ದುಬೈ ವಿಮಾನ ನಿಲ್ದಾಣದ ಒಂದನೇ ಟರ್ಮಿನಲ್ ಈ ವಾರ ಪುನರಾರಂಭ
ಸಾಂದರ್ಭಿಕ ಚಿತ್ರ
ದುಬೈ, ಜೂ. 20: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 15 ತಿಂಗಳು ಮುಚ್ಚಿದ ಬಳಿಕ ದುಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಟರ್ಮಿನಲನ್ನು ಗುರುವಾರ ಪುನರಾರಂಭಿಸುವುದಾಗಿ ದುಬೈ ವಿಮಾನ ನಿಲ್ದಾಣ ಪ್ರಾಧಿಕಾರ ರವಿವಾರ ಘೋಷಿಸಿದೆ.
ಒಂದನೇ ಟರ್ಮಿನಲ್ ದುಬೈ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳು ಬಳಸುವ ಪ್ರಧಾನ ಟರ್ಮಿನಲ್ ಆಗಿದೆ. 40ಕ್ಕೂ ಅಧಿಕ ಅಂತರ್ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಇನ್ನು ಹಂತ ಹಂತವಾಗಿ ತಮ್ಮ ಕಾರ್ಯಾಚರಣೆಯನ್ನು ಟರ್ಮಿನಲ್ 2 ಮತ್ತು ಟರ್ಮಿನಲ್ 3ರಿಂದ ಟರ್ಮಿನಲ್ 1ಕ್ಕೆ ಸ್ಥಳಾಂತರಿಸಲಿವೆ.
ಒಂದನೇ ಟರ್ಮಿನಲ್ ವಾರ್ಷಿಕ 1.8 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆಯಾಗಿ ಪ್ರಮುಖ ಅಂತರ್ರಾಷ್ಟ್ರೀಯ ಪ್ರಯಾಣ ಕೇಂದ್ರವಾಗಿರುವ ಈ ವಿಮಾನ ನಿಲ್ದಾಣವು ವರ್ಷಕ್ಕೆ 10 ಕೋಟಿ ಪ್ರಯಾಣಿಕರನ್ನು ನಿಭಾಯಿಸಬಲ್ಲುದಾಗಿದೆ.
ಕಳೆದ 14 ದಿನಗಳಿಂದ ನೈಜೀರಿಯ ಅಥವ ದಕ್ಷಿಣ ಆಫ್ರಿಕಗಳಲ್ಲಿರುವ ಪ್ರಯಾಣಿಕರ ಮೇಲಿನ ನಿಷೇಧವನ್ನು ತೆರವುಗೊಳಿಸುವುದಾಗಿಯೂ, ಅಲ್ಲಿಂದ ನೇರ ವಿಮಾನಗಳು ಬುಧವಾರದಿಂದ ಹಾರಾಟವನ್ನು ಪುನರಾರಂಭಿಸುತ್ತವೆ ಎಂಬುದಾಗಿಯೂ ದುಬೈ ಸರಕಾರ ಶನಿವಾರ ಘೋಷಿಸಿದ ಒಂದು ದಿನದ ಬಳಿಕ ವಿಮಾನ ನಿಲ್ದಾಣ ಪ್ರಾಧಿಕಾರ ಈ ಪ್ರಕಟನೆಯನ್ನು ನೀಡಿದೆ.
ಭಾರತದಿಂದಲೂ ವಿಮಾನಗಳ ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ವಾಸ್ತವ್ಯ ವೀಸಾಗಳನ್ನು ಹೊಂದಿದವರು ಕೊರೋನ ವೈರಸ್ ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡಿದ್ದರೆ ಯುಎಇ ಪ್ರವೇಶಿಸಬಹುದಾಗಿದೆ.