varthabharthi


ಸಂಪಾದಕೀಯ

ಶಾಲೆಗಳಿಂದ ‘ಮರಳಿ ಜೀತದೆಡೆಗೆ’ ಮಕ್ಕಳು!

ವಾರ್ತಾ ಭಾರತಿ : 11 Jun, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕೊರೋನ ಕೇವಲ ರೋಗವಾಗಿಯಷ್ಟೇ ಜಗತ್ತನ್ನು ಕಾಡಿರುವುದಲ್ಲ, ನಾಗರಿಕ ಸಮಾಜ ಹತ್ತು ಹಲವು ಸಂಘರ್ಷಗಳ ಮೂಲಕ ತನ್ನದಾಗಿಸಿಕೊಂಡು ಬಂದ ಮನುಷ್ಯನ ಘನತೆಗೂ ಭಾರೀ ಧಕ್ಕೆಯನ್ನು ತಂದಿದೆ. ‘ಎಲ್ಲರಿಗೂ ಆಹಾರ’ ಎನ್ನುವುದು ಆಧುನಿಕ ಜಗತ್ತಿನ ಬಹುಮುಖ್ಯ ಆಶಯವಾಗಿದ್ದರೂ, ಆ ಗುರಿಯನ್ನು ತಲುಪಲು ಜಗತ್ತಿಗೆ ಈವರೆಗೆ ಸಾಧ್ಯವಾಗಿಲ್ಲ. ಅಲ್ಪಸ್ವಲ್ಪ ಸಾಧನೆಯನ್ನು ಮಾಡಲಾಗಿದೆಯಾದರೂ, ಕೊರೋನ ಮತ್ತು ಲಾಕ್‌ಡೌನ್ ಆ ಸಾಧನೆಯನ್ನೂ ಅಳಿಸಿ ಹಾಕುವ ಪ್ರಯತ್ನದಲ್ಲಿದೆ. ಹಸಿವು, ಅಪೌಷ್ಟಿಕತೆ, ಆರೋಗ್ಯ, ಉದ್ಯೋಗ ಎಲ್ಲ ವಿಷಯಗಳಲ್ಲೂ ಕಳೆದೆರಡು ವರ್ಷಗಳಲ್ಲಿ ಜಗತ್ತು ಹಿಂದಕ್ಕೆ ಒಯ್ಯಲ್ಪಟ್ಟಿದೆ. ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳೆಲ್ಲ ಕೊರೋನ ಅಲೆಯಲ್ಲಿ ಕೊಚ್ಚಿ ಹೋಗಿದೆ. ಇದೀಗ ವಿಶ್ವಸಂಸ್ಥೆ ಬಾಲ ಕಾರ್ಮಿಕರ ಬಗ್ಗೆ ವರದಿಯೊಂದನ್ನು ಬಹಿರಂಗಪಡಿಸಿದೆ.

ವಿಶ್ವಸಂಸ್ಥೆಯ ನೇತೃತ್ವದಲ್ಲಿ ಬಾಲಕಾರ್ಮಿಕ ವ್ಯವಸ್ಥೆಯ ಅಳಿವಿಗೆ ಹಲವು ದಶಕಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಇದು ಫಲವನ್ನೂ ಕೊಟ್ಟಿತ್ತು. 2000-2016ರ ಅವಧಿಯಲ್ಲಿ ಬಾಲ ಕಾರ್ಮಿಕರ ಸಂಖ್ಯೆಯು ಸುಮಾರು 9.4 ಕೋಟಿಯಷ್ಟು ಕುಸಿಯಿತು. ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿ ದುಡಿಮೆಗೆ ಹೊರಳುತ್ತಿರುವ ಮಕ್ಕಳನ್ನು ರಕ್ಷಿಸುವಲ್ಲಿ ಇದು ದೊಡ್ಡ ಸಾಧನೆಯೇ ಸರಿ. ದುಡಿಮೆಯಿಂದ ಮಕ್ಕಳನ್ನು ರಕ್ಷಿಸಿ ಅವರ ಹಕ್ಕಾಗಿರುವ ಬಾಲ್ಯವನ್ನು ಮರಳಿಸುವುದು ಮಾತ್ರವಲ್ಲ, ಶಿಕ್ಷಣ, ಆಹಾರ, ಆರೋಗ್ಯಗಳನ್ನು ಅವರಿಗೆ ನೀಡಿ, ಭವಿಷ್ಯಕ್ಕೆ ಸಿದ್ಧಗೊಳಿಸುವುದು ವಿಶ್ವಸಂಸ್ಥೆಯ ಗುರಿಯಾಗಿತ್ತು. ಆದರೆ ಕೊರೋನ ಕಾಲ, ವಿಶ್ವಸಂಸ್ಥೆಯ ಈ ಉದ್ದೇಶಕ್ಕೆ ಬಹುದೊಡ್ಡ ಚಪ್ಪಡಿ ಕಲ್ಲನ್ನು ಎಳೆದು ಹಾಕಿದೆ. ಕೊರೋನ ದಿನಗಳಿಂದ ವಿಶ್ವಾದ್ಯಂತ ಬಾಲಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. 2022ರ ಕೊನೆಯ ವೇಳೆಗೆ ಸುಮಾರು ಒಂದು ಕೋಟಿ ಮಕ್ಕಳು ಬಾಲಕಾರ್ಮಿಕರಾಗುವ ಕಡೆಗೆ ಸಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸುತ್ತದೆ.

ಭಾರತದಂತಹ ಮುಂದುವರಿಯುತ್ತಿರುವ ದೇಶ ವಿಶ್ವಸಂಸ್ಥೆಯ ಒತ್ತಡದ ಮೇರೆಗೆ ಬಾಲಕಾರ್ಮಿಕ ವ್ಯವಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾ ಬಂದಿದೆಯಾದರೂ, ಅದರ ಪೂರ್ಣ ನಿರ್ವಹಣೆಯಲ್ಲಿ ಯಶಸ್ವಿಯಾಗಿಲ್ಲ. ಬಾಲಕಾರ್ಮಿಕರನ್ನು ರಕ್ಷಿಸಿದ ಬಳಿಕ, ಅವರ ಭವಿಷ್ಯವನ್ನು ರೂಪಿಸುವಲ್ಲಿ ಅಧಿಕಾರ ವರ್ಗ ಭಾಗಶಃ ವಿಫಲವಾಗಿದೆ. ಹೊಟೇಲ್‌ಗಳಲ್ಲಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕರನ್ನು ರಕ್ಷಿಸಿ ಅವರನ್ನು ಪಾಲಕರಿಗೆ ಒಪ್ಪಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಭಾರತದಲ್ಲಿ ಬಡತನ ಎಷ್ಟು ಭೀಕರವಾಗಿದೆಯೆಂದರೆ, ಮಕ್ಕಳನ್ನು ಸಾಕಲಾಗದೆ ತಾಯಂದಿರು ಅವರನ್ನು ಮಾರುವ ಪರಿಸ್ಥಿತಿಯಿದೆ. ಅನೇಕ ಸಂದರ್ಭದಲ್ಲಿ ಮಕ್ಕಳನ್ನು ದುಡಿಯಲು ಕಳುಹಿಸುವುದು ಕುಟುಂಬಕ್ಕಾಗಿಯಲ್ಲ. ಕನಿಷ್ಠ ಆ ಮಕ್ಕಳಿಗಾದರೂ ಹೊಟ್ಟೆ ತುಂಬಾ ಊಟ ಸಿಗಲಿ ಎನ್ನುವ ಕಾಳಜಿಯಿಂದ. ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಜಮೀನ್ದಾರರ ಮುಷ್ಟಿಯಿಂದ ಈ ಮಕ್ಕಳನ್ನು ಬಿಡುಗಡೆ ಮಾಡುವುದು ಸುಲಭವಿಲ್ಲ. ಇದೇ ಸಂದರ್ಭದಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಲೇ ತಮ್ಮ ಆಹಾರ, ವಸತಿ, ಶಿಕ್ಷಣ ಇತ್ಯಾದಿಗಳನ್ನು ನಿಭಾಯಿಸುವ ಸಂತ್ರಸ್ತ ಮಕ್ಕಳೂ ಭಾರೀ ಸಂಖ್ಯೆಯಲ್ಲಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಬೀಡಿಕಟ್ಟಿ ಶಿಕ್ಷಣವನ್ನು ತನ್ನದಾಗಿಸಿಕೊಂಡವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ‘ಬಾಲ ಕಾರ್ಮಿಕ ವ್ಯವಸ್ಥೆ’ ಎಂದು ಇದನ್ನು ತಡೆದರೆ ಆ ಮಕ್ಕಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ರಕ್ಷಿಸಿದ ಬಾಲಕಾರ್ಮಿಕರೆಲ್ಲರಿಗೆ ಉಚಿತ ಆಹಾರ, ಶಿಕ್ಷಣವನ್ನು ನೀಡುವ ಶಕ್ತಿ ಭಾರತದಂತಹ ದೇಶಕ್ಕೆ ಇಲ್ಲ. ಇವೆಲ್ಲವುಗಳ ನಡುವೆಯೂ ಬಡ ಕುಟುಂಬಗಳನ್ನು ಗುರುತಿಸಿ ಅಲ್ಲಿರುವ ಮಕ್ಕಳಿಗೆ ಬೇಕಾದ ಶಿಕ್ಷಣ, ಆಹಾರ ಮೊದಲಾದವುಗಳ ವ್ಯವಸ್ಥೆಯನ್ನು ಮಾಡುವ ಸಣ್ಣ ಮಟ್ಟದ ಪ್ರಯತ್ನ ಸರಕಾರದಿಂದ ನಡೆಯುತ್ತಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವೂ ಆ ಪ್ರಯತ್ನದ ಭಾಗವೇ ಆಗಿದೆ.

ಲಾಕ್‌ಡೌನ್‌ನ ಈ ದಿನಗಳಲ್ಲಿ ಇಂತಹ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಒಂದೆಡೆ ಕುಟುಂಬಗಳು ಉದ್ಯೋಗವಿಲ್ಲದೆ ಆರ್ಥಿಕವಾಗಿ ಜರ್ಜರಿತವಾಗಿವೆ. ಒಂದು ಹೊತ್ತಿನ ಆಹಾರಕ್ಕಾಗಿ ಪರದಾಡಬೇಕಾದಂತಹ ಸ್ಥಿತಿಗೆ ಲಾಕ್‌ಡೌನ್ ತಂದಿಟ್ಟಿದೆ. ಇದರ ಜೊತೆ ಜೊತೆಗೇ ಶಾಲೆಗಳು ಮುಚ್ಚಿವೆ. ಉಳ್ಳವರ ಮಕ್ಕಳಿಗಷ್ಟೇ ಆನ್‌ಲೈನ್ ಶಿಕ್ಷಣ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಮನೆಯೊಳಗಿಟ್ಟು ಸಾಕುವ ಪರಿಸ್ಥಿತಿಯೂ ಕುಟುಂಬಗಳಿಗಿಲ್ಲ. ಈ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಮತ್ತೆ ಶಾಲೆಗಳಿಂದ ಹಟ್ಟಿ, ಗದ್ದೆಗಳಿಗೆ ಮರಳಿದ್ದಾರೆ. ಲಾಕ್‌ಡೌನ್ ಎನ್ನುವುದು ಗ್ರಾಮೀಣ ಮಕ್ಕಳ ಪಾಲಿಗೆ ‘ಮರಳಿ ಜೀತದೆಡೆಗೆ’ ಎನ್ನುವ ಘೋಷಣೆಯ ಇನ್ನೊಂದು ರೂಪವಾಗಿದೆ. ಲಾಕ್‌ಡೌನ್‌ನಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ವೇತನಗಳು ಕನಿಷ್ಠ ಮಟ್ಟಕ್ಕೆ ಇಳಿದಿವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನೂ ದುಡಿಸಿದರೆ ಒಂದಿಷ್ಟು ಹೆಚ್ಚು ಆಹಾರವನ್ನು ಸಂಪಾದಿಸಬಹುದು ಎನ್ನುವ ಅನಿವಾರ್ಯತೆಗೆ ಬಡ ಕುಟುಂಬಗಳು ಸಿಲುಕಿಕೊಂಡಿವೆ. ಆದುದರಿಂದ ಗ್ರಾಮೀಣ ಪ್ರದೇಶದಲ್ಲಿ ಜೀತ ಪದ್ಧತಿ ಮತ್ತೆ ಜೀವ ತಾಳಿದೆ. ಮಕ್ಕಳನ್ನು ಸಣ್ಣ ಪುಟ್ಟ ಹಣಕ್ಕೆ ಜೀತಕ್ಕಿಡುವ ಅಸಹಾಯಕ ಸ್ಥಿತಿಗೆ ಕುಟುಂಬಗಳು ತಲುಪಿವೆ.

ಭಾರತದಲ್ಲಿ ಲಾಕ್‌ಡೌನ್‌ನ ಅವಧಿಯಲ್ಲಿ ಮಕ್ಕಳು ಶಾಲೆಯಿಂದ ವಂಚಿತರಾಗಿರುವುದು ಮಾತ್ರವಲ್ಲ, ಅವರು ಶಾಲೆಗಳಿಂದ ಸಂಪೂರ್ಣ ಹೊರತಳ್ಳಲ್ಪಟ್ಟಿದ್ದಾರೆ. ದೊಡ್ಡ ಸಂಖ್ಯೆಯ ಮಕ್ಕಳು ಶಾಲೆಯನ್ನು ಸಂಪೂರ್ಣ ಮರೆತು, ಬದುಕುವ ಅನಿವಾರ್ಯಕ್ಕಾಗಿ ದೊಡ್ಡವರ ಗದ್ದೆ, ತೋಟ, ಹಟ್ಟಿಗಳಲ್ಲಿ ಕೆಲಸ ಮಾಡತೊಡಗಿದ್ದಾರೆ. ಅವರನ್ನೆಲ್ಲ ಮತ್ತೆ ಶಾಲೆಯೆಡೆಗೆ ಕರೆತರುವುದು ಸುಲಭವಿಲ್ಲ. ಈ ಮಕ್ಕಳಲ್ಲೂ ಬಾಲಕಿಯರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಇವರ ಬದುಕಿನ ಸಣ್ಣ ಬೆಳಕಿನ ಕಿರಣವಾಗಿದ್ದ ಶಾಲೆಗಳು ಮುಚ್ಚುವ ಮೂಲಕ ಅವರು ಮತ್ತೆ ಮನೆಯ ನಾಲ್ಕು ಗೋಡೆಗಳಲ್ಲಿ ಬಂದಿಯಾಗುವ ಸ್ಥಿತಿ ನಿರ್ಮಾಣವಾಗಿದೆ.

ಮನೆಗೆಲಸ ಮಾತ್ರವಲ್ಲ, ಇನ್ನಿತರ ದುಡಿಮೆಗಳಿಗೂ ಈ ಬಾಲಕಿಯರನ್ನು ಬಳಸಲಾಗುತ್ತಿದೆ. ಉತ್ತರ ಭಾರತದಲ್ಲಿ ಕಳೆದ ಒಂದು ವರ್ಷದಿಂದ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ. ಆರ್ಥಿಕವಾಗಿ ಕಂಗೆಟ್ಟಿರುವ ಕುಟುಂಬಗಳು ತಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸುವ ಮೂಲಕ ‘ಹೊರೆ’ಯಿಂದ ಮುಕ್ತವಾಗಲು ಯತ್ನಿಸುತ್ತಿವೆ. ಹಾಗೆಯೇ, ವಧುದಕ್ಷಿಣೆಯ ಆಸೆಗಾಗಿ ಮಕ್ಕಳನ್ನು ಹಿರಿ ವಯಸ್ಕರಿಗೆ ಮದುವೆ ಮಾಡಿಕೊಡುವ ಪ್ರಕರಣಗಳು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿವೆ. ಹೀಗೆ ‘ಬೇಟಿ ಪಡಾವೋ ಭೇಟಿ ಬಚಾವೋ’ ಎನ್ನುವ ಮೋದಿಯವರ ಘೋಷಣೆ ಈ ಲಾಕ್‌ಡೌನ್‌ನ ಕಾಲದಲ್ಲಿ ಅಪಹಾಸ್ಯಕ್ಕೀಡಾಗುತ್ತಿದೆ. ಲಾಕ್‌ಡೌನ್‌ನ ದುಷ್ಪರಿಣಾಮ ಐದಾರು ವರ್ಷಗಳ ಕಾಲ ಹೀಗೆ ಮುಂದುವರಿಯಬಹುದು. ಈ ಅವಧಿಯಲ್ಲಿ ಶಿಕ್ಷಣದಿಂದ ಮರಳಿ ಜೀತದೆಡೆಗೆ ಆಂದೋಲನ ಇನ್ನಷ್ಟು ತೀವ್ರತೆಯನ್ನು ಪಡೆಯಬಹುದು. ಇವೆಲ್ಲವೂ ಭಾರತದ ಭವಿಷ್ಯದ ಮೇಲೆ ಊಹಿಸಲಾಗದ ದುಷ್ಪರಿಣಾಮಗಳನ್ನು ಬೀರಲಿವೆ. ಶೀಘ್ರದಲ್ಲೇ ಸರಕಾರ ಶಾಲೆಗಳನ್ನು ತೆರೆಯದೇ ಇದ್ದರೆ, ಮುಂದೊಂದು ದಿನ ಈ ಮಕ್ಕಳು ಗದ್ದೆ, ತೋಟ, ಹಟ್ಟಿಗಳಲ್ಲಿ ಶಾಶ್ವತವಾಗಿ ಕಳೆದು ಹೋಗಬಹುದು. ಜೊತೆಗೆ ಭಾರತದ ಭವಿಷ್ಯವೂ ಕೂಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)