varthabharthi


ಸಂಪಾದಕೀಯ

ಬೆದರು ಬೊಂಬೆಯಾಗುತ್ತಿರುವ ಮಾನವ ಹಕ್ಕು ಆಯೋಗ

ವಾರ್ತಾ ಭಾರತಿ : 14 Jun, 2021

ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದಂತೆಯೇ, ಮಾನವ ಹಕ್ಕು ಆಯೋಗದ ಹೊಣೆಗಾರಿಕೆಗಳು ಹೆಚ್ಚಾಗುತ್ತವೆ. ಈ ಕಾರಣಕ್ಕಾಗಿ ಆಯೋಗವನ್ನು ಇನ್ನಷ್ಟು ಬಲಿಷ್ಠಗೊಳಿಸಿ ದೇಶವಾಸಿಗಳ ಬದುಕುವ ಹಕ್ಕಿನ ಉಳಿವಿಗೆ ಸರಕಾರ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಆರೋಪಿಸ್ಥಾನದಲ್ಲಿ ಕೇಂದ್ರ ಸರಕಾರವೇ ಗುರುತಿಸಿಕೊಳ್ಳುತ್ತಿದೆ. ಮಾನವ ಹಕ್ಕುಗಳ ಬಗ್ಗೆ ಕಾಳಜಿಯಿಲ್ಲದ ಸರಕಾರಗಳು ಮೊತ್ತ ಮೊದಲು, ತನ್ನನ್ನು ಪ್ರಶ್ನಿಸುವ ಆಯೋಗವನ್ನು ದುರ್ಬಲಗೊಳಿಸುತ್ತವೆ. ಅದರ ರೆಕ್ಕೆಪುಕ್ಕಗಳನ್ನು ಕತ್ತರಿಸುತ್ತವೆ. ಪರಿಣಾಮವಾಗಿ ಮಾನವ ಹಕ್ಕು ಉಲ್ಲಂಘನೆಗಳು ಹೆಚ್ಚುತ್ತಾ ಹೋದ ಹಾಗೆ, ಆಯೋಗದ ಧ್ವನಿ ಇಂಗುತ್ತಾ ಹೋಗುತ್ತದೆ. ಲಾಕ್‌ಡೌನ್‌ನ ಈ ದಿನಗಳಲ್ಲಿ ಮನುಷ್ಯನ ಘನತೆ ಗಂಗಾ ನದಿಯಲ್ಲಿ ಹೆಣವಾಗಿ ತೇಲುತ್ತಿರುವಾಗ, ಮಾನವ ಹಕ್ಕು ಆಯೋಗ ಅದನ್ನು ಹತಾಶೆಯಿಂದ ನೋಡುತ್ತಾ ನಿಂತಿದೆ. ಮಾನವ ಹಕ್ಕು ಆಯೋಗವೆಂದರೆ, ಗದ್ದೆಯ ಮಧ್ಯೆ ನಿಲ್ಲಿಸುವ ಬೆದರು ಬೊಂಬೆಯಷ್ಟೇ ಎನ್ನುವಂತಾಗಿದೆ.

ವಿವಾದಗಳ ನಡುವೆಯೇ ಈ ಬೆದರು ಬೊಂಬೆಗೆ ಇತ್ತೀಚೆಗಷ್ಟೇ ಒಬ್ಬ ಮುಖ್ಯಸ್ಥರ ಆಯ್ಕೆ ನಡೆಯಿತು. ಪ್ರತಿಪಕ್ಷದ ವಿರೋಧದ ನಡುವೆಯೇ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನು ಸರಕಾರ ಅತ್ಯಾಸಕ್ತಿಯಿಂದ ಆಯ್ಕೆ ಮಾಡಿತು. ಮಿಶ್ರಾ ಅವರ ಹಿಂದಿನ ಅಧಿಕಾರಾವಧಿಯ ವಿವರಗಳನ್ನು ಪರಿಶೀಲಿಸಿದರೆ, ಆಯೋಗದ ಮುಂದಿನ ಗತಿ ನಮಗೆ ಸ್ಪಷ್ಟವಾಗುತ್ತದೆ. ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯ ಮೇಲೆ ಲೈಂಗಿಕ ಕಿರುಕುಳ ಆರೋಪ ಬಂದಾಗ ಅವರನ್ನು ರಕ್ಷಿಸಿದ ಹಿರಿಮೆಯನ್ನು ಮಿಶ್ರಾ ಅವರು ಹೊಂದಿದ್ದಾರೆ. ಅರುಣ್‌ಮಿಶ್ರಾ ಅವರ ನೇಮಕವು ಭಾರತದ ರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆಯ ಮೇಲಾದ ಅತಿ ದೊಡ್ಡ ಪ್ರಹಾರ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಈ ಆಯ್ಕೆ ಪ್ರಭುತ್ವ ಭವಿಷ್ಯದಲ್ಲಿ ತೆಗೆದುಕೊಳ್ಳಬಹುದಾದ ಮನುಷ್ಯ ವಿರೋಧಿ ನಿಲುವುಗಳ ಸೂಚನೆಯನ್ನು ನೀಡುತ್ತದೆ. ಆಯೋಗದ ವೈಫಲ್ಯಗಳು ಚರ್ಚೆಯಾಗುತ್ತಿರುವ ಹೊತ್ತಿಗೇ ಅದರ ನೇತೃತ್ವವನ್ನು ಮಿಶ್ರಾ ಅವರು ವಹಿಸಿಕೊಂಡಿರುವುದು ಆಯೋಗದ ಭವಿಷ್ಯದ ಕುರಿತಂತೆ ಇನ್ನಷ್ಟು ನಿರಾಶೆಯನ್ನು ಮೂಡಿಸಿದೆ.

ಮಾನವಹಕ್ಕುಗಳ ಸಂರಕ್ಷಣಾ ಕಾಯ್ದೆ (ತಿದ್ದುಪಡಿ)ಯು, ಮಾನವ ಹಕ್ಕುಗಳ ಆಯೋಗದ ಹುದ್ದೆಗಳಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳನ್ನಷ್ಟೇ ಅರ್ಹವಾಗಿಸಿದೆ. ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ತಿಳಿವು, ಜ್ಞಾನ ಮಾನವ ಹಕ್ಕು ಆಯೋಗಕ್ಕೆ ಪೂರಕವಾಗಿದೆ ನಿಜ. ಆದರೆ ಅದರಿಂದ ಈ ಸಂಸ್ಥೆಗೆ ಸಂಪೂರ್ಣ ನ್ಯಾಯ ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಈ ಹಿಂದಿನ ಬೆಳವಣಿಗೆಗಳು ನಮಗೆ ಸ್ಪಷ್ಟ ಪಡಿಸುತ್ತವೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ನ್ಯಾಯಮೂರ್ತಿಗಳೂ ಪ್ರಭುತ್ವವನ್ನು ಓಲೈಸುವಲ್ಲಿ ಸ್ಪರ್ಧೆಗಿಳಿದಿದ್ದಾರೆ. ಪ್ರಭುತ್ವದ ಜೊತೆಗೆ ರಾಜಿ ಮಾಡಿಕೊಳ್ಳುತ್ತಾ ಆಯೋಗ ನಿಷ್ಠುರವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದು ಅಸಾಧ್ಯ. ಆದುದರಿಂದ ಎನ್‌ಎಚ್‌ಆರ್‌ಸಿ ನೇಮಕಾತಿಗಾಗಿ ಹೊಸ ಮಾದರಿಯನ್ನು ರೂಪಿಸಲು ಇದು ಸಕಾಲವಾಗಿದೆ. ವಿಶಾಲವಾಗಿ ನೋಡುವುದಾದರೆ ಸಾರ್ವಜನಿಕ ಕ್ಷೇತ್ರದಿಂದ ಹೆಚ್ಚು ಕ್ರಿಯಾಶೀಲ ಸದಸ್ಯರನ್ನು ನೇಮಿಸುವ ಮೂಲಕ ಎನ್‌ಎಚ್‌ಆರ್‌ಸಿಯನ್ನು ವಿಕೇಂದ್ರೀಕರಿಸಬಹುದಾಗಿದೆ.

ಸಾಮಾಜಿಕ ಕಾರ್ಯಕರ್ತರು ಮಾತ್ರವಲ್ಲದೆ ಸುಪ್ರೀಂಕೋರ್ಟ್ ಕೂಡಾ ಈ ಹಿಂದೆ ಎನ್‌ಎಚ್‌ಆರ್‌ಸಿಯು ಹಲ್ಲಿಲ್ಲದ ಹುಲಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.ಭಾರತದಲ್ಲಿ ಮಾನವಹಕ್ಕು ಆಯೋಗವು ತನ್ನ ಸಲಹೆ, ಅಭಿಪ್ರಾಯಗಳನ್ನು ಶಿಫಾರಸು ಮಾಡುವುದಕ್ಕಷ್ಟೇ ಸೀಮಿತವಾದ ಅಧಿಕಾರವನ್ನು ಹೊಂದಿದೆ. ಆದರೆ ಅದರ ಶಿಫಾರಸುಗಳಿಗೆ ರಾಜ್ಯಸರಕಾರಗಳು ಅನಾದರ ತೋರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಇರುವ ಅಧಿಕಾರಗಳನ್ನು ಪ್ರಯೋಗಿಸುವಲ್ಲೂ ಆಯೋಗ ವಿಫಲವಾಗಿದೆ. ವಿಚಾರಣೆಗೆ ಬಾಕಿಯುಳಿದಿರುವ ಮಾನವಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳ ಕಡೆಗೆ ಸ್ಥೂಲ ನೋಟವನ್ನು ಹರಿಸಿದರೆ, ಆ ಪ್ರಕರಣಗಳಲ್ಲಿ ನಡೆದಿರುವ ಬಹುತೇಕ ಬಂಧನಗಳ ಕುರಿತಾಗಿ ಎನ್‌ಎಚ್‌ಆರ್‌ಸಿ ಕಾಟಾಚಾರದ ತನಿಖೆಯನ್ನು ನಡೆಸಿ ಕೈತೊಳೆದುಕೊಂಡಿರುವುದು ಕಂಡುಬರುತ್ತದೆ.

ಹಾಥರಸ್ ಯುವತಿಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬಂಧನದಿಂದ ಹಿಡಿದು ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯಲ್ಲಿ ಶಾರ್ಜೀಲ್ ಇಮಾಮ್, ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಹ್ಯಾನಿಬಾಬು ಅವರ ಬಂಧನದ ಪ್ರಕರಣಗಳೆಲ್ಲವೂ ತನಗೆ ಸಂಬಂಧಿಸದ ಪ್ರಕರಣಗಳೆಂದು ಪರಿಗಣಿಸಿ ಆಯೋಗವು ಸುಮ್ಮನಾಗಿತ್ತು. ಈ ಪ್ರಕರಣಗಳ ವಿಚಾರಣೆ ಕೈಬಿಟ್ಟಿರುವ ಮಾನವಹಕ್ಕುಗಳ ಆಯೋಗವು ಅವುಗಳ ವಿವರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ವಿಚಾರಣೆಯು ನ್ಯಾಯಾಲಯದಲ್ಲಿರುವ ಕಾರಣ ಅವುಗಳ ತನಿಖೆ ತಾನು ನಡೆಸುತ್ತಿಲ್ಲವೆಂದು ಎನ್‌ಎಚ್‌ಆರ್‌ಸಿ ಸ್ಪಷ್ಟೀಕರಣ ನೀಡಿದೆ. ಈ ಮಧ್ಯೆ ಛತ್ತೀಸ್‌ಗಡದಲ್ಲಿ ವರದಿಯಾದ ಮಾನವಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ನಿರ್ವಹಿಸಿರುವ ರೀತಿಯ ಬಗೆಗೂ ಎನ್‌ಎಚ್‌ಆರ್‌ಸಿ ಟೀಕೆಗಳನ್ನು ಎದುರಿಸುತ್ತಿದೆ.

 ಮಾನವಹಕ್ಕು ಆಯೋಗ ಸಿವಿಲ್ ನ್ಯಾಯಾಲಯದ ಸ್ಥಾನಮಾನವನ್ನು ಹೊಂದಿದೆ. ಆದರೆ ಪುರಾವೆಗಳ ನಿರ್ವಹಣೆಯಲ್ಲಿ ಪೊಲೀಸರ ಪಾತ್ರ ಪ್ರಶ್ನಾರ್ಹವಾಗಿರುವ ಇಂದಿನ ವ್ಯವಸ್ಥೆಯಲ್ಲಿ ಮಾನವಹಕ್ಕು ಆಯೋಗವು ನ್ಯಾಯಾಲಯದ ವಿಚಾರಣೆಯ ಜೊತೆಗೆ ತಾನು ಕೂಡಾ ಪರ್ಯಾಯವಾಗಿ ತನಿಖೆಗಳನ್ನು ನಡೆಸುವ ಮೂಲಕ ಕಲಾಪಗಳಲ್ಲಿ ಮಧ್ಯಪ್ರವೇಶಿಸುವ ಅಥವಾ ತನಿಖಾ ವೈಖರಿಯನ್ನು ಪ್ರಶ್ನಿಸುವ ಕೆಲಸವನ್ನಾದರೂ ಮಾಡುವ ಅಗತ್ಯವಿದೆ. ಮಾನವಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುವಂತಹ ಅಧಿಕಾರವನ್ನು ಎನ್‌ಎಚ್‌ಆರ್‌ಸಿ ಹೊಂದಿದೆ. ಆದಾಗ್ಯೂ ಈ ಅಧಿಕಾರವನ್ನು ಚಲಾಯಿಸಲು ಎನ್‌ಎಚ್‌ಆರ್‌ಸಿ ವಿಫಲವಾಗಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಈ ವೈಫಲ್ಯ ಆಕಸ್ಮಿಕವಲ್ಲ. ಆಯೋಗವು ಪ್ರಭುತ್ವಕ್ಕೆ ಹೆದರುತ್ತಾ ಕೆಲಸ ನಿರ್ವಹಿಸುತ್ತಿರುವುದರ ಪರಿಣಾಮ ಇದು.

 2019ರಲ್ಲಿ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದರೂ, ಈ ಕಾಯ್ದೆಯಲ್ಲಿ ಮಾನವಹಕ್ಕು ಉಲ್ಲಂಘನೆಯಾಗಿರುವ ಬಗ್ಗೆ ತನಿಖೆಗಳನ್ನು ನಡೆಸಲು ವಿಫಲವಾಗಿದೆ. ಹಾಗೆಯೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಹಾಗೂ ರಾಷ್ಟ್ರೀಯ ತನಿಖಾ ಏಜೆನ್ಸಿ ಕಾಯ್ದೆ (ಎನ್‌ಐಎ)ಗಳ ಪರಾಮರ್ಶೆಗೂ ಅದು ಹಿಂದೇಟು ಹಾಕಿದೆ.ಈ ಹಿಂದಿನ ಕೆಲವು ನಿರ್ದಿಷ್ಟ ಅಧ್ಯಕ್ಷರುಗಳ ಕಾರ್ಯನಿರ್ವಹಣೆಯಿಂದಾಗಿ ಎನ್‌ಎಚ್‌ಆರ್‌ಸಿಯ ವಿಶ್ವಸನೀಯತೆ ಮಸುಕಾಗಿದೆ ಎಂದು ಕೆಲವರು ವಾದಿಸುತ್ತಾರೆ. ಅದು ನಿಜವೇ ಆಗಿದ್ದರೆ, ಮಿಶ್ರಾ ಅವರ ಆಯ್ಕೆ ಆಯೋಗವನ್ನು ಇನ್ನಷ್ಟು ದುರ್ಬಲವಾಗಿಸಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವಹಕ್ಕು ಆಯೋಗದ ಸಂರಚನೆಯ ಬಗ್ಗೆ ಮರುಚಿಂತನೆ ಮಾಡುವುದು ಅನಿವಾರ್ಯ. ಅತ್ಯಂತ ಮಹತ್ವವಾದ ಜವಾಬ್ದಾರಿಯನ್ನು ಹೊಂದಿರುವ ಈ ಸಂಸ್ಥೆಯ ನೀತಿ, ನಿರ್ಧಾರಗಳನ್ನು ಕೇವಲ ಅದರ ಅಧ್ಯಕ್ಷನ ಸುಪರ್ದಿಗೆ ಬಿಡುವುದು ಸಮಂಜಸವಾಗದು. ಈ ನಿಟ್ಟಿನಲ್ಲಿ, ನಾಡಿನ ಮಾನವ ಹಕ್ಕು ಹೋರಾಟಗಾರರ ಸಹಭಾಗಿತ್ವದ ಜೊತೆಗೆ ಆಯೋಗವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬಹುದು ಎನ್ನುವುದರ ಕಡೆಗೆ ಚಿಂತನೆ ನಡೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)