varthabharthi


ಕರ್ನಾಟಕ

ಪೊಲೀಸ್ ಅಧಿಕಾರಿಗಳ ಸ್ಟಾರ್ ಕಿತ್ತಾಕಿ, ಅವರಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ: ಡಿ.ಕೆ.ಶಿವಕುಮಾರ್ ಆಕ್ರೋಶ

ವಾರ್ತಾ ಭಾರತಿ : 13 Jun, 2021

ಬೆಂಗಳೂರು, ಜೂ.13: ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ ಹಣದಲ್ಲಿ ಬಡವರಿಗೆ ಆಹಾರ ಕಿಟ್, ಧನಸಹಾಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ರವಿವಾರ ಮಹದೇವಪುರ ಹಾಗೂ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ವರ್ತೂರು, ವೈಟ್ ಫೀಲ್ಡ್, ಮುನೇನಕೊಳಲು, ಕಲ್ಕೆರೆಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, 'ಬಡವರು, ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರು, ಕೋವಿಡ್ ವಾರಿಯರ್ಸ್, ಆರೋಗ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕರು ಆಹಾರ ಕಿಟ್ ನೀಡುತ್ತಿದ್ದಾರೆ ಎಂದರು.

ಈ ಆಹಾರ ಕಿಟ್ ನಿಂದ ನಿಮ್ಮ ಸಮಸ್ಯೆಗಳೆಲ್ಲ ಬಗೆಹರಿಯದಿದ್ದರೂ, ಸಂಕಷ್ಟದ ಸಮಯದಲ್ಲಿ ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬಲು ನಾವು ಇಲ್ಲಿಗೆ ಬಂದಿದ್ದೇವೆ. ಇವರಿಗೆ ಯಾವ ಅಧಿಕಾರವೂ ಇಲ್ಲ, ಸರ್ಕಾರದ ದುಡ್ಡೂ ಅಲ್ಲ. ತಾವು ದುಡಿದ ಸ್ವಂತ ದುಡ್ಡಿನಲ್ಲಿ ಸಹಾಯ ಮಾಡುತ್ತಿದ್ದಾರೆ. ಬಡವರಿಗೆ ನೆರವಾಗಿ ಎಂದು ಪಕ್ಷ ಸೂಚನೆ ನೀಡಿತ್ತು. ಅದಕ್ಕೆ ಸ್ಪಂದಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.

ಆಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳಿಗೆ, ಮನೆ ಕೆಲಸ ಮಾಡುವವರಿಗೆ 10 ಸಾವಿರ ರೂ. ಪರಿಹಾರ ಕೊಡಿ ಎಂದು ಯಡಿಯೂರಪ್ಪ ಅವರಿಗೆ ಹಲವಾರು ಬಾರಿ ಕೇಳಿದೆವು. ಅವರು ಕೆಲವರಿಗೆ 5 ಸಾವಿರ ರೂ., ಕೆಲವರಿಗೆ 3 ಸಾವಿರ, ಮತ್ತೆ ಕೆಲವರಿಗೆ 2 ಸಾವಿರ ರೂ. ಘೋಷಿಸಿದರು. ಇದುವರೆಗೂ ಆ ಹಣ ಯಾರಿಗೂ ತಲುಪಿಲ್ಲ. ನಾನು ಈಗಷ್ಟೇ ತಿಪಟೂರಿನಿಂದ ಬಂದೆ. ನಿಮ್ಮ ಆದಾಯ ಹೆಚ್ಚಾಗದಿದ್ದರೂ ಇಂಧನ ಹಾಗೂ ದಿನಬಳಕೆ ವಸ್ತು ಬೆಲೆ ಮಾತ್ರ ಹೆಚ್ಚುತ್ತಿದೆ ಎಂದು ದೂರಿದರು.

ಸರ್ಕಾರದ ಆಹಾರ ಫುಡ್ ಕಿಟ್, ಔಷಧದ ಪ್ಯಾಕೆಟ್ ಮೇಲೆ ತಮ್ಮ ಹಾಗೂ ಪ್ರಧಾನಿ ಮೋದಿ ಅವರ ಫೋಟೋ ಹಾಕಿಕೊಂಡು ಲಿಂಬಾವಳಿಯವರು ಹಂಚಿದ್ದರು. ಈಗ ನಮ್ಮ ನಾಯಕರು ತಮ್ಮ ಹಣದಲ್ಲಿ 1 ಸಾವಿರ ರೂ. ಮೌಲ್ಯದ ಆಹಾರ ಸಾಮಾಗ್ರಿಯನ್ನು 10 ಸಾವಿರ ರೂ. ಜನರಿಗೆ ನೀಡುತ್ತಿದ್ದಾರೆ. ಹೃದಯ ಶ್ರೀಮಂತಿಕೆಯ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ನೀವು ಪ್ರೋತ್ಸಾಹ ನೀಡಬೇಕು. ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಈ ಬೋರ್ಡ್ ಗಳನ್ನು ಕಿತ್ತು ಹಾಕಿಸಿದ್ದಾರೆ. ಪಾಪ ಆ ಪೊಲೀಸ್ ಅವರಿಗೆ ನಮ್ಮ ಸಹವಾಸ ಗೊತ್ತಿಲ್ಲ. ಅವರನ್ನು ಕರೆಸಿ ಸನ್ಮಾನ ಮಾಡಬೇಕು ಎಂದು ಟೀಕಿಸಿದರು.

ನೆರವು ವಿತರಣೆ ಕಾರ್ಯಕ್ರಮ ನಿಲ್ಲಿಸಿದರೆ ಜನರನ್ನು ಕರೆದುಕೊಂಡು ಬಂದು ನಿಮ್ಮ ಪೊಲೀಸ್ ಠಾಣೆ ಮುಂದೆ ಧರಣಿ ಮಾಡುತ್ತೇನೆ ಎಂದು ಹೇಳಿದೆ. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಆದರೆ ನಿಮ್ಮ ಕೇಸ್ ಗಳಿಗೆ ಹೆದರುವ ಮಕ್ಕಳು ಕಾಂಗ್ರೆಸ್ ನವರಲ್ಲ. ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಕೈಯಲ್ಲಿ ಬಡವರಿಗೆ ನೆರವಾಗಲು ಸಾಧ್ಯವಾದರೆ ನೆರವಾಗಿ. ಅದನ್ನು ಬಿಟ್ಟು ಕಷ್ಟದ ಸಮಯದಲ್ಲಿ ಬಡವರಿಗೆ ನೆರವಾಗುವುದನ್ನು ತಡೆಯುತ್ತೀರಲ್ಲ ನೀವು ಮನುಷ್ಯರಾ ಅಥವಾ ದನಗಳಾ? ಮಂತ್ರಿ, ಶಾಸಕ ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಬಾವುಟ ಕಿತ್ತುಹಾಕಲು ಬಂದಿದ್ದೀರಾ. ಕಾಂಗ್ರೆಸ್ ಬಾವುಟ ಕಿತ್ತು ಹಾಕಲು ಅವರ ಹಣೆಯಲ್ಲಿ ಬರೆದಿಲ್ಲ. ಸರ್ಕಾರದ ಕಿಟ್ ಗೆ ತಮ್ಮ ಫೋಟೋ ಹಾಕಿಕೊಂಡು ಬಿಜೆಪಿ ನಾಯಕರು ಹಂಚುವಾಗ ಈ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಮಲಗಿದ್ದರಾ? ಮಾನ ಮರ್ಯಾದೆ ಇದ್ದರೆ ಬಡವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನಿಮ್ಮ ಕಾನ್ಸ್ಟೇಬಲ್ ಗಳಿಗೆ ನೀವು ಸಹಾಯ ಮಾಡಿದ್ದೀರಾ? ಜನರಿಗೆ ನಮ್ಮ ನಾಯಕರು ಸಹಾಯ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಲಂಚ, ಸಂಬಳ ಇಲ್ಲ ಆದರೂ ತಮ್ಮ ಹಣದಲ್ಲಿ ನೀಡುತ್ತಿದ್ದಾರೆ ಎಂದು ಹೇಳಿದರು.

ಚುನಾವಣೆಯಲ್ಲಿ ಏನಾಗಬೇಕು ಎಂದು ತೀರ್ಮಾನ ಜನ ಮಾಡುತ್ತಾರೆ. ಜನ ತಮ್ಮ ಹಣ ಪಡೆಯಲು, ಚಿಕಿತ್ಸೆ, ಆಕ್ಸಿಜನ್, ಔಷಧ, ಲಸಿಕೆ ಪಡೆಯಲು ಕ್ಯೂ ನಿಂತಿದ್ದಾರೆ. ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲುವಂತಾಗಿದೆ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)