ದಿನಗೂಲಿ ನೌಕರರೂ ತುಟ್ಟಿ ಭತ್ಯೆ, ರಜೆ ಪಡೆಯಲು ಅರ್ಹರು: ಹೈಕೋರ್ಟ್

ಬೆಂಗಳೂರು, ಜೂ.14: ಸರಕಾರಿ ನೌಕರರಿಗೆ ಇರುವಂತೆಯೇ ಸರಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳಲ್ಲಿ ಕಾರ್ಯ ನಿರ್ವಹಿಸುವ ದಿನಗೂಲಿ ನೌಕರರಿಗೂ ಶೇ.100ರಷ್ಟು ತುಟ್ಟಿ ಭತ್ಯೆ ಮತ್ತು ವರ್ಷಕ್ಕೆ 30 ವೇತನ ಸಹಿತ ರಜೆ(ಇಎಲ್) ನೀಡಬೇಕಿದೆ. ಅವರು ಕೂಡ ಈ ಸೌಲಭ್ಯಗಳಿಗೆ ಅರ್ಹರಿದ್ದಾರೆ ಎಂದು ಹೈಕೋರ್ಟ್ ಆದೇಶಿಸಿದೆ.
ದಿನಗೂಲಿ ನೌಕರರಿಗೆ ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ-2012 ಅಡಿ ಲಭ್ಯವಾಗುತ್ತಿದ್ದ ಶೇ.100ರಷ್ಟು ತುಟ್ಟಿ ಭತ್ಯೆ ಹಾಗೂ ಗಳಿಕೆ ರಜೆಯನ್ನು ಕಡಿತಗೊಳಿಸಿ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ತುಟ್ಟಿ ಭತ್ಯೆಯನ್ನು ಶೇ.90ಕ್ಕೆ ಸೀಮಿತಗೊಳಿಸಿ ಹಾಗೂ 30 ದಿನಗಳ ಗಳಿಕೆ ರಜೆ ಸ್ಥಗಿತಗೊಳಿಸಿ ರಾಜ್ಯ ಸರಕಾರ 2020ರ ಜನವರಿ 10 ಮತ್ತು ಜುಲೈ 12ರಂದು ಹೊರಡಿಸಿರುವ ಸುತ್ತೋಲೆಗಳು ಕಾಯ್ದೆಗೆ ವಿರುದ್ಧವಾಗಿದ್ದು, ರದ್ದುಗೊಳಿಸಲಾಗುವುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
Next Story