಾ ‘‘ಜನರೆಂದರೆ ನಾನೇ’’ ಎಂಬುದಾಗಿ ಚಿಂತಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಕೃಪೆ: TheHindu 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)