ಚೌಕಟ್ಟುಗಳನ್ನು ಮೀರಿದ ಸ್ತ್ರೀವಾದದ ಕಥನಗಳು
ರಾಜ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರೂ, ಚಿಂತಕರೂ ಆಗಿರುವ ಡಾ. ಮುಜಾಫರ್ ಅಸ್ಸಾದಿಯವರ ‘ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ-ಕಥನಗಳು ಮತ್ತು ಚಳವಳಿ’ ರಾಜ್ಯದಲ್ಲಿ ಸ್ತ್ರೀವಾದ ಬೆಳೆದು ಬಂದ ಹಾದಿಯನ್ನು ಗುರುತಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಕೃತಿ ಮಹಿಳಾವಾದವೆನ್ನುವ ಸಿದ್ಧರೂಪದ ಘೋಷಣೆಗಳ ಹಿಂದೆ ಹೋಗದೆ, ತಳಸ್ತರದಿಂದ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಮಹಿಳೆಯರ ಕೊಡುಗೆಗಳನ್ನು ಸ್ಮರಿಸುವುದಕ್ಕೆ ಬಯಸುತ್ತದೆ. ಹಾಗೆಯೇ ಜಾಗತೀಕರಣ ಮಹಿಳಾವಾದಕ್ಕೆ ಪೂರಕ ಎಂಬ ವಾದವನ್ನು ಅಲ್ಲಗಳೆಯುತ್ತಾ, ಮಹಿಳೆಯರ ಸ್ವಾವಲಂಬಿ ಬದುಕಿನ ಮೇಲೆ ಅದು ಮಾಡುವ ದಾಳಿಯ ಕುರಿತಂತೆ ಮಾತನಾಡುತ್ತದೆ. ಮಹಿಳೆಯರ ಅಸ್ತಿತ್ವದ ಮೇಲೆ ಅದು ಮಾಡುತ್ತಿರುವ ದುಷ್ಪರಿಣಾಮಗಳ ಕುರಿತಂತೆ ಅಸ್ಸಾದಿ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ.
ಸ್ತ್ರೀವಾದದ ಕುರಿತಂತೆ ಹತ್ತು ಹಲವು ಕೃತಿಗಳು ಕನ್ನಡದಲ್ಲಿ ಬಂದಿವೆೆಯಾದರೂ, ಹೆಚ್ಚಿನವುಗಳು ನಗರ ಕೇಂದ್ರಿತ ಮಹಿಳೆಯ ದೃಷ್ಟಿಕೋನದಲ್ಲಿ, ಪಾಶ್ಚಿಮಾತ್ಯ ಸಿದ್ಧ ಚೌಕಟ್ಟಿನಲ್ಲಿ ಚರ್ಚೆಯಾಗಿವೆ. ಸ್ತ್ರೀವಾದದ ಜೊತೆ ಜೊತೆಗೆ ತಳಕು ಹಾಕಿಕೊಳ್ಳುವ ಆರ್ಥಿಕ ಸ್ವಾವಲಂಬನೆ ಮತ್ತು ಅದಕ್ಕೆ ಒದಗುತ್ತಿರುವ ಅಡ್ಡಿಗಳ ಬಗ್ಗೆ ಈ ಕೃತಿ ಗಂಭೀರವಾಗಿ ಚರ್ಚಿಸುತ್ತದೆ. ಕೃತಿಯಲ್ಲಿ ಒಟ್ಟು 14 ಅಧ್ಯಾಯಗಳಿವೆ. ಪೀಠಿಕೆಯಲ್ಲಿ ಭಾರತೀಯ ಸ್ತ್ರೀವಾದದ ಸವಾಲುಗಳನ್ನು ಮುಂದಿಡಲಾಗಿದೆ. ಸ್ತ್ರೀವಾದಿ ನೆಲೆಗಳಡಿಯಲ್ಲಿ ಲೇಖಕರು, ಶಾಬಾನು ಪ್ರಕರಣ, ಆದಿವಾಸಿ ಹೋರಾಟಗಳು, ನರ್ಮದಾ ಚಳವಳಿ, ನಿರ್ಭಯಾ ಪ್ರಕರಣ, ಸಿಎಎ ವಿರೋಧಿ ಚಳವಳಿಗಳ ಮೂಲಕ ಸ್ತ್ರೀ ಕೇಂದ್ರಿತ ಚಳವಳಿಗಳು ಸಮಾಜದ ಮೇಲೆ ಬೀರಿದ ಪರಿಣಾಮಗಳನ್ನು ಪರಿಚಯಿಸುತ್ತಾರೆ. ಬಳಿಕ ಕರ್ನಾಟಕದಲ್ಲಿ ಸ್ತ್ರೀವಾದ ಬೆಳೆದ ಬಗೆಯನ್ನು ಇತಿಹಾಸ, ಜಾನಪದ, ಸಾಹಿತ್ಯ, ಸಾಮಾಜಿಕ ಚಳವಳಿಗಳ ಮೂಲಕ ಕೃತಿ ವಿವರಿಸುತ್ತದೆ.
ಇತ್ತೀಚಿನ ಸಿಎಎ ವಿರುದ್ಧ ಆಂದೋಲನದಲ್ಲಿ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಮಹಿಳೆಯರ ಭಾಗವಹಿಸುವಿಕೆ, ಅದು ಮಹಿಳಾ ಅಸ್ಮಿತೆಯ ಮೇಲೆ ಬೀರಿದ ಪರಿಣಾಮವನ್ನೂ ಈ ಕೃತಿ ಚರ್ಚಿಸಿದೆ. ಕರ್ನಾಟಕದ ಆಧುನಿಕತೆಯ ಸಂದರ್ಭದಲ್ಲಿ ಒಟ್ಟು ಏಳು ರೂಪದ ಸ್ತ್ರೀವಾದವನ್ನು ಲೇಖಕರು ಗುರುತಿಸುತ್ತಾರೆ. ಉದಾರವಾದಿ ಸ್ತ್ರೀವಾದ, ಪರಿಸರ ಸ್ತ್ರೀವಾದ, ಗಾಂಧಿಯನ್ ಸ್ತ್ರೀವಾದ, ರೈತಾಪಿ ಮತ್ತು ಜನಪ್ರಿಯ ರೈತಾಪಿ ಸ್ತ್ರೀವಾದ, ಮುಸ್ಲಿಮ್ ಮತ್ತು ಇಸ್ಲಾಮಿಕ್ ಸ್ತ್ರೀವಾದ, ದಲಿತ ಸ್ತ್ರೀವಾದ ಹಾಗೂ ಆದಿವಾಸಿ ಅಥವಾ ಬುಡಕಟ್ಟು ಸ್ತ್ರೀವಾದ ಎಂದು ಅವರು ವಿಂಗಡಿಸುತ್ತಾರೆ. ರೈತ ಚಳವಳಿ, ದಲಿತ ಮತ್ತು ಆದಿವಾಸಿ ಚಳವಳಿಗಳಲ್ಲಿ ಮಹಿಳೆಯರ ಯಶಸ್ವಿ ಪಾತ್ರಗಳನ್ನು ಅವರು ಗುರುತಿಸುತ್ತಾರೆ ಮತ್ತು ಈ ಚಳವಳಿಗಳು ಸಮಾಜದಲ್ಲಿ ತಂದ ಬದಲಾವಣೆಯ ಬಗ್ಗೆಯೂ ಅವರು ಬರೆಯುತ್ತಾರೆ.
ಒಟ್ಟಿನಲ್ಲಿ, ಕರ್ನಾಟಕದ ಪಾಲಿಗೆ ಸ್ತ್ರೀವಾದಿ ಚಳವಳಿಗಳು ಹೇಗೆ ಭಿನ್ನ ಮತ್ತು ವಿಶಿಷ್ಟ ಎನ್ನುವುದನ್ನು ಕೃತಿ ಕಟ್ಟಿಕೊಡುತ್ತದೆ. ದೇಶಿ ಸಂದರ್ಭದಲ್ಲಿ ಸ್ತ್ರೀವಾದದ ಕಥನಗಳನ್ನು ಮತ್ತು ಚಳವಳಿಗಳನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸೀಮಿತಗೊಳಿಸಿ ಗುರುತಿಸುವುದು ಸರಿಯಲ್ಲ. ಈ ರೀತಿ ಮಾಡಿದರೆ ಅದು ಪಾಶ್ಚಾತ್ಯ ಮಾದರಿಯ ಅನುಕರಣೆಯಾಗುತ್ತದೆ. ದೇಶಿ ನೆಲೆಗಟ್ಟಿನ ಬಹುತ್ವಗಳ ನಡುವೆ, ಪರಂಪರೆಯ ನಡುವೆ ಗೋಡೆಗಳನ್ನು ಕಟ್ಟುವುದು ಕೂಡ ಸರಿಯಲ್ಲ ಎಂದು ಈ ಕೃತಿ ಬಲವಾಗಿ ವಾದಿಸುತ್ತದೆ.
ಋತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 124. ಮುಖಬೆಲೆ 120 ರೂಪಾಯಿ. ಆಸಕ್ತರು 94481 86295 ದೂರವಾಣಿಯನ್ನು ಸಂಪರ್ಕಿಸಬಹುದು.