ದಿರ್ಹಂ ಎದುರು ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ
ದುಬೈ,ಜೂ.19: ದಿರ್ಹಂನಿಂದ ಭಾರತೀಯ ರೂಪಾಯಿ ದರವು ಅತ್ಯಂತ ಕನಿಷ್ಠ ಅಂಕಗಳಿಗೆ ತಲುಪಿದ್ದು ಒಂದು ದಿರ್ಹಂಗೆ 20.20 ರೂ. ಆಗಿದೆ. ಇದರ ಪರಿಣಾಮವಾಗಿ ಭಾರೀ ಸಂಖ್ಯೆಯ ಅನಿವಾಸಿ ಭಾರತೀಯರಲ್ಲಿ ತಮ್ಮ ತವರು ನಾಡಿಗೆ ಹಣವನ್ನು ಕಳುಹಿಸುವ ಧಾವಂತ ಕಂಡುಬಂತು. ರೂಪಾಯಿ ಮೌಲ್ಯ ಇಳಿಕೆಯು ವಾರಾಂತ್ಯದವರೆಗೂ ಮುಂದುವರಿಯಲಿದ್ದು, ಮುಂದಿನ ವಾರವೂ ಅದು ವಿಸ್ತರಣೆಯಾಗುವ ಸಾಧ್ಯತೆಯಿದೆಯೆಂದು ಅರ್ಥಿಕ ತಜ್ಞರು ತಿಳಿಸಿದ್ದಾರೆ.
ರೂಪಾಯಿಯ ಮಾರಾಟ ದರವು ಗುರುವಾರ 20.10 ಆಗಿದ್ದು, ಶುಕ್ರವಾರ ಅದು 20.20ಕ್ಕೆ ಇಳಿದಿದೆ ಎಂದು ಜಾಯ್ ಆಲುಕ್ಕಾಸ್ ಎಕ್ಸ್ಚೇಂಜ್ ಸಂಸ್ಥೆಯ ಆ್ಯಂಟನಿ ಜೋಸ್ ತಿಳಿಸಿದ್ದಾರೆ. ಕೋವಿಡ್19 ಹಾವಳಿಯ ಹಿನ್ನೆಲೆಯಲ್ಲಿ ಇತ್ತೀಚಿನ ವಾರಗಳಲ್ಲಿ ಅನಿವಾಸಿ ಭಾರತೀಯರು ಸ್ವದೇಶಕ್ಕೆ ಹಣವನ್ನು ಕಳುಹಿಸುವ ಪ್ರಮಾಣದಲ್ಲಿ ಇಳಿಕೆಯುಂಟಾಗಿತ್ತು. ಆದರೆ ಗುರುವಾರದಿಂದ ದಿರ್ಹಂ ಎದುರು ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿರುವುದರಿಂದ ಭಾರೀ ದೊಡ್ಡ ಸಂಖ್ಯೆಯ ಅನಿವಾಸಿ ಭಾರತೀಯರು ತವರುನಾಡಿಗೆ ಹಣವನ್ನು ಕಳುಹಿಸತೊಡಗಿದ್ದಾರೆಂದು ಆ್ಯಂಟನಿ ಜೋಸ್ ತಿಳಿಸಿದ್ದಾರೆ.