varthabharthi


ಮುಂಬೈ ಸ್ವಗತ

ಮುಂಬೈ ಶಹರದಲ್ಲಿ ‘ಮಂಗಳೂರು ಸ್ಟೋರ್ಸ್‌’

ವಾರ್ತಾ ಭಾರತಿ : 18 Jun, 2021
ದಯಾನಂದ ಸಾಲ್ಯಾನ್

ಪ್ರಾರಂಭದ ದಿನಗಳಲ್ಲಿ ವರ್ಷಕ್ಕೊಮ್ಮೆ ಊರಿಗೆ ಹೋಗಿ ಹಿಂದಿರುಗುವಾಗ ಅಲ್ಲಿಂದ ಹಲಸಿನ ಹಣ್ಣು, ಉಪ್ಪಡ್ ಪಚ್ಚಿರ್, ಬೆಲ್ಲ, ಅಕ್ಕಿ, ತೆಂಗಿನಕಾಯಿ, ಒಣಮೀನು, ಕೋರಿ ರೊಟ್ಟಿ ಹೀಗೆ ತಮ್ಮವರು ಕೊಟ್ಟ ಪ್ರೀತಿಯನ್ನು ಕಟ್ಟಿಕೊಂಡು ಮುಂಬೈಗೆ ಆಗಮಿಸಿ, ಇಲ್ಲಿ ತಮ್ಮ ಆತ್ಮೀಯರು, ಸಂಬಂಧಿಕರಿಗೆ ಹಂಚುವುದರಲ್ಲೇ ಒಂದೆರಡು ವಾರ ಸಾಗುತ್ತಿತ್ತು. ಬಹುಶಃ ಈ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಮುಂಬೈಯಲ್ಲಿ ‘ಮಂಗಳೂರು ಸ್ಟೋರ್ಸ್‌’ ಉದಯಕ್ಕೆ ಕಾರಣವಾಗಿದ್ದಿರಬಹುದು. ಕಳೆದ ಶತಮಾನದ ಸುಮಾರು 50-60ರ ದಶಕಗಳಲ್ಲಿ ಇಲ್ಲಿ ಮಂಗಳೂರಿನ ಸಾಮಗ್ರಿಗಳನ್ನೊಳಗೊಂಡ ಅಂಗಡಿಗಳು ಜನ್ಮತಾಳಿರಬಹುದೆೆಂದು ಹಿರಿಯರ ಅಭಿಮತ.



ಸರ್ವರಿಗೂ ಆಶ್ರಯ ನೀಡುವ ಮುಂಬೈ ನಗರ ಯಾರನ್ನೂ ನಿರಾಸೆಗೊಳಿಸಿಲ್ಲ. ಒಂದೊಮ್ಮೆ ಮರಾಠಿ, ಕನ್ನಡ, ಗುಜರಾತಿ ಭಾಷೆಗಳನ್ನು ಆಡಳಿತ ಭಾಷೆಯಾಗಿಸಿಕೊಂಡಿದ್ದ ಮುಂಬಾಪುರಿ ಕ್ರಮೇಣ ಭಾಷಾವಾರು ಪ್ರಾಂತ ರಚನೆಗೊಂಡ ನಂತರದಿಂದ ಭಾಷೆಗಳ ನಡುವೆ ರಾಜಕೀಯ ಅಟ್ಟಹಾಸಗೈದುದು ಇತಿಹಾಸ ಮಾತ್ರವಲ್ಲ; ವರ್ತಮಾನವೂ ಹೌದು. ಎಲ್ಲ ಪಲ್ಲಟಗಳ ನಡುವೆ ಮುಂಬೈ ಕನ್ನಡಿಗರು ತಮ್ಮ ಅಸ್ಮಿತೆಯನ್ನು, ತಮ್ಮತನವನ್ನು ಒಂದಲ್ಲ ಒಂದು ರೀತಿಯಿಂದ ಉಳಿಸಿಕೊಂಡು ಬಂದಿದ್ದಾರೆ; ಬರುತ್ತಿದ್ದಾರೆ. ನಾವು ಇಲ್ಲಿನ ಜನರ ತಿಂಡಿ-ತಿನಿಸು, ಊಟ ಇತ್ಯಾದಿಗಳ ಮೇಲೆ ಸಣ್ಣ ಮೇಲ್ನೋಟ ಹರಿಸಿದರೂ ಸಾಕು, ಅದು ಅವಿಭಜಿತ ದಕ್ಷಿಣ ಕನ್ನಡದ ಸಾಂಸ್ಕೃತಿಕ ಬದುಕನ್ನು ಕಾಪಿಟ್ಟುಕೊಂಡು ಬಂದಿರುವ ಕತೆಯನ್ನು ನಮಗೆ ಹೇಳುತ್ತದೆ.

ಸುಮಾರು ನೂರೈವತ್ತು ಇನ್ನೂರು ವರ್ಷಗಳ ಹಿಂದೆ ಮುಂಬೈಗೆ ಬದುಕನರಸಿ ಬಂದವರು ಅವಿಭಜಿತ ದಕ್ಷಿಣಕನ್ನಡದ ಧೀರ ಹಾಗೂ ಉದಾರ ಮನಸ್ಸಿನವರು ನಮ್ಮ ಹಿರಿಯರು. ಆ ತ್ಯಾಗ ಮನೋಭಾವದ ಹಿರಿಯರ ಮೂರನೇ ತಲೆಮಾರು ಇಂದು ಈ ಮುಂಬಾಪುರಿಯಲ್ಲಿರುವವರು. ಆ ನಂತರದ ವರ್ಷಗಳಲ್ಲಿ ಮುಂಬೈಗಾಗಮಿಸಿದ ತುಳು-ಕನ್ನಡಿಗರು ತಮ್ಮ ಹೊಟ್ಟೆ, ಬಟ್ಟೆಗೆ ದಾರಿ ಮಾಡಿಕೊಂಡಿರುವುದರ ಜೊತೆಜೊತೆಗೆ ತಮ್ಮ ಸಾಂಸ್ಕೃತಿಕ ಬದುಕನ್ನೂ ಬಾಳುತ್ತಾ ಬಂದವರು. ಪ್ರಾರಂಭದ ದಿನಗಳಲ್ಲಿ ವರ್ಷಕ್ಕೊಮ್ಮೆ ಊರಿಗೆ ಹೋಗಿ ಹಿಂದಿರುಗುವಾಗ ಅಲ್ಲಿಂದ ಹಲಸಿನ ಹಣ್ಣು, ಉಪ್ಪಡ್ ಪಚ್ಚಿರ್, ಬೆಲ್ಲ, ಅಕ್ಕಿ, ತೆಂಗಿನಕಾಯಿ, ಒಣಮೀನು, ಕೋರಿ ರೊಟ್ಟಿ ಹೀಗೆ ತಮ್ಮವರು ಕೊಟ್ಟ ಪ್ರೀತಿಯನ್ನು ಕಟ್ಟಿಕೊಂಡು ಮುಂಬೈಗೆ ಆಗಮಿಸಿ, ಇಲ್ಲಿ ತಮ್ಮ ಆತ್ಮೀಯರು, ಸಂಬಂಧಿಕರಿಗೆ ಹಂಚುವುದರಲ್ಲೇ ಒಂದೆರಡು ವಾರ ಸಾಗುತ್ತಿತ್ತು. ಬಹುಶಃ ಈ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಮುಂಬೈಯಲ್ಲಿ ‘ಮಂಗಳೂರು ಸ್ಟೋರ್ಸ್‌’ ಉದಯಕ್ಕೆ ಕಾರಣವಾಗಿದ್ದಿರಬಹುದು.

ಕಳೆದ ಶತಮಾನದ ಸುಮಾರು 50-60ರ ದಶಕಗಳಲ್ಲಿ ಇಲ್ಲಿ ಮಂಗಳೂರಿನ ಸಾಮಗ್ರಿಗಳನ್ನೊಳಗೊಂಡ ಅಂಗಡಿಗಳು ಜನ್ಮತಾಳಿರಬಹುದೆೆಂದು ಹಿರಿಯರ ಅಭಿಮತ. ಕೆಲವರು ಅಂದಿನ ದಿನಗಳಲ್ಲಿ ಊರಿನಿಂದ ತರುತ್ತಿದ್ದ ಸಾಮಗ್ರಿಗಳನ್ನು ಸ್ವಲ್ಪಹೆಚ್ಚಾಗಿ ತರುತ್ತಿದ್ದರು. ಮನೆಯಿಂದಲೇ ತಮ್ಮ ಊರಿನ ಪರಿಚಿತರಿಗೆ ಊರಿನಿಂದ ಇಂತಹ ಸಾಮಗ್ರಿಗಳನ್ನು ತಂದಿದ್ದೇವೆ, ತಮಗೆ ಬೇಕಾದರೆ ಹೇಳಿ ಎಂದು ಮನೆಯಿಂದಲೇ ವ್ಯವಹಾರ ಮಾಡುತ್ತಿದ್ದರು. ಮುಂದೆ ವ್ಯವಸ್ಥಿತವಾಗಿ ಅಂಗಡಿ ತೆರೆದು ಮಂಗಳೂರಿನ ವಿವಿಧ ವಸ್ತುಗಳು ದೊರೆಯುವಂತೆ ಮಾಡುತ್ತಿದ್ದರು. ಹಳೆಯ ಮಂಗಳೂರು ಸ್ಟೋರ್‌ಗಳಲ್ಲಿ ಇಂದೂ ಕೆಲವು ಜೀವಂತವಾಗಿ ಇವೆ; ಉಳಿದವನ್ನು ಈಗಿನ ನವಪೀಳಿಗೆಯ ನಿರಾಸಕ್ತಿ ಹಾಗೂ ನಡೆಸುವವರಿಲ್ಲದ ಕಾರಣ ಹಿರಿಯರು ವಾಣಿ/ಮಾರ್ವಾಡಿಗಳಿಗೆ ಮಾರಿದ್ದಾರೆ. ಈಗ ಕೇವಲ 5-6 ಬೃಹತ್ ಮಂಗಳೂರು ಸ್ಟೋರ್ಸ್‌ ಇದ್ದರೆ, ಚಿಕ್ಕಪುಟ್ಟ ಅಂಗಡಿಗಳು ಸುಮಾರು 800, 900ರಷ್ಟಿರಬಹುದು ಎಂದು ಹಿರಿಯ ಮಂಗಳೂರು ಅಂಗಡಿ ಮಾಲಕರು ಮಾಹಿತಿ ನೀಡುತ್ತಾರೆ.

ಸುಮಾರು ಮೂವತ್ತೆಂಟು ವರ್ಷಗಳ ಹಿಂದೆ ಮುಲುಂಡ್ ಪರಿಸರದಲ್ಲಿ ದಯಾನಂದ ಶೆಣೈ ಅವರು ಸ್ಥಾಪಿಸಿದ ‘ಸುದರ್ಶನ್ ಮಂಗಳೂರು ಸ್ಟೋರ್ಸ್‌’ ನ್ನು ಈಗ ಮುಂದುವರಿಸುತ್ತಿರುವವರು ದಿವಾಕರ ಶೆಣೈ. ಚಿಕ್ಕಪುಟ್ಟ ಅಂಗಡಿಗಳಿಗೆ ಇಲ್ಲಿಂದ ಎಲ್ಲಾ ರೀತಿಯ ಸಾಮಗ್ರಿಗಳು ಪ್ರತಿದಿನ ಸರಬರಾಜಾಗುತ್ತಿವೆ. ಮಾತ್ರವಲ್ಲದೆ ಮುಖ್ಯವಾಗಿ ಕ್ಯಾಟರಿಂಗ್ ನಡೆಸುವವರು ಇಲ್ಲಿಂದ ಅಕ್ಕಿ ಮಾತ್ರವಲ್ಲದೆ, ಸಿಹಿತಿಂಡಿಗಳನ್ನೂ ಕೊಂಡುಕೊಳ್ಳುತ್ತಿದ್ದಾರೆ. ಊರಿನ ಸಿಹಿತಿಂಡಿಗಳನ್ನು ಮಾಡುವ ಇವರದ್ದೇ ಆದ ಫ್ಯಾಕ್ಟರಿಯೊಂದು ಮುಂಬೈ ಹೊರವಲಯ ಮಾಪಾದಲ್ಲಿ ಇದೆ. ಮೂಲತಃ ಸಚ್ಚೇರಿಪೇಟೆಯವರಾದ ಇವರು ಊರಿನ ಓರ್ವ ಏಜೆಂಟ್‌ನ ಮೂಲಕ ಸಾಮಗ್ರಿಗಳನ್ನು ಅಲ್ಲಿಂದ ಇಲ್ಲಿಗೆ ತರುತ್ತಿದ್ದಾರೆ.

ಡೊಂಬಿವಿಲಿಯಲ್ಲಿರುವ ‘ಕಾಮತ್ ಸ್ಟೋರ್ಸ್‌’ ಸುಮಾರು 52 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಪ್ರಾರಂಭದಲ್ಲಿ ಕಿರಾಣಿ ಅಂಗಡಿಯಾಗಿದ್ದ ಇದು ಡೊಂಬಿವಿಲಿಯಲ್ಲಿ ತುಳು-ಕನ್ನಡಿಗರ ಸಂಖ್ಯೆ ಬೆಳೆಯುತ್ತಿರುವಂತೆ ಅವರ ದಿನನಿತ್ಯದ ಬೇಡಿಕೆಯಂತೆ 1982ರಲ್ಲಿ ‘ಮಂಗಳೂರು ಸ್ಟೋರ್ಸ್‌’ ಆಗಿ ಪರಿವರ್ತಿಸಲಾಯಿತು. ‘‘ಇತ್ತೀಚಿನ ಸುಮಾರು ಒಂದೂವರೆ ವರ್ಷಗಳಿಂದ ಲಾಕ್‌ಡೌನ್ ಸಮಸ್ಯೆಯಿಂದಾಗಿ ನಾವು ತುಂಬಾ ಸಂಕಷ್ಟ ಎದುರಿಸುತ್ತಿದ್ದೇವೆ. ಊರಿನಲ್ಲಿ ನಾಲ್ಕೈದು ಜನರು ಸಂಗ್ರಹಿಸುವ ಸಾಮಗ್ರಿಗಳನ್ನು ಒಂದೆಡೆ ಸೇರಿಸಿ ಟ್ರಕ್ಕುಗಳ ಮೂಲಕ ತರಿಸುತ್ತಿದ್ದೇವೆ’’ ಎಂದು ವಿವರಿಸುತ್ತಾರೆ ಕಾಮತ್ ಸ್ಟೋರ್ಸ್‌ನ ದೇವದಾಸ್ ಭಟ್. ಡೊಂಬಿವಿಲಿಯ ಇನ್ನೊಂದು ಅಂಗಡಿ ‘ಸಾಯಿನಾಥ್ ಮಂಗಳೂರು ಸ್ಟೋರ್ಸ್‌’. ಇಲ್ಲಿಗೆ ಸಾಮಗ್ರಿಗಳನ್ನು ಶೇ.50 ನೇರವಾಗಿ ಹಾಗೂ ಶೇ.50 ಇಲ್ಲಿನ ಏಜೆಂಟರುಗಳಿಂದ ತರಿಸುತ್ತಾರೆ. ‘‘ಇನಿತ ಜೋಕ್ಲೆಗು ಉಪ್ಪಡ್ ಪಚ್ಚೀರ್, ದೋಸೆ ಮಾತ ಓಲು ಜಪ್ಪುಂಡು’’ ಎಂದು ಹೇಳುವ ದಾಮೋದರ್ ಕರ್ಕೇರ ಮೂಲತಃ ಮಂಗಳೂರಿನ ವಾಮಂಜೂರಿನವರು.

ಮೂಲತಃ ಮಂಜೇಶ್ವರದವರಾದ ಅಮೃತ್ ಕಿಣಿ ಕೇರ್‌ವಾಡಿಯಲ್ಲಿ ನಡೆಸುತ್ತಿರುವ ‘ಬಾಂದ್ರಾ ಮಂಗಳೂರು ಸ್ಟೋರ್ಸ್‌’ ಸುಮಾರು 60 ವರ್ಷಗಳಿಂದ ಮಂಗಳೂರಿನ ವಿವಿಧ ವಸ್ತುಗಳನ್ನು ಇಲ್ಲಿನ ತುಳು-ಕನ್ನಡಿಗ ಗ್ರಾಹಕರಿಗೆ ನೀಡುತ್ತಾ ಬಂದಿದೆ. ಚರ್ಚ್‌ಗೇಟ್‌ನಿಂದ ವಿರಾರ್ ತನಕದ ನೂರಾರು ಚಿಕ್ಕಪುಟ್ಟ ‘ಮಂಗಳೂರು ಸ್ಟೋರ್ಸ್‌’ಗಳಿಗೆ ಇಲ್ಲಿಂದ ವಸ್ತುಗಳು ರವಾನೆಯಾಗುತ್ತಿರುತ್ತವೆ. ಊರಿನಲ್ಲಿರುವ ಸಂಬಂಧಿ ದಿನೇಶ್ ಪೈ ಮುಂಬೈಗೆ ಸಾಮಗ್ರಿಗಳನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುಮಾರು 60 ವರ್ಷಗಳ ಹಿಂದೆ (1973-74) ಅಸ್ತಿತ್ವಕ್ಕೆ ಬಂದಿರುವ ಕಲೀನಾದಲ್ಲಿರುವ ‘ವೈಭವ್ ಮಂಗಳೂರು ಸ್ಟೋರ್ಸ್‌’ ವಿಶಿಷ್ಟತೆಯನ್ನು ಹೊಂದಿರುವಂತಹದ್ದು. ಇಗ್ನೇಷಿಯಸ್ ಡಿ’ಸೋಜಾ ಅವರು ಸ್ಥಾಪಿಸಿದ, ಈಗ ಅವರ ಮಗ ಆಲ್ವಿನ್ ಡಿ’ಸೋಜಾ ನಡೆಸುತ್ತಿರುವ ಈ ಅಂಗಡಿಯಲ್ಲಿ ಮಂಗಳೂರಿನ ಎಲ್ಲಾ ರೀತಿಯ ದವಸ ಧಾನ್ಯಗಳಿಂದ ಹಿಡಿದು ತಿಂಡಿ-ತಿನಿಸುಗಳ ತನಕ ವಿವಿಧ ಸಾಮಗ್ರಿಗಳು ದೊರೆಯುತ್ತವೆ. ಲೋನಾವಾಲ ಕಪೋಲಿ, ಕರ್ಜತ್, ಅಲಿಬಾಗ್ ಮೊದಲಾದೆಡೆಗಳಿಗೆ ಇಲ್ಲಿಂದ ಸಾಮಗ್ರಿಗಳು ಸಾಗುತ್ತಿವೆ. ಸ್ವಂತ ವಾಹನ ವ್ಯವಸ್ಥೆ ಹೊಂದಿರುವ ಈ ಸಂಸ್ಥೆ ಊರಿನ ತಿಂಡಿ-ತಿನಿಸುಗಳ ಉತ್ಪಾದನೆಯನ್ನು ಪನ್ವೇಲ್‌ನಲ್ಲಿರುವ ತಮ್ಮದೇ ಆದ ಫ್ಯಾಕ್ಟರಿಯಲ್ಲಿ ಮಾಡುತ್ತದೆ. ಅಲ್ಲಿನ ಉಸ್ತುವಾರಿಯನ್ನು ಆಲ್ವಿನ್ ಅವರ ಸಹೋದರ ವಿಲ್ಸನ್ ಡಿ’ಸೋಜಾ ನೋಡಿಕೊಳ್ಳುತ್ತಿದ್ದಾರೆ. ಬಾಂದ್ರಾ ಹಾಗೂ ಮಹೀಮ್ ಚರ್ಚುಗಳ ಹಬ್ಬದ ಸಂದರ್ಭಗಳಲ್ಲಿ ಇಲ್ಲಿಂದ ಬೃಹತ್ ಪ್ರಮಾಣದಲ್ಲಿ ಮಂಗಳೂರಿನ ತಿಂಡಿ-ತಿನಿಸುಗಳು ರವಾನೆಯಾಗುತ್ತವೆ. ಪ್ರತಿ ರವಿವಾರದ ಪ್ರಾರ್ಥನೆ ಸಂದರ್ಭ ‘ಆಶಾದೀಪ ಮಹಿಳಾ ಮಂಡಲ’ದವರು ಭಕ್ತಾದಿಗಳಿಗೆ ಧರ್ಮಾರ್ಥವಾಗಿ ಹಂಚುವ ತಿಂಡಿ-ತಿನಿಸುಗಳು ಕೂಡಾ ಲಾಭವನ್ನು ಇಟ್ಟುಕೊಳ್ಳದೆ ಕಡಿಮೆ ದರದಲ್ಲಿ ವೈಭವ್ ಮಂಗಳೂರು ಸ್ಟೋರ್ಸ್‌ನಿಂದಲೇ ಸಾಗುತ್ತದೆ. ತುಳು-ಕನ್ನಡಿಗರ ಮದುವೆ, ಹುಟ್ಟುಹಬ್ಬ, ಮಕ್ಕಳ ನಾಮಕರಣ, ಸೀಮಂತ, ಅಯ್ಯಪ್ಪಪೂಜೆ ಇತ್ಯಾದಿಗಳಿಗೆ ಮುಖ್ಯವಾಗಿ ಮುಂಬೈನ ಪ್ರತಿಷ್ಠಿತ ಕ್ಯಾಟರಿಂಗ್ ನಡೆಸುವವರು ಕೂಡಾ ಇಲ್ಲಿಂದ ಊರಿನ ಸಾಮಗ್ರಿಗಳನ್ನು, ತಿಂಡಿ-ತಿನಿಸುಗಳನ್ನು ಕೊಂಡು ಹೋಗುತ್ತಿದ್ದಾರೆ. ಅಯ್ಯಪ್ಪಪೂಜೆ ಸಂದರ್ಭ ಪ್ರಸಾದವಾಗಿ ನೀಡುವ ಬೂಂದಿ ಲಾಡು ಹಾಗೂ ಹೋಳಿಗೆ ಇಲ್ಲಿನ ಬಹುಮುಖ್ಯ ಬೇಡಿಕೆಯ ವಸ್ತು.

ಬಾಂದ್ರಾ ಪಶ್ಚಿಮದ ಹಿಲ್‌ರೋಡ್‌ನಲ್ಲಿರುವ ‘ಮಾಹಿಮ್ ಮಂಗಳೂರು ಸ್ಟೋರ್ಸ್‌’ ಇನ್ನೊಂದು ಮಹತ್ವದ ಮಂಗಳೂರು ಅಂಗಡಿ ಆಗಿದೆ. ಇದರ ಮಾಲಕರಾದ ಮೂರ್ತಿ ಎನ್ನುವವರು ಮೂಲತಃ ಅವಿಭಜಿತ ದಕ್ಷಿಣ ಕನ್ನಡದವರು. ಇಲ್ಲಿನ ವಕೋಲದಲ್ಲಿ ಮಂಗಳೂರು ಸ್ಟೋರ್ಸ್‌ ನಡೆಸುತ್ತಿದ್ದ ಸುರತ್ಕಲ್‌ನ ಆ್ಯಂಡ್ರಿ ಡಿ’ಸೋಜಾ ಅವರದ್ದು ಹಳೆಯ ಅಂಗಡಿಗಳಲ್ಲಿ ಒಂದು. ಇತ್ತೀಚೆಗೆ ಮೂರು ವರ್ಷಗಳ ಹಿಂದೆ ಅಂಗಡಿಯನ್ನು ಮಾರಿ ಊರಿನಲ್ಲಿ ನೆಲೆಸಿರುವ ಆ್ಯಂಡ್ರಿ ಅವರು ಈಗ ಕೊಂಕಣಿ ಚಲನಚಿತ್ರ ನಿರ್ಮಾಪಕರಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿನ ಚಕಾಲದಲ್ಲಿ ಮಂಗಳೂರು ಸ್ಟೋರ್ಸ್‌ನ್ನು ಕಳೆದ ಸುಮಾರು ನಲವತ್ತು ವರ್ಷಗಳಿಂದ ನಡೆಸುತ್ತಿರುವ ಗುಣಪಾಲ್ ಶೆಟ್ಟಿ ಮೂಲತಃ ಕುಲಶೇಖರದವರು. ಪ್ರಾರಂಭದಲ್ಲಿ ಕಾರ್ಕಳದಿಂದ ಸಾಮಗ್ರಿಗಳನ್ನು ತರಿಸುತ್ತಿದ್ದ ಇವರು ಈಗ ಏಜೆಂಟರನ್ನು ಅವಲಂಬಿಸಿದ್ದಾರೆ.

ಸುಮಾರು 50 ವರ್ಷಗಳ ಹಿಂದೆ (1970) ಅಸ್ತಿತ್ವಕ್ಕೆ ಬಂದಿರುವ ‘ವಿಶ್ವಾಸ್ ಮಂಗಳೂರು ಸ್ಟೋರ್ಸ್‌’ನ್ನು ಕಟ್ಟಿ ಬೆಳೆಸಿದವರು ಬಾಲಕೃಷ್ಣ ಯಲ್ಲಪ್ಪಶೆಟ್ಟಿ. ಅವರ ಕಾಲಾನಂತರ ಅವರ ಮಗ ವಿಜೇತ್ ಬಾಲಕೃಷ್ಣ ಶೆಟ್ಟಿ ಹಾಗೂ ಅವರ ಪತ್ನಿ ವಿನೋದಾ ಬಾಲಕೃಷ್ಣ ಶೆಟ್ಟಿ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಸಾಕಿನಾಕಾ ಪೈಪ್‌ಲೈನ್‌ನ ಬಳಿ ಇರುವ ಈ ಅಂಗಡಿಯಿಂದ ಮಂಗಳೂರಿನಿಂದ ಬರುವ ಆಯುರ್ವೇದ ಔಷಧಿಗಳಾದ ವಾಯಿದ ಮಾತ್ರೆ, ವಾತದ ಎಣ್ಣೆ, ಮಕ್ಕಳಿಗೆ ಕಣ್ಣಿನ ಎಣ್ಣೆ, ಚಿನ್ನೆ ಮಾತ್ರೆಗಳು ಹಾಗೂ ಹಿಂಗಾರ, ಮಲ್ಲಿಗೆ ಹೂಗಳು ಬಹುಬೇಡಿಕೆಯಿಂದ ಖರೀದಿಸಲ್ಪಡುತ್ತವೆ.

‘ಬಾಂದ್ರಾ ವೆರೈಟಿ ಮಂಗಳೂರು ಸ್ಟೋರ್ಸ್‌’ ಹಾಗೂ ‘ಸುದರ್ಶನ್ ಮಂಗಳೂರು ಸ್ಟೋರ್ಸ್‌’ಗಳು ಹಳೆಯ ಹಾಗೂ ಮಹತ್ವದ ಮಂಗಳೂರು ಅಂಗಡಿಗಳು. ಇಲ್ಲಿಂದ ದಿನನಿತ್ಯ ನೂರಾರು ಸಣ್ಣಪುಟ್ಟ ಅಂಗಡಿಗಳಿಗೆ ಸಾಮಗ್ರಿಗಳ ಸರಬರಾಜು ಆಗುತ್ತಿರುತ್ತದೆ.

ಸುಮಾರು 65 ವರ್ಷಗಳಿಂದ ಮಾಜಿವಾಡದಲ್ಲಿ ನೆಲೆ ನಿಂತಿರುವ ನಾಗೇಶ್ ರಾಮ್ ಶೆಟ್ಟಿ ಅವರು ಪ್ರಾರಂಭದಲ್ಲಿ ವಡಾಪಾವ್ ಅಂಗಡಿಯನ್ನು ತೆರೆದು ಆನಂತರ ‘ಮಂಗಳೂರು ಸ್ಟೋರ್ಸ್‌’ನ್ನು ತೆರೆದರು. ಇವರ ಇಡ್ಲಿ, ದೋಸೆ, ನೀರ್‌ದೋಸೆ, ಮುಂಬೈಯಾದ್ಯಂತ ಮನ್ನಣೆಗೆ ಪಾತ್ರವಾಗಿವೆೆ. ಕೆಲವು ಹೊಟೇಲ್ ಗಳಿಗೂ, ಹುಟ್ಟುಹಬ್ಬ ಮುಂತಾದ ಸಣ್ಣಪುಟ್ಟ ಪಾರ್ಟಿಗಳಿಗೂ ಇಲ್ಲಿಂದ ಇಡ್ಲಿ, ದೋಸೆ, ನೀರ್‌ದೋಸೆಗಳು ಸರಬರಾಜು ಆಗುತ್ತಿವೆ. ಕಳೆದ ವರ್ಷದ ಲಾಕ್ ಡೌನ್‌ನಲ್ಲಿ ತಮ್ಮ ಪರಿಸರದಲ್ಲಿ ಥಾಣೆಯ ‘ಘೋಡ್ ಬಂದರ್’ ವರೆಗಿನ ತುಳು- ಕನ್ನಡಿಗರ ಮನೆಗಳಿಗೆ ಕಡಿಮೆ ದರದಲ್ಲಿ, ವಿತರಣಾ ವೆಚ್ಚವನ್ನೂ ತೆಗೆದುಕೊಳ್ಳದೆ ಸಹಕರಿಸಿದ್ದಾರೆ.

ಕಳೆದ ಸುಮಾರು ಮೂವತ್ತು ವರ್ಷಗಳಿಂದ ಕಾಂನ್ಜೂರು (ಪೂರ್ವ) ರೈಲು ನಿಲ್ದಾಣದ ಬಳಿ ಇರುವ ‘ಸುದರ್ಶನ್ ಮಂಗಳೂರು ಸ್ಟೋರ್ಸ್‌’ ಅಲ್ಲಿನ ಪರಿಸರದಲ್ಲಿ ಜನಪ್ರಿಯವಾಗಿದೆ. ಮೂಲತ ಪಡುಬಿದ್ರಿ ಪಲಿಮಾರ್‌ನವರಾದ ಮೋಹನ್ ಜಿ. ಕೋಟ್ಯಾನ್ ಹಾಗೂ ಅವರ ಪತ್ನಿ ನಡೆಸುತ್ತಿರುವ ಈ ಅಂಗಡಿಯಲ್ಲಿ ಕೆಲವೊಂದು ಸಾಮಗ್ರಿಗಳನ್ನು ಈಗ ಬೇಡಿಕೆಯ ಮೇರೆಗೆ ತರಿಸುತ್ತಿದ್ದಾರೆ. ಕಾಂನ್ಜೂರು ಮಾರ್ಗ (ಪಶ್ಚಿಮ)ದಲ್ಲಿದ್ದ ‘ನಿಧಿ ಮಂಗಳೂರು ಸ್ಟೋರ್ಸ್‌’ ಹಿಂದೆ ಈ ಪರಿಸರದಲ್ಲಿ ಬಹುಬೇಡಿಕೆಯ ಅಂಗಡಿಯಾಗಿತ್ತು. ಕಾರಣಾಂತರಗಳಿಂದ ಅದು ಈಗ ಮುಚ್ಚಲ್ಪಟ್ಟಿದೆ.

ಕಳೆದ ಶತಮಾನದ ತೊಂಭತ್ತರ ದಶಕದಲ್ಲಿ ಜನ್ಮತಾಳಿದ ‘ವಿಜಯಜ್ಯೋತಿ ಸ್ಟೋರ್ಸ್‌’ ಡೊಂಬಿವಿಲಿ ಪಶ್ಚಿಮದ ರೈಲ್ವೆ ನಿಲ್ದಾಣದ ಬಳಿಯಿದೆ. ಡೊಂಬಿವಿಲಿ ಪಶ್ಚಿಮದಲ್ಲಿರುವ ಇನ್ನೊಂದು ಮಹತ್ವದ ಮಂಗಳೂರು ಸ್ಟೋರ್ಸ್‌, ‘ಓಂ ಗಣೇಶ್ ಟೀ ಆ್ಯಂಡ್ಸ್ ಡ್ರೈಪ್ರೂಟ್ಸ್’. ಸುಮಾರು ಇಪ್ಪತ್ತು ವರ್ಷಗಳಿಂದ ಮಂಗಳೂರಿನ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಿರುವ ಇದರ ಮಾಲಕರು ಕೇಶವ ಬೋರ್ಕರ್ (ನಾಯ್ಕಿ).

ಲಾಕ್‌ಡೌನ್ ಬಹಳಷ್ಟು ಜನರಿಗೆ ಮಾಯಲಾಗದ ಬರೆ ಎಳೆದಿದೆ. ಆದರೆ ನಮ್ಮ ತುಳು ಕನ್ನಡಿಗರು ಎದೆಗುಂದಲಿಲ್ಲ. ಕೆಲವರು ತಮ್ಮ ಹೊಟೇಲ್ ವ್ಯವಹಾರ ಮುಚ್ಚಲ್ಪಟ್ಟಾಗ ಅಥವಾ ಇನ್ನು ಕೆಲವರು ಕೆಲಸ ಕಳೆದುಕೊಂಡಾಗ ಮಂಗಳೂರು ಸ್ಟೋರ್ಸ್‌ ಅನ್ನು ತೆರೆದು ಹೊಸ ಬೆಳಕನ್ನು ಕಂಡುಕೊಂಡಿದ್ದಾರೆ. ಅಂತಹವರಲ್ಲಿ ಘಾಟ್‌ಕೋಪರ್ ಪರಿಸರದ ಜಯಂತ್ ಕುಂದರ್ ಓರ್ವರು. ಮೂಲತಃ ಮೂಲ್ಕಿಯ ಅರಸು ಕಂಬಳದ ಬಳಿಯ ಜಯಂತ್ ಕುಂದರ್‌ರ ಕ್ಯಾಂಟೀನ್ ವ್ಯವಹಾರ ಲಾಕ್‌ಡೌನ್‌ನಿಂದಾಗಿ ಕುಸಿತ ಕಂಡಾಗ ತಮ್ಮ ಪತ್ನಿ ಸುಜಾತಾ ಕುಂದರ್ ಅವರ ಸಲಹೆಯಂತೆ ಮಂಗಳೂರು ಸ್ಟೋರ್ಸ್‌ ಒಂದನ್ನು ತೆರೆಯುವ ಮನಸ್ಸು ಮಾಡಿದರು. ಹಾಗೆ ಘಾಟ್‌ಕೋಪರ್ ಪರಿಸರದ ಅಸಲ್ಫಾ ಪೈಪ್‌ಲೈನ್‌ನ ಬಳಿ ಜನ್ಮ ತಾಳಿದ್ದು ‘ಹೆಕ್ಸ್ ಮಂಗಳೂರು ಜನರಲ್ ಸ್ಟೋರ್ಸ್‌’. ಅಲ್ಪಕಾಲದಲ್ಲಿಯೇ ಆ ಪರಿಸರದಲ್ಲಿ ಜನಪ್ರಿಯಗೊಂಡ ಅಂಗಡಿಯಿದು. ಲಾಕ್‌ಡೌನ್‌ನಿಂದಾಗಿ ಈಗ ಕೆಲವು ಬೀಡಾ-ಬೀಡಿ ಅಂಗಡಿಗಳು ಮಾಯವಾಗಿವೆ. ಅವುಗಳ ಜಾಗಗಳಲ್ಲಿ ಸಣ್ಣಮಟ್ಟದಲ್ಲಿ ಮಂಗಳೂರು ಸ್ಟೋರ್ಸ್‌ ಅಸ್ತಿತ್ವ ಕಂಡುಕೊಂಡಿರುವುದನ್ನು ನಾವು ಗಮನಿಸಬಹುದು.

ಕೆಲಸ ಕಳೆದುಕೊಂಡ ಡೊಂಬಿವಿಲಿ (ಪೂರ್ವ) ನಿವಾಸಿ ಪ್ರಜ್ವಲ್ ಭಾಸ್ಕರ ಶೆಟ್ಟಿ ಧೃತಿಗೆಡಲಿಲ್ಲ. ತನ್ನ ಮಾವಂದಿರ ಸಲಹೆ, ಸೂಚನೆ ಹಾಗೂ ಸಹಕಾರದಿಂದ ‘ಶ್ರೀ ರಾಘವೇಂದ್ರ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. ಕಾಪುವಿನಲ್ಲಿರುವ ಅವರ ಮಾವ ಉಮೇಶ್ ಶೆಟ್ಟಿ ಅವರು ಊರಿನ ರೈತರಿಂದ ನೇರವಾಗಿ ದವಸಧಾನ್ಯ, ತರಕಾರಿ, ತಿಂಡಿ-ತಿನಿಸುಗಳನ್ನು ಖರೀದಿಸಿ ಟ್ರಕ್ ಮೂಲಕ ಮುಂಬೈಗೆ ರವಾನಿಸುತ್ತಾರೆ. ಇಲ್ಲಿ ತಮ್ಮ ಮನೆಯನ್ನೇ ಗೋಡೌನ್ ಆಗಿ ಪರಿವರ್ತಿಸಿ, ಅಲ್ಲಿ ಸಾಮಗ್ರಿಗಳನ್ನು ಇರಿಸಿ ಮೊಬೈಲ್ ಫೋನ್ ಮೂಲಕ ಒಂದಷ್ಟು ತುಳು-ಕನ್ನಡಿಗರನ್ನು ಸಂಪರ್ಕಿಸಿ, ನೇರವಾಗಿ ತಾನು ಹಾಗೂ ತನ್ನ ಸಹೋದರ ಸೇರಿ ಸಾಮಗ್ರಿಗಳನ್ನು ಗ್ರಾಹಕರ ಮನೆಬಾಗಿಲಿಗೆ ಮುಟ್ಟಿಸುವ ವ್ಯವಸ್ಥೆ ಮಾಡುತ್ತಾರೆ. ಡೊಂಬಿವಿಲಿಯ ಕೆಲವು ಹೊಟೇಲ್‌ಗಳನ್ನು ಈಗಾಗಲೇ ಸಂಪರ್ಕಿಸಿ ಅಲ್ಲಿಗೆ ತೆಂಗಿನಕಾಯಿ, ಎಣ್ಣೆ, ಅಕ್ಕಿ ಇತ್ಯಾದಿಗಳನ್ನು ಸರಬರಾಜು ಮಾಡುತ್ತಿದ್ದಾರೆ. ಡೊಂಬಿವಿಲಿಯಿಂದ ಬದ್ಲಾಪುರ್ ತನಕ ಈಗಾಗಲೇ ನೂರಾರು ಮನೆಗಳವರನ್ನು ತಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೇರಿಸಿ ವ್ಯವಹರಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಹೊಟೇಲ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ನಿತ್ಯಾನಂದ ಭಂಡಾರಿ, ಮುಂಡ್ಕೂರು ತಮ್ಮ ಆತ್ಮೀಯ ಗೆಳೆಯ ಸಂಜೀವ ಎಕ್ಕಾರು ಅವರ ಜತೆ ಸೇರಿ ಆರಂಭಿಸಿದ್ದು ‘ಶ್ರೀ ದುರ್ಗಾ ಮಂಗಳೂರು ಜನರಲ್ ಸ್ಟೋರ್ಸ್‌’ ಈ ಅಂಗಡಿ ಅಸ್ತಿತ್ವಕ್ಕೆ ಬಂದಾಗ ಡೊಂಬಿವಿಲಿಯಲ್ಲಿ ತುಳು -ಕನ್ನಡಿಗರಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಊರಿನ ಸಿಹಿತಿಂಡಿ ಹಾಗೂ ದವಸ ಧಾನ್ಯಗಳ ಜತೆಗೆ ತರಕಾರಿ ಇತ್ಯಾದಿ ಎಲ್ಲವೂ ಮಂಗಳೂರಲ್ಲಿ ಪ್ಯಾಕ್ ಆಗಿರುವ ದೃಶ್ಯಗಳನ್ನು ಸೆರೆಹಿಡಿದು, ಇಲ್ಲಿ ನಾಳೆ ದೊರೆಯುವ ಸಾಮಗ್ರಿಗಳ ಮಾಹಿತಿ ಇಂದೇ ಸಿಗುವಂತೆ ಮಾಡುತ್ತಿದ್ದರು. ಇವರಲ್ಲಿ ಮುಖ್ಯವಾಗಿ ಸಂಜೀವ ಎಕ್ಕಾರು ಅವರು ಸ್ವತಃ ಊರಿಗೆ ಹೋಗಿ ಊರಿನ ರೈತರು, ಮೀನುಗಾರರು ಮತ್ತು ಸಿಹಿತಿಂಡಿ ತಯಾರಕರನ್ನು ಸಂಪರ್ಕಿಸಿ, ಅವರಿಂದ ನೇರವಾಗಿ ವಸ್ತುಗಳನ್ನು ಖರೀದಿಸಿ ಟ್ರಕ್ ಮೂಲಕ ಇಲ್ಲಿಗೆ ಸರಬರಾಜು ಮಾಡುತ್ತಿದ್ದರು. ಈ ಅಂಗಡಿಯ ಇನ್ನೊಂದು ವೈಶಿಷ್ಟ್ಯವೆಂದರೆ ದೇವರ ಪೂಜೆಯ ಎಲ್ಲಾ ಸಾಮಗ್ರಿಗಳು ಇಲ್ಲಿ ಮಾರಾಟವಾಗುತ್ತಿವೆ. ಈಗ ಸಂಜೀವ ಎಕ್ಕಾರು ನಿಧನರಾಗಿದ್ದರಿಂದ ಅವರ ಪತ್ನಿ ಹಾಗೂ ನಿತ್ಯಾನಂದ ಭಂಡಾರಿಯವರು ಹಿಂದಿನಂತೆಯೇ ವ್ಯವಹಾರ ನಡೆಸುತ್ತಿದ್ದಾರೆ.

ಘಾಟ್‌ಕೋಪರ್ ಪರಿಸರದಲ್ಲಿ ಕ್ರಿಯಾಶೀಲ ವ್ಯಕ್ತಿಗಳಾದ ನವೀನ್ ಶೆಟ್ಟಿ, ಇನ್ನ ಬಾಳಿಕೆ ಹಾಗೂ ಸಂದೀಪ್ ಶೆಟ್ಟಿ, ಮರವೂರು ಇವರು ಸೇರಿ ಆರಂಭಿಸಿದ ‘ನಮಸ್ತೆ’, ಕಳೆದ ಲಾಕ್‌ಡೌನ್‌ನಲ್ಲಿ ಹುಟ್ಟಿರುವ ಮಹತ್ವದ ಸಂಸ್ಥೆ. ಈಗಾಗಲೇ ಊರಿನಲ್ಲಿ ದೊಡ್ಡ ಗೋಡೌನ್ ಒಂದನ್ನು ತೆರೆದು, ಅಲ್ಲಿ ಊರಿನ ಮಹಿಳೆಯರಿಂದ ಹಪ್ಪಳ, ಸಂಡಿಗೆ, ಉಪ್ಪಡ್ ಪಚ್ಚಿರ್ ಇತ್ಯಾದಿಯಲ್ಲದೆ, ತಿಂಡಿತಿನಿಸುಗಳನ್ನೂ ಮಾಡಿ ಇಲ್ಲಿಗೆ ತರಿಸುತ್ತಿದ್ದಾರೆ. ಊರಿನ ಮೀನುಗಾರರಲ್ಲಿ ಒಂದಿಬ್ಬರನ್ನು ಸಂಪರ್ಕಿಸಿ ಅವರಿಂದ ‘ನುಂಗೆಲ್ ಮೀನು’ (ಒಣಮೀನು) ಖರೀದಿಸಿ ಇಲ್ಲಿಗೆ ತರಿಸುತ್ತಿದ್ದಾರೆ. ಅಕ್ಕಿ ಮತ್ತಿತರ ದವಸ ಧಾನ್ಯಗಳನ್ನೂ ತರಿಸಿ ಇಲ್ಲಿ ತಮ್ಮದೇ ಗೋಡೌನ್‌ನಲ್ಲಿ ಸಂಗ್ರಹಿಸಿ ವಾಟ್ಸ್‌ಆ್ಯಪ್ ಗ್ರೂಪ್ ಪ್ರಾರಂಭಿಸಿ ಮಾರುವ ಇವರ ತಂತ್ರ ಅನುಕರಣೀಯ. ಟೆಂಪೊದ ಮೂಲಕ ಮನೆ ಮನೆಗೆ ಮುಟ್ಟಿಸುವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಇವರು ಮಾಡುತ್ತಿದ್ದಾರೆ. ಕಳೆದ ಲಾಕ್‌ಡೌನ್ ಸಂದರ್ಭ ಇಲ್ಲಿನ ಜನ ‘ಅಷ್ಟಮಿ’, ‘ಚೌತಿ’ ಆಚರಿಸದಿರಬಾರದೆಂದು ಊರಿನ ತಮ್ಮ ಗೋಡೌನ್‌ನಲ್ಲಿ ಮೂಡೆಯನ್ನು ತಯಾರಿಸಿ ಇಲ್ಲಿ ಸುಮಾರು ಮೂರು ಸಾವಿರ ಮೂಡೆಗಳನ್ನು ಮಾರಾಟ ಮಾಡಿದ್ದಾರೆ.

ಹಸಿ ತರಕಾರಿ ಇವರ ನೆಚ್ಚಿನ ಸಾಮಗ್ರಿಗಳಲ್ಲಿ ಒಂದು. ಟ್ರಕ್‌ಗಳ ಮೂಲಕ ಪ್ರತಿ ಹತ್ತು-ಹದಿನೈದು ದಿನಗಳಿಗೊಮ್ಮೆ ಅವರ ಊರಿನ ಗೋಡೌನ್‌ನಿಂದ ಮುಂಬೈಗೆ ಸಾಮಗ್ರಿಗಳನ್ನು ರವಾನಿಸಲಾಗುತ್ತದೆ. ಈಗಾಗಲೇ ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ನಾಲ್ಕು ಸಾವಿರ ಗ್ರಾಹಕರನ್ನು ಹೊಂದಿರುವ ‘ನಮಸ್ತೆ’, ಚರ್ಚ್‌ಗೇಟ್‌ನಿಂದ ವಿರಾರ್ -ಕಲ್ಯಾಣ್-ಕಲಂಬೋಲಿ ತನಕ ತನ್ನ ಗ್ರಾಹಕರನ್ನು ಹೊಂದಿದೆ.
ಮುಖ್ಯವಾಗಿ ಇಲ್ಲಿನ ಮಂಗಳೂರು ಸ್ಟೋರ್ಸ್‌ ಅಥವಾ ಅಂಗಡಿಗಳಿಂದ ಗಮನಿಸತಕ್ಕ ಅಂಶವೆಂದರೆ, ನಮ್ಮ ತುಳು-ಕನ್ನಡಿಗರು ಊರಿನ ಆಹಾರ ಸಂಸ್ಕೃತಿಯನ್ನು ಇನ್ನೂ ಮರೆತಿಲ್ಲ. ಹೊಸ ಪೀಳಿಗೆಯಲ್ಲಿ ಈಗಾಗಲೇ ಮಹತ್ವದ ಬದಲಾವಣೆಗಳು ಕಂಡುಬಂದರೂ, ಅದು ಎಲ್ಲ ಮನೆಗಳನ್ನೂ ಇದುವರೆಗೆ ತಲುಪದಿರುವುದು ಸಮಾಧಾನದ ಸಂಗತಿ. ಈ ಎಲ್ಲ ಅಂಗಡಿಗಳು ಮಾರುವ ಪಟ್ಟಿಯಲ್ಲಿ ಅಕ್ಕಿ, ಮೀನು, ರಾಗಿಮಾಲ್ಟ್, ಅಕ್ಕಿಹುಡಿ, ಜಾರಿಗೆ, ಪುನರ್ಪುಳಿ, ವಿವಿಧ ಬಗೆಯ ಕಾವಲಿಗಳು, ವಿವಿಧ ಬಗೆಯ ‘ಪೆರದನೆ’ಗಳು, ತೊಂದೂರು, ಬಿಸಲೆ, ಸೇವಿಗೆ ಮಣೆ, ಅಕ್ಕಿ ಮುಡಿ, ಪೇಟ, ವೇಸ್ಟಿ, ಬೈರಾಸ್, ಮುಟ್ಟಾಲೆ, ಅರೆಯುವ ಕಲ್ಲು, ಹಲಸು, ಉಪ್ಪಡ್ ಪಚ್ಚಿರ್, ಪೆಜಕ್ಕಾಯಿ, ಸೇವಿಗೆ, ಮಾಲ್ಟ್ ಮಸಾಲಾ, ಚಟ್ನಿ ಪೌಡರ್, ಬೆಲ್ಲ... ಹೀಗೆ ಊರಿನಲ್ಲಿ ಸಿಗುವ, ಕೆಲವೊಂದು ಊರಿನಲ್ಲಿ ಈಗ ಉಪಯೋಗಿಸದಿರುವ ವಸ್ತುಗಳೂ ಇಲ್ಲಿ ಸಿಗುತ್ತಿವೆ.

ಈ ‘ಮಂಗಳೂರು ಸ್ಟೋರ್ಸ್‌’ಗಳಿಂದ ಊರಿನ ಎಷ್ಟೋ ಸಂಸಾರಗಳು ಜೀವನವನ್ನು ಸಾಗಿಸುತ್ತಿವೆ. ಹಿಂದೆ ಊರಿನಿಂದ ಬೇಡಿಕೆ ಇರುವಷ್ಟು ಕೋರಿ ರೊಟ್ಟಿಯ ರೊಟ್ಟಿ ಬರುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿತ್ತು. ಆದರೆ ಈಗ ನಮ್ಮವರು ಮಹಾರಾಷ್ಟ್ರ ಗುಜರಾತ್ ಗಡಿ ಭಾಗ ಮತ್ತು ಶಹಡ್‌ನಲ್ಲಿ ಒಟ್ಟು ಮೂರು ರೊಟ್ಟಿ ತಯಾರಿಸುವ ಕಾರ್ಖಾನೆ ಆರಂಭಿಸಿದ್ದಾರೆ. ವಿಪರ್ಯಾಸವೆಂದರೆ ಮಂಗಳೂರಿನ ರೊಟ್ಟಿಯನ್ನು ಈ ಕಾರ್ಖಾನೆಗಳಲ್ಲಿ ಭಯ್ಯಿಗಳು ತಯಾರಿಸುತ್ತಿದ್ದಾರಂತೆ. ಇದರಿಂದ ನಷ್ಟ ಯಾರಿಗೆ? ‘‘ಒಂದು ವೇಳೆ ಇಲ್ಲಿನ ಬೇಡಿಕೆಗೆ ಸರಿಯಾಗಿ ಸ್ಪಂದಿಸಿ ಪೂರೆಕೆಯಾಗುತ್ತಿದ್ದರೆ, ಇಲ್ಲಿ ಕಾರ್ಖಾನೆ ತೆರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ’’ ಎಂದು ಸ್ಟೋರ್ ಒಂದರ ಮಾಲಕರು ಹೇಳುತ್ತಾರೆ.

ಇಲ್ಲಿನ ಮಂಗಳೂರು ಸ್ಟೋರ್‌ಗಳಿಂದ ಹೊಟೇಲ್‌ಗಳಿಗೆ ನೇರ ಸಾಮಗ್ರಿಗಳು ಮಾರಲ್ಪಡುತ್ತವೆ. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ ಇಲ್ಲಿನ ಹೊಟೇಲ್ ಗಳಿಗೆ ತೆಂಗಿನೆಣ್ಣೆ ಮೊದಲಾದವುಗಳ ಜೊತೆ ‘ನಂದಿನಿ’ ತುಪ್ಪವೂ ಊರಿನಿಂದಲೇ ಮಂಗಳೂರು ಸ್ಟೋರ್ಸ್‌ ಮೂಲಕ ಸರಬರಾಜಾಗುತ್ತದೆ. ಕೋಟೆ ಪರಿಸರದ ರುಚಿ ಶುಚಿಗೆ ಹೆಸರಾದ ‘ಕುಡ್ಲದ ಹೊಟೇಲ್’ ಖ್ಯಾತಿಯ ‘ಹರೀಶ್ ಲಂಚ್ ಹೋಮ್’ ಮಾಲಕ ಗಿರೀಶ್ ಸಾಲ್ಯಾನ್ ಅವರ ಅನುಭವದಂತೆ ‘‘ನಮ್ಮೂರಿನ ಜನ ತಿಂಡಿ ತಿನಿಸುಗಳಿಗೆ ಮಹತ್ವ ನೀಡುತ್ತಾರೆ. ಆದ್ದರಿಂದ ಹೆಚ್ಚಿನ ತುಳು-ಕನ್ನಡಿಗರು ಮಂಗಳೂರು ಸ್ಟೋರ್ಸ್‌ನಿಂದ ಸಾಮಾನುಗಳನ್ನು ತರಿಸುತ್ತಾರೆ. ನಾವು ನಮ್ಮ ಹೊಟೇಲ್‌ಗೆ ನಮಗೆ ಬೇಕಾದ ಊರಿನ ಅಕ್ಕಿಯನ್ನು ಗೋಣಿಗಟ್ಟಲೆ ಮಂಗಳೂರು ಸ್ಟೋರ್ಸ್‌ನಿಂದಲೇ ತರಿಸುತ್ತೇವೆ’’ ಎನ್ನುತ್ತಾರೆ. ಮಕ್ಕಳು ಇಂದು ಪಿಜ್ಜಾ, ನೂಡಲ್ಸ್ ಹಿಂದೆ ಬಿದ್ದಿದ್ದಾರೆ. ಅವರಿಗೆಲ್ಲ ನಮ್ಮ ತಿನಿಸುಗಳ ರುಚಿ ಗೊತ್ತಿಲ್ಲ ಎಂದು ಹೇಳುತ್ತಿದ್ದ ಕೆಲವು ಕುಟುಂಬಗಳು ಇಂದು ಈ ಎರಡು ಲಾಕ್‌ಡೌನ್‌ನಿಂದಾಗಿ ತಮ್ಮ ಮಕ್ಕಳಿಗೆ ತಮ್ಮ ತಿನಿಸುಗಳ ರುಚಿಯನ್ನು ತಿನ್ನಿಸಲು ಪ್ರಾರಂಭಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)