varthabharthi


ಮುಂಬೈ ಸ್ವಗತ

ಶಿವರಾಮ ಕಾರಂತರು ಮುಂಬೆಗೆ ಬಂದದ್ದು!

ವಾರ್ತಾ ಭಾರತಿ : 11 Jun, 2021
ದಯಾನಂದ ಸಾಲ್ಯಾನ್

ಕಾರಂತರು ಮುಂಬೈಗೆ ಆಗಮಿಸಿದಾಗ ಅವರನ್ನು ಬಲ್ಲಾಳ, ಬಿ. ಎ. ಸನದಿ ಮೊದಲಾದವರು ಮುಂಬೈ ಆಕಾಶವಾಣಿಗಾಗಿ ಸಂದರ್ಶಿಸುತ್ತಿದ್ದರು. ಒಮ್ಮೆ ಸನದಿಯವರು ರಾಮಚಂದ್ರ ಉಚ್ಚಿಲ್ ಅವರಿಗೆ ಕರೆ ಮಾಡಿ ‘‘ಇಂದು ಕಾರಂತರು ಬರುತ್ತಾರೆ. ಅವರನ್ನು ತಾವು ನಮ್ಮ ನಿಲಯಕ್ಕಾಗಿ ಸಂದರ್ಶಿಸಬೇಕು’’ ಎಂದರು. ಆಗ ಪ್ರಾಮಾಣಿಕರೂ, ನಿಷ್ಠುರವಾದಿಯೂ, ಯಾರಿಗೂ ಹೆದರದ ವ್ಯಕ್ತಿತ್ವದ ಉಚ್ಚಿಲರು ಕೂಡಾ ‘‘ಇಲ್ಲ ಸ್ವಾಮಿ ಕಾರಂತರ ಸಂದರ್ಶನ ನಾನು ಮಾಡಲಾರೆ. ನೀವೇ ಮಾಡಿ’’ ಎಂದು ಹೇಳಿದರಂತೆ. ಉಚ್ಚಿಲರಂತಹವರೇ ಆ ಮಾತುಗಳನ್ನಾಡಬೇಕಾದರೆ ಕಾರಂತರ ವ್ಯಕ್ತಿತ್ವವನ್ನು ನಾವು ಊಹಿಸಬೇಕು.


ತಾವು ಬದುಕಿರುವಾಗಲೇ ರೂಪಕವಾಗಿದ್ದ, ಪ್ರತಿಮೆಯಾಗಿದ್ದ, ದಂತಕತೆಯಾಗಿದ್ದ ಡಾ. ಶಿವರಾಮ ಕಾರಂತ ಈ ದೇಶ ಕಂಡ ಅಪರೂಪದ ವ್ಯಕ್ತಿ-ಶಕ್ತಿ. ತಾವು ಮಾಡಿದ ಹಲವಾರು ಸಾಧನೆಗಳ ಮೂಲಕ, ತಮ್ಮ ಬರಹಗಳ ಮೂಲಕ ಸದಾ ಜನಮಾನಸದಲ್ಲಿ ಜೀವಂತವಿರುವವರು ಶಿವರಾಮ ಕಾರಂತರು. ತಮ್ಮ ಬದುಕು ಸಾಧನೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದವರು. ಅಂತಹ ಯುಗ ಪುರುಷನೆಂದು ಗುರುತಿಸಲ್ಪಟ್ಟ ಶಿವರಾಮ ಕಾರಂತರೆಂದರೆ ಮುಂಬೈ ಕನ್ನಡಿಗರಿಗೆ ಅಚ್ಚುಮೆಚ್ಚು. ಕಾರಂತರಿಗೆ ಮುಂಬೈ; ಇಲ್ಲಿನ ಕನ್ನಡಿಗರೆಂದರೆ ಎಲ್ಲಿಲ್ಲದ ಪ್ರೀತಿ. ಮುಂಬೈ ಮತ್ತು ಕಾರಂತರ ನಡುವೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ.

ಕಾರಂತರು ಮುಂಬೈಗೆ ಪ್ರಥಮವಾಗಿ ಆಗಮಿಸಿದ್ದು ಕಳೆದ ಶತಮಾನದ ಎಪ್ಪತ್ತರ ದಶಕಕ್ಕಿಂತಲೂ ಮೊದಲು. ಆನಂತರ ತಮ್ಮ ಅಂತಿಮ ಮುಂಬೈ ಭೇಟಿ 1996ರ ಡಿಸೆಂಬರ್‌ನಲ್ಲಿ. ಡಿಸೆಂಬರ್ 21ರಂದು ಮುಂಬೈ ಕನ್ನಡಿಗರು ಅವರೊಂದಿಗೆ ಕರ್ನಾಟಕ ಸಂಘದ ಕಿರುಸಭಾಗೃಹದಲ್ಲಿ ಗೈದ ಸಂವಾದ ಕಾರ್ಯಕ್ರಮವೇ ಅವರ ಅಂತಿಮ ಕಾರ್ಯಕ್ರಮ. ಪ್ರಾರಂಭದ ದಿನಗಳಲ್ಲಿ ಮುಂಬೈಗೆ ಆಗಮಿಸುತ್ತಿದ್ದಾಗ ಕಾರಂತರು ತಂಗುತ್ತಿದ್ದುದು ಮಾಟುಂಗದ ‘ಶಾರದಾಭವನ’ದಲ್ಲಿ. ಆನಂತರ ಅವರ ಆತ್ಮೀಯ ವಲಯದ ಮೂಡುಬಿದಿರೆ ಸಂಜೀವರಾಯರ ನಿವಾಸದಲ್ಲಿ ತಂಗುತ್ತಿದ್ದರು. ಸಂಜೀವರಾಯರು ಕಾರಂತರಿಗಿಂತ ಕಿರಿಯರಾದರೂ ಅವರಲ್ಲಿ ಕಾರಂತರಿಗೆ ತುಂಬಾ ಅಭಿಮಾನ. ಆದ್ದರಿಂದಲೇ ‘‘ಅವರ ಮನಸ್ಸಿನ ಧಾರಾಳತನಕ್ಕೆ, ಪರೋಪಕಾರ ಬುದ್ಧಿಗೆ, ತ್ಯಾಗಕ್ಕೆ ಸರಿಗಟ್ಟುವ ವ್ಯಕ್ತಿಗಳು ತೀರಾ ವಿರಳ’’ ಎಂದು ಸಂಜೀವರಾಯರ ಬಗ್ಗೆ ಕಾರಂತರು ಒಕ್ಕಣಿಸಿದ್ದಾರೆ. ಮುಂದೆ ಅವರ ಮೂಲಕ ಕಾರಂತರ ಆಪ್ತವಲಯಕ್ಕೆ ಸೇರಿದವರು ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್. ಮುಂದೆ ವ್ಯಾಸರಾಯ ಬಲ್ಲಾಳ, ಗಣೇಶ್ ಭಟ್, ವ್ಯಾಸರಾವ್ ನಿಂಜೂರು ಮೊದಲಾದವರಲ್ಲಿ ಕಾರಂತರು ಮುಂಬೈಗೆ ಆಗಮಿಸಿದಾಗಲೆಲ್ಲ ಉಳಿದುಕೊಳ್ಳುತ್ತಿದ್ದರು.

ಕಾರಂತರ ತಿಂಡಿ-ತಿನಿಸು ಅಥವಾ ಊಟ ಇತ್ಯಾದಿ ತುಂಬಾ ಸರಳ. ‘‘ಉಪ್ಪಿಟ್ಟಿಗೆ ಹಸಿಮೆಣಸಿನ ಒಗ್ಗರಣೆ ಮಾಡಿ ಕೊಟ್ಟರೆ ಸಾಕು. ಹೆಸರುಬೇಳೆ ಪಾಯಸ ಕಾರಂತರಿಗೆ ತುಂಬಾ ಇಷ್ಟ. ಸದಾ ಊಟ ತಿಂಡಿಗಾಗಿ ಚಮಚವನ್ನೇ ಬಳಸುತ್ತಿದ್ದ ಕಾರಂತರು ಊರಿನ ಊಟವನ್ನು ನೆಚ್ಚಿಕೊಂಡವರು. ಅವರು ಸೇವಿಸುವುದು ಹಿತಮಿತ’’ ಎಂದು ಡಾ. ವ್ಯಾಸರಾವ್ ನಿಂಜೂರುರವರು ಕಾರಂತರು ತಮ್ಮ ಮನೆಯಲ್ಲಿದ್ದಾಗಿನ ಅನುಭವವನ್ನು ವಿವರಿಸುತ್ತಾರೆ. ಕಾರಂತರು ಹೋದಲ್ಲಿ ಬಂದಲ್ಲಿ ಅಲ್ಲಿನವರೊಂದಿಗೆ ಅವರಿಗೆ ಬೇಕಾದ ರೀತಿ ಹೊಂದಿಕೊಳ್ಳುತ್ತಿದ್ದರು. ‘‘ಕಾರಂತರು ನಮ್ಮ ಮನೆಯಲ್ಲಿ ದೇವರ ಕೋಣೆಯ ಹತ್ತಿರ ಮಲಗುತ್ತಿದ್ದರು. ಆಗ ದೇವರ ದೀಪ ಬೆಳಗುತ್ತಿತ್ತು. ಅದನ್ನು ಆರಿಸಲೆಂದು ಹೋದಾಗ ಅದನ್ನು ನಂದಿಸಬೇಡಿ ದೇವರ ದೀಪ, ನಿಮ್ಮ ನಂಬಿಕೆ ನಿಮಗೆ’’ ಎಂದು ಅಂದಿನ ಘಟನೆಯನ್ನು ಡಾ. ನಿಂಜೂರು ವಿವರಿಸುತ್ತಾರೆ.

ಸುಮಾರು 1922ರ ನಂತರ ಪ್ರತಿ ವರ್ಷಕ್ಕೊಮ್ಮೆ ಮುಂಬೈಗೆ ಆಗಮಿಸುತ್ತಿದ್ದ ಕಾರಂತರು ಇಲ್ಲಿನ ಗ್ರಾಂಟ್ ರೋಡ್ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮರಾಠಿ ನಾಟಕಗಳನ್ನು ನೋಡುತ್ತಾ ಅವುಗಳ ಪ್ರಭಾವಕ್ಕೆ ಬೀಳುತ್ತಿದ್ದರು. ಅದರಲ್ಲಿ ಗಂಧರ್ವ ಮಂಡಲಿ ಮತ್ತು ಪೆಂಡಾರ್ಕರ್ ಕಂಪೆನಿಯ ನಾಟಕಗಳು ಕಾರಂತರ ಮೇಲೆ ಪ್ರಭಾವ ಬೀರಿರುವುದನ್ನು ಕಾರಂತರು ಉಲ್ಲೇಖಿಸುತ್ತಾರೆ. ‘ಜಿವ್ವಾಚಾಪಲ್ಯ’ ನಾಟಕವನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕಾರಂತರು ನಾಟಕರಂಗದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳುತ್ತಾರೆ. ಸಿನೆಮಾ ರಂಗಕ್ಕೂ ಇಳಿದ ಕಾರಂತರು ಅದಕ್ಕಾಗಿ ಮುಂಬೈಗೆ ಆಗಮಿಸಿ ಅದರ ಒಳ ಹೊರಗನ್ನು ಅಭ್ಯಸಿಸಿದ್ದಾರೆ. ಚಿತ್ರದ ನೆಗೆಟಿವ್‌ಗಳನ್ನು ಹೊತ್ತುಕೊಂಡು ಮುಂಬೈಗೆ ಆಗಮಿಸಿದ್ದ ಕಾರಂತರು ಇಲ್ಲಿನ ‘ದೇವರೆ ಫಿಲ್ಮ್ ಲ್ಯಾಬೊರೋಟರಿ’ಯಲ್ಲಿ ನೆಗೆಟಿವ್‌ನ ಕಾರ್ಯ ಪೂರ್ಣಗೊಳಿಸಿದ್ದರು. ಬೈಕುಲ್ಲಾದ ‘ವೀನಸ್ ಥಿಯೇಟರ್’ನಲ್ಲಿ ಅವರ ಚಿತ್ರದ ಪ್ರಥಮ ಪ್ರದರ್ಶನ ನಡೆಸಿ ಸೆನ್ಸಾರ್ ಬೋರ್ಡ್‌ನಿಂದ ಮಂಜೂರಾತಿಯನ್ನು ಪಡೆದಿದ್ದರು. ಈ ಕಾರ್ಯದಲ್ಲಿ ಅವರಿಗೆ ಸಹಕರಿಸಿದವರು ಬೊಮಾಂಜಿ ಹಾಗೂ ಹೋಮಿ ನಾಡಿಯ ಸಹೋದರರು. ಆಗ ಅದಕ್ಕೆ ಬೇಕಾದಂತಹ ದೊಡ್ಡ ಪೋಸ್ಟರ್‌ಗಳನ್ನು ಬೈಕುಲ್ಲಾದ ಛಾಪಖಾನೆಯಲ್ಲಿ ಮುದ್ರಿಸಿ ಸಿದ್ಧಗೊಳಿಸಲಾಗಿತ್ತು. ಆ ರೀತಿಯಾಗಿ ದಕ್ಷಿಣ ಕನ್ನಡದ ಪಾಲಿಗೆ ಪ್ರಥಮ ಚಿತ್ರ ನಿರ್ಮಾಪಕನ ಉದಯವಾಯಿತು.

ಕಾರಂತರೆಂದರೆ ಸದಾ ಪ್ರಯೋಗಶೀಲರು. ಯಕ್ಷಗಾನದಲ್ಲಿ ವಿವಿಧ ಸಾಧ್ಯತೆಗಳನ್ನು ಕಂಡುಹಿಡಿದವರು. ಪ್ರಾರಂಭದಲ್ಲಿ ಕಿನ್ನರ ನೃತ್ಯ ಎಂದೋ ಯಕ್ಷಗಾನ ನಾಟಕವೆಂದೋ ಅದರ ಲಯ, ಹಾಡುಗಾರಿಕೆ, ವಾದನಗಳನ್ನು ಇಟ್ಟು ಹಲವು ಪ್ರಯೋಗಗಳನ್ನು ಮಾಡಿದ್ದರು. ಮುಂದೆ ಯಕ್ಷಗಾನ ಬ್ಯಾಲೆಯ ಕಲ್ಪನೆ ಕಾರಂತರ ತಲೆಯಲ್ಲಿ ಕೊರೆಯುತ್ತಿತ್ತು. ಅದರ ಸಾಧ್ಯತೆಯ ಜಾಡು ಕಾರಂತರಿಗೆ ಸಿಕ್ಕಿದ್ದು ಮುಂಬೈಯಲ್ಲಿ. ಈಗಾಗಲೇ ತಮ್ಮ ಯಕ್ಷಗಾನ, ನಾಟಕ, ಕಿನ್ನರ ನೃತ್ಯಗಳಿಂದ ‘ಯಕ್ಷಗಾನ ಕೆಡಿಸಿದ’ ಎಂಬ ಹಣೆಪಟ್ಟಿ ಇದ್ದುದರಿಂದ ಕಾರಂತರು ತಮ್ಮಲ್ಲಿದ್ದ ರಾಗಗಳ ಟೇಪುಗಳೊಂದಿಗೆ ಮುಂಬೈ ಸೇರುತ್ತಾರೆ. ಇಲ್ಲಿನ ತಮ್ಮ ಆತ್ಮೀಯ ವಲಯದ ಮೂಡುಬಿದಿರೆ ಸಂಜೀವರಾಯರು, ಹೆಬ್ಬಾರರು, ಗಣೇಶ ಭಟ್ಟರು, ವ್ಯಾಸರಾಯ ಬಲ್ಲಾಳ, ಅಮೀನ್ ಮೊದಲಾದವರನ್ನು ಸೇರಿಸಿ ತಮ್ಮ ಪ್ರಯೋಗದ ಬಗ್ಗೆ (1962) ವಿವರಿಸುತ್ತಿದ್ದರು. ಅಂದಿನ ದಿಲ್ಲಿ, ಮೈಸೂರಿನ ಸಂಗೀತ ನಾಟಕ ಅಕಾಡಮಿಗಳು ಕಾರಂತರಿಗೆ ಸಹಾಯಹಸ್ತ ನೀಡದೆ ಇದ್ದಾಗ, ಅವರಿಗೆ ಬೆನ್ನುಲುಬಾಗಿ ನಿಂತವರು ಮುಂಬೈಯ ಕನ್ನಡಿಗರು. ‘‘ನಾವಿದ್ದೇವೆ, ಕೆಲಸ ನಡೆಸಿ’’ ಎಂಬ ಭರವಸೆ ಹೊತ್ತು ಮರಳಿ ಊರಿಗೆ ಹೊರಟ ಕಾರಂತರು ಉಡುಪಿಯಲ್ಲಿ ಸುಮಾರು ಎರಡು ತಿಂಗಳ ಕಾಲ ಯಕ್ಷಗಾನ ಬ್ಯಾಲೆಯ ತರಬೇತಿ ನೀಡಿ, ಸುಸಜ್ಜಿತ ತಂಡದೊಂದಿಗೆ ಮುಂಬೈಯಲ್ಲಿ ಪ್ರಥಮ ಪ್ರಯೋಗಕ್ಕಾಗಿ ಆಗಮಿಸಿದ್ದರು. ಇಲ್ಲಿ ಸಿಕ್ಕಿದ ಒಳ್ಳೆಯ ಸ್ವಾಗತ ಹಾಗೂ ಪ್ರೇಕ್ಷಕರ ಮೆಚ್ಚುಗೆ ಕಾರಂತರಿಗೆ ಇನ್ನಿಲ್ಲದ ಸಂತೋಷವನ್ನು ಕೊಟ್ಟಿತ್ತು.

ಹೆಬ್ಬಾರರು ಮೊದಲಾದವರೊಂದಿಗೆ ವಿದೇಶಿ ದೂತವಾಸಗಳ ಸದಸ್ಯರು, ಇಲ್ಲಿನ ಅನ್ಯಭಾಷೆ ಕಲಾವಿದರು, ಪತ್ರಿಕೆಗಳ ಪ್ರತಿನಿಧಿಗಳು ಬಂದು ಕಾರ್ಯಕ್ರಮ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾರಂತರೇ ತಮ್ಮ ‘ಸ್ಮತಿಪಟಲದಿಂದ’ ಕೃತಿಯಲ್ಲಿ ಹೇಳಿಕೊಂಡಿರುವಂತೆ ‘‘ಮುಂಬೈ ಕೋಟೆಯ ಓಪನ್ ಏರ್ ಥಿಯೇಟರ್‌ನಲ್ಲಿ ‘ಅಭಿಮನ್ಯು ವಧೆ’ಯನ್ನು ನಾವು ಆಡಿದಾಗ ಸಾವಿರ ಮಂದಿಗಿಂತ ಹೆಚ್ಚಿನ ಪ್ರೇಕ್ಷಕರು ಕಲೆತಿದ್ದರು.’’ ‘ಅಭಿಮನ್ಯು ವಧೆ’ಯ ಜತೆ ಪ್ರಥಮ ಪ್ರಯೋಗ ಕಂಡ ಕಾರಂತರ ಯಕ್ಷಗಾನ ಬ್ಯಾಲೆ ‘ಭೀಷ್ಮ ವಿಜಯ’. ‘ಅಭಿಮನ್ಯು ವಧೆ’ಯನ್ನು ಕಂಡ ಶ್ರೀಮತಿ ಅಲ್ಕಾಜಿಯವರು ಆ ಪ್ರಸಂಗವನ್ನು ವಿಮರ್ಶಿಸುತ್ತಾ ‘‘ಬ್ರಿಲಿಯಂಟ್ ಕೊರಿಯೋಗ್ರಫಿ’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದುದನ್ನು ನಾವು ಗಮನಿಸಬೇಕು. ಯಕ್ಷಗಾನದಲ್ಲೂ ಕೊರಿಯೋಗ್ರಫಿ ಇರುವುದನ್ನು ಇಲ್ಲಿನ ಜನ ಕಂಡುಕೊಂಡರಲ್ಲ ಎಂಬ ಸಂತೋಷ, ನೆಮ್ಮದಿ ಕಾರಂತರದ್ದು. ಅಲ್ಕಾಜಿ ಅವರಿಂದಾಗಿಯೇ ಈ ಬ್ಯಾಲೆ ರಾಷ್ಟ್ರೀಯ ರಂಗಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶನ ಕಂಡು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಯಿತು. ಹೀಗೆ ಕಾರಂತರ ಯಕ್ಷಗಾನ ಬ್ಯಾಲೆಯ ಪ್ರಥಮ ಪ್ರಯೋಗ (ನಾಲ್ಕು) ಮುಂಬೈಯಲ್ಲಿ ಕಂಡರೆ, ಆನಂತರ ಕರ್ನಾಟಕದ ಹಲವು ಕಡೆಯೂ ಪ್ರಯೋಗಗೊಂಡವು. ಆದರೆ ಮುಂಬೈಯಂತೆ ಅಲ್ಲಿ ಅದಕ್ಕೆ ಮಾನ್ಯತೆ ದೊರೆಯಲಿಲ್ಲ.

ಕಾರಂತರ ಹಲವು ಕಾದಂಬರಿಗಳಿಗೆ ಮೂಲ ಪ್ರೇರಣೆ ಅಥವಾ ವಸ್ತುವಾದ ಈ ಮಹಾನಗರಕ್ಕೆ ಅದಕ್ಕಾಗಿಯೇ ಇಲ್ಲಿ ಬಂದು ಹೋಗುತ್ತಿದ್ದರು. ‘ಮರಳಿ ಮಣ್ಣಿಗೆ’ ಕಾದಂಬರಿ (1920) ಬರೆಯುತ್ತಿದ್ದ ಕಾಲಕ್ಕಂತೂ ಮುಂಬೈಗೆ ವರ್ಷಕ್ಕೆ ಎರಡು ಸಲ ಬಂದು ಹೋಗುತ್ತಿದ್ದರು.

ಕಾರಂತರಿಗೆ ಮುಂಬೈ ನೆನಪಾದರೆ ಸಾಕಿತ್ತು. ಜೋಳಿಗೆ ಹಾಕಿಕೊಂಡು ಹೊರಡುತ್ತಿದ್ದರು. ಕಳೆದ ಶತಮಾನದ ನಾಲ್ಕರ ದಶಕದಲ್ಲಿ ತಮ್ಮ ಮೂವರು ನಾದಿನಿಯರಿಗೆ ಮದುವೆ, ಬೆಳೆಯುತ್ತಿರುವ ತಮ್ಮ ಮಕ್ಕಳು; ಅವರ ಹೊಟ್ಟೆ ಬಟ್ಟೆಯ ಚಿಂತೆ. ಆಗ ಇಲ್ಲಿ ‘ಅಗ್ಗದ ಅರಿವೆ’ ಸಿಗುತ್ತದೆಯೆಂದು ಮುಂಬೈಗೆ ಆಗಮಿಸಿ, ತಮಗೆ ಬೇಕಾದ ಅರಿವೆಗಳನ್ನು ಖರೀದಿಸಿ, ಇಲ್ಲಿನ ಆತ್ಮೀಯ ಕನ್ನಡಿಗರೊಂದಿಗೆ ಮಾತುಕತೆ ನಡೆಸಿ ಊರಿಗೆ ಹೋಗುತ್ತಿದ್ದರು. ತಮ್ಮ ಮಗ ಉಲ್ಲಾಸ ಆರೇಳು ವರ್ಷದವನಿದ್ದಾಗ ಕಾರಂತರು ಮುಂಬೈಗೆ ಆಗಮಿಸುವ ಮೊದಲು ಮಗನಲ್ಲಿ ‘‘ನಿನಗೇನು ತರಲಿ?’’ ಎಂದು ಕೇಳಿದ್ದರಂತೆ. ಆಗ ಚಿಕ್ಕ ಬಾಲಕ ‘‘ನನಗೆ ದೂರದ ಹಕ್ಕಿಗಳನ್ನು ಕಾಣುವ ಆಸೆ’’ ಎಂದಾಗ, ತಂದೆ ಕಾರಂತರು ಮುಂಬೈಯಲ್ಲಿ ಅವನಿಗಾಗಿ ಆಟದ ಅಂಗಡಿಗಳನ್ನು ಸುತ್ತಿ, ಅಲ್ಲಿಂದ ದುರ್ಬೀನನ್ನು ಖರೀದಿಸಿ ಮಗನಿಗೆ ತಂದುಕೊಟ್ಟಿದ್ದರು.

ಕಾರಂತರ ಮುಂಬೈ ನಂಟು ಎಂದೂ ಅವರನ್ನು ಬಿಡಲಾರದ್ದು; ಬೆನ್ನಿಗಂಟಿ ಬಂದದ್ದು ಎಂಬಂತೆ. ಕಾರಂತರ ಪತ್ನಿ ಲೀಲಾರವರು ಹುಟ್ಟಿ ಬೆಳೆದದ್ದು ಮುಂಬೈಯಲ್ಲಿ. ಪ್ರಾಥಮಿಕ ಶಿಕ್ಷಣ ಮರಾಠಿಯಲ್ಲಿ. ಮಂಗಳೂರಿಗೆ ಹೋಗಿ ಎಲ್ಲವನ್ನೂ ಮತ್ತೆ ಕನ್ನಡದಲ್ಲಿ ಕಲಿತವರು. ಮುಂಬೈಯಲ್ಲಿ ‘ರಾತ್ರಿಂ-ದಿವ’ ಎಂಬ ಒಂದು ನೃತ್ಯದಲ್ಲಿ ‘ರಾತ್ರಿ’ಯ ಭೂಮಿಕೆಯನ್ನು ತಮ್ಮ ಪತ್ನಿ ಲೀಲಾ ಅವರು ಮಾಡಿದ್ದು, ಅದಕ್ಕೆ ಪಾಶ್ಚಾತ್ಯರಿಂದಲೂ ಶಾಭಾಷ್‌ಗಿರಿ ದೊರಕಿದ್ದನ್ನು ಕಾರಂತರು ಒಂದು ಕಡೆ ಉಲ್ಲೇಖಿಸುತ್ತಾರೆ. ‘ದಿವ’ ಆಗಿ ಸ್ವತಃ ಕಾರಂತರೇ ಪಾತ್ರ ವಹಿಸಿದ್ದರು. ತಮ್ಮ ದೊಡ್ಡಮಗ ಹರ್ಷನನ್ನು ಮುಂಬೈಯಲ್ಲಿ ತಮ್ಮ ಆತ್ಮೀಯರ ಮನೆಯಲ್ಲಿ ಸುಮಾರು ಒಂದು ವರ್ಷ ಇರಲು ಬಿಟ್ಟಿದ್ದರು. ಆದರೆ ಆತ ಮುಂದೆ ಕ್ಯಾನ್ಸರ್ ಕಾಯಿಲೆಗೆ ಬಲಿಯಾದ. ತಮ್ಮ ಮಗನನ್ನು ಉಳಿಸುವುದಕ್ಕೆ ಶ್ರಮಪಟ್ಟ ವೈದ್ಯರು ಹಾಗೂ ದಾದಿಯರನ್ನು ಕಂಡು, ಅವರ ಉಪಕಾರ ಹೇಗೆ ತೀರಿಸಬೇಕೆಂದು ಕಾರಂತರ ಹೃದಯ ಮಿಡಿಯುತ್ತಿತ್ತು. ಮಗನನ್ನು ಉಳಿಸುವುದಕ್ಕೆ ಶಕ್ತಿಮೀರಿ ಪ್ರಯತ್ನ ಪಟ್ಟ ವೈದ್ಯರು ಕನ್ನಡಿಗ ಡಾ ಎ. ವಿ. ಬಾಳಿಗಾ ಹಾಗೂ ಡಾ. ಶಾ. ವೈದ್ಯರು ತಮ್ಮಿಂದ ಹಣ ತೆಗೆದುಕೊಳ್ಳಲಾರರು ಎಂದು ಕಾರಂತರು ತಿಳಿದಿದ್ದರು. ಬಾಳಿಗಾ ಅವರು ತಮ್ಮ ಮಿತ್ರರು, ಆದರೆ ಡಾ. ಶಾ! ಅದಕ್ಕಾಗಿ ಕಾರಂತರು ಹೆಬ್ಬಾರರ ಚಿತ್ರವೊಂದನ್ನು ಡಾ. ಶಾ ಅವರಿಗೆ ಕೊಟ್ಟು ತೀರಿಸಲಾರದ ಋಣವನ್ನು ತೀರಿಸಿದ್ದರು. ಈ ಘಟನೆಗಳು ನಡೆದು ಎಷ್ಟೋ ವರ್ಷ, ದಶಕಗಳು ಸಂದಿವೆ. ಒಂದು ದಿನ ಶಿವರಾಮ ಕಾರಂತರು ಡಾ. ವ್ಯಾಸರಾವ್ ನಿಂಜೂರು ಜತೆ ಮೆರಿನ್ ಲೈನ್ಸ್‌ನ ಸುತ್ತ ತಿರುಗುತ್ತಿದ್ದಾಗ ಒಂದು ಸ್ಮಶಾನ ಎದುರಾಗುತ್ತದೆ. ಆಗ ಕಾರಂತರ ಎದೆ ಭಾರವಾಗಿ ಕಣ್ಣು ಮಂಜಾಗುತ್ತದೆ. ಗಲಿಬಿಲಿಗೊಂಡ ನಿಂಜೂರು ‘‘ಏನು, ಏನಾಯ್ತು’’ ಎಂದು ವಿಚಾರಿಸುತ್ತಾರೆ. ಕಾರಂತರು ಆಗ ತಮ್ಮ ಮಗ ಹರ್ಷನನ್ನು ‘‘ಇದೇ ಸ್ಮಶಾನದಲ್ಲಿ ಬೂದಿ ಮಾಡಿದ್ದು’’ ಎಂದು ಉಸುರಿದ್ದನ್ನು ಡಾ. ನಿಂಜೂರು ನೆನಪು ಮಾಡುತ್ತಾರೆ.

ಕಾರಂತರು ತಮ್ಮ ಹರ್ಷ ಮುದ್ರಣಾಲಯಕ್ಕೆ, ತಮ್ಮ ಮರದ ಕಾರ್ಖಾನೆಗೆ ಹೀಗೆ ಅವರು ಕೈಗೊಂಡ ಎಲ್ಲಾ ಉದ್ಯೋಗಗಳಿಗೆ ಬೇಕಾದ ವಸ್ತುಗಳಿಗಾಗಿ, ಮುದ್ರಣಾಲಯದ ತಾಂತ್ರಿಕತೆ ಬಗ್ಗೆ, ಇಲ್ಲಿನ ಪ್ರತಿಷ್ಠಿತ ಟಾಟಾ ಪ್ರೆಸ್‌ನ ಮೂಲಕ ಇಲ್ಲಿನ ಗೆಳೆಯರ ಸಹಕಾರ ಪಡೆಯುತ್ತಿದ್ದುದನ್ನು ಗಮನಿಸಬಹುದು.

ಮುಂಬೈ ಯೂನಿವರ್ಸಿಟಿಯ ಕನ್ನಡ ವಿಭಾಗಕ್ಕೂ ಕಾರಂತರಿಗೂ ಅವಿನಾಭಾವ ಸಂಬಂಧ. 1980ರ ಮಾರ್ಚ್ 15ರಂದು ವಿಭಾಗ ಉದ್ಘಾಟನೆಗೊಂಡಾಗ ಕಾರಂತರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದ್ದರು. ವಿಭಾಗದ ಅಧಿಕೃತ ಉದ್ಘಾಟನೆ ಮಾಡಿದ್ದರು. ಮುಂದೆ ವಿಭಾಗದ ದಶಮಾನೋತ್ಸವ ಆಚರಣೆ ಸಂದರ್ಭ ‘ಭಾರತೀಯ ಸಾಹಿತ್ಯದಲ್ಲಿ ಕಾದಂಬರಿ’ ಎಂಬ ರಾಷ್ಟ್ರಮಟ್ಟದ ವಿಶೇಷ ಕಾರ್ಯಕ್ರಮ (16-12-1989)ಆಯೋಜಿಸಿದ್ದಾಗಲೂ ಕಾರಂತರು ಆ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. ಅಂದಿನ ನಿಯೋಜಿತ ವಿಭಾಗ ಮುಖ್ಯಸ್ಥರಾಗಿದ್ದ ಡಾ. ತಾಳ್ತಜೆ ವಸಂತಕುಮಾರ್ ಅವರ ಮುತುವರ್ಜಿಯಿಂದ ನಡೆದ ಈ ಕಾರ್ಯಕ್ರಮಕ್ಕೆ ಕಾರಂತರು ಉದ್ಘಾಟಕರಾಗಿ ಬಂದುದು ಯೋಗಾಯೋಗ.

ವ್ಯಾಸರಾಯ ಬಲ್ಲಾಳರ ಜತೆಗೆ ಡಿ. ಕೆ. ಮೆಂಡನ್, ರಾಮಚಂದ್ರ ಉಚ್ಚಿಲ್ ಹಾಗೂ ಮಿತ್ರರ ‘ಸಾಧನ ವಠಾರ’ಕ್ಕೂ ಹೋಗುತ್ತಿದ್ದ ಕಾರಂತರು, ಉಚ್ಚಿಲ್ ಅವರು ಕೋಟೆ ಪರಿಸರದಲ್ಲಿ ಆಯೋಜಿಸಿದ್ದ ‘ಮುದ್ದಣ ಜಯಂತಿ’ ಕಾರ್ಯಕ್ರಮಕ್ಕೂ ಎರಡು ಸಲ ಆಗಮಿಸಿ ಮುದ್ದಣನ ಬಗ್ಗೆ ವಿದ್ವತ್ಪೂರ್ಣ ಮಾತುಗಳನ್ನಾಡಿದ್ದರು. ಕಾರಂತರು ಮುಂಬೈಗೆ ಆಗಮಿಸಿದಾಗ ಅವರನ್ನು ಬಲ್ಲಾಳ, ಬಿ. ಎ. ಸನದಿ ಮೊದಲಾದವರು ಮುಂಬೈ ಆಕಾಶವಾಣಿಗಾಗಿ ಸಂದರ್ಶಿಸುತ್ತಿದ್ದರು. ಒಮ್ಮೆ ಸನದಿಯವರು ರಾಮಚಂದ್ರ ಉಚ್ಚಿಲ್ ಅವರಿಗೆ ಕರೆ ಮಾಡಿ ‘‘ಇಂದು ಕಾರಂತರು ಬರುತ್ತಾರೆ. ಅವರನ್ನು ತಾವು ನಮ್ಮ ನಿಲಯಕ್ಕಾಗಿ ಸಂದರ್ಶಿಸಬೇಕು’’ ಎಂದರು. ಆಗ ಪ್ರಾಮಾಣಿಕರೂ, ನಿಷ್ಠುರವಾದಿಯೂ, ಯಾರಿಗೂ ಹೆದರದ ವ್ಯಕ್ತಿತ್ವದ ಉಚ್ಚಿಲರು ಕೂಡಾ ‘‘ಇಲ್ಲ ಸ್ವಾಮಿ ಕಾರಂತರ ಸಂದರ್ಶನ ನಾನು ಮಾಡಲಾರೆ. ನೀವೇ ಮಾಡಿ’’ ಎಂದು ಹೇಳಿದರಂತೆ. ಉಚ್ಚಿಲರಂತಹವರೇ ಆ ಮಾತುಗಳನ್ನಾಡಬೇಕಾದರೆ ಕಾರಂತರ ವ್ಯಕ್ತಿತ್ವವನ್ನು ನಾವು ಊಹಿಸಬೇಕು. ಕಾರಂತರ ಗಂಭೀರ ವ್ಯಕ್ತಿತ್ವದಿಂದ ಅವರ ಹತ್ತಿರ ಹೋಗುವುದಕ್ಕೆ ಭಯ ಪಡುವವರು ಹಲವರು. ಆದರೆ ಅವರ ಹಾಸ್ಯಪ್ರಜ್ಞೆ, ಅಂತರ್ಯದಲ್ಲಿ ಅಡಗಿರುವ ಒಂದು ಮುಗ್ಧ ಮಗುವನ್ನು ನಾವು ಗುರುತಿಸಬೇಕು.

ಕನ್ನಡ ವಿಭಾಗದ ದಶಮಾನ ಸಂದರ್ಭದಲ್ಲಿ ಕಾರ್ಯಕ್ರಮದ ನಡುವೆ ಫಾರಿನ್ ಡಿಪಾರ್ಟ್‌ಮೆಂಟ್‌ನ ಜರ್ಮನ್ ಪ್ರೊಫೆಸರ್ ಅನ್ನಕುಟ್ಟಿ ಅವರೊಂದಿಗೆ ಮಾತನಾಡುತ್ತಾ ‘‘ನೀವು ಜರ್ಮನ್ ಅನ್ನು ಮಲಯಾಲೈಸ್ ಮಾಡುತ್ತಿಲ್ಲ ತಾನೆ’’ ಎನ್ನುತ್ತಾರೆ. ನಗೆಯ ಬುಗ್ಗೆಯೊಂದು ಸ್ಫೋಟಗೊಳ್ಳುತ್ತದೆ. ಕರ್ನಾಟಕ ಸಂಘದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘‘ಜಪಾನ್‌ಗೆ ನಮ್ಮ ಯಕ್ಷಗಾನ ಬ್ಯಾಲೆಯ ತಂಡ ಹೋಗಿತ್ತು. ಅಲ್ಲಿ ಒಂದು ಕಾರ್ಯಕ್ರಮದಲ್ಲಿ ನಮ್ಮ ಕಲಾವಿದರು ವೇಷ ಭೂಷಣದೊಂದಿಗಿದ್ದರು. ಆಗ ಜಪಾನ್‌ನ ತುಂಡು ಬಟ್ಟೆ ತೊಟ್ಟ ಹುಡುಗಿಯರು ಸರ್ವ್ ಮಾಡುತ್ತಿದ್ದರು. ನಮ್ಮ ಕಲಾವಿದರಿಗೆ ಇರಿಸುಮುರಿಸು. ಅವರಲ್ಲಿ ಕೆಲವರು ನನ್ನನ್ನು ನೋಡುತ್ತಾರೆ. ನಿಮಗೇನು ಬೇಕೋ ನೀವು ನೋಡಿಕೊಳ್ಳಿ ಎಂದೆ’’ ಎಂದು ಹೇಳುವಾಗ ಗಂಭೀರವಾಗಿದ್ದ ಸಭಾಗೃಹದಲ್ಲಿ ನಗೆಯ ಕಡಲು. ಇನ್ನೊಂದು ಕಾರ್ಯಕ್ರಮದಲ್ಲಿ (ಅದೂ ಕರ್ನಾಟಕ ಸಂಘದ ಸಭಾಗೃಹವೇ) ಊರಿನಲ್ಲಿ ಒಂದು ಶಾಲೆಗೆ ಕಾರಂತರು ಅತಿಥಿಯಾಗಿ ಹೋಗಿದ್ದರಂತೆ. ಕಾರಂತರು ಸಮಯಕ್ಕೆ ಮುಂಚಿತವಾಗಿ ಅಲ್ಲಿ ತಲುಪಿದ್ದರು. ಆಗ ಸಂಘಟಕರು ಅವರನ್ನು ಶಾಲೆಯ ಕಚೇರಿ ಕೋಣೆಯಲ್ಲಿ ಕುಳ್ಳಿರಿಸಿ ‘‘ಈಗ ಕಾಫಿ ಬರುತ್ತದೆ’’ ಎಂದು ಹೋದರಂತೆ. ತಮ್ಮ ಕೆಲಸಗಳಿನ್ನೂ ಪೂರ್ಣಗೊಂಡಿಲ್ಲದ ತಲೆಬಿಸಿ ಸಂಘಟಕರಿಗೆ. ಐದು ನಿಮಿಷದಲ್ಲಿ ಇನ್ನೊಬ್ಬ ಬಂದು ‘‘ಕಾಫಿ ಈಗ ಬರುತ್ತದೆ’’ ಎಂದು ಹೋಗುತ್ತಾನೆ. ಮತ್ತೆ 2-3 ನಿಮಿಷದಲ್ಲಿ ಇನ್ನೊಬ್ಬ ಬಂದು ಅದನ್ನೇ ಹೇಳಿ ಹೋಗುತ್ತಾನೆ. ಕಾರಂತರಿಗೆ ಕಾಫಿಯೂ ಬೇಕಾಗಿತ್ತಂತೆ, ಇನ್ನೊಬ್ಬ ಬಂದಾಗ ಇವರೇ ನೇರವಾಗಿ ‘‘ಕಾಫಿ ಅದಾಗಿ ಬರುತ್ತಾ, ಇಲ್ಲಾ ಯಾರಾದರೂ ತರುತ್ತಾರಾ’’ ಎಂದು ಬಂದವನಿಗೆ ಕೇಳಿದರಂತೆ. ಕಾರಂತರ ಕುರಿತು ಇಲ್ಲಿನ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮೂಲಕ ಡಾ. ಸುನೀತಾ ಶೆಟ್ಟಿ -‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ’, ಡಾ. ಕರುಣಾಕರ ಶೆಟ್ಟಿ ಪಣಿಯೂರು-‘ಕಾರಂತ ಮತ್ತು ಪ್ರೇಮಚಂದ್ರರ ಪ್ರಾದೇಶಿಕ ಕಾದಂಬರಿಗಳು ತೌಲನಿಕ ಅಧ್ಯಯನ’, ಡಾ. ಜ್ಯೋತಿ ಸತೀಶ್ ‘ಶಿವರಾಮ ಕಾರಂತರ ವೈಚಾರಿಕ ನೆಲೆಗಳು’, ಡಾ. ರಮಾ ಉಡುಪ-‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಂಬಂಧಗಳ ಪ್ರಕ್ರಿಯೆ’ ಎಂಬ ಮಹಾಪ್ರಬಂಧಗಳನ್ನು ಒಪ್ಪಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಯೋಗಾಯೋಗವೆಂಬಂತೆ ವಿಭಾಗದ ದಶಮಾನೋತ್ಸವ ವರ್ಷದ ಎಂ.ಎ. ಪ್ರಥಮ ವಿಭಾಗಕ್ಕೆ ಕಾರಂತರನ್ನು ವಿಶೇಷ ವ್ಯಕ್ತಿಯಾಗಿಯೂ ಹಾಗೂ ಅವರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸು’ ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’ ಮೊದಲಾದ ಕಾದಂಬರಿಗಳು ಅಭ್ಯಾಸಕ್ಕೆ ಇದ್ದವು.

ಕಾರಂತರು 1997 ಡಿಸೆಂಬರ್ 9ಕ್ಕೆ ಇನ್ನಿಲ್ಲವಾದರು. ಆದರೆ ಮುಂಬೈ ಅವರನ್ನು ಮರೆತಿಲ್ಲ. ಅದೇ ವರ್ಷ ಇಲ್ಲಿನ ಮೇರು ವ್ಯಕ್ತಿತ್ವದ ಅಪರೂಪದ ವ್ಯಕ್ತಿ ಸದಾನಂದ ಸುವರ್ಣರು, ‘ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು’ನ್ನು ಕಿರು ತೆರೆಗೆ ತರುವಲ್ಲಿ ಕೊನೆಯ ಹಂತದಲ್ಲಿದ್ದಾಗ ಕಾರಂತರು ಇನ್ನಿಲ್ಲವಾದರು. ತಮ್ಮ ಸುವರ್ಣ ಪ್ರತಿಷ್ಠಾನದ ಮೂಲಕ ಆ ವರ್ಷದಿಂದ ಮೊದಲ್ಗೊಂಡು ನಿರಂತರ 2013ರವರೆಗೆ ಪ್ರಾರಂಭದಲ್ಲಿ ಮೂರು ದಿನದಂತೆ, ಮುಂದೆ ಒಂದು ದಿನಕ್ಕೆ ಆಗುವಂತೆ ‘ಕಾರಂತೋತ್ಸವ’ ಮಾಡುತ್ತಿದ್ದರು. ಕಾರಂತರನ್ನು ಆ ಮೂಲಕ ಜೀವಂತ ಹಾಗೂ ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಇಲ್ಲಿ ಸದ್ದಿಲ್ಲದೆ ಸದಾನಂದ ಸುವರ್ಣ ಹಾಗೂ ಅವರ ಮಿತ್ರರ ಬಳಗ ಮಾಡುತ್ತಿತ್ತು. ಕೊನೆಗೆ ತನ್ನಿಂದ ಸಾಧ್ಯವಿಲ್ಲ ಎಂದರಿತ (ಅನಾರೋಗ್ಯದ ನಿಮಿತ್ತ) ಸುವರ್ಣರು ಸುಮಾರು ರೂ. 2ಲಕ್ಷಕ್ಕೂ ಮೀರಿದ ಮೊತ್ತವನ್ನು ಇಲ್ಲಿನ ಪ್ರತಿಷ್ಠಿತ ಸಂಘಕ್ಕೆ ದತ್ತಿಯಾಗಿ ನೀಡಿ, ಅದರಿಂದ ಬರುವ ಬಡ್ಡಿಯಿಂದ ಪ್ರತಿ ವರ್ಷದ ಕಾರಂತೋತ್ಸವ ನಡೆಯಬೇಕೆಂದು ಆಶಿಸಿದ್ದರು. ಆದರೆ ಆರಂಭದಲ್ಲಿ 2 ವರ್ಷ ಅವರೆಣಿಸಿದಂತೆ ಆ ಕಾರ್ಯಕ್ರಮ ಜರುಗಲಿಲ್ಲ. ದುರದೃಷ್ಟ ಎಂದರೆ ಆ ಸಂಸ್ಥೆಯು ತನ್ನ ಹೊಸ ಕಟ್ಟಡದ ನಿರ್ಮಾಣ ನೆಪದಲ್ಲಿ ಕಾರಂತೋತ್ಸವವನ್ನು ನಿಲ್ಲಿಸಿತು. ಅದರ ಬಡ್ಡಿಯೂ, ಲೆಕ್ಕಪತ್ರದಲ್ಲಿ ದಾಖಲಾಗುತ್ತಿಲ್ಲ. ಬೇರೆ ಕಾರ್ಯಕ್ರಮಗಳನ್ನು ಸ್ವಲ್ಪವರ್ಷ ಕಿರು ಸಭಾಗೃಹದಲ್ಲಿ ನಡೆಸಿದ ಈ ಸಂಘ, ಆನಂತರವೂ ಯಕ್ಷಗಾನ ಅಥವಾ ಇನ್ನಿತರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. (ಕೊರೋನ ಕಾಲವನ್ನು ಬಿಟ್ಟು) ಆದರೆ ಕಾರಂತರ ಉತ್ಸವ ಅವರಿಂದ ಆಗಿಲ್ಲ. ಸದಾನಂದ ಸುವರ್ಣರು ತಾನು ಯಾಕಾಗಿ ಹೀಗೆ ಮಾಡಿದೆ ಎಂಬ ಪಶ್ಚಾತ್ತಾಪದಿಂದ ಇಂದು ಕೊರಗುವಂತಾಗಿದೆ. ಇದರ ಬಗ್ಗೆ ಮುಂಬೈ ಜನತೆ ಚಿಂತಿಸ ಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)