varthabharthi


ಕಾಲಮಾನ

ಉತ್ತರ-ದಕ್ಷಿಣದ ಗಾಂಧಿವಾದಿಗಳು

ವಾರ್ತಾ ಭಾರತಿ : 12 Jun, 2021
ರಾಮಚಂದ್ರ ಗುಹಾ

ಈ ಮೂವರ ಬದುಕುಗಳು ಪರಸ್ಪರ ವಿಭಿನ್ನ ಹಾಗೂ ವಿಶಿಷ್ಟವಾಗಿದೆಯಾದರೂ ಪ್ರಶಂಸನೀಯವಾಗಿದೆ ಮತ್ತು ಗಾಂಧಿವಾದವೆಂಬ ಸಮಾನವಾದ ಎಳೆಯೊಂದು ಈ ಮೂವರನ್ನು ಸುತ್ತುವರಿದಿದೆ. ಬಹುಗುಣ, ದೊರೆಸ್ವಾಮಿ ಹಾಗೂ ನಟರಾಜನ್ ಭಾರತ ಹಾಗೂ ಇಡೀ ಜಗತ್ತಿನ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದರೂ ಅವರ ಬದುಕು ಅವರ ತವರು ಜಿಲ್ಲೆ ಹಾಗೂ ತವರು ರಾಜ್ಯದಲ್ಲ್ಲಿ ಆಳವಾಗಿ ಬೇರೂರಿತ್ತು. ಜಾಗತಿಕವಾಗಿ ಚಿಂತಿಸುತ್ತಲೇ ಈ ಮೂವರು ಸ್ಥಳೀಯವಾಗಿಯೇ ಕಾರ್ಯಾಚರಿಸಿದ್ದರು. ಇವರೆಲ್ಲರೂ ನನಗೆ ತಿಳಿದಿರುವುದು ನನ್ನ ಸೌಭಾಗ್ಯವೇ ಆಗಿದೆ.


ಮೇ ತಿಂಗಳಲ್ಲಿ ಒಂದೇ ವಾರದಲ್ಲಿ ಮೂವರು ಅಸಾಮಾನ್ಯರಾದ ಭಾರತೀಯರು ಮೃತಪಟ್ಟಿದ್ದಾರೆ. ಇವರೆಲ್ಲರೂ ಗಾಂಧಿವಾದವನ್ನು ವಿವಿಧ ರೀತಿಯಲ್ಲಿ ಹಾಗೂ ವಿಭಿನ್ನ ಭೌಗೋಳಿಕ ಹಿನ್ನೆಲೆಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದರೂ ಕೂಡಾ ಮಹಾತ್ಮಾ ಗಾಂಧೀಜಿಯವರಿಂದ ಗಾಢವಾಗಿ ಪ್ರಭಾವಿತರಾಗಿದ್ದರು. ನಾವು ಅವರ ಸಾವಿಗಾಗಿ ಶೋಕಿಸುವ ಜೊತೆಗೆ ಅವರ ಬದುಕಿನ ಸಾರ್ಥಕತೆಯನ್ನು ಸಂಭ್ರಮಿಸಬೇಕಾಗಿದೆ.

ಈ ಗಾಂಧಿವಾದಿಗಳಲ್ಲಿ ನಿಧನರಾದವರಲ್ಲಿ ಸುಂದರಲಾಲ್ ಬಹುಗುಣ ಮೊದಲಿಗರು. 1973ರಲ್ಲಿ ಚಿಪ್ಕೊ ಚಳವಳಿಯು ಉತ್ತರಾಖಂಡದ ಅಲಕಾನಂದ ಕಣಿವೆಯಲ್ಲಿ ಆರಂಭ ಗೊಂಡಾಗ ಬಹುಗುಣ ಅವರಿಗೆ ಆಗಲೇ ಹಲವಾರು ದಶಕಗಳ ಸಾಮಾಜಿಕ ಸೇವೆಯ ಅನುಭವವಿತ್ತು. ಪ್ರಾರಂಭದಲ್ಲಿ ಚಿಪ್ಕೊ ಪ್ರತಿಭಟನೆಯ ನೇತೃತ್ವವನ್ನು ಚಂಡಿಪ್ರಸಾದ್ ಭಟ್ ವಹಿಸಿದ್ದರು. ಬಹುಗುಣ ಅವರ ಮಾತುಗಳಲ್ಲೇ ಹೇಳುವುದಾದರೆ ಚಂಡಿಪ್ರಸಾದ್ ಅವರು ಚಳವಳಿಯ ಮುಖ್ಯಸಂಚಾಲಕರಾಗಿದ್ದರು. ಚಮೋಲಿ ಜಿಲ್ಲೆಯಲ್ಲಿ ವೃಕ್ಷ ರಕ್ಷಣೆಗಾಗಿ ಮಹಿಳೆಯರು ಹಾಗೂ ಪುರುಷರು ನಡೆಸಿದ ಹೋರಾಟದಿಂದ ಪ್ರೇರಿತರಾದ ಬಹುಗುಣ ಅವರು ಚಿಪ್ಕೊ ಚಳವಳಿಯ ಚಿಂತನೆಯನ್ನು ಗಂಗಾನದಿಯ ವಿಶಾಲವಾದ ಉಪನದಿಯಾದ ಭಾಗೀರಥಿ ನದಿ ಹರಿಯುತ್ತಿರುವ ತನ್ನ ತವರು ನೆಲಕ್ಕೆ ತಂದರು. ಅಲ್ಲಿ ಅವರು ಮರಕಡಿಯುವುದರ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದರು ಮತ್ತು ಕಾಡುಗಳಲ್ಲಿ ದೀರ್ಘಾವಧಿಯ ನಿರಶನಗಳನ್ನು ನಡೆಸಿದರು.

ನಾನು ಪ್ರಪ್ರಥಮ ಬಾರಿಗೆ 1981ರಲ್ಲಿ ಕೋಲ್ಕತಾದಲ್ಲಿ ಸುಂದರ್‌ಲಾಲ್‌ಜಿ ಅವರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ನಾನು ಆಗಷ್ಟೇ ಚಿಪ್ಕೊ ಕುರಿತಾಗಿ ಡಾಕ್ಟರೇಟ್ ಸಂಶೋಧನೆಯನ್ನು ಆರಂಭಿಸಿದ್ದೆ. ಅವರೊಬ್ಬ ಸಮ್ಮೋಹಕ, ದೃಢಚಿತ್ತದ ಭಾಷಣಗಾರರಾಗಿದ್ದು, ನಿರರ್ಗಳವಾಗಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲವರಾಗಿದ್ದರು (ತನ್ನೂರ ಭಾಷೆಯಾದ ಗಢವಾಲಿಯಲ್ಲಿ ಅವರು ಇನ್ನೂ ಹೆಚ್ಚು ಆಕರ್ಷಕವಾಗಿ ಹಾಗೂ ನಿರರ್ಗಳವಾಗಿ ಮಾತನಾಡುತ್ತಿದ್ದರು). ಎರಡು ವರ್ಷಗಳ ಆನಂತರ ನಾನು ಬಡ್ಯಾರ್ ಕಣಿವೆಯಲ್ಲಿ ನನ್ನ ಪಿಎಚ್‌ಡಿಗಾಗಿ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದೆ. ಸುಂದರ್‌ಲಾಲ್ ಬಹುಗುಣ ನೇತೃತ್ವದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಕೃಷಿಕ ಮಹಿಳೆಯರೊಂದಿಗೆ ಸಂದರ್ಶನಗಳನ್ನು ನಡೆಸಿದ್ದೆ.

ನನ್ನ ಸಂಶೋಧನೆಯ ಸಮಯದಲ್ಲಿ ನಾನು ಚಂಡಿಪ್ರಸಾದ್ ಭಟ್ ಹಾಗೂ ಸುಂದರ್‌ಲಾಲ್ ಬಹುಗುಣ ಇವರಿಬ್ಬರನ್ನೂ ಬಹುವಾಗಿ ಮೆಚ್ಚಿಕೊಂಡಿದ್ದೆ. ಅತ್ಯಂತ ತ್ವರಿತವಾಗಿ ಒಬ್ಬರ ಪರ ವಹಿಸುವಲ್ಲಿ ನಿಸ್ಸೀಮರಾದ ದಿಲ್ಲಿಯ ಪತ್ರಕರ್ತರು ಹಾಗೂ ಅಕಾಡಮಿಕ್ ವಿದ್ವಾಂಸರು, ಚಿಪ್ಕೊ ಚಳವಳಿಯ ನಾಯಕನೆಂದು ಇವರಿಬ್ಬರಲ್ಲಿ ಯಾರಾದರೊಬ್ಬರಿಗೆ ಪ್ರಚಾರ ನೀಡುತ್ತಿದ್ದರು. 1970ರಲ್ಲಿ ನಡೆದ ಚಿಪ್ಕೊ ಪ್ರತಿಭಟನೆಗಳ ಬಳಿಕ ಉತ್ತರಾಖಂಡದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಮರಗಳ ಕಡಿಯುವಿಕೆಯಲ್ಲಿ ತ್ವರಿತವಾಗಿ ಇಳಿಕೆಯುಂಟಾಯಿತು. ಹಿಮಾಲಯದಾದ್ಯಂತ ಬಹುಗುಣ ಅವರು ಚಿಪ್ಕೊ ಚಳವಳಿಯ ಸಂದೇಶವನ್ನು ಸಾರಿದರು. ಇನ್ನೊಂದೆಡೆ ಚಂಡಿಪ್ರಸಾದ್ ಅವರು ಉತ್ತರಾಖಂಡದೊಳಗೆ ತಳಮಟ್ಟದಲ್ಲಿ ಕಾಡುಗಳ ಪುನರ್‌ನಿರ್ಮಾಣ ಕಾರ್ಯವನ್ನು ಆರಂಭಿಸಿದರು. ಗುತ್ತಿಗೆದಾರರು ಅರಣ್ಯ ಇಲಾಖೆಯ ಶಾಮೀಲಾತಿಯೊಂದಿಗೆ ಮರಗಳನ್ನು ಮನಬಂದಂತೆ ಕಡಿದಿದ್ದುದರಿಂದ ಬಂಜರಾಗಿದ್ದ ಪರ್ವತದಂಚಿನ ಪ್ರದೇಶಗಳಲ್ಲಿ ಯಶಸ್ವಿಯಾಗಿ ಕಾಡುಗಳನ್ನು ಮರಳಿ ನಿರ್ಮಿಸತೊಡಗಿದರು. ಬಹುಗುಣ ಹಾಗೂ ಚಂಡಿಪ್ರಸಾದ್ ಇಬ್ಬರೂ ಹಲವಾರು ಯುವ ಭಾರತೀಯರನ್ನು ಪರಿಸರದ ಸೇವೆ ಹಾಗೂ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡಲು ಪ್ರೇರೇಪಿಸಿದರು.
ಚೈತನ್ಯ, ಧೈರ್ಯ, ಬುದ್ಧಿಶಕ್ತಿ ಹಾಗೂ ವರ್ಚಸ್ಸಿನಲ್ಲಿ ಸುಂದರಲಾಲ್ ಬಹುಗುಣ ಅವರಿಗೆ ಸರಿಸಾಟಿಯಾದಂತಹ ಇನ್ನೋರ್ವ ಗಾಂಧಿವಾದಿಯೆಂದರೆ ಕರ್ನಾಟಕದ ಎಚ್.ಎಸ್. ದೊರೆಸ್ವಾಮಿ. ಬಹುಗುಣ ನಿಧನದ ಐದು ದಿನಗಳ ಬಳಿಕ ದೊರೆಸ್ವಾಮಿ ಕೊನೆಯುಸಿರೆಳೆದರು. ಅವರು ಬಹುಗುಣರಿಗಿಂತ ಪ್ರಾಯದಲ್ಲಿ ಒಂದು ದಶಕದಷ್ಟು ಹಿರಿಯರಾಗಿದ್ದರು ಮತ್ತು ಅವರು ಸುದೀರ್ಘ ಸೇವೆ ಹಾಗೂ ಹೋರಾಟದ ದಾಖಲೆಯುಳ್ಳವರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗ ದೊರೆಸ್ವಾಮಿ ಅವರು ಗಾಂಧೀಜಿಯವರನ್ನು ಭೇಟಿಯಾಗಿದ್ದರು. ಮಹಾತ್ಮಾಗಾಂಧಿ ಅವರು 1936ರ ಬೇಸಿಗೆಯಲ್ಲಿ ವಿಶ್ರಾಂತಿ ಹಾಗೂ ಚೇತರಿಕೆಗಾಗಿ ನಂದಿಹಿಲ್ಸ್‌ಗೆ ಆಗಮಿಸಿದ್ದಾಗ, ಅವರನ್ನು ದೊರೆಸ್ವಾಮಿ ಭೇಟಿಯಾಗಿದ್ದರು. ಇದಾದ ಆರು ವರ್ಷಗಳ ಆನಂತರ ದೊರೆಸ್ವಾಮಿ ಅವರು ಮೈಸೂರು ರಾಜಸಂಸ್ಥಾನದಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿ ಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು. ಇದರ ಪರಿಣಾಮವಾಗಿ ಅವರು ದೀರ್ಘ ಸಮಯದವರೆಗೆ ಜೈಲುವಾಸ ಅನುಭವಿಸಬೇಕಾಯಿತು.

ದೊರೆಸ್ವಾಮಿ ಅವರು 1950 ಹಾಗೂ 1960ರ ದಶಕದಲ್ಲಿ ಭೂರಹಿತ ಕೃಷಿಕರಿಗೆ ಭೂಮಿ ಮರುಹಂಚಿಕೆಗಾಗಿ ನಡೆದ ಸರ್ವೋದಯ ಚಳವಳಿಯಲ್ಲಿ ಪಾಲ್ಗೊಂಡರು. ಆದಾಗ್ಯೂ 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅವರು ಸಮಾಜಸೇವೆಯನ್ನು ತೊರೆದು ರಾಜಕೀಯ ಹೋರಾಟಕ್ಕೆ ಧುಮುಕಿದರು. ಆಗ ಅವರನ್ನು ಭಾರತ ಸರಕಾರ ಬಂಧಿಸಿತು. ಈ ಹಿಂದೆ ಊಳಿಗಮಾನ್ಯ ಹಾಗೂ ವಸಾಹತುಶಾಹಿ ಸರಕಾರದಿಂದ ಬಂಧಿತರಾಗಿದ್ದ ದೊರೆಸ್ವಾಮಿ ಅವರನ್ನು ಸ್ವತಂತ್ರ ಭಾರತದ ಸರಕಾರವೇ ಜೈಲಿಗಟ್ಟಿದ್ದುದು ವಿಪರ್ಯಾಸವಾಗಿತ್ತು. ತುರ್ತುಪರಿಸ್ಥಿತಿಯಲ್ಲಿ ಕೆಲವು ತಿಂಗಳುಗಳವರೆಗೆ ಜೈಲುವಾಸ ಅನುಭವಿಸಿ ಬಿಡುಗಡೆಯಾದ ಅವರು ತನ್ನ ಉಳಿದ ಜೀವಿತಾವಧಿಯನ್ನು ತನ್ನ ತವರು ರಾಜ್ಯದಲ್ಲಿ ಮಾನವೀಯ ಸಾಮಾಜಿಕ ಸುವ್ಯವಸ್ಥೆಗಾಗಿ ಮುಡಿಪಾಗಿಟ್ಟರು.

1980ರ ದಶಕದ ಅಂತ್ಯದಲ್ಲಿ ನಾನು ಮೊತ್ತಮೊದಲಿಗೆ ಎಚ್.ಎಸ್. ದೊರೆಸ್ವಾಮಿ ಅವರನ್ನು ಭೇಟಿಯಾಗಿದ್ದೆ. ಮಿಲಿಟರಿ-ಕೈಗಾರಿಕಾ ಸಂಕೀರ್ಣ ನಿರ್ಮಾಣಕ್ಕಾಗಿ ಪಶ್ಚಿಮಘಟ್ಟದಲ್ಲಿ ಪರಿಸರ ನಾಶವಾಗುತ್ತಿರುವುದರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆಗಲೇ 70ರ ವಯಸ್ಸಿನವರಾಗಿದ್ದ ದೊರೆಸ್ವಾಮಿ ಅವರ ಉಪಸ್ಥಿತಿಯು ಹುಮ್ಮಸ್ಸು ಮೂಡಿಸುತ್ತಿತ್ತು. ಅಜಾನುಬಾಹುವಾದ ದೊರೆಸ್ವಾಮಿಯವರು ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸಲು ಅಥವಾ ಉಪವಾಸ ಸತ್ಯಾಗ್ರಹ ನಡೆಸಲು ಸದಾ ಮುಂದಿರುತ್ತಿದ್ದರು. ಸುಂದರ್‌ಲಾಲ್ ಬಹುಗುಣರಂತೆ ದೊರೆಸ್ವಾಮಿ ಕೂಡಾ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವದವರಾಗಿದ್ದರು ಮತ್ತು ಹಾಸ್ಯಪ್ರಜ್ಞೆಯುಳ್ಳವರಾಗಿದ್ದರು. ಅವರ ಈ ಗುಣಗಳು ವಿಶೇಷವಾಗಿ ಯುವಜನರನ್ನು ಅವರೆಡೆಗೆ ಸೆಳೆಯುವಂತೆ ಮಾಡಿದ್ದವು.

ದೊರೆಸ್ವಾಮಿ ಅವರನ್ನು ಕೊನೆಯಬಾರಿ ಭೇಟಿಯಾಗಿದ್ದುದು ಕಳೆದ ವರ್ಷದ ಮಾರ್ಚ್‌ನಲ್ಲಿ. ಅದಕ್ಕೂ ಹಿಂದಿನ ದಶಕಗಳಲ್ಲಿ ನಾನು ಅವರ ಕೆಲಸ, ಕಾರ್ಯಗಳನ್ನು ನಿಕಟವಾಗಿ ಗಮನಿಸುತ್ತಿದ್ದೆ. ಅವರು ಕರ್ನಾಟದ ಆತ್ಮಸಾಕ್ಷಿಯಾಗಿದ್ದರು. ಭೂ ತಿಮಿಂಗಿಲಗಳನ್ನು, ಗಣಿ ಕಂಪೆನಿಗಳನ್ನು ಮಾತ್ರವಲ್ಲದೆ ಭ್ರಷ್ಟ ರಾಜಕಾರಣಿಗಳನ್ನು ನಿರ್ಭೀತಿಯಿಂದ ಎದುರಿಸುತ್ತಿದ್ದರು. 80 ಹಾಗೂ 90ರ ಇಳಿ ವಯಸ್ಸಿನಲ್ಲಿಯೂ ಅವರು ತನ್ನ ಉತ್ಸಾಹ, ಬದ್ಧತೆಯನ್ನು ಉಳಿಸಿಕೊಂಡಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಅನ್ಯಾಯದ ವಿರುದ್ಧ ಸದಾ ಧ್ವನಿಯೆತ್ತುತ್ತಿದ್ದ ದೊರೆಸ್ವಾಮಿ ಸರಕಾರದಿಂದ ಯಾವುದೇ ಸವಲತ್ತುಗಳನ್ನು ಪಡೆಯಲು ನಿರಾಕರಿಸುತ್ತಿದ್ದರು. ಅವರು ಯಾವತ್ತೂ ಕಾರನ್ನು ಹೊಂದಿರಲಿಲ್ಲ, ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಛಾಯಾಗ್ರಾಹಕ ಕೆ. ಭಾಗ್ಯಪ್ರಕಾಶ್ ಅವರು 93 ವರ್ಷ ವಯಸ್ಸಿನ ಈ ಹಿರಿಯ ಗಾಂಧಿವಾದಿ ಬೆಂಗಳೂರಿನ ಬಸ್‌ನಿಲ್ದಾಣದಲ್ಲಿ ಬಸ್‌ಗಾಗಿ ಕಾದುನಿಂತಿರುವುದನ್ನು ಕಂಡರು. ದೊರೆಸ್ವಾಮಿ ಗಮನಕ್ಕೆ ಬಾರದಂತೆ ಅವರು ಬಸ್ಸನ್ನೇರುತ್ತಿರುವ ದೃಶ್ಯದ ಸರಣಿ ಫೋಟೊಗಳನ್ನು ಕ್ಲಿಕ್ಕಿಸಿದ್ದರು. ದೊರೆಸ್ವಾಮಿ ನಿಧನದ ಬಳಿಕ ಈ ಛಾಯಾಚಿತ್ರಗಳನ್ನು ಭಾಗ್ಯಪ್ರಕಾಶ್ ಟ್ವಿಟರ್‌ನಲ್ಲಿ ಮರುಪೋಸ್ಟ್ ಮಾಡಿದ್ದರು.

ಇತರ ಎಲ್ಲಾ ಚಳವಳಿಗಳ ಹಾಗೆ ಸ್ವತಂತ್ರ ಭಾರತದಲ್ಲಿ ಗಾಂಧಿವಾದಿ ಚಳವಳಿಯು, ಹಿಂದುತ್ವ ಬಹುಸಂಖ್ಯಾತವಾದದ ಬೆಳವಣಿಗೆಯಿಂದಾಗಿ ಗಣರಾಜ್ಯ ವ್ಯವಸ್ಥೆಗೆ ಬೆದರಿಕೆಯುಂಟಾಗಿರುವ ಬಗ್ಗೆ ಸಮರ್ಪಕ ಗಮನವನ್ನು ಹರಿಸಲಿಲ್ಲ. (ಸ್ವತಃ ಸುಂದರಲಾಲ್ ಬಹುಗುಣ ಅವರಿಗೂ ವಿಶ್ವಹಿಂದೂ ಪರಿಷತ್ ಜೊತೆ ಒಡನಾಟ ವಿದ್ದಿತ್ತು). ಈ ಮಟ್ಟಿಗೆ ಹೇಳುವುದಾದರೆ ಎಚ್. ಎಸ್. ದೊರೆಸ್ವಾಮಿ ಅವರು ಇದಕ್ಕೆ ತೀರಾ ಅಪವಾದವಾಗಿದ್ದರು. ತನ್ನ 102ನೇ ವಯಸ್ಸಿನಲ್ಲಿ ಅವರು ಅನೀತಿಯುತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅದು ಅವರು ಭಾಗವಹಿಸಿದ್ದ ಕಟ್ಟಕಡೆಯ ಚಳವಳಿಯಾಗಿತ್ತು. ಪೊಲೀಸ್ ದೌರ್ಜನ್ಯದ ವಿರುದ್ಧ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ವಿದ್ಯಾರ್ಥಿಗಳು (ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು) ಪ್ರದರ್ಶಿಸಿದ ಅಸಾಧಾರಣವಾದ ದಿಟ್ಟತನದಿಂದ ಪ್ರಭಾವಿತರಾದ ಈ ಶತಾಯುಷಿ ಗಾಂಧಿವಾದಿ, 2020ರ ಮಾರ್ಚ್‌ನಲ್ಲಿ ತೆರೆದ ಬಯಲಿನಲ್ಲಿ ಸ್ಥಾಪಿಸಲಾದ ಶಾಮಿಯಾನದಲ್ಲಿ ಸಾವಿರಾರು ಮಂದಿ ಮಿತ್ರರು ಹಾಗೂ ಅಭಿಮಾನಿಗಳ ಜೊತೆ ಧರಣಿ ನಡೆಸಿದರು. ಸಿಎಎ ಅತ್ಯಂತ ತಾರತಮ್ಯಯುತವಾದುದೆಂದು ದೊರೆಸ್ವಾಮಿ ಪ್ರತಿಪಾದಿಸಿರುವುದಾಗಿ ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿತ್ತು. ‘‘ಸಿಎಎ ನಮ್ಮ ದೇಶದ ಮೂಲಭೂತ ಸಿದ್ಧಾಂತಗಳಿಗೆ ಅನೈತಿಕವಾದುದಾಗಿದೆ, ಇಲ್ಲಿನ ಮುಸ್ಲಿಮರು ಭಾರತೀಯರು ಆಗಿದ್ದು, ತಮ್ಮ ಪೌರತ್ವವನ್ನು ಸಾಬೀತುಪಡಿಸುವಂತೆ ಅವರನ್ನು ಕೇಳಲು ಸಾಧ್ಯವಿಲ್ಲ’’ ಎಂದವರು ಹೇಳಿದ್ದರು. ‘‘ಸರಕಾರದ ತಾರತಮ್ಯಯುತವಾದ ನೀತಿಗಳನ್ನು ವಿರೋಧಿಸಿದ್ದಕ್ಕಾಗಿ ನನ್ನನ್ನು ದೇಶವಿರೋಧಿಯನ್ನಾಗಿ ಮಾಡಲು ಸಾಧ್ಯವಿಲ್ಲ. ನಾವು ಸರಕಾರ ಮತ್ತು ರಾಜ್ಯ, ದೇಶದ ನಡುವೆ ವ್ಯತ್ಯಾಸವನ್ನು ಕಾಣಬೇಕಾಗಿದೆ’’ ಎಂದವರು ಹೇಳಿದ್ದರು. (https://www.thehindu.com/society/i-think-it is-time-i-launch-my-campaign-hs-doreswamy/article 31110267.ece).

ರಾಟಗಾರನೆಂಬುದಕ್ಕಿಂತಲೂ ಹೆಚ್ಚಾಗಿ ಕೆ.ಎಂ.ನಟರಾಜನ್ ಅವರೊಬ್ಬ ರಚನಾತ್ಮಕ ಕೆಲಸಗಾರನಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ನಟರಾಜನ್‌ಜಿ, 1956-57ರಲ್ಲಿ ಭೂದಾನ ಚಳವಳಿಯ ಪ್ರಚಾರಕ್ಕಾಗಿ ತಮಿಳುನಾಡಿನುದ್ದಕ್ಕೂ ವಿನೋಬಾಭಾವೆ ಜೊತೆಗೂಡಿ ಪಾದಯಾತ್ರೆ ನಡೆಸಿದ್ದರು. ಆವಾಗಿನಿಂದ ಅವರು ತನ್ನ ಜೀವಿತದ ಉಳಿದ ಅವಧಿಯನ್ನು ಗ್ರಾಮೀಣ ಜನರ ಪುನರುಜ್ಜೀವನಕ್ಕಾಗಿ ಸಮರ್ಪಿಸಿಕೊಂಡರು. ಜಾತಿ ಪದ್ಧತಿಯ ರದ್ದತಿ, ಖಾದಿ ಹಾಗೂ ಸಾವಯವ ಕೃಷಿಗೆ ಉತ್ತೇಜನ ಹಾಗೂ ದೇವಸ್ಥಾನಗಳ ಒಡೆತನದಲ್ಲಿದ್ದ ಜಮೀನನ್ನು ಭೂರಹಿತ ಕಾರ್ಮಿಕರಿಗೆ ಮರುಹಂಚಿಕೆ ಸೇರಿದಂತೆ ವಿವಿಧ ಸುಧಾರಣಾ ಕಾರ್ಯಗಳಲ್ಲಿ ದುಡಿದರು. ಅವರ ಈ ಅಭಿಯಾನಗಳಲ್ಲಿ ಅಸಾಮಾನ್ಯ ದಂಪತಿಯಾದ ಶಂಕರಲಿಂಗಂ ಹಾಗೂ ಕೃಷ್ಣಮ್ಮಾಳ್ ಜಗನ್ನಾಥನ್ ಹಾಗೂ ಖಾದಿಧಾರಿ ಅಮೆರಿಕನ್ ರಾಲ್ಫ್ ರಿಚರ್ಡ್ ಖೈತಾನ್ ಪಾಲ್ಗೊಂಡಿದ್ದರು.

 ಕೆ.ಎಂ. ನಟರಾಜನ್ ಅವರ ಬಗ್ಗೆ ಮೊದಲ ಬಾರಿಗೆ ನನಗೆ ತಿಳಿದುಬಂದಿದ್ದುದು ಭಾರತೀಯ ಅಂಚೆ ಸೇವೆಯ ಸೌಜನ್ಯದಿಂದಾಗಿ. ಗಾಂಧಿವಾದಿ ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪ ಅವರ ಕುರಿತು ದಿನಪತ್ರಿಕೆಯೊಂದರಲ್ಲಿ ಲೇಖನವನ್ನು ಬರೆದಿದ್ದೆ. ಈ ಲೇಖನದ ಬಗ್ಗೆ ನನಗೆ ಮದುರೈನ ವ್ಯಕ್ತಿಯೊಬ್ಬರಿಂದ ಅತ್ಯಂತ ಸೂಚನಾತ್ಮಕ ಅಂಚೆಪತ್ರವೊಂದು ಬಂದಿತ್ತು. ಅದು ನಟರಾಜನ್ ಅವರದಾಗಿತ್ತು. ಆತ ಕುಮಾರಪ್ಪ ಅವರ ಜೊತೆ ನಿಕಟವಾಗಿ ಕೆಲಸ ಮಾಡಿದವರಾಗಿದ್ದರು. ಹಲವಾರು ವರ್ಷಗಳ ಆನಂತರ ಆರ್. ಆರ್. ಕಿತಾಹ್ನ್ ಅವರ ಬದುಕಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ನಟರಾಜನ್‌ಗೂ ಅವರ ಬಗ್ಗೆ ಚೆನ್ನಾಗಿ ತಿಳಿದಿರುವುದು ನನ್ನ ಅರಿವಿಗೆ ಬಂದಿತ್ತು. ಹೀಗಾಗಿ ಅವರ ಸಲಹೆ ಕೇಳಲು ನಾನು ಮದುರೈಗೆ ಪ್ರಯಾಣಿಸಿದ್ದೆ.

ಗಾಂಧಿ ಮ್ಯೂಸಿಯಂ ಸಂಕೀರ್ಣದಲ್ಲಿರುವ ಸರ್ವೋದಯ ಕಚೇರಿಯಲ್ಲಿ ಕಪ್ ಚಹಾ ಸವಿಯುತ್ತಿದ್ದಾಗ ಕಿತಾಹ್ನ್ ಅವರ ಜೀವನದ ಬಗ್ಗೆ ನನಗೆ ತಿಳಿಯದೆ ಇದ್ದ ಹಲವಾರು ಸಂಗತಿಗಳನ್ನು ನಟರಾಜನ್‌ಜೀ ಅವರು ನನಗೆ ತಿಳಿಸಿದರು. ಆನಂತರ ಅವರು ಕಿತಾಹ್ನ್ ಬಗ್ಗೆ ಚೆನ್ನಾಗಿ ತಿಳಿದಿರುವ ದಿಂಡಿಗಲ್‌ನ ಗಾಂಧಿಗ್ರಾಮ ಗ್ರಾಮೀಣ ವಿಶ್ವವಿದ್ಯಾನಿಲಯದ ಜನರನ್ನು ಪರಿಚಯಿಸಿದರು.

ಮಾತುಕತೆಯ ಸಂದರ್ಭದಲ್ಲಿ ನಟರಾಜನ್ ಅವರಿಗೆ ಗಾಂಧಿವಾದವಲ್ಲ ವೆಂದು ನಿರ್ಧರಿಸಲ್ಪಟ್ಟಂತಹ ಪ್ರವೃತ್ತಿಯಾದ ಕ್ರಿಕೆಟ್ ಆಟದ ಬಗ್ಗೆ ತೀವ್ರ ಆಸಕ್ತಿಯನ್ನು ಹೊಂದಿರುವುದು ನನಗೆ ಆನಂದಾಶ್ಚರ್ಯವುಂಟಾಯಿತು. ಇನ್ನು ಅವರ ಔದಾರ್ಯಕ್ಕಂತೂ ಮಿತಿಯೇ ಇರಲಿಲ್ಲ. ಬೆಂಗಳೂರಿಗೆ ವಾಪಸಾದ ಬಳಿಕವಂತೂ ನನಗೆ ಅವರಿಂದ ಪಾರ್ಸೆಲ್‌ಗಳ ಪ್ರವಾಹವೇ ಹರಿದುಬರತೊಡಗಿತು. ಇವುಗಳನ್ನು ಅವರು ತಮಿಳುನಾಡಿನಾದ್ಯಂತ ಆಯ್ದು ಕಳುಹಿಸಿದ್ದರು. ನಾನು ಬರೆದ ವಿಷಯಗಳ ಕರಡನ್ನು ಓದುವ ಔದಾರ್ಯವನ್ನು ಕೂಡಾ ಅವರು ತೋರಿಸಿದ್ದರು ಮತ್ತು ಅದರಲ್ಲಿರುವ ತಪ್ಪುಗಳ ಬಗ್ಗೆ ಸಭ್ಯತಾಪೂರ್ವಕವಾಗಿ ಬೆಟ್ಟು ಮಾಡಿ ತೋರಿಸಿದ್ದರು.

ಈ ಮೂವರ ಬದುಕನ್ನು ಅವಲೋಕಿಸಿದಾಗ, ಇವರಲ್ಲಿ ಪ್ರತಿಯೊಬ್ಬರೂ ಈ ಭೂಮಿಯನ್ನು ತೊರೆಯಲು ಇನ್ನೂ ಸಮಯವಿರುವ ನಮ್ಮಂತಹವರಿಗೆ ಕೆಲವೊಂದು ಪಾಠಗಳನ್ನು ಬೋಧಿಸಿದ್ದಾರೆ. ಉತ್ತರಾಖಂಡದ ಬಹುಗುಣ ಅವರು ನಿಸರ್ಗದಿಂದ ಮಾನವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಅಥವಾ ಅವರು ಪ್ರಕೃತಿಗಿಂತ ಶ್ರೇಷ್ಠರೂ ಅಲ್ಲವೆಂಬುದನ್ನು ಕಲಿಸಿಕೊಟ್ಟಿದ್ದಾರೆ. ನಮ್ಮ ಉಳಿವಿಗಾಗಿ ನಾವು ಉಳಿದ ಸೃಷ್ಟಿಗಳನ್ನು ಕೂಡಾ ಗೌರವಿಸಬೇಕಾಗಿದೆ ಎಂದವರು ಉಪದೇಶಿಸಿದ್ದಾರೆ.

ಕರ್ನಾಟಕದ ದೊರೆಸ್ವಾಮಿಯವರು ಜಾತಿ, ಧರ್ಮ, ವರ್ಗ, ಲಿಂಗ ಅಥವಾ ಜನಾಂಗದ ಆಧಾರದಲ್ಲಿ ತಾರತಮ್ಯ ಮಾಡುವುದು ಭಾರತದ ಸಂವಿಧಾನದ ಆದರ್ಶಗಳಿಗೆ ಅನೈತಿಕವಾದುದು ಮಾತ್ರವಲ್ಲದೆ ಸಭ್ಯತೆ ಹಾಗೂ ಮಾನವತೆಗೂ ವಿರೋಧಿಯಾದುದಾಗಿದೆ ಎಂಬುದನ್ನು ಬೋಧಿಸಿದ್ದಾರೆ. ಇಂತಹ ಭೇದಭಾವವನ್ನು ಅಹಿಂಸಾತ್ಮಕವಾಗಿ ವಿರೋಧಿಸುವುದು ಸ್ವಾತಂತ್ರ ಮತ್ತು ನ್ಯಾಯವು ತಮ್ಮ ಆದರ್ಶಗಳೆಂದು ಪ್ರತಿಪಾದಿಸುವ ಪ್ರತಿಯೊಬ್ಬರ ಕರ್ತವ್ಯವಾಗಿದೆ.

ತಮಿಳುನಾಡಿನ ನಟರಾಜನ್ ಅವರು ನೈಜ ಸ್ವಾವಲಂಬನೆಯು ತನ್ನ ಕುಟುಂಬ ಹಾಗೂ ಸಮುದಾಯದೊಂದಿಗೆ ಕೆಲಸ ಮಾಡುವಂತಹ ವ್ಯಕ್ತಿಯೊಂದಿಗೆ ಆರಂಭಗೊಳ್ಳುತ್ತದೆ ಎಂಬುದನ್ನು ಕಲಿಸಿದ್ದಾರೆ. ಗ್ರಾಮೀಣ ಸುಸ್ಥಿರತೆಗಾಗಿ ಸ್ಥಳೀಯವಾಗಿ ಕಾರ್ಯಾಚರಿಸುವುದು ಅಂತರ್‌ರಾಷ್ಟ್ರೀಯ ಒಡಂಬಡಿಕೆಗೆ ಅನುಗುಣವಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವುದು ಭೂಮಿಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂಬುದನ್ನು ನಮಗೆ ಬೋಧಿಸಿದ್ದಾರೆ.

ಈ ಮೂವರ ಬದುಕುಗಳು ಪರಸ್ಪರ ವಿಭಿನ್ನ ಹಾಗೂ ವಿಶಿಷ್ಟವಾಗಿದೆಯಾದರೂ ಪ್ರಶಂಸನೀಯವಾಗಿದೆ ಮತ್ತು ಗಾಂಧಿವಾದವೆಂಬ ಸಮಾನವಾದ ಎಳೆಯೊಂದು ಈ ಮೂವರನ್ನು ಸುತ್ತುವರಿದಿದೆ. ಬಹುಗುಣ, ದೊರೆಸ್ವಾಮಿ ಹಾಗೂ ನಟರಾಜನ್ ಭಾರತ ಹಾಗೂ ಇಡೀ ಜಗತ್ತಿನ ಬಗ್ಗೆ ತೀವ್ರವಾದ ಆಸಕ್ತಿಯನ್ನು ಹೊಂದಿದ್ದರೂ ಅವರ ಬದುಕು ಅವರ ತವರು ಜಿಲ್ಲೆ ಹಾಗೂ ತವರು ರಾಜ್ಯದಲ್ಲ್ಲಿ ಆಳವಾಗಿ ಬೇರೂರಿತ್ತು. ಜಾಗತಿಕವಾಗಿ ಚಿಂತಿಸುತ್ತಲೇ ಈ ಮೂವರು ಸ್ಥಳೀಯವಾಗಿಯೇ ಕಾರ್ಯಾಚರಿಸಿದ್ದರು. ಇವರೆಲ್ಲರೂ ನನಗೆ ತಿಳಿದಿರುವುದು ನನ್ನ ಸೌಭಾಗ್ಯವೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)