ದೇಶಾದ್ಯಂತ ವಾಹನಗಳಿಗೆ ಏಕರೂಪದ ‘ಪಿಯುಸಿ’ ಪ್ರಮಾಣಪತ್ರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜೂ.17: ದೇಶಾದ್ಯಂತ ಎಲ್ಲಾ ವಾಹನಗಳಿಗೆ ಏಕರೂಪದ ಪಿಯುಸಿ(ಪೊಲ್ಯೂಷನ್ ಅಂಡರ್ ಕಂಟ್ರೋಲ್) ಪ್ರಮಾಣಪತ್ರ ಜಾರಿಗೊಳಿಸುವ ಮತ್ತು ಪಿಯುಸಿ ದತ್ತಾಂಶಕೋಶವನ್ನು ರಾಷ್ಟ್ರೀಯ ನೋಂದಣಿಗೆ ಸಂಪರ್ಕಿಸುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಅಧಿಸೂಚನೆ ಜಾರಿಗೊಳಿಸಿದೆ.
1989ರ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ಮಾರ್ಪಾಡು ತಂದ ಬಳಿಕ ಮಾಲಿನ್ಯ ನಿಯಂತ್ರಣದ ಪ್ರಮಾಣ ಪತ್ರ ಪಡೆಯುವ ಪಿಯುಸಿ ಫಾರ್ಮ್ ನಲ್ಲಿ ಕ್ಯೂಆರ್ ಕೋಡ್ ಮುದ್ರಿತವಾಗಲಿದೆ ಮತ್ತು ಇದರಲ್ಲಿ ವಾಹನದ ಇಂಜಿನ್ ನಂಬರ್ ಮತ್ತು ಚೇಸಿಸ್ ನಂಬರ್ , ಮಾಲಕರ ಮೊಬೈಲ್ ನಂಬರ್, ಹೆಸರು ಮತ್ತು ವಿಳಾಸ ಹಾಗೂ ಮಾಲಿನ್ಯ ಪ್ರಮಾಣದ ಕುರಿತ ವಿವರಗಳಿರುತ್ತವೆ. ಮೊಬೈಲ್ ನಂಬರ್ ಒದಗಿಸುವುದು ಕಡ್ಡಾಯವಾಗಿದ್ದು ಈ ನಂಬರ್ ಗೆ ಪ್ರಮಾಣಪತ್ರದ ದೃಢೀಕರಣ, ಶುಲ್ಕದ ಬಗ್ಗೆ ಸಂದೇಶ ರವಾನೆಯಾಗುತ್ತದೆ.
ಇಂಗಾಲ ಹೊರಸೂಸುವ ಪ್ರಮಾಣ ಗರಿಷ್ಟ ಅನುಮತಿಸಬಹುದಾದ ಪ್ರಮಾಣಕ್ಕಿಂತ ಹೆಚ್ಚಿದ್ದರೆ ಆಗ ವಾಹನದ ಮಾಲಿಕರಿಗೆ ನಿರಾಕರಣ ಪತ್ರ ನೀಡಲಾಗುತ್ತದೆ. ವಾಹನವು ಇಂಗಾಲ ಹೊರಸೂಸುವಿಕೆ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ಅಧಿಕಾರಿಗಳಿಗೆ ಮನದಟ್ಟಾದರೆ, ಆಗ ವಾಹನವನ್ನು ದೃಢೀಕೃತ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಹಾಜರುಪಡಿಸುವಂತೆ ವಾಹನದ ಮಾಲಕ ಅಥವಾ ಚಾಲಕರಿಗೆ ಸೂಚಿಸಲಾಗುತ್ತದೆ. ಇದಕ್ಕೆ ತಪ್ಪಿದರೆ ವಾಹನದ ಚಾಲಕರಿಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ ಪಿಯುಸಿ ಪ್ರಮಾಣಪತ್ರ ಪಡೆಯುವವರೆಗೆ ಆ ವಾಹನದ ನೋಂದಣಿ ಪ್ರಮಾಣಪತ್ರವನ್ನು ಅಮಾನತಿನಲ್ಲಿ ಇಡಬಹುದು. ಮಾಹಿತಿ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯಿಂದ ವಾಯು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಗುರುತಿಸಲು ಸುಲಭವಾಗುತ್ತದೆ ಎಂದು ಇಲಾಖೆ ಹೇಳಿದೆ.