ಸಾಧನೆಯ ಶಿಖರವೇರುತ್ತಲೇ ಸಂಚಾರ ಮುಗಿಸಿದ ಸಂಚಾರಿ
ಪಂಚನಹಳ್ಳಿ ಹೈದನ ದಿಲ್ಲಿವರೆಗಿನ ಪಯಣ
ಚಿಕ್ಕಮಗಳೂರು, ಜೂ.14: ಕಾಫಿನಾಡಿನ ಕಂಪನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ್ದ, ಅಪ್ಪಟ ರಂಗಭೂಮಿಯ ಯುವ ಪ್ರತಿಭೆಯಾಗಿದ್ದ ಕನ್ನಡ ಚಲನಚಿತ್ರ ರಂಗದಲ್ಲಿ ತನ್ನದೇಯಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಸಂಚಾರಿ ವಿಜಯ್ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇಹಲೋಕದ ಸಂಚಾರವನ್ನು ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ಕಾಫಿನಾಡಿನ ಕುಗ್ರಾಮವೊಂದರ ಪ್ರತಿಭೆಯೊಂದು ರಾಜ್ಯ ಮಟ್ಟದಲ್ಲಿ ಛಾಪು ಮುಡಿಸುತ್ತಿದ್ದ ಅವಧಿಯಲ್ಲಿಯೇ ಅಕಾಲಿಕವಾಗಿ ಮೃತ್ಯುವಿನ ತೆಕ್ಕೆಯಲ್ಲಿ ಲೀನವಾದ ಸುದ್ದಿಗೆ ಕಾಫಿನಾಡಿನ ಜನತೆ ದಿಗ್ಮೂಢರಾಗಿ ಕಂಬನಿ ಮಿಡಿದಿದ್ದಾರೆ.
ಕಾಫಿನಾಡು ಕಾಫಿಕಂಪಿಗೆ ಮಾತ್ರ ಹೆಸರಾಗದೆ ರಂಗಭೂಮಿ, ಸಿನೆಮಾ ಕ್ಷೇತ್ರಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿರುವ ಜಿಲ್ಲೆ. ಈ ಪೈಕಿ ಸಂಚಾರಿ ವಿಜಯ್ ಕಾಫಿನಾಡಿನ ಜನರ ಮನೆಮನಗಳಲ್ಲಿ ಮಾತಾಗಿದ್ದವರು. ಕಾಫಿನಾಡಿನ ಸಣ್ಣ ಹಳ್ಳಿಯೊಂದರ ಹುಡುಗ ಚಲನಚಿತ್ರ ಕ್ಷೇತ್ರದಲ್ಲಿ ತನ್ನ ಅಪೂರ್ವ ಪ್ರತಿಭೆಯಿಂದ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವಂತಹ ಸಾಧನೆ ಮಾಡಿರುವುದು ಸಾಧಾರಣ ಸಂಗತಿಯಲ್ಲ. ಇಂತಹ ಸಾಧನೆ ಮಾಡಿದ ಕಾಫಿನಾಡಿನ ಏಕೈಕ ಪ್ರತಿಭೆಯಾಗಿದ್ದ ಸಂಚಾರಿ ವಿಜಯ್ ಕಾಫಿನಾಡಿನ ಮನೆಮಗನಂತಿದ್ದವರು. ವಿಜಯ್ ಬಾರದ ಲೋಕಕ್ಕೆ ಸಂಚಾರ ಬೆಳೆಸಿರುವ ಸುದ್ದಿ ಸೋಮವಾರ ಮಧ್ಯಾಹ್ನ ಕಿವಿಗೆ ಬೀಳುತ್ತಿದ್ದಂತೆಯೇ ಕಾಫಿನಾಡಿನ ಜನತೆ ಅಯ್ಯೋ ದೇವರೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಸಂಚಾರಿ ವಿಜಯ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು. 1983ರಲ್ಲಿ ಬಸವರಾಜಪ್ಪಮತ್ತು ಗೌರಮ್ಮ ದಂಪತಿಯ ಎರಡನೇ ಮಗನಾಗಿ ಜನಿಸಿದ್ದ ವಿಜಯ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಟ್ಟೂರು ಪಂಚನಹಳ್ಳಿಯ ಸರಕಾರಿ ಶಾಲೆಯಲ್ಲಿ ಪೂರೈಸಿದ್ದರು. ಪ್ರೌಢಶಿಕ್ಷಣವನ್ನು ಪಂಚನಹಳ್ಳಿ ಸಮೀಪದ ಅಣೆಗೆರೆಯಲ್ಲಿ ಪೂರೈಸಿದ್ದರು. ಪ್ರೌಢಶಿಕ್ಷಣದ ಬಳಿಕ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಪಿಯುಸಿ, ಪದವಿ ಶಿಕ್ಷಣವನ್ನು ಪೂರೈಸಿದ ಅವರು, ಬೆಂಗಳೂರಿನ ಆರ್ವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನೂ ಪಡೆದುಕೊಂಡಿದ್ದರು. ಮಧ್ಯಮ ವರ್ಗದ ಕುಟುಂಬದವರಾಗಿದ್ದ ಸಂಚಾರಿ ವಿಜಯ್ ಅವರ ತಂದೆ ಬಸವರಾಜಪ್ಪ ಪಂಚನಹಳ್ಳಿಯಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದರು. ತಾಯಿ ಗೌರಮ್ಮ ಪಂಚನಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿದ್ದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಹಳ್ಳಿ ಹುಡುಗ ವಿಜಯ್ ಹಳ್ಳಿಯಿಂದ ದಿಲ್ಲಿವರೆಗೂ ಸಾಧನೆ ಮಾಡುತ್ತಾನೆಂದು ಸ್ವತಃ ಪಂಚನಹಳ್ಳಿ ಗ್ರಾಮಸ್ಥರು ಕನಸಿನಲ್ಲೂ ಊಹಿಸಿರಲಿಲ್ಲ.
ಬಾಲ್ಯದಿಂದಲೂ ಸಂಗೀತ ಮತ್ತು ರಂಗಭೂಮಿ ಮೇಲೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಸಂಚಾರಿ ವಿಜಯ್, ಕಾಲೇಜು ದಿನಗಳಲ್ಲೇ ನಾಟಕ, ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದರು. ನಟನೆಯ ಅವಕಾಶ ಸಿಕ್ಕಾಗಲೆಲ್ಲಾ ತನ್ನಲ್ಲಿ ಅಡಗಿದ್ದ ಪ್ರತಿಭೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಳ್ಳುತ್ತಿದ್ದರು. ಕಾಲೇಜು ದಿನಗಳಲ್ಲೇ ರಂಗಭೂಮಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವಿಜಯ್ ಅವರು ತನ್ನ ಪ್ರತಿಭೆ, ನಟನಾ ಕೌಶಲ್ಯದಿಂದ ರಂಗಭೂಮಿ ಕ್ಷೇತ್ರದ ದಿಗ್ಗಜರ ಗಮನಸೆಳೆದಿದ್ದರು. ಚಲನಚಿತ್ರ ರಂಗದಲ್ಲೂ ಸಾಧನೆ ಮಾಡುವ ಹಂಬಲ, ಕನಸು ಕಂಡಿದ್ದರು.
ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಬಳಿಕ ಅಲ್ಲೇ ನೆಲೆಸಿದ್ದ ಅವರು, ಸಂಗೀತ ಮತ್ತು ರಂಗಭೂಮಿ ಕ್ಷೇತ್ರದ ಮೇಲಿನ ಆಸಕ್ತಿಯನ್ನು ಕಂಡು ನಟ ರಂಗಾಯಣ ರಘು ಅವರ ಪತ್ನಿ ಎನ್. ಮಂಗಳಾ ಮತ್ತು ಗಜಾನನ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಂಚಾರಿ ಎಂಬ ಹೆಸರಿನ ಥಿಯೇಟರ್ನಲ್ಲಿ ರಂಗಭೂಮಿ ಕಲಾವಿದನಾಗಿ ಪ್ರವೇಶವನ್ನು ಪಡೆದುಕೊಂಡರು. ಅಲ್ಲಿ ಹಂತಹಂತವಾಗಿ ತನ್ನಲ್ಲಿ ಅಡಗಿದ್ದ ನಟನೆಯ ಪ್ರತಿಭೆಯನ್ನು ಒರೆಗೆ ಹಚ್ಚಿದ್ದರ ಫಲವಾಗಿ ಕನ್ನಡ ಚಲನಚಿತ್ರರಂಗ ವಿಜಯ್ ಅವರನ್ನು ಕೈಬೀಸಿ ಕರೆದಿತ್ತು.
ಮೊಟ್ಟ ಮೊದಲ ಬಾರಿಗೆ ‘ರಂಗಪ್ಪಹೋಗ್ಬಿಟ್ಟ’ಸಿನೆಮಾ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದ ವಿಜಯ್, ತಾನು ಅಭಿನಯದ ವಿದ್ಯೆ ಕಲಿತ ಸಂಚಾರಿ ಥಿಯೇಟರ್ನ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡು ಸಂಚಾರಿ ವಿಜಯ್ ಎಂದೇ ಖ್ಯಾತರಾಗಿದ್ದರು. ‘ರಂಗಪ್ಪ ಹೋಗ್ಬಿಟ್ಟ’ ಸಿನೆಮಾದ ನಂತರ 2014ರಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ ‘ನಾನು ಅವನಲ್ಲ ಅವಳು’ ಸಿನೆಮಾ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರಾಜ್ಯದಾದ್ಯಂತ ಮನೆ ಮಾತಾಗಿದ್ದರು. ಈ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ಬಳಿಕ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ವಿಜಯ್ ಅವರನ್ನು ಕನ್ನಡ ಸಿನೆಮಾ ಕ್ಷೇತ್ರ ಕೈಹಿಡಿದು ನಡೆಸಿದ್ದು, ಬೇಡಿಕೆಯ ನಟನಾಗಿ ಬೆಳೆದ ಸಂಚಾರಿ ವಿಜಯ್ ದಾಸವಾಳ, ಪಾದರಸ, ಆ್ಯಕ್ಟ್-1978, ಹರಿವು, ಕೃಷ್ಣ ತುಳಸಿ ಸೇರಿದಂತೆ 25ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಸಿನಿರಸಿಕರ ಮನಗೆದ್ದಿದ್ದರು. ಇವರು ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
2014ರಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನರಾದ ಬಳಿಕ ಹುಟ್ಟೂರು ಪಂಚನಹಳ್ಳಿಯಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಮನೆಮಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹುಟ್ಟೂರಿನ ಸ್ನೇಹಿತರು ಸಂಚಾರಿ ವಿಜಯ್ ಅವರನ್ನು ಪಂಚನಹಳ್ಳಿ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದ್ದರು. ಹುಟ್ಟೂರಿನಲ್ಲಿ ಅಪಾರ ಬಂಧು ಬಳಗ ಮತ್ತು ಸ್ನೇಹಿತರನ್ನು ಹೊಂದಿದ್ದ ವಿಜಯ್, ಸಿನೆಮಾ ಕ್ಷೇತ್ರದಲ್ಲಿ ಈಗತಾನೆ ಪ್ರವರ್ಧಮಾನಕ್ಕೆ ಬರುತ್ತಾ ಕಾಫಿನಾಡಿನ ಕೀರ್ತಿಯನ್ನುಬೆಳಗುತ್ತಿದ್ದ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸೋಮವಾರ ಅಕಾಲಿಕ ಮರಣಕ್ಕೆ ತುತ್ತಾದ ಸುದ್ದಿಯಿಂದಾಗಿ ಹುಟ್ಟೂರಿನ ಜನರು ಬರಸಿಡಿಲು ಬಡಿದಂತೆ ನೀರವ ವೌನಕ್ಕೆ ಶರಣಾಗಿದ್ದಾರೆ. ತಮ್ಮೂರಿನ ಮಗನನ್ನು ಕಳೆದುಕೊಂಡ ಇಡೀ ಪಂಚನಹಳ್ಳಿ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.
ಸಂಚಾರಿ ವಿಜಯ್ ಅವರ ತಂದೆ-ತಾಯಿಕೆಲ ವರ್ಷಗಳ ಹಿಂದೆ ನಿಧನರಾಗಿದ್ದು, ವಿಜಯ್ ಸಹೋದರರೊಬ್ಬರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಸಂಚಾರಿ ವಿಜಯ್ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಬೆಂಗಳೂರಿನಲ್ಲಿ ತನ್ನ ಸಂಬಂಧಿಯ ಮನೆಯಲ್ಲಿ ನೆಲೆಸಿದ್ದರು. ಚಲನಚಿತ್ರರಂಗದಲ್ಲಿ ಭಾರೀ ಖ್ಯಾತಿ ಪಡೆದುಕೊಂಡಿದ್ದ ವಿಜಯ್, ತನ್ನ ಹುಟ್ಟೂರನ್ನೂ ಎಂದೂ ಮರೆತಿರಲಿಲ್ಲ. ಬಿಡುವಿಲ್ಲದ ಶೂಟಿಂಗ್ನ ಮಧ್ಯೆಯೂ ಅವರು ಹುಟ್ಟೂರಿಗೆ ಆಗಾಗ್ಗೆ ಬಂದು ಸ್ನೇಹಿತರು, ರಂಗಭೂಮಿ ಕಲಾವಿದರೊಂದಿಗೆ ಕಾಲ ಕಳೆಯುತ್ತಿದ್ದರು. ತಮ್ಮೂರಿನ ಜನರಿಗೆ ಕೈಲಾದ ಸಹಾಯವನ್ನೂ ಮಾಡುತ್ತಿದ್ದರು. ಸರಳ ವ್ಯಕ್ತಿತ್ವದ ವಿಜಯ್ ಸಿನೆಮಾ ರಂಗದಲ್ಲಿ ಇನ್ನೂ ಹೆಚ್ಚಿನ ಖ್ಯಾತಿಗಳಿಸುತ್ತಿದ್ದ ಅಪ್ಪಟ ರಂಗಪ್ರತಿಭೆ. ಅವರಿಗೆ ಸಿಕ್ಕ ಅವಕಾಶಗಳು ಕಡಿಮೆ. ದೊರೆತ ಅವಕಾಶಗಳಲ್ಲೇ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದವರು. ಅವರ ಅಕಾಲಿಕ ನಿಧನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಕಿರಣ್
ವಿಜಯ್ ಸ್ನೇಹಿತ, ರಂಗಭೂಮಿ ಕಲಾವಿದ, ಕಡೂರು
► ವಿಜಯ್ ವ್ಯಾಸಂಗ ಮಾಡಿದ್ದ ಸರಕಾರಿ ಶಾಲೆ
► ಪಂಚನಹಳ್ಳಿ