varthabharthi


ವಿಶೇಷ-ವರದಿಗಳು

ಕೊರೋನಗೆ ಪತ್ನಿ ಬಲಿಯಾದ ಮೇಲೆ ಸಿಟಿ ಸ್ಕ್ಯಾನರ್ ಇಲ್ಲದ ಆಸ್ಪತ್ರೆಯಿಂದ ಬಂತು 19 ಲಕ್ಷ ರೂ. ಬಿಲ್ !

ವಾರ್ತಾ ಭಾರತಿ : 13 Jun, 2021
ಕವಲ್‌ ಜೀತ್‌ ಸಿಂಗ್

Photo: Thewire

ಕೋವಿಡ್‌ ಎರಡನೇ ಅಲೆಯ ಭೀಕರತೆಯು ಲಕ್ಷಾಂತರ ಕುಟುಂಬಗಳ ಬಾಗಿಲಿಗೆ  ಸಾವುಗಳನ್ನು ಮತ್ತು ದುರಂತಗಳನ್ನು ತಂದಿದೆ. ಇದರಲ್ಲಿ ನಮ್ಮ ಕುಟುಂಬವೂ ಸೇರಿದೆ. ಎಪ್ರಿಲ್ ಹಾಗು ಮೇ ತಿಂಗಳಲ್ಲಿ ಹೆಚ್ಚುತ್ತಲೇ ಹೋದ ಸೋಂಕು ಆಗಲೇ ದುರ್ಬಲವಾಗಿದ್ದ ನಮ್ಮ  ವ್ಯವಸ್ಥೆಯ ಪಾಲಿಗೆ ಭಯಂಕರ ಭಾರ ಹೊರಿಸಿಬಿಟ್ಟಿತು. ಆಕ್ಸಿಜನ್, ವೆಂಟಿಲೇಟರ್ ಹಾಗು ಐಸಿಯು ಬೆಡ್ ಗಳ ಕೊರತೆ  ಪರಿಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸಿತು. 

 ಎಪ್ರಿಲ್‌ ತಿಂಗಳ ಮೂರನೇ ವಾರದಲ್ಲಿ ನಮ್ಮ ಸಂಪೂರ್ಣ ಕುಟುಂಬವು ಕೋವಿಡ್‌ ಪಾಸಿಟಿವ್‌ ಆಯ್ತು. ನನ್ನ 51ರ ಹರೆಯದ ಪತ್ನಿ ಮನ್‌ ಕೀರತ್‌ ಲಾಂಬಾ ಹೊರತುಪಡಿಸಿ ನಾವೆಲ್ಲರೂ ಬೇಗನೇ ಚೇತರಿಸಿಕೊಂಡೆವು.

ಎಪ್ರಿಲ್‌ 23ರಂದು ನನ್ನ ಪತ್ನಿ ರಕ್ತದಲ್ಲಿ ಆಕ್ಸಿಜನ್ ಮಟ್ಟ  90%ಗಿಂತ ಕಡಿಮೆಯಾದಾಗ ನಾವು ಆಕೆಯನ್ನು ಡೆಲ್ಲಿ ಹಾರ್ಟ್ ಎಂಡ್ ಲಂಗ್ ಇನ್ಸ್ ಟಿಟ್ಯೂಟ್ (DHLI) ಗೆ  ದಾಖಲಿಸಿದೆವು. ಅಲ್ಲೊಂದು ಐಸಿಯು ಬೆಡ್‌ ಇದೆ ಎಂದು  ನಮ್ಮ ಸ್ನೇಹಿತರ ಸಹಾಯದಿಂದ ನಮಗೆ ತಿಳಿದು ಬಂದಿತ್ತು. ಮೇ 4ರವರೆಗೆ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದು, ಬಳಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಕೋವಿಡ್-‌19 ರಹಿತ ಐಸಿಯುಗೆ ದಾಖಲಿಸಿದ್ದರು.

ಆಸ್ಪತ್ರೆಯ ಖಾಸಗಿ ರೂಮ್‌ ಗೆ ಆಕೆಯನ್ನು ವರ್ಗಾಯಿಸಿದ ಬಳಿಕ ವೈದ್ಯರು, "ಆಕೆಯ ಪರಿಸ್ಥಿತಿ ಸುಧಾರಿಸುತ್ತಿದೆ. ಅವರ ಶ್ವಾಸಕೋಶದ ತೊಂದರೆಗಳನ್ನು ಸರಿಪಡಿಸಲಾಗಿದೆ. ಆಕೆಗೆ ಈಗ ನೈತಿಕ ಸ್ಥೈರ್ಯ ಹಾಗು ಫಿಸಿಯೋಥೆರಪಿ  ಅಗತ್ಯವಿದೆ. ಅವುಗಳ ಮೂಲಕ ಅವರು  ಮನೆಯಲ್ಲಿಯೇ ಸುಧಾರಿಸಿಕೊಳ್ಳುತ್ತಾರೆ " ಎಂದು ಹೇಳಿದ್ದರು. ಮೇ 11ರಂದು ಮನ್‌ ಕೀರತ್‌ ಳನ್ನು ಡಿಸ್ಚಾರ್ಜ್‌ ಮಾಡುವುದಾಗಿ ವೈದ್ಯರು ಯೋಜನೆ ಹಾಕಿಕೊಂಡಿದ್ದು, ಆದರೆ ಅದಾಗಲೇ ಆಕೆಯ ಆಕ್ಸಿಜನ್‌ ಮಟ್ಟವು 81-82ರಲ್ಲಿತ್ತು. ನಮ್ಮ ಸಹಾಯವಿಲ್ಲದೇ ನಿಲ್ಲಲು , ಕೂರಲೂ ಆಕೆಗೆ  ಸಾಧ್ಯವಾಗುತ್ತಿರಲಿಲ್ಲ.

ಮೇ 12ರಂದು ಮುಂಜಾನೆ ಆಸ್ಪತ್ರೆಯ ಅಧಿಕಾರಿಗಳು ಮನ್‌ ಕೀರತ್‌ ನ್ಯುಮೋತೊರಾಕ್ಸ್‌ ಗೆ ಒಳಪಟ್ಟಿದ್ದಾರೆಂದು ಹೇಳಿ ಆಕೆಯನ್ನು ಐಸಿಯು ವೆಂಟಿಲೇಟರ್‌ ಗೆ ಸ್ಥಳಾಂತರಿಸಿದರು. ವೆಂಟಿಲೇಟರ್‌ ನ ಆಕ್ಸಿಜನ್‌ ಬಳಸಿಕೊಳ್ಳಲೂ ಆಕೆಯ ಶ್ವಾಸಕೋಶ ಶಕ್ತವಾಗಿರಲಿಲ್ಲ. ಬಳಿಕ ಬ್ಯಾಕ್ಟೀರಿಯ ಸೋಂಕು ತಗಲಿದ ಕಾರಣ ಬಹು ಅಂಗಾಂಗ ವೈಫಲ್ಯ ಹಾಗು ಉಸಿರಾಟದ ತೀವ್ರ ಸಮಸ್ಯೆ (ARDS) ನಿಂದ  ನನ್ನ ಪತ್ನಿ ಮೇ 18ರಂದು ಮೃತಪಟ್ಟಳು. ವೈದ್ಯರು ಮರಣ ಪ್ರಮಾಣ ಪತ್ರದಲ್ಲಿ ಹಾಗೆ  ನಮೂದಿಸಿದ್ದರು. ಆಕೆ ಸಾವು ನಮಗೆ ಭರಿಸಲಾಗದ ಮಾನಸಿಕ ನೋವು ತಂದಿದೆ , ನಾವೆಲ್ಲರೂ ತೀವ್ರ  ಒತ್ತಡದಲ್ಲಿದ್ದೇವೆ. 

ಮನ್‌ ಕೀರತ್‌ ಸಾವಿನ ಆಘಾತದಲ್ಲಿರುವಾಗಲೇ , ಡಿಎಚೆಲ್‌ಐ ಆಸ್ಪತ್ರೆಯು ನಮಗೆ 22 ಪುಟಗಳ ಬಿಲ್‌ ನೀಡಿತು. ಒಟ್ಟು ಚಿಕಿತ್ಸೆಯ ಮೊತ್ತ 19,03,953 ರೂ. ಆಗಿತ್ತು ! ಅವರು ನೀಡಿದ್ದ ಬಿಲ್‌ ಅನ್ನು ಈ ಲಿಂಕ್‌ ಕ್ಲಿಕ್‌ ಮಾಡುವುದರ ಮೂಲಕ ನಿಮಗೆ ನೋಡಬಹುದಾಗಿದೆ. ನಿಸ್ಸಂಶಯವಾಗಿಯೂ 19 ಲಕ್ಷ ರೂ.ಯ ಬಿಲ್‌ ನಮ್ಮಂತಹ ಮಧ್ಯಮ ವರ್ಗದ, ಸಂಬಳದಲ್ಲಿ ಜೀವಿಸುವವರಿಗೆ ಒಂದು ದೊಡ್ಡ ಭಾರವೇ ಸರಿ.

ಬಿಲ್ ಮೇಲೆ ಸುಮ್ಮನೆ ಕಣ್ಣು ಹಾಯಿಸಿದರೂ ಭಾರೀ ಶುಲ್ಕ ವಿಧಿಸಿರುವಂತೆ ಕಂಡು ಬರುತ್ತಿತ್ತು.  ಕೇವಲ ಫಾರ್ಮಸಿಯ ವಸ್ತುಗಳ ಚಾರ್ಜ್‌ (ಮಾಸ್ಕ್‌, ಪಿಪಿಇ ಕಿಟ್‌, ಸಿರಿಂಜ್‌ ಗಳು ಮತ್ತು ಕೆಲ ಔಷಧಗಳು) 11,83,693 ಆಗಿದೆ. ಫಾರ್ಮಸಿ ಶುಲ್ಕದಲ್ಲಿ   4,24,974ರೂ.  ಗಳ  108 ಯುನಿಟ್‌ ಗಳ ಉಲಿಕ್ರಿಟ್  ಇಂಜೆಕ್ಷನ್‌ ನೀಡಲಾಗಿದೆ ಎಂದು ನಮೂದಿಸಿದ್ದು, ಅದರೊಂದಿಗೆ 37,500ರೂ.ಯನ್ನು ಇತರ ಖರ್ಚುಗಳಿಗೆ ಸೇರಿಸಲಾಗಿದೆ. ಆದರೆ ಈ ಇತರ ಖರ್ಚುಗಳು ಏನೆಂದು ಆಸ್ಪತ್ರೆ ಬಿಲ್‌ ನಲ್ಲಿ ಸ್ಪಷ್ಟಪಡಿಸಿಲ್ಲ. ಹಾಗೆಯೇ ಹೃದ್ರೋಗ ತಜ್ಞರು ದಿನಕ್ಕೆ ಎರಡು ಬಾರಿ ಭೇಟಿ ನೀಡಿದ್ದಕ್ಕೆ, ಶ್ವಾಸಕೋಶ ತಜ್ಞರು ದಿನಕ್ಕೆರಡು ಬಾರಿ ಭೇಟಿ ನೀಡಿದ್ದಕ್ಕೆ ಶುಲ್ಕ ವಿಧಿಸಲಾಗಿತ್ತು. 

ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಡಾಕ್ಟರ್‌ ಗಳ ಒಂದು ಸಲದ ಭೇಟಿಗೆ ಶುಲ್ಕ ವಿಧಿಸಲಾಗುತ್ತದೆ. ಆದರೆ ಕೋವಿಡ್‌ ರೋಗಿಯನ್ನು ಹೃದ್ರೋಗ ತಜ್ಞರ ತಂಡ ಪ್ರತಿದಿನ  ಎರಡು ಬಾರಿ ಭೇಟಿಯಾಗುವುದೇಕೆ? ಅಲ್ಲದೇ ಆರ್‌ಎಂಒ ಕೂಡಾ ದಿನವೂ ಭೇಟಿ ನೀಡಬೇಕಾದ ಅವಶ್ಯಕತೆಯಿಲ್ಲ. ಈ ಎಲ್ಲ ಅನಗತ್ಯ ವಿಚಾರಗಳು  ಬಿಲ್‌ ಅತಿ ಹೆಚ್ಚಾಗಲು  ಕಾರಣವಾಯಿತು.

ಇವೆಲ್ಲದರೊಂದಿಗೆ ಎರಡು ವಿಚಾರಗಳನ್ನು ನಾನು ಸ್ಪಷ್ಟಪಡಿಸುತ್ತೇನೆ. ಒಂದು, ನನಗೆ ಡಿಎಚ್‌ಎಲ್ಐ ಆಸ್ಪತ್ರೆಗಾಗಲಿ, ಇತರ ಖಾಸಗಿ ಆಸ್ಪತ್ರೆಗಳಿಗಾಗಲೀ ಕೆಟ್ಟ ಹೆಸರು ತರುವ ಉದ್ದೇಶವಿಲ್ಲ. ನನ್ನ ಅನುಭವದ ಆಧಾರದಲ್ಲಿ ಇಂತಹ  ಅನ್ಯಾಯ ನಡೆಯುತ್ತಿದೆ ಎನ್ನುವುದನ್ನು ಜನರ ಗಮನಕ್ಕೆ ತರುತ್ತಿದ್ದೇನೆ ಮತ್ತು ಖಾಸಗಿ ಒಡೆತನದ ಆಸ್ಪತ್ರೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಲು ಸರಕಾರದ ನೀತಿ ನಿರೂಪಣೆಯಲ್ಲಿ ಆಗಬೇಕಾದ ಬದಲಾವಣೆಯ ನಿಟ್ಟಿನಲ್ಲಿ  ಈ ವಿಚಾರಗಳನ್ನು ಗಮನಕ್ಕೆ ತರುತ್ತಿದ್ದೇನೆ.

ಎರಡನೇಯದಾಗಿ, ನಾನು ಆಸ್ಪತ್ರೆ ಅಥವಾ ಇತರ ಯಾವುದೇ ವ್ಯಾಪಾರ ಘಟಕಗಳು ಕಾನೂನುಬದ್ಧವಾಗಿ ಲಾಭ ಗಳಿಸುವುದನ್ನು  ವಿರೋಧಿಸುವುದಿಲ್ಲ. ಆದರೆ ನಾನು ಇಂತಹಾ ಕಷ್ಟಕರ ಮತ್ತು ಅಸಾಮಾನ್ಯ ಸಂದರ್ಭಗಳಲ್ಲಿ ಅನ್ಯಾಯದ ಲಾಭ ಗಳಿಸುವುದನ್ನು ವಿರೋಧಿಸುತ್ತಿದ್ದೇನೆ. ಈ ರೀತಿ ಲಾಭಕೋರತನ ಎಸಗದೆಯೇ  ಖಾಸಗಿ ಆಸ್ಪತ್ರೆಗಳು ನ್ಯಾಯಯುತವಾಗಿಯೇ ಲಾಭ ಗಳಿಸಬಹುದು  ಎಂದು ನಾನು ನಂಬುತ್ತೇನೆ ಮತ್ತು ಎಲ್ಲ ಖಾಸಗಿ ಆಸ್ಪತ್ರೆಗಳು ಇಂತಹ ಕೃತ್ಯವೆಸಗುವುದಿಲ್ಲ ಎಂದು ನಾನು ಭಾವಿಸುತ್ತೇನೆ.

ಗುಣಮಟ್ಟದ ಆರೋಗ್ಯ ವ್ಯವಸ್ಥೆ?

ತನ್ನ ವೆಬ್‌ಸೈಟ್‌ನಲ್ಲಿ, “ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ” ನೀಡುವುದು ತನ್ನ ಉದ್ದೇಶ ಎಂದು ಡಿಎಚ್‌ಎಲ್‌ಐ ಹೇಳಿಕೊಂಡಿದೆ. ಆದರೆ ಅಲ್ಲಿ ನಮಗಾದ ಅನುಭವ ಬೇರೆಯೇ ಕಥೆಯನ್ನು ಹೇಳುತ್ತಿದೆ. ಇದು ಹೃದ್ರೋಗ, ಹೃದಯ ಶಸ್ತ್ರಚಿಕಿತ್ಸೆ, ಶ್ವಾಸಕೋಶಶಾಸ್ತ್ರ ಮತ್ತು ಸಂಪೂರ್ಣ ಸುಸಜ್ಜಿತ ಆಧುನಿಕ ಕ್ಯಾಥ್ ಲ್ಯಾಬ್ ಮತ್ತು ಆಪರೇಷನ್ ಥಿಯೇಟರ್‌ಗಳೊಂದಿಗೆ ತುರ್ತು ಆರೈಕೆಗಾಗಿ ಕ್ಯಾತ್ ಲ್ಯಾಬ್ ಹಾಗು ಆಪರೇಷನ್ ಥಿಯೇಟರ್ ಸಹಿತ   ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ ಎಂದೂ ಈ ಆಸ್ಪತ್ರೆ ಹೇಳಿಕೊಳ್ಳುತ್ತಿದೆ.

ಅನಾರೋಗ್ಯ ಪೀಡಿತ ರೋಗಿಗಳಲ್ಲಿ ಕೋವಿಡ್-‌19 ಅನ್ನು ಪತ್ತೆಹಚ್ಚಲು ಅಗತ್ಯವೆಂದು ಪರಿಗಣಿಸಲಾದ ಸಿಟಿ ಸ್ಕ್ಯಾನರ್‌ ಅನ್ನು ಕೂಡಾ ಈ ಆಸ್ಪತ್ರೆಯಲ್ಲಿಲ್ಲ  ಎಂಬುವುದನ್ನು ನಾವು ಕಂಡುಕೊಂಡಾಗ ಇವರು ಮೇಲೆ ಹೇಳಿರುವ ವಿಷಯಗಳೆಲ್ಲವೂ ಟೊಳ್ಳಾಗಿ ಕಾಣುತ್ತದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಭೀರ ರೋಗವಿರುವವರನ್ನು ಸಿಟಿ ಸ್ಕ್ಯಾನ್‌ ಮಾಡಿಸಲು ದಿಲ್ಲಿಯ ಇಮೇಜಿಂಗ್‌ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತದೆ . ಈ ಸಾಗಾಟ ಪ್ರಕ್ರಿಯೆಯ ನಡುವೆ ರೋಗಿಗಳಿಗೆ ಇತರ ಸೋಂಕುಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದೇ ರೀತಿ ಮನ್‌ ಕೀರತ್‌ ಳನ್ನೂ ಮೇ 12ರಂದು ಹೊರಗಿನ ಕೇಂದ್ರದಲ್ಲಿ ಸಿಟಿ ಸ್ಕ್ಯಾನ್‌ ನಡೆಸಲು ಕೊಂಡೊಯ್ಯುತ್ತೇವೆಂದು ಹೇಳಿದಾಗ ಈ ವಿಚಾರವು ನಮಗೆ ಆಘಾತಕಾರಿಯಾಗಿ ಕಂಡಿತು. ನಮ್ಮ ಆತ್ಮವಿಶ್ವಾಸ ಸಂಪೂರ್ಣ ಕುಸಿದು ಹೋಯಿತು.

ಆಸ್ಪತ್ರೆಯಲ್ಲಿ ಮೂಲಭೂತವಾಗಿ ಬೇಕಾಗುವ ಸಿಟಿ ಸ್ಕ್ಯಾನರ್‌ ಇಲ್ಲದೇ ಗಂಭೀರ ಅನಾರೋಗ್ಯದ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಕಾರಿ ಅಧಿಕಾರಿಗಳು ಅನುಮತಿ ನೀಡಿದ್ದು ಹೇಗೆ? ಡಿಎಚ್‌ಎಲ್‌ಐಗೆ ಮಾನ್ಯತೆ ನೀಡಿರುವ ಮಾನ್ಯತೆ ಏಜೆನ್ಸಿಗಳಾದ ಎನ್‌ಎಬಿಹೆಚ್ ಮತ್ತು ಎನ್‌ಎಬಿಎಲ್ ಈ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತವೆ ?ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಪರಿಶೀಲಿಸದೇ ಈ ಏಜೆನ್ಸಿಗಳು ಆಸ್ಪತ್ರೆಗಳಿಗೆ ಹೇಗೆ ಮಾನ್ಯತೆ ನೀಡುತ್ತವೆ ?

ಇದಲ್ಲದೇ, ಹೊರಗಿನ ಕೆಲ ವೈದ್ಯಕೀಯ ತಜ್ಞರಿಂದ ಸಲಹೆ ಪಡೆಯುವ ಸಲುವಾಗಿ ನಾವು ಎರಡು ಬಾರಿ (ಮೇ 9 ಮತ್ತು 11ರಂದು) ನಾವು ಮನ್‌ ಕೀರತ್‌ ಳ ವೈದ್ಯಕೀಯ ದಾಖಲೆಗಳನ್ನು ನೀಡುವಂತೆ ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದೆವು. ಕಾನೂನಿನ ಪ್ರಕಾರ ರೋಗಿಯ ಕುಟುಂಬಸ್ಥರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ. ಆದರೆ ನಾವು ಈ ಕುರಿತು ವಿಚಾರಿಸಿದಾಗ, 17 ದಿನಗಳ ಬಳಿಕ ಈ ದಾಖಲೆಯೊಂದಿಗೆ ನೀವು ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು. "ಇದು ನಿಮಗೆ ನಮಲ್ಲಿರುವ ನಂಬಿಕೆಯ ಕೊರತೆಯನ್ನು ಸೂಚಿಸುತ್ತದೆ" ಎಂದು ಹೇಳಿ ನಮ್ಮ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಕೆಲ ಎಕ್ಸ್‌ ರೇ ಮತ್ತು ಪರೀಕ್ಷಾ ವರದಿಗಳು ಹಾಗು  ಎರಡು ಪುಟದ ಮಾಹಿತಿಯನ್ನು ನಮಗೆ ಕೊಟ್ಟರು. 

ಎರಡನೇ ಕೋವಿಡ್‌ ಅಲೆಯ ಸಂದರ್ಭದಲ್ಲಿ ಮಾನವ ಹಕ್ಕು ಆಯೋಗವು ಮೇ 4ರಂದು, ಎಲ್ಲ ಆಸ್ಪತ್ರೆಗಳೂ ಕೋವಿಡ್‌ 19 ಚಿಕಿತ್ಸೆಯ ದರಗಳನ್ನು. ಬೆಡ್‌ ಗಳ ಲಭ್ಯತೆ ಮುಂತಾದವುಗಳನ್ನು ಆಸ್ಪತ್ರೆಯ ಪ್ರವೇಶ ಸ್ಥಳದಲ್ಲೇ ನಮೂದಿಸಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ನಮಗೆ ಆಶ್ಚರ್ಯವೆಂಬಂತೆ ಈ ಆಸ್ಪತ್ರೆಯಲ್ಲಿ ಇದುವರೆಗೆ ಇಂತಹಾ ಯಾವುದೇ ವಿಷಯಗಳನ್ನು ನಮೂದಿಸಿಲ್ಲ.

ನಾನು ನನ್ನ ವಿಚಾರವನ್ನು ಮಾತ್ರ ಹಂಚಿಕೊಂಡಿದ್ದೇನೆ. ದಿನವೂ ಇಂತಹ ಹಲವು ಪ್ರಕರಣಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ . ದೇಶಾದ್ಯಂತ  ಸಾವಿರಾರು ಮಂದಿ ಇಂತಹಾ ಬಿಲ್‌ ಗಳನ್ನು ಪಡೆದುಕೊಂಡು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ನಮಗಾದ ಈ ದುರಂತವನ್ನು ಸಾರ್ವಜನಿಕರ ಗಮನಕ್ಕೆ ತಂದು ಅವರನ್ನು ಜಾಗೃತಗೊಳಿಸುವುದು ಮತ್ತು ಸಂಬಂಧಪಟ್ಟ ಎಲ್ಲರಲ್ಲೂ ಈ ಬಗ್ಗೆ ಚರ್ಚೆಗೆ ಪ್ರೇರೇಪಿಸುವುದು ನಮ್ಮ ಉದ್ದೇಶವಾಗಿದೆ.

ಜೂನ್ 20, 2020 ರಂದು ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಬೆಲೆಗಳನ್ನು ನಿಗದಿಪಡಿಸುವ ಆದೇಶವನ್ನು ದೆಹಲಿ ಸರ್ಕಾರ ಹೊರಡಿಸಿತು. ಆಸ್ಪತ್ರೆಗಳು, ಹಾಸಿಗೆಗಳು ಮತ್ತು ಐಸಿಯು ಸೌಲಭ್ಯಗಳ ಆಧಾರದ ಮೇಲೆ 8,000 ರಿಂದ 18,000 ರೂ.ಗಳವರೆಗೆ ಚಿಕಿತ್ಸೆಗಾಗಿ ದಿನಕ್ಕೆ ಗರಿಷ್ಠ ಪ್ಯಾಕೇಜ್ ದರವನ್ನು ಆದೇಶದಲ್ಲಿ ಸೂಚಿಸಲಾಗಿತ್ತು.

ಪ್ಯಾಕೇಜ್ ದರಗಳಲ್ಲಿ “ಹಾಸಿಗೆ, ಆಹಾರ ಮತ್ತು ಇತರ ಸೌಕರ್ಯಗಳು, ಮೇಲ್ವಿಚಾರಣೆ,  ಆರೈಕೆ, ವೈದ್ಯರ ಭೇಟಿ / ಸಮಾಲೋಚನೆ, ಇಮೇಜಿಂಗ್, ಕೋವಿಡ್ ಆರೈಕೆಗಾಗಿ ರಾಷ್ಟ್ರೀಯ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ಮತ್ತು ಗುಣಮಟ್ಟದ ಆರೈಕೆ -ಮೊರ್ಬಿಡಿಟೀಸ್, ಆಮ್ಲಜನಕ, ರಕ್ತ ವರ್ಗಾವಣೆ, ಇತ್ಯಾದಿ ಒಳಗೊಂಡಿರುತ್ತದೆ.

ಪ್ಯಾಕೇಜ್ ದರಗಳು ಕೋವಿಡ್‌ನ ಆರೈಕೆಯ ಅವಧಿಯವರೆಗೆ ಎಲ್ಲ ವೆಚ್ಚಗಳನ್ನು ಒಳಗೊಂಡಿರುತ್ತದೆ. ಅನೇಕ ಕೋವಿಡ್ ರೋಗಿಗಳು ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ತೊಂದರೆಗಳು ಮುಂತಾದ ಪರಿಸ್ಥಿತಿಗಳನ್ನು ಹೊಂದಿರುವುದರಿಂದ, ಅಂತಹ ಸಹ-ಕಾಯಿಲೆಗಳ ವೈದ್ಯಕೀಯ ಆರೈಕೆಯ ಶುಲ್ಕಗಳು ಪ್ಯಾಕೇಜಿನ ಒಂದು ಭಾಗವಾಗಿರುತ್ತದೆ.

ಯಾರೇ ಆದರೂ ಸರಕಾರದ ಈ ಉದ್ದೇಶಗಳನ್ನು ಮತ್ತು ಆದೇಶಗಳನ್ನು ಸ್ವಾಗತಿಸುತ್ತಾರೆ. ಆದರೆ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎರಡು ಅಂತರ್ಗತ ಸಮಸ್ಯೆಗಳಿವೆ.   ಮೊದಲನೆಯದಾಗಿ, ಪ್ಯಾಕೇಜ್‌ ದರಗಳು ಲಭ್ಯವಿರುವ ಬೆಡ್‌ ಗಳಲ್ಲಿನ ಮೊದಲ 60% ಬೆಡ್‌ ಗಳಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದ 40% ಬೆಡ್‌ ಗಳಿಗೆ ತಮ್ಮದೇ ಆದ ದರವನ್ನು ಖಾಸಗಿ ಆಸ್ಪತ್ರೆಗಳು ವಿಧಿಸಬಹುದಾಗಿದೆ. ಈ ನಿಯಮ  ಆಸ್ಪತ್ರೆಗಳಿಗೆ  ಇನ್ನೂ ಹೆಚ್ಚಿನ ದರ ವಿಧಿಸಲು ಸಹಕಾರಿಯಾಗಿದೆ. ಅವರು 40 ಶೇಕಡಾಕ್ಕಿಂತ ಹೆಚ್ಚು ಬೆಡ್ ಗಳಿಗೂ ಈ ಹೆಚ್ಚಿನ ದರ ವಿಧಿಸುವ ಸಾಧ್ಯತೆ ಇದೆ.  ಈ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರವು 80:20 ಅನುಪಾತ ಕಾಯ್ದುಕೊಂಡಿದೆ. ಅಂತೆಯೇ ದಿಲ್ಲಿಯ ಆಸ್ಪತ್ರೆಗಳಿಗೆ 80 ಅಥವಾ 100 ಶೇ. ಯಾಕೆ ಸಾಧ್ಯವಿಲ್ಲ? ಅದೂ ಕೋವಿಡ್‌ ನ ಈ ಎರಡನೇ ಅಲೆಯ ಸಂದರ್ಭದಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?

ಆಲ್‌ ಇಂಡಿಯಾ ಡ್ರಗ್‌ ಆಕ್ಷನ್‌ ನೆಟ್‌ ವರ್ಕ್‌ ನಗರದ ಖಾಸಗಿ ಆಸ್ಪತ್ರೆಗಳು ಜನರಿಗೆ ಮೋಸ ಮಾಡುವುದರ ಕುರಿತಾದಂತೆ ಕೆಲ ವಿಚಾರಗಳನ್ನು ದಾಖಲಿಸಿದೆ. ಸರಕಾರವು ನಿಗದಿಪಡಿಸಿದ ದರಗಳ ಬಗ್ಗೆ ಮಾಹಿತಿ ನೀಡದೇ ಇರುವುದು, ಪ್ರವೇಶದ ಸಮಯದಲ್ಲಿ ಸುಳ್ಳು ಒಪ್ಪಿಗೆಗಳನ್ನು ಪಡೆಯುವುದು, ಪ್ಯಾಕೇಜ್‌ ದರದಲ್ಲೇ ಒಳಗೊಂಡದ್ದರೂ ಔಷಧಿಗಳಿಗೆ ಹೆಚ್ಚುವರಿ ಹಣ ಪಡೆದುಕೊಳ್ಳುವುದು, ಡಾಕ್ಟರ್‌ ಭೇಟಿ, ತನಿಖೆಗಳು, ಪಿಪಿಇ ಕಿಟ್‌ ಗಳು, ಗ್ಲೌಸ್‌ ಮುಂತಾದವುಗಳ ಹೆಸರಿನಲ್ಲಿ ಹೆಚ್ಚುವರಿ ಹಣ ಪಡೆದುಕೊಳ್ಳುವುದು ಮುಂತಾದವುಗಳನ್ನು ಬೆಟ್ಟು ಮಾಡಲಾಗಿದೆ.

ರೋಗಿಯ ಬಿಲ್‌ ನ ಸಮರ್ಪಕ ಲೆಕ್ಕ ಪರಿಶೋಧನೆ ಮಾಡಿದರೆ ಮಾತ್ರ ಸರಕಾರದ ಆದೇಶದ ಅನುಷ್ಠಾನ ಮತ್ತು ಪರಿಣಾಮಕಾರಿತ್ವವನ್ನು ಹಾಗೂ ನಿಖರವಾದ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಡಿಎಚ್‌ಎಲ್‌ಐ ಅಥವಾ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಿಲ್ಲ. ಅಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿಲ್ಲ. ಆದ್ದರಿಂದ, ಇದು ಒಂದು ಸಂಬಂಧಿತ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ರಾಜ್ಯ ಸರಕಾರಕ್ಕೆ ಅದರ ಅನುಷಾನವನ್ನು ಖಚಿತಪಡಿಸಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಅಂತಹ ಸದುದ್ದೇಶದ ಆದೇಶಗಳನ್ನು ಹೊರಡಿಸುವುದರ ಅರ್ಥವೇನು?

ದಿಲ್ಲಿ ಸರಕಾರಕ್ಕೆ ಕೆಲವು ಸಲಹೆಗಳು:

ಸಾಂಕ್ರಾಮಿಕವಾಗಿರಲಿ ಅಥವಾ ಇತರ ಸಂದರ್ಭಗಳಾಗಲಿ, ನಾಗರಿಕರ ಆರೋಗ್ಯ ಕಾಪಾಡುವುದು ಯಾವುದೇ ಸರ್ಕಾರದ ಆದ್ಯತೆಯಾಗಿರಬೇಕು. ಜನರು ಕೈಗೆಟಕುವ ದರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಯೇ ಎಂದು ಸರಕಾರಗಳು ಖಚಿತಪಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಅನ್ಯಾಯದ ಮಾರ್ಗದಿಂದ ಹಣ ಗಳಿಸುತ್ತಿದೆಯೇ ಎಂಬುವುದನ್ನು ಪರಿಶೀಲಿಸಬೇಕು. ಇಂತಹಾ ಕೃತ್ಯಗಳನ್ನು ತಡೆಯಬೇಕು. ಆದ್ದರಿಂದ ದಿಲ್ಲಿ ಸರಕಾರಕ್ಕೆ ನಮ್ಮಸಲಹೆಯು ಸ್ಪಷ್ಟವಾಗಿದೆ. ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಅನಗತ್ಯ ಲಾಭ ಪಡೆಯುವ ಕೃತ್ಯಗಳನ್ನು ತಡೆಯಲು ನಿಮ್ಮ ಅಧಿಕಾರವನ್ನು ಬಳಸಿಕೊಳ್ಳಿ.

ನಮ್ಮ ಕೆಲವು ಸಲಹೆಗಳು ಇಂತಿವೆ. 
ದಿಲ್ಲಿ ಸರಕಾರವು ತಾನು ಮಾಡಿದ್ದ ಆದೇಶಗಳನ್ನು ಆಸ್ಪತ್ರೆಗಳು ಪಾಲಿಸುತ್ತಿವೆಯೇ ಎಂದು ತಿಳಿಯಲು ಖಾಸಗಿ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಅವರ ಬಿಲ್ಲಿಂಗ್‌ ವಿಧಾನ, ಲೆಕ್ಕ ಪರಿಶೋಧನೆ ಮತ್ತು ಕೋವಿಡ್‌ ರೋಗಿಗಳ ಆರೈಕೆಯ ಕುರಿತಾದಂತೆ ಪರಿಶೀಲಿಸಬೇಕು. ಒಂದು ವೇಳೆ ಅವರು ನಿಯವನ್ನು ಪಾಲಿಸುತ್ತಿಲ್ಲವೆಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹಾ ಘಟನೆಗಳು ಮರುಕಳಿಸದಂತೆ ದಂಡ ವಿಧಿಸಬೇಕು.

ಅಗತ್ಯವಿದ್ದರೆ, ಸರಕಾರದ ಆದೇಶಗಳನ್ನು ಉಲ್ಲಂಘಿಸಿದ ಆಸ್ಪತ್ರೆಗಳಿಗೆ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಲು ದಿಲ್ಲಿ ಸರಕಾರ ಹಿಂಜರಿಯಬಾರದು. ಕೆಲ ದಿನಗಳ ಹಿಂದೆ ತೆಲಂಗಾಣ ಸರಕಾರವು ಅಧಿಕ ಶುಲ್ಕ ವಿಧಿಸಿದ ಕಾರಣಕ್ಕೆ ಐದು ಆಸ್ಪತ್ರೆಗಳ ಪರವಾನಿಗೆ ರದ್ದು ಮಾಡಿದಂತೆ. ಕಳೆದ ವಾರ ತಮಿಳುನಾಡು ಸರ್ಕಾರವು 22 ಆಸ್ಪತ್ರೆಗಳಿಗೆ ಶೋಕಾಸ್‌ ನೀಡಿತ್ತು ಮತ್ತು ನಿಗದಿತ  ದರಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ 10 ಖಾಸಗಿ ಆಸ್ಪತ್ರೆಗಳ ಪರವಾನಿಗೆ ರದ್ದು ಮಾಡಿತ್ತು. ತೆಲಂಗಾಣ, ತಮಿಳುನಾಡು ಸರಕಾರಗಳು ಇದನ್ನು ಮಾಡಬಹುದಾದರೆ ದಿಲ್ಲಿ ಸರಕಾರವೂ ಮಾಡಬಹುದಾಗಿದೆ.

ಹಲವಾರು ಮಂದಿಗೆ ಇಂತಹಾ ಪ್ರಕರಣಗಳ ವಿರುದ್ಧ ದೂರು ಸಲ್ಲಿಸುವುದು ಹೇಗೆ ಎಂಬ ಗೊಂದಲಗಳಿದೆ. ದೂರನ್ನು ಆರೋಗ್ಯ ಇಲಾಖೆಗೋ? ಪೊಲೀಸ್‌ ಠಾಣೆಗೋ, ಗ್ರಾಹಕರ ನ್ಯಾಯಾಲಯಕ್ಕೋ, ಅಥವಾ ಇನ್ನಿತರ ಕಚೇರಿಗಳಿಗೆ ಸಲ್ಲಿಸಬೇಕೋ ಎನ್ನುವ ಕುರಿತು ಗೊಂದಲಗಳಿವೆ. ಈ ಕುರಿತಾದಂತೆ ದಿಲ್ಲಿ ಸರಕಾರ ಗಮನ ಹರಿಸಬೇಕಾಗಿದೆ. ಆಶ್ಪತ್ರೆಗಳು ಹೆಚ್ಚಿನ ದರ ವಿಧಿಸಿದರೆ ದೂರು ನೀಡುವ 104 ಹೆಲ್ಪ್‌ ಲೈನ್‌ ನಂಬರ್‌ ತಮಿಳುನಾಡಿನಲ್ಲಿ ಜಾರಿಯಲ್ಲಿದೆ. ದಿಲ್ಲಿ ಸರಕಾರವು 1031 ನಂಬರ್‌ ನ ಹೆಲ್ಪ್‌ ಲೈನ್‌ ಹೊಂದಿದ್ದರೂ, ನಾವು ಕರೆ ಮಾಡಿದ ವೇಳೆ, ನಾವು ಖಾಸಗಿ ಆಸ್ಪತ್ರೆಗ ವಿಚಾರದ ಕುರಿತ ಪ್ರಕರಣಗಳನ್ನು ವಿಚಾರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ದಿಲ್ಲಿ ಸರಕಾರವು ಜನರಿಗೆ ಆನ್‌ ಲೈನ್‌ ನಲ್ಲಿ ದೂರು ಸಲ್ಲಿಸಲು ಸಾಧ್ಯವಾಗುವಂತೆ ಪೋರ್ಟಲ್‌ ಒಂದನ್ನು ರಚಿಸಬೇಕು. 1,50,000ಕ್ಕಿಂತ ಹೆಚ್ಚು ಬಿಲ್‌ ನೀಡಿದರೆ ಅದರ ಲೆಕ್ಕ ಪರಿಶೋಧನೆಯನ್ನು ಸರಕಾರವೇ ನಡೆಸಬೇಕು ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು. AIDAN ನೀಡಿರುವ ಸೂಚನೆಯಂತೆ ಅಧಿಕಾರಿಗಳು, ಆಡಳಿತ ವರ್ಗ, ಡಾಕ್ಟರ್‌ ಗಳು, ನಿವೃತ್ತ ನ್ಯಾಯಾಧೀಶರು, ಸಾಮಾಜಿಕ ಪ್ರತಿನಿಧಿಗಳು ಹಾಗೂ ಪ್ರಮುಖ ವ್ಯಕ್ತಿಗಳನ್ನು ಸೇರಿದ ಕಮಿಟಿಯೊಂದನ್ನು ರಚಿಸಿ ಲೆಕ್ಕಗಳನ್ನು ಆಡಿಟ್‌ ಮಾಡಲು ಕ್ರಮ ಕೈಗೊಳ್ಳಬೇಕು.  

ಇಷ್ಟು ಕೇಳುವುದು ನ್ಯಾಯ ಸಮ್ಮತವಲ್ಲವೇ ?

ಯಾರಾದರೂ, ಡಿಎಚ್‌ಎಲ್‌ಐ ಸೇರಿದಂತೆ ಇತರ ಖಾಸಗಿ ಆಸ್ಪತ್ರೆಗಳ ವಿರುದ್ಧ ದಿಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕೇಳಿದರೆ, ಜನರ ನಡುವೆ ಇರುವ ಅಭಿಪ್ರಾಯದಂತೆ ದಿಲ್ಲಿ ಸರಕಾರವು ಕೋವಿಡ್‌ 19 ರೋಗಿಗಳನ್ನು ಅತಿಯಾದ ದರ ನಿಗದಿಪಡಿಸುವಿಕೆ ಮತ್ತು ಖಾಸಗಿ ಆಸ್ಪತ್ರೆಗಳ ಲಾಭಕೋರತನವನ್ನು  ಮಟ್ಟ ಹಾಕುವಲ್ಲಿ ರಾಜಕೀಯವಾಗಿ ವಿಫಲಗೊಂಡಿದೆ ಎಂದಷ್ಟೇ ಹೇಳಬಹುದು.

ಕವಲ್ ಜೀತ್ ಸಿಂಗ್ ದಿಲ್ಲಿಯ ನೀತಿ ನಿರೂಪಣೆ ಕುರಿತು ಅಧ್ಯಯನ ಮಾಡುವ ಮಾಧ್ಯಮ್ ಎಂಬ ಸಂಸ್ಥೆಯ ನಿರ್ದೇಶಕರು 

ಕೃಪೆ : thewire.in 

ಇದು ಲೇಖನದ ಆಯ್ದ ಭಾಗದ ಅನುವಾದ. ಮೂಲ ಇಂಗ್ಲೀಷ್ ಲೇಖನ ಈ ಲಿಂಕ್ ನಲ್ಲಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)