varthabharthi


ನಿಮ್ಮ ಅಂಕಣ

ಪರೀಕ್ಷೆ ಎನ್ನುವ ಧಾರ್ಮಿಕ ಆಚರಣೆಗಳು

ವಾರ್ತಾ ಭಾರತಿ : 13 Jun, 2021
ರಾಜೇಂದ್ರ ಚೆನ್ನಿ

ಶಿಕ್ಷಣ ಇಲಾಖೆಗಳ ಭ್ರಷ್ಟಾಚಾರದ ಬುನಾದಿಯೆಂದರೆ ಪರೀಕ್ಷೆಗಳು ಅದರಲ್ಲೂ ಅಂತಿಮ ಪರೀಕ್ಷೆಗಳು (end of term ಪರೀಕ್ಷೆಗಳು). ಇಡೀ ರಾಷ್ಟ್ರವೇ ಈ ಪರೀಕ್ಷೆಗಳ ಗುಮ್ಮದ ಎದುರು ಮಂಡಿ ಊರುವಂತೆ ಖಾಸಗಿ ಕೋಚಿಂಗ್ ಲಾಬಿಗಳು, ಕಂಪೆನಿಗಳು ಮಾಡಿವೆ. ನನ್ನ ಅಂದಾಜಿನಲ್ಲಿ ಕೋವಿಡ್ ಲಸಿಕೆಯನ್ನು ಎಲ್ಲಾ ಪ್ರಜೆಗಳಿಗೆ ಕೊಡಿಸಲು ಬೇಕಾಗುವ ಅರ್ಧದಷ್ಟು ಹಣವನ್ನು ಈ ಕಂಪೆನಿಗಳು, ಲಾಬಿಗಳು ಈಗಾಗಲೇ ದುಡಿದುಕೊಂಡಿವೆ. ಅದರಲ್ಲಿ ಒಂದು ಭಾಗವನ್ನು ನಮ್ಮ ಸರಕಾರಗಳು ಪಡೆದುಕೊಂಡಿವೆ. ಹೀಗಾಗಿ ಪರೀಕ್ಷೆಗಳ ಪಾವಿತ್ರ್ಯವನ್ನು ಅನಿವಾರ್ಯತೆಯನ್ನು ಪ್ರಶ್ನಿಸುವ, ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಈ ಶಕ್ತಿಗಳು ವಿರೋಧಿಸುತ್ತಿವೆ. ಆ ಕಾರಣಕ್ಕಾಗಿಯೇ ಸಾಂಪ್ರದಾಯಿಕ ಪರೀಕ್ಷೆಗಳನ್ನು ರದ್ದುಮಾಡಿದರೂ ಕೊನೇ ಪಕ್ಷ ಇನ್ನೊಂದು ಮಾದರಿಯ ಪರೀಕ್ಷೆಗಳನ್ನು ನಡೆಸಬೇಕೆನ್ನುವ ಹಾಸ್ಯಾಸ್ಪದ ಪ್ರಯತ್ನಗಳನ್ನು ಸರಕಾರವು ಮಾಡುತ್ತಿದೆ.


ದ್ವಿತೀಯ ಪಿ.ಯು. ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಸರಕಾರದಿಂದ ಅಧಿಕೃತ ಹೇಳಿಕೆ ಬಂದ ಮೇಲೆ ಅನೇಕ ತಿಂಗಳುಗಳ ನನೆಗುದಿ, ಆತಂಕ ಮತ್ತು ಅನಿಶ್ಚಿತತೆಗಳು ಮುಕ್ತಾಯವಾದವು ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಕೆಲವು ಹೇಳಿಕೆಗಳು ಆಕ್ರೋಶ ಹಾಗೂ ವಿವಾದಕ್ಕೆ ಕಾರಣವಾಗುತ್ತಿವೆ. ಒಂದು ಪ್ರಥಮ ಪಿ.ಯು. ವಿದ್ಯಾರ್ಥಿಗಳಿಗೆ ಎರಡು ಆನ್‌ಲೈನ್ ಪ್ರಶ್ನೆ ಪತ್ರಿಕೆಗಳ ಪರೀಕ್ಷೆಯನ್ನು ನಡೆಸಬೇಕೆನ್ನುವುದು. ಇವುಗಳ ಪ್ರಶ್ನೆ ಪತ್ರಿಕೆಗಳನ್ನು ಕಳಿಸುವ ವ್ಯವಸ್ಥೆ ಮಾಡಿದ ಮೇಲೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಉತ್ತರ ಬರೆದು ಉತ್ತರ ಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಅಥವಾ ಪೋಸ್ಟ್ ಮೂಲಕ ಕಳಿಸಬಹುದೆಂದೂ, ಶಿಕ್ಷಕರು ಅವುಗಳ ಮೌಲ್ಯಮಾಪನ ಮಾಡಿ ಅಂಕಗಳನ್ನು ದಾಖಲಿಸುವ ಕೇಂದ್ರೀಕೃತ ವ್ಯವಸ್ಥೆಗೆ ಅಪ್‌ಲೋಡ್ ಮಾಡಬೇಕೆಂದು ತಿಳಿಸಲಾಗಿದೆ. ಜೊತೆಗೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡಲಾಗುವುದಿಲ್ಲವೆಂದೂ ತಿಳಿಸಲಾಗಿದೆ! ಇದು ಅದೆಷ್ಟು ಅತಾರ್ಕಿಕ ಹಾಗೂ ಅಸಂಗತವಾಗಿ ಕಾಣುತ್ತದೆಯೆಂದರೆ ಇದು ನಿಜವೇ ಎಂದು ನಾಲ್ಕಾರು ದಿನಪತ್ರಿಕೆಗಳಲ್ಲಿ ವರದಿಯನ್ನು ಹುಡುಕಿ ನೋಡಬೇಕಾಯಿತು. ಈಗಾಗಲೇ ಎಲ್ಲಾ ಪ್ರಥಮ ಪಿ.ಯು. ವಿದ್ಯಾರ್ಥಿಗಳನ್ನು ದ್ವಿತೀಯ ಪಿ.ಯು. ತರಗತಿಗೆ ಉನ್ನತೀಕರಣಗೊಳಿಸಲಾಗಿದೆ (promote) ಎಂದು ಆದೇಶವನ್ನು ಸರಕಾರ ನೀಡಿ ಬಹಳ ದಿನಗಳಾಗಿವೆ. ಅಲ್ಲದೆ ಪ್ರತಿವರ್ಷದಂತೆ ಸರಕಾರದ ಆದೇಶ ಅಥವಾ ಫಲಿತಾಂಶ ಪ್ರಕಟನೆಗೆ ಕಾಯದೆ ಬಹುಪಾಲು ಖಾಸಗಿ ಹಾಗೂ ಪ್ರತಿಷ್ಠಿತ ಶಾಲೆಗಳು ಪ್ರವೇಶಾತಿಯನ್ನು ಮುಗಿಸಿ ದ್ವಿತೀಯ ಪಿ.ಯು. ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. ಅದೇ ರೀತಿ ಖಾಸಗಿ ವಿಶ್ವವಿದ್ಯಾನಿಲಯಗಳ ಪ್ರಥಮ ಬಿ.ಎ., ಬಿ.ಎಸ್ಸಿ. ತರಗತಿಗಳ ಪ್ರವೇಶವೂ ಹೆಚ್ಚುಕಡಿಮೆ ಮುಗಿದಿವೆ. ವ್ಯಂಗ್ಯವೇನೆಂದರೆ ಪ್ರಥಮ ಪಿ.ಯು.ಗೆ ಆನ್‌ಲೈನ್ ಪರೀಕ್ಷೆಯ ಆದೇಶದ ಜೊತೆಗೆ ಇಂತಹ ಪ್ರವೇಶಗಳು ಕಾನೂನುಬಾಹಿರವೆನ್ನುವ ಆದೇಶವನ್ನು ಸರಕಾರವು ಪ್ರಕಟಿಸಿದೆ. ಅನೇಕ ವರ್ಷಗಳಿಂದ ಈ ಕ್ರಿಯೆಗಳನ್ನು ಯಾಂತ್ರಿಕವಾಗಿ, ಒಂದು ವಿಧ್ಯುಕ್ತ ಆಚರಣೆಯಂತೆ (ritual) ನಡೆಸಿಕೊಂಡು ಬರಲಾಗಿದೆ. ಕಾರಣವೇನೆಂದರೆ ಕರ್ನಾಟಕದಲ್ಲಿ ಯಾವ ಪಕ್ಷವು ಅಧಿಕಾರದಲ್ಲಿದ್ದರೂ ಶಿಕ್ಷಣ ಇಲಾಖೆಗಳು ಕೋಚಿಂಗ್ ಮಾಫಿಯಾ ಮತ್ತು ಖಾಸಗಿ ಹಿತಾಸಕ್ತಿಗಳ ಆಡಳಿತಕ್ಕೆ ಒಳಪಟ್ಟಿವೆ ಎನ್ನುವುದು ವಾಸ್ತವ ಸಂಗತಿ. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಕೋಚಿಂಗ್ ಮೂಲ ವ್ಯವಸ್ಥೆಗಳನ್ನು ಒದಗಿಸುವ ಖಾಸಗಿ ಕಂಪೆನಿಗಳೂ ಈ ಆಡಳಿತದಲ್ಲಿ ಸೇರಿಕೊಂಡಿವೆ. ಪಾಠ ಮಾಡುವ ಶಿಕ್ಷಕರು ಯಾವುದೇ ಶೈಕ್ಷಣಿಕ ನೀತಿಯನ್ನು ಚರ್ಚಿಸಲು ಅಸಮರ್ಥರು ಎಂದು ನಿರ್ಧರಿಸಲಾಗಿರುವುದರಿಂದ ಇಂದು ರಾಜ್ಯದ ಎಲ್ಲಾ ನೀತಿಗಳನ್ನು ಖಾಸಗಿ ಕ್ಷೇತ್ರದ ಪರಿಣಿತರ ಮೂಲಕ ರೂಪಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಮಿತಿಯ ರಚನೆಯನ್ನು ನೋಡಿ ಅದರಲ್ಲಿ ಕೆಲವು ಹಿರಿಯ ಐಎಎಸ್ ಅಧಿಕಾರಿಗಳು, ಖಾಸಗಿ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು, ಕೆಲವು ‘ಸೆಲೆಬ್ರಿಟಿ’ ವ್ಯಕ್ತಿಗಳು ಇರುತ್ತಾರೆ. ಅಂದರೆ ರಾಜ್ಯದಲ್ಲಿರುವ ಲಕ್ಷಾನುಗಟ್ಟಲೆ ಶಾಲೆಗಳು, ಸರಕಾರಿ ಕಾಲೇಜುಗಳು, ಹತ್ತಾರು ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿರುಪಯುಕ್ತರು ಎಂದು ನಮ್ಮ ಶಿಕ್ಷಣ ಇಲಾಖೆಗಳು ನಿರ್ಧರಿಸಿಬಿಟ್ಟಿವೆ. ಕಾರಣವೆಂದರೆ ಕರ್ನಾಟಕದಂತಹ ಅತಿಭ್ರಷ್ಟ ರಾಜ್ಯದಲ್ಲಿ ಖಾಸಗೀಕರಣವೆಂದರೆ ಭ್ರಷ್ಟಾಚಾರವೇ ಹೊರತು ಇನ್ನೇನಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲು, ಸಂವಹನೆ ಕಲಿಸಲು ಉನ್ನತ ಶಿಕ್ಷಣ ಇಲಾಖೆಯು ಟೆಂಡರ್ ಕರೆಯುವುದರ ಮೂಲಕ ಖಾಸಗಿ ಸಂಸ್ಥೆಗಳನ್ನು ಆಯ್ಕೆ ಮಾಡುತ್ತಿವೆ! ತಾನೇ ಲಕ್ಷಗಟ್ಟಲೆ ಸಂಬಳ ಕೊಡುವ ಶಿಕ್ಷಕರು ಅಸಮರ್ಥರೆಂದು ಶಿಕ್ಷಣ ಮಂತ್ರಿಗಳು ಹಾಗೂ ಇಲಾಖೆಗಳು ಅವರನ್ನು ಸತತವಾಗಿ ಅವಮಾನಿಸುತ್ತಾ ಬಂದಿವೆ. ಇತ್ತೀಚಿನ ಉದಾಹರಣೆಯೆಂದರೆ New Education Policy ಯ ಅನುಷ್ಠಾನಕ್ಕೆ ರಚಿಸಲಾಗಿರುವ ಉನ್ನತ ಸಮಿತಿಗಳ ಸದಸ್ಯರ ಪಟ್ಟಿಯನ್ನು ಗಮನಿಸಬಹುದು. ಇವೆಲ್ಲಕ್ಕೂ ಪರೀಕ್ಷೆಗಳ ಗೊಂದಲಕ್ಕೂ ನೇರವಾದ ಸಂಬಂಧಗಳಿವೆ. ಶಿಕ್ಷಣ ಇಲಾಖೆಗಳ ಭ್ರಷ್ಟಾಚಾರದ ಬುನಾದಿಯೆಂದರೆ ಪರೀಕ್ಷೆಗಳು ಅದರಲ್ಲೂ ಅಂತಿಮ ಪರೀಕ್ಷೆಗಳು (end of term  integrated coaching ಪರೀಕ್ಷೆಗಳು). ಇಡೀ ರಾಷ್ಟ್ರವೇ ಈ ಪರೀಕ್ಷೆಗಳ ಗುಮ್ಮದ ಎದುರು ಮಂಡಿ ಊರುವಂತೆ ಖಾಸಗಿ ಕೋಚಿಂಗ್ ಲಾಬಿಗಳು, ಕಂಪೆನಿಗಳು ಮಾಡಿವೆ. ನನ್ನ ಅಂದಾಜಿನಲ್ಲಿ ಕೋವಿಡ್ ಲಸಿಕೆಯನ್ನು ಎಲ್ಲಾ ಪ್ರಜೆಗಳಿಗೆ ಕೊಡಿಸಲು ಬೇಕಾಗುವ ಅರ್ಧದಷ್ಟು ಹಣವನ್ನು ಈ ಕಂಪೆನಿಗಳು, ಲಾಬಿಗಳು ಈಗಾಗಲೇ ದುಡಿದುಕೊಂಡಿವೆ. ಅದರಲ್ಲಿ ಒಂದು ಭಾಗವನ್ನು ನಮ್ಮ ಸರಕಾರಗಳು ಪಡೆದುಕೊಂಡಿವೆ. ಹೀಗಾಗಿ ಪರೀಕ್ಷೆಗಳ ಪಾವಿತ್ರ್ಯವನ್ನು ಅನಿವಾರ್ಯತೆಯನ್ನು ಪ್ರಶ್ನಿಸುವ, ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಈ ಶಕ್ತಿಗಳು ವಿರೋಧಿಸುತ್ತಿವೆ. ಆ ಕಾರಣಕ್ಕಾಗಿಯೇ ಸಾಂಪ್ರದಾಯಿಕ ಪರೀಕ್ಷೆಗಳನ್ನು ರದ್ದುಮಾಡಿದರೂ ಕೊನೇ ಪಕ್ಷ ಇನ್ನೊಂದು ಮಾದರಿಯ ಪರೀಕ್ಷೆಗಳನ್ನು ನಡೆಸಬೇಕೆನ್ನುವ ಹಾಸ್ಯಾಸ್ಪದ ಪ್ರಯತ್ನಗಳನ್ನು ಸರಕಾರವು ಮಾಡುತ್ತಿದೆ. ಎಲ್ಲ ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯವಸ್ಥೆ ಕಡ್ಡಾಯವಾಗಿದೆ. ಅಂದರೆ ಪ್ರಥಮ ಪಿ.ಯು. ನಿಂದ ಸಿಇಟಿ ಪರೀಕ್ಷೆವರೆಗೆ ಖಾಸಗಿ ಕೋಚಿಂಗ್ ಸಂಸ್ಥೆಗಳ ಸಹಯೋಗದಿಂದ, ಹೆಚ್ಚಿನ ಶುಲ್ಕ ಸಂಗ್ರಹಿಸಿ ನಡೆಸುವ ವಿಧಾನ. ಇದನ್ನು ಕ್ರಮಬಾಹಿರವೆಂದು ಸರಕಾರವು ಕಾಲಕಾಲಕ್ಕೆ ಘೋಷಿಸುತ್ತಲೇ ಬಂದಿದೆ. ದ್ವಿತೀಯ ಪಿ.ಯು. ಪರೀಕ್ಷಾ ಪತ್ರಿಕೆಗಳ ಸೋರಿಕೆಯಾದಾಗ ಈ ಪ್ರಶ್ನೆ ಪತ್ರಿಕೆಗಳನ್ನು ಅನೇಕ ಕೋಚಿಂಗ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ‘‘ಬಿಡಿಸಲಾಯಿತು’’ ಎಂದು ವರದಿಗಳು ಬಂದರೂ ಅವುಗಳಿಗೆ ಕ್ಲೀನ್ ಚಿಟ್ ಕೊಡಲಾಯಿತು. ಈ ಎಲ್ಲಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಗೇಲಿಗೆ ಈಡಾಗುತ್ತಿದ್ದರೂ ಆಚರಣೆ ಮಾತ್ರದ ಪರೀಕ್ಷೆಗಳನ್ನು ನಡೆಸಲೇಬೇಕೆಂದು ಶಿಕ್ಷಣ ಇಲಾಖೆಗಳು, ಮಂಡಳಿಗಳು ಹಠಸಾಧಿಸುತ್ತಿವೆ.

ಇದಕ್ಕೆ ಪೂರಕವಾಗಿ ಪ್ರಥಮ ಬಿಎಸ್ಸಿಗೆ ಪ್ರವೇಶ ಪಡೆಯಲು ಸಿಇಟಿ ಪಾಸು ಮಾಡಿರಬೇಕು ಎನ್ನುವ ನಿಯಮವನ್ನು ತರಬೇಕೆಂದು ಉನ್ನತ ಶಿಕ್ಷಣ ಇಲಾಖೆಯು ಸೂಚಿಸುತ್ತಿದೆ. ಇದಂತೂ ನೇರವಾಗಿ ಕೋಚಿಂಗ್ ಲಾಬಿಯಿಂದ ಬಂದಿರುವ ಆದೇಶದ ಪರಿಪಾಲನೆಯಾಗಿದೆ. ಏಕೆಂದರೆ ಇದು ಅನುಷ್ಠಾನಕ್ಕೆ ಬಂದರೆ ಸಿಇಟಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸಿಗೆ ಆಯ್ಕೆ ಆಗದಿದ್ದರೆ ಬಿಎಸ್ಸಿ ಗ್ಯಾರಂಟೀ! ಜೊತೆಗೆ ಸಿಇಟಿ ಕೋಚಿಂಗ್‌ಗೆ ಪರ್ಯಾಯವಿಲ್ಲವೆನ್ನುವುದು ಅಂತಿಮವಾಗಿ ಸಾಬೀತಾಗಿ ಕೋಚಿಂಗ್ ಲಾಬಿಗೆ ಅಂತಿಮ ವಿಜಯ. ಇಲ್ಲಿ ಕೆಲಸಮಾಡುತ್ತಿರುವ ತರ್ಕವನ್ನು ನೋಡಿ. ಪ್ರಥಮ ವರ್ಷ ಕಲಾ ಮತ್ತು ವಾಣಿಜ್ಯ ಕೋರ್ಸುಗಳನ್ನು ಯಾವ ದಡ್ಡನೂ ಓದಬಹುದು. ಪವಿತ್ರವಾದ ವಿಜ್ಞಾನವನ್ನು ಓದಲು ಪ್ರತಿಭಾವಂತರೇ ಬೇಕು. ಪ್ರತಿಭಾವಂತರೆಂದರೆ ಸಿಇಟಿ ಪರೀಕ್ಷೆ ಬರೆಯುವವರು! ನೆಪಕ್ಕಾಗಿ ‘‘ಹಗಲು ರಾತ್ರಿ ಓದುವ’’ ಒಳ್ಳೆಯ ವಿದ್ಯಾರ್ಥಿಗಳ ಬದಲಾಗಿ ಪರೀಕ್ಷೆ ಇಲ್ಲದೆ promote ಆದ ದಡ್ಡರಿಗೆ ವಿಜ್ಞಾನ ಪದವಿ ಏಕೆ ಎಂದು ವಾದಿಸಲಾಗುತ್ತಿದೆ.

ಮೊದಲನೆಯದಾಗಿ ಮನುಷ್ಯ ಇತಿಹಾಸದಲ್ಲಿಯೇ ಭೀಕರವಾದ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ನಾವು ಇಂದಿನ ಅಗತ್ಯಗಳನ್ನು ಚರ್ಚಿಸುತ್ತೇವೆ ಎಂದು ನೆನಪಿರಲಿ. ಅಲ್ಲದೆ ಸಿಇಟಿ ಪರೀಕ್ಷೆಗಳಿಗೆ ಬೇಕಾಗಿರುವುದು ಪ್ರತಿಭೆಗಿಂತ ಒಂದು ಬಗೆಯ ಕೌಶಲ್ಯ ಮಾತ್ರ(skill). ಅದರಲ್ಲಿ ತರಬೇತಿ ಇಲ್ಲದ ಮಕ್ಕಳು ವಿಜ್ಞಾನ ಓದಲೇ ಬಾರದೆ? ಈ ಪರೀಕ್ಷೆಗಳ ಗೀಳನ್ನು ಆಚೆಗಿಟ್ಟು ಮಾಡಬೇಕಾದ ಗಂಭೀರ ಕೆಲಸಗಳಿವೆ. ದೀರ್ಘಕಾಲ ತರಗತಿ, ಓದು ಇಲ್ಲದೆ ಮಾನಸಿಕವಾಗಿಯೂ ಉತ್ಸಾಹ ಕಳೆದುಕೊಂಡ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸಿದ್ಧಮಾಡುವುದು ಸುಲಭದ ಕೆಲಸವಲ್ಲ. ಪರೀಕ್ಷೆಗಳ ಬದಲು ಹೆಚ್ಚು ಅವಧಿಯ remedial teaching  (ಸುಧಾರಣಾ ಬೋಧನೆ), ಆಪ್ತ ಸಲಹೆ, ಮೂಲ ಪರಿಕಲ್ಪನೆಗಳ ಬೋಧನೆ ಇವೆಲ್ಲಾ ಶ್ರದ್ಧೆಯಿಂದ ಮಾಡಬೇಕಿದೆ. ಇದಕ್ಕಾಗಿ ಅವಶ್ಯಕವಾದ ಶಿಕ್ಷಕರ ನೇಮಕಾತಿ, ಮೂಲ ಸೌಲಭ್ಯಗಳು, ಇಂಟರ್‌ನೆಟ್ ವ್ಯವಸ್ಥೆ ಇವುಗಳಿಗಾಗಿ ಹೆಚ್ಚಿನ ಹಣದ ಹೂಡಿಕೆಯನ್ನು ಸರಕಾರವು ಮಾಡಲೇಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡುವ ಹೂಡಿಕೆಯು ರಾಷ್ಟ್ರಕ್ಕೆ ಅತ್ಯಂತ ಲಾಭದಾಯಕವೂ ಹೌದು. ಮುಖ್ಯವಾಗಿ ಖಾಸಗಿ ಪರಿಣಿತರು, ಸೆಲೆಬ್ರಿಟಿಗಳು ಇವರ ಬದಲಾಗಿ ನಮ್ಮ ಲಕ್ಷಾನುಗಟ್ಟಲೆ ಶಿಕ್ಷಕರ ಪ್ರತಿಭೆ ಹಾಗೂ ಸಾಮರ್ಥ್ಯದಲ್ಲಿ ನಂಬಿಕೆ ಇರಲಿ. ಅವರನ್ನು ಕಡೆಗಾಣಿಸದೆ, ಗೌರವದಿಂದ ಈ ಎಲ್ಲಾ ಕೆಲಸಗಳಲ್ಲಿ ಸಹಭಾಗಿಗಳನ್ನಾಗಿಸಿ. ಪರೀಕ್ಷೆಗಳ ಅನಾರೋಗ್ಯಕರ ಗೀಳನ್ನು ಬಿಟ್ಟುಬಿಡಿ. ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಗಳಲ್ಲ ಅಂತಃಕರಣ, ಸಲಹೆ ಮತ್ತು ಮಾನಸಿಕ ಬೆಂಬಲಗಳ ಅವಶ್ಯಕತೆ ಇದೆ.

ಕರ್ನಾಟಕದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮಂತ್ರಿಗಳಾದ ಸುರೇಶ್ ಕುಮಾರ್ ಅವರು ಪರೀಕ್ಷೆಗಳನ್ನು ನಡೆಸಲೇಬೇಕು ಎನ್ನುವ ಹಠವನ್ನು ಏಕೆ ತೋರಿಸುತ್ತಿದ್ದಾರೆ ಮತ್ತು ಎಸೆಸೆಲ್ಸಿ ವಿದ್ಯಾರ್ಥಿಗಳು ಹೊಸ ಮಾದರಿಯ ಪರೀಕ್ಷೆಯನ್ನು ಬರೆಯಬೇಕು ಮತ್ತು ಇತ್ತೀಚಿನ ಆದೇಶದ ಪ್ರಕಾರ ಪ್ರಥಮ ಪಿ.ಯು. ವಿದ್ಯಾರ್ಥಿಗಳು ಎರಡು ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ಬರೆಯಬೇಕು (ಇವುಗಳನ್ನು ಅಸೈನ್‌ಮೆಂಟ್ ಅಂತಲೂ ಪರಿಗಣಿಸಬಹುದು) ಎನ್ನುವ ಅತಾರ್ಕಿಕವಾದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಈ ಹಠಮಾರಿತನ ಯಾಕೆ ಎಂದು ತುಂಬಾ ಯೋಚಿಸಿದಾಗ ಹೊಳೆದದ್ದು ಈ ಕುರಿತು ಆರೆಸ್ಸೆಸ್ ಏನು ಹೇಳುತ್ತದೆ ನೋಡೋಣವೆನ್ನಿಸಿತು. 31 ಮೇ ದಿನಾಂಕದಂದು ಅನೇಕ ರಾಷ್ಟ್ರೀಯ ಮಾಧ್ಯಮಗಳು (ನಾನು ನೋಡಿದ್ದು ಟೈಮ್ಸ್‌ನೌ, ಎನ್‌ಡಿಟಿವಿ, ದಿ ಟ್ರಿಬ್ಯೂನ್) ಒಂದು ವಿಸ್ತೃತವಾದ ವರದಿಯನ್ನು ಪ್ರಕಟಿಸಿವೆ. ಈ ವರದಿಯಲ್ಲಿ ಆರೆಸ್ಸೆಸ್‌ನ ಸಹಸಂಸ್ಥೆಗಳಲ್ಲಿ ಒಂದಾದ ‘ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ’ (ಎಸ್‌ಎಸ್‌ಯುಎನ್) ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದ ವಿವರಗಳಿವೆ. ಈ ಪತ್ರವನ್ನು ಬರೆದ ಎಸ್‌ಎಸ್‌ಯುಎನ್‌ನ ಕಾರ್ಯದರ್ಶಿ ಅತುಲ್ ಕೊಠಾರಿ ಸಿಬಿಎಸ್‌ಸಿ 12ನೇ ಕ್ಲಾಸ್ ಪರೀಕ್ಷೆಗಳು ನಡೆಯಲೇಬೇಕು ಎಂದು ವಾದಿಸುತ್ತಾರೆ. ಸಾಂಪ್ರದಾಯಿಕ ಮಾದರಿಯಲ್ಲಿ ಅಲ್ಲದಿದ್ದರೆ ಕೆಲವು ಬದಲಾವಣೆಗಳ ಮೂಲಕ ಎಂದು ಆ ಮಾದರಿಗಳನ್ನು ಸೂಚಿಸುತ್ತಾರೆ. ಆ ಮಾದರಿಗಳನ್ನು ನಾನು ಬರೆಯಲೇಬೇಕಾಗಿಲ್ಲ! ಏಕೆಂದರೆ ಅವುಗಳನ್ನು ಅಕ್ಷರಶಃ ಒಂದೇ ಪದವನ್ನೂ ಬದಲಾಯಿಸದೆ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆ ತನ್ನ ಆದೇಶಗಳಲ್ಲಿ, ಹೇಳಿಕೆಗಳಲ್ಲಿ ಅನುಸರಿಸಿದ್ದಾರೆ!

ಅ) ಕೇವಲ 2-3 ವಿಷಯಗಳಲ್ಲಿ ಪರೀಕ್ಷೆ ಬರೆಯಬಹುದು ಅಥವಾ ಮನೆಯಲ್ಲಿ ಬರೆಯಬಹುದು. ಈ ಪರೀಕ್ಷೆಗಳು (objective) ಆಗಿರಬೇಕು.

ಆ) 10ನೇ ತರಗತಿ, 11 ಅಥವಾ ಪ್ರಥಮ ಪಿ.ಯು.ತರಗತಿ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಅಂಕಗಳನ್ನು ನಿಗದಿತ ಶೇಕಡಾವಾರು ಪ್ರಮಾಣದಲ್ಲಿ ಪರಿಗಣಿಸಬೇಕು.

ಇನ್ನುಳಿದ ಅಂಶಗಳು ಕರ್ನಾಟಕದ ಶಿಕ್ಷಣ ಇಲಾಖೆಯು ಪ್ರಾಮಾಣಿಕವಾಗಿ ಕಾಪಿ ಮಾಡಿದ ಹಾಗೇ ಇವೆ.

ಹಾಗಿದ್ದರೆ ನಮ್ಮ ಸನ್ಮಾನ್ಯ ಮಂತ್ರಿಗಳು ಆರೆಸ್ಸೆಸ್‌ನ ಸೂಚನೆಗಳನ್ನು ಅಕ್ಷರಶಃ ಪಾಲಿಸಲು ನಮ್ಮ ವಿದ್ಯಾರ್ಥಿಗಳ ಮೇಲೆ ಕೋವಿಡ್ ಪಿಡುಗಿನ ಮಧ್ಯೆಯೂ ಅಪಾಯಕಾರಿ ಪ್ರಯೋಗಗಳನ್ನು ನಡೆಸಿದ್ದಾರೆ. ಆದರೆ ಹೇಳಿಕೆ ಕೊಟ್ಟಿದ್ದೆಂದರೆ ನಾನು ಎಲ್ಲಾ ಪರಿಣಿತರ ಜೊತೆಗೆ ಚರ್ಚೆ ಮಾಡಿದ್ದೇನೆಂದು. ಆಸಕ್ತಿಯಿದ್ದವರು ಮೇ 31ರ ರಾಷ್ಟ್ರಮಟ್ಟದ ಪತ್ರಿಕೆಯ ವರದಿಗಳನ್ನು ಗಮನಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)