ಬಿಜೆಪಿ ನಾಯಕರಾದ ಸಂಬಿತ್ ಪಾತ್ರ,ರಮಣ್ ಸಿಂಗ್ ವಿರುದ್ಧದ ಎಫ್ ಐಆರ್ ಗೆ ಛತ್ತೀಸ್ ಗಢ ಹೈಕೋರ್ಟ್ ತಡೆ
ಟೂಲ್ ಕಿಟ್ ಪ್ರಕರಣ
ರಮಣ್ ಸಿಂಗ್ ಹಾಗೂ ಸಂಬಿತ್ ಪಾತ್ರ, photo: AFP, Twitter
ರಾಯಪುರ: ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವಿರುದ್ಧ ಡಾಕ್ಯುಮೆಂಟ್ ಅನ್ನು ಟ್ವೀಟ್ ಮಾಡಿ ಇದು ಕಾಂಗ್ರೆಸ್ ನ ‘ಟೂಲ್ ಕಿಟ್’ ಅಥವಾ ಪ್ರಚಾರ ಸಾಮಗ್ರಿ ಎಂದು ಹೇಳಿಕೊಂಡಿದ್ದಕ್ಕಾಗಿ ದಾಖಲಾಗಿರುವ ಪ್ರಕರಣದ ಪೊಲೀಸ್ ತನಿಖೆಯನ್ನು ಛತ್ತೀಸ್ ಗಢ ಹೈಕೋರ್ಟ್ ತಡೆಹಿಡಿದಿದೆ ಎಂದು Bar and Bench ವರದಿ ಮಾಡಿದೆ .
ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಅವರು ಜೂನ್ 11 ರಂದು ನೀಡಿದ ತಮ್ಮ ಆದೇಶದಲ್ಲಿ, ಸಿಂಗ್ ಹಾಗೂ ಪಾತ್ರ ವಿರುದ್ಧದ ಎಫ್ ಐಆರ್ ಅನ್ನು ರಾಜಕೀಯ ದ್ವೇಷ ದಿಂದ ನೋಂದಾಯಿಸಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿನ ಯುವ ವಿಭಾಗವಾದ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಛತ್ತೀಸ್ ಗಢ ಅಧ್ಯಕ್ಷ ಆಕಾಶ್ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಮೇ 19 ರಂದು ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್ ಸಂಶೋಧನಾ ವಿಭಾಗದ ಲೆಟರ್ಹೆಡ್ ಅನ್ನು ನಕಲಿ ಮಾಡಿ “ಸುಳ್ಳು ಹಾಗೂ ಕಟ್ಟುಕಥೆ” ವಿಷಯವನ್ನು ಮುದ್ರಿಸಿದ ಆರೋಪದ ಮೇಲೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೇಶದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಘನತೆಗೆ ಕಳಂಕ ತರುವ ಉದ್ದೇಶದಿಂದ ಟೂಲ್ ಕಿಟ್ ಅನ್ನು ರಚಿಸಲಾಗಿದೆ ಎಂದು ಸಿಂಗ್, ಪಾತ್ರ ಹಾಗೂ ಇತರ ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದರು.
ಆದಾಗ್ಯೂ, "ಟೂಲ್ ಕಿಟ್ " ನಕಲಿ ಎಂದು ಕಾಂಗ್ರೆಸ್ ಪೊಲೀಸರಿಗೆ ತಿಳಿಸಿತ್ತು. ನಕಲಿ ಕಾಂಗ್ರೆಸ್ ಲೆಟರ್ಹೆಡ್ನಲ್ಲಿ ಡಾಕ್ಯುಮೆಂಟ್ ಅನ್ನು ರಚಿಸಲಾಗಿದೆ ಎಂದು ಫ್ಯಾಕ್ಟ್-ಚೆಕಿಂಗ್ ವೆಬ್ಸೈಟ್ ಆಲ್ಟ್ನ್ಯೂಸ್ ಪತ್ತೆ ಹಚ್ಚಿದೆ.