varthabharthi


ವಿಶೇಷ-ವರದಿಗಳು

ಮುಸ್ಲಿಮರಿಗೆ ಕುಟುಂಬ ಯೋಜನೆ ಕುರಿತು ಅಸ್ಸಾಂ ಮುಖ್ಯಮಂತ್ರಿಗಳ ಹೇಳಿಕೆ: ಅಲ್ಲಿನ ನೈಜ ಅಂಕಿ ಅಂಶಗಳು ಹೇಳುವುದೇನು

ವಾರ್ತಾ ಭಾರತಿ : 13 Jun, 2021
ಕೃತಿಕಾ ಗೋಯೆಲ್

ಅಸ್ಸಾಮಿನಲ್ಲಿ ತನ್ನ ಸರಕಾರವು 30 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಕುಟುಂಬ ಯೋಜನೆ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯದಲ್ಲಿಯ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

‘ಜನಸಂಖ್ಯೆಯನ್ನು ನಿಯಂತ್ರಿಸಲು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲು ನಾವು ಬಯಸಿದ್ದೇವೆ. ಅನಿಯಂತ್ರಿತ ಜನಸಂಖ್ಯಾ ಬೆಳವಣಿಗೆಯು ಬಡತನ ಮತ್ತು ಭೂ ಅತಿಕ್ರಮಣಗಳಂತಹ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಮುಸ್ಲಿಂ ಸಮುದಾಯವು ಉತ್ತಮ ಕುಟುಂಬ ಯೋಜನೆ ಕ್ರಮಗಳನ್ನು ಅಳವಡಿಸಿಕೊಂಡರೆ ಅಸ್ಸಾಮಿನಲ್ಲಿಯ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ನಾವು ಅಂತ್ಯ ಹಾಡಬಹುದು ಎಂದು ನಾನು ಭಾವಿಸಿದ್ದೇನೆ ’ಎಂದು ಹೇಳಿದ್ದ ಶರ್ಮಾ,ಜನಸಂಖ್ಯಾ ನಿಯಂತ್ರಣದ ಬಗ್ಗೆ ಮುಸ್ಲಿಂ ಮಹಿಳೆಯರಲ್ಲಿ ಅರಿವು ಮೂಡಿಸಲು ತನ್ನ ಸರಕಾರವು ಅವರಿಗೆ ಶಿಕ್ಷಣ ನೀಡಲಿದೆ ಎಂದೂ ತಿಳಿಸಿದ್ದರು.

ಮುಖ್ಯಮಂತ್ರಿಗಳ ಹೇಳಿಕೆಯು ಕೇವಲ ಒಂದು ಸಮುದಾಯವನ್ನು ಆಯ್ಕೆ ಮಾಡಿಕೊಂಡಿರುವುದು ಏಕೆ ದಾರಿ ತಪ್ಪಿಸುವಂಥದ್ದಾಗಿದೆ ಮತ್ತು ಅದು ದತ್ತಾಂಶಗಳ ಬೆಂಬಲವನ್ನು ಹೊಂದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಹೇಳಿಕೆಯನ್ನು ಕೊಂಚ ಸಾಂದರ್ಭಿಕವಾಗಿ ನೋಡಬೇಕಾಗುತ್ತದೆ. ಇದಕ್ಕಾಗಿ ನಾವು ಈ ಕೆಳಗಿನ ದತ್ತಾಂಶಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ.

ರಾಜ್ಯದಲ್ಲಿ ಒಟ್ಟು ಫಲವತ್ತತೆ ದರ (ಟಿಎಫ್ಆರ್) ಎಷ್ಟಿದೆ ಮತ್ತು ಇತರ ಸಮುದಾಯಗಳಿಗೆ ಹೋಲಿಸಿದರೆ ಅದು ಮುಸ್ಲಿಂ ಮಹಿಳೆಯರಲ್ಲಿ ಹೆಚ್ಚಿದೆಯೇ? ಹಿಂದಿನ ಪ್ರವೃತ್ತಿಗಳು ಏನನ್ನು ಸೂಚಿಸುತ್ತಿವೆ? ಅಸ್ಸಾಮಿನಲ್ಲಿ ಮುಸ್ಲಿಂ ಸಮುದಾಯದ ಕುಟುಂಬ ಯೋಜನೆ ಕ್ರಮವು ಕಳಪೆಯಾಗಿದೆ ಎನ್ನುವುದಕ್ಕೆ ಪುರಾವೆಯಿದೆಯೇ? ಟಿಎಫ್ಆರ್ ಮಹಿಳೆಯು ತನ್ನ ಗರ್ಭ ಧರಿಸುವ ವಯಸ್ಸಿನವರೆಗೆ ಹೆರಬಲ್ಲ ಮಕ್ಕಳ ಸರಾಸರಿ ಸಂಖ್ಯೆಯಾಗಿದೆ. 

2020,ಡಿಸೆಂಬರ್ನಲ್ಲಿ ಬಿಡುಗಡೆಗೊಂಡ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5(ಎನ್ಎಫ್ಎಚ್ಎಸ್-5)ರ ವರದಿಯನ್ವಯ ಅಸ್ಸಾಮಿನಲ್ಲಿ ಟಿಎಫ್ಆರ್ 1.9ರಷ್ಟಿದ್ದು,ಇದು 2.1ರ ಸ್ಥಾನಾಪನ್ನ ದರಕ್ಕಿಂತ ಕಡಿಮೆಯಿದೆ. ಸ್ಥಾನಾಪನ್ನ ದರವು ಜನಸಂಖ್ಯೆಯು ವಲಸೆ ಇಲ್ಲದೆ ತನ್ನನ್ನು ತಾನು ಬದಲಿಸಿಕೊಳ್ಳುವ ದರವಾಗಿದೆ.
 
1992-93ರಲ್ಲಿ(ಎನ್ಎಫ್ಎಚ್ಎಸ್-1) 3.5ರಷ್ಟಿದ್ದ ಅಸ್ಸಾಮಿನ ಟಿಎಫ್ಆರ್ ಇಳಿಕೆಯಾಗುತ್ತಲೇ ಇದ್ದು 2019-20ರಲ್ಲಿ (ಎನ್ಎಫ್ಎಚ್ಎಸ್-5) 1.9ಕ್ಕೆ ತಲುಪಿದೆ. ಎನ್ಎಫ್ಎಚ್ಎಸ್-5ರಲ್ಲಿ ಕಂಡು ಬಂದಿರುವಂತೆ ಅಸ್ಸಾಮಿನಲ್ಲಿ ಮುಸ್ಲಿಂ ಮಹಿಳೆಯರ ಟಿಎಫ್ಆರ್ ಹಿಂದು ಮಹಿಳೆಯರ ಟಿಎಫ್ಆರ್ಗಿಂತ ಸರಾಸರಿ 0.8ರಷ್ಟು ಹೆಚ್ಚಿದೆ (1.6ಕ್ಕೆ ಹೋಲಿಸಿದರೆ 2.4 ಟಿಎಫ್ಆರ್)ಮತ್ತು ಕ್ರೈಸ್ತ ಮಹಿಳೆಯರಿಗಿಂತ 0.9ರಷ್ಟು ಹೆಚ್ಚಿದೆ.
 
ಆದರೆ ಮುಸ್ಲಿಂ ಮಹಿಳೆಯರ ಟಿಎಫ್ಆರ್ ಹಿಂದು ಮಹಿಳೆಯರಿಗಿಂತ ಹೆಚ್ಚಿದ್ದರೂ ಹಲವಾರು ವರ್ಷಗಳಲ್ಲಿ ಉಭಯ ಸಮುದಾಯಗಳಲ್ಲಿ ಈ ದರ ಇಳಿಮುಖ ಪ್ರವೃತ್ತಿಯನ್ನು ತೋರಿಸಿದೆ.

ಹಿಂದಿನ ಪ್ರವೃತ್ತಿಗಳು ಏನನ್ನು ತೋರಿಸುತ್ತಿವೆ?

2005-2006ರಲ್ಲಿ ನಡೆಸಲಾಗಿದ್ದ ಎನ್ಎಫ್ಎಚ್ಎಸ್-3ರಂತೆ ಅಸ್ಸಾಮಿನಲ್ಲಿ ಮುಸ್ಲಿಂ ಮಹಿಳೆಯರ ಟಿಎಫ್ಆರ್ 3.6 ಮಕ್ಕಳಾಗಿದ್ದು, ಇದು ಹಿಂದು ಮಹಿಳೆಯರ 2.0 ಟಿಎಫ್ಆರ್ಗೆ ಹೋಲಿಸಿದರೆ ತುಂಬ ಹೆಚ್ಚಿನ ಮಟ್ಟದಲ್ಲಿತ್ತು. ಇದೇ ರೀತಿ ಎನ್ಎಫ್ಎಚ್ಎಸ್-4ರಂತೆ ಮುಸ್ಲಿಂ ಮಹಿಳೆಯರ ಟಿಎಫ್ಆರ್ 2.9 ಆಗಿದ್ದು,ಹಿಂದು ಮಹಿಳೆಯರ ಟಿಎಫ್ಆರ್ (1.8)ಗೆ ಹೋಲಿಸಿದರೆ 1.1ರಷ್ಟು ಹೆಚ್ಚಿತ್ತು. ರಾಷ್ಟ್ರೀಯ ಮಟ್ಟದಲ್ಲಿಯೂ ಈ ಇಳಿಮುಖ ಪ್ರವೃತ್ತಿ ಕಂಡುಬಂದಿದೆ. 

ಎನ್ಎಫ್ಎಚ್ಎಸ್-3ರಂತೆ ಮುಸ್ಲಿಂ ಮಹಿಳೆಯರಿಗೆ 3.4 ಮತ್ತು ಹಿಂದು ಮಹಿಳೆಯರಿಗೆ 2.6ರಷ್ಟಿದ್ದ ಟಿಎಫ್ಆರ್ ಎನ್ಎಫ್ಎಚ್ಎಸ್-4ರಲ್ಲಿ ಅನುಕ್ರಮವಾಗಿ 2.6 ಮತ್ತು 2.1ಕ್ಕೆ ಇಳಿಕೆಯಾಗಿತ್ತು.

thequint.com ಮುಸ್ಲಿಂ ಮಹಿಳೆಯರು ಸೇರಿದಂತೆ ಎಲ್ಲ ಧಾರ್ಮಿಕ ಗುಂಪುಗಳಲ್ಲಿ ಒಟ್ಟು ಫಲವತ್ತತೆ ದರವು ಕಡಿಮೆಯಾಗುತ್ತಿದೆ. ಸಾಮಾಜಿಕ ಅಥವಾ ಧಾರ್ಮಿಕ ಗುಂಪುಗಳಲ್ಲಿ ಏನಾದರೂ ಭೇದಾತ್ಮಕ ಅಂಶವಿದ್ದರೆ ಅದು ಅವರ ಶಿಕ್ಷಣ ಮತ್ತು ಆದಾಯ ಮಟ್ಟಗಳಲ್ಲಿಯ ವ್ಯತ್ಯಾಸವಾಗಿದೆ ಎಂದು ಜೊತೆ ಮಾತನಾಡುತ್ತ ಹೇಳಿದ ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾದ ಜಂಟಿ ನಿರ್ದೇಶಕ ಅಲೋಕ ವಾಜಪೇಯಿ ಅವರು, ಅಸ್ಸಾಮಿನ ಟಿಎಫ್ಆರ್ 2.1ಕ್ಕಿಂತ ಸಾಕಷ್ಟು ಕಡಿಮೆಯಿದ್ದು, ಇದು ಸ್ಥಾನಾಪನ್ನ ಮಟ್ಟವಾಗಿದೆ ಮತ್ತು ಇದನ್ನು ಕಾಯ್ದುಕೊಳ್ಳಬೇಕಿದೆ. ಟಿಎಫ್ ಆರ್ನಲ್ಲಿ ಇನ್ನಷ್ಟು ಕುಸಿತವು ವಯಸ್ಸಾದ ಮತ್ತು ಅವಲಂಬಿತ ಜನಸಂಖ್ಯೆಗೆ ಕಾರಣವಾಗುತ್ತದೆ ಮತ್ತು ಇದು ರಾಜ್ಯದಲ್ಲಿ ಅಭಿವೃದ್ಧಿ ಅವಕಾಶಗಳಿಗೆ ತಡೆಯನ್ನೊಡ್ಡುತ್ತದೆ ಎಂದು ವಿವರಿಸಿದರು.

ಅಸ್ಸಾಂ ಈಗ ಬಾಲಕಿಯರ ವಿವಾಹದ ವಯಸ್ಸನ್ನು ವಿಳಂಬಿಸುವುದಕ್ಕೆ ಮತ್ತು ಅವರನ್ನು ಶಾಲೆಗಳಲ್ಲಿ ಉಳಿಸಿಕೊಳ್ಳುವುದಕ್ಕೆ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ. ರಾಜ್ಯದಲ್ಲಿ ಅಂದಾಜು ಶೇ.32ರಷ್ಟು ಮಹಿಳೆಯರು 18 ವರ್ಷ ತುಂಬುವ ಮೊದಲೇ ಮದುವೆಯಾಗುತ್ತಾರೆ. ಅಸ್ಸಾಮಿನಲ್ಲಿ ಬಾಲ್ಯವಿವಾಹದ ಶೇಕಡಾವಾರು ಪ್ರಮಾಣ ಹೆಚ್ಚಾಗಿರುವುದು ಕಳವಳದ ವಿಷಯವಾಗಿದೆ ಎಂದರು.

ಸಾಮಾಜಿಕ-ಆರ್ಥಿಕ ಸೂಚಕಗಳು ಧರ್ಮಕ್ಕಿಂತ ಹೆಚ್ಚಾಗಿ ಫಲವತ್ತತೆಯ ಮೇಲೆ ಪರಿಣಾಮವನ್ನು ಹೊಂದಿರುವುದರಿಂದ ಅವುಗಳನ್ನು ಪರಿಗಣಿಸುವುದು ಅಗತ್ಯವಾಗಿದೆ ಎಂದು ಹೇಳಿದ ಗುವಾಹಟಿಯ ನ್ಯಾಯವಾದಿ ಅಮನ್ ವಾದುದ್ ಅವರು,ಸರಕಾರವು ಶಿಕ್ಷಣ ಸೌಲಭ್ಯಗಳು ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ಹಾಗೂ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ಧರ್ಮವನ್ನು ಗುರಿಯಾಗಿಸಿಕೊಳ್ಳುವುದರಿಂದ ಯಾವುದೇ ಉಪಯೋಗವಿಲ್ಲ ಎಂದರು.
 
ಶಿಕ್ಷಣದ ಮಟ್ಟವೂ ಮಹಿಳೆಯರು ಜನ್ಮ ನೀಡುವ ಮಕ್ಕಳ ಸಂಖ್ಯೆಯ ಮೇಲೆ ಪರಿಣಾಮವನ್ನು ಹೊಂದಿದೆ ಎಂದು ಎನ್ಎಫ್ಎಚ್ಎಸ್-5ರ ದತ್ತಾಂಶಗಳು ತೋರಿಸಿವೆ. ಉದಾಹರಣೆಗೆ ಅಸ್ಸಾಮಿನಲ್ಲಿ ಶಾಲೆಯ ಮೆಟ್ಟಿಲನ್ನೇ ಹತ್ತದ ಮಹಿಳೆಯರಲ್ಲಿ ಟಿಎಫ್ಆರ್ 12ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣವನ್ನು ಹೊಂದಿದ ಮಹಿಳೆಯರಿಗಿಂತ(1.5 ಟಿಎಫ್ಆರ್) ಸರಾಸರಿ 0.8ರಷ್ಟು ಹೆಚ್ಚು (2.3) ಇದೆ.
 
ಮುಸ್ಲಿಂ ಮಹಿಳೆಯರು ಉತ್ತಮ ಕುಟುಂಬ ಯೋಜನೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶರ್ಮಾ ಹೇಳಿರುವ ಹಿನ್ನೆಲೆಯಲ್ಲಿ ಮಹಿಳೆಯರು ಅಳವಡಿಸಿಕೊಂಡಿರುವ ಗರ್ಭ ನಿರೋಧಕ ಕ್ರಮಗಳಂತಹ ಇತರ ಕೆಲವು ಸೂಚಕಗಳು ಮತ್ತು ಕುಟುಂಬ ಯೋಜನೆಯ ಈಡೇರದ ಅಗತ್ಯಗಳ ಕುರಿತು ಇಣುಕುನೋಟವಿಲ್ಲಿದೆ.

ಅಸ್ಸಾಮಿನ ಮುಸ್ಲಿಂ ಮಹಿಳೆಯರಲ್ಲಿ ಕಳಪೆ ಕುಟುಂಬ ಯೋಜನೆ?

ಎನ್ಎಫ್ಎಚ್ಎಸ್-5ರ ವರದಿಯು ಹೇಳಿರುವಂತೆ ಆಧುನಿಕ ಗರ್ಭ ನಿರೋಧಕಗಳ ಬಳಕೆಯು ಹಿಂದು ಮಹಿಳೆಯರು (ಶೇ.42.8) ಮತ್ತು ಕ್ರೈಸ್ತ ಮಹಿಳೆಯರಿಗೆ (ಶೇ.45.7) ಹೋಲಿಸಿದರೆ ಮುಸ್ಲಿಂ ಮಹಿಳೆಯರಲ್ಲಿ ಶೇ.49.6ಷ್ಟು ಹೆಚ್ಚಿನ ಮಟ್ಟದಲ್ಲಿದೆ. ಮುಸ್ಲಿಂ ಮಹಿಳೆಯರಲ್ಲಿ ಆಧುನಿಕ ಗರ್ಭ ನಿರೋಧಕಗಳ ಬಳಕೆಯು ಹಿಂದು ಮಹಿಳೆಯರಿಗೆ (ಶೇ.36.7) ಹೋಲಿಸಿದರೆ ಶೇ.37.3ರಷ್ಟಿದೆ. ಆದರೆ ಕ್ರೈಸ್ತ ಮಹಿಳೆಯರಿಗೆ (ಶೇ.38.7) ಹೋಲಿಸಿದರೆ ಕೊಂಚ ಕಡಿಮೆ ಪ್ರಮಾಣದಲ್ಲಿದೆ ಎಂದು ಎನ್ಎಫ್ಎಚ್ಎಸ್-4ರ ವರದಿಯು ಕೂಡ ಹೇಳಿದೆ.

ಎರಡನೆಯದಾಗಿ ಈಡೇರದ ಅಗತ್ಯಗಳು-ಮಹಿಳೆಯು ಲೈಂಗಿಕವಾಗಿ ಕ್ರಿಯಾಶೀಲಳಾಗಿದ್ದಾಗ ಯಾವುದೇ ಗರ್ಭ ನಿರೋಧಕ ಪದ್ಧತಿಯನ್ನು ಬಳಸುತ್ತಿರದ,ಆದರೆ ಹೆಚ್ಚಿನ ಮಕ್ಕಳನ್ನು ಬಯಸದ ಅಥವಾ ಮುಂದಿನ ಮಗುವಿನ ಆಗಮನವನ್ನು ವಿಳಂಬಿಸಲು ಬಯಸದ ಸಂದರ್ಭಗಳಲ್ಲಿ-ಅಸ್ಸಾಮಿನ ಹಿಂದು ಮಹಿಳೆಯರು(ಶೇ.10.3) ಮತ್ತು ಕ್ರೈಸ್ತ ಮಹಿಳೆಯರಿಗೆ (ಶೇ.10.2) ಹೋಲಿಸಿದರೆ ಮುಸ್ಲಿಂ ಮಹಿಳೆಯರಲ್ಲಿ (ಶೇ.12.2) ಹೆಚ್ಚಿದೆ.
ಇದನ್ನು ವಾಜಪೇಯಿ ವಿವರಿಸಿದ್ದು ಹೀಗೆ:
   
ಇದು ಪುರುಷರು ಮತ್ತು ಮಹಿಳೆಯರು ಸಣ್ಣ ಕುಟುಂಬಗಳನ್ನು ಬಯಸುತ್ತಾರೆ ಎನ್ನುವುದನ್ನು ತೋರಿಸುತ್ತದೆ. ಆದರೆ ಕುಟುಂಬ ಯೋಜನೆಯ ಅವರ ಅಗತ್ಯಗಳನ್ನು ಪೂರೈಸಲಾಗಿಲ್ಲ. ಸರಕಾರವು ಗರ್ಭ ನಿರೋಧಕಗಳ ಆಯ್ಕೆಗಳನ್ನು ಹೆಚ್ಚಿಸುವ ಮತ್ತು ಕೊನೆಯಲ್ಲಿರುವವರಿಗೂ ಅದು ಲಭ್ಯವಾಗುವಂತೆ ಮಾಡುವ ಅಗತ್ಯವಿದೆ. ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಉತ್ತಮ ಆರೋಗ್ಯಕ್ಕೆ ಮತ್ತು ಉತ್ತಮ ಶೈಕ್ಷಣಿಕ ಪರಿಣಾಮಗಳಿಗೆ ಕಾರಣವಾಗುತ್ತದೆ.

ಮೇಲೆ ಬೆಟ್ಟು ಮಾಡಿರುವಂತೆ ಶರ್ಮಾರ ಹೇಳಿಕೆಯು ಅಪ್ರಾಸಂಗಿಕವಾಗಿದೆ ಮತ್ತು ಮುಸ್ಲಿಂ ಮಹಿಳೆಯರು ಉತ್ತಮ ಕುಟುಂಬ ಯೋಜನೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಆಯ್ದ ರೂಪದಲ್ಲಿ ಹೇಳಿದೆ.

ಕೃಪೆ:thequint.com 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)