ಕರ್ನಾಟಕ ರಾಜಕಾರಣದ ಅಧೋಗತಿ
ಯಡಿಯೂರಪ್ಪನವರ ಜಾಗಕ್ಕೆ ಬರಲು ಸಕ್ಕರೆ ಮತ್ತು ಆಟೊಮೊಬೈಲ್ ಉದ್ಯಮ ನಡೆಸುವ ರಾಜಕಾರಣಿಗಳು ಸಜ್ಜಾಗಿದ್ದಾರೆ. ಉದ್ಯಮಿಗಳಿಗೆ, ಬಂಡವಾಳಗಾರರಿಗೆ ರಾಜಕೀಯ ಅಧಿಕಾರ ಎಂಬುದು ಬಂಡವಾಳ ಹೂಡಿ ಲಾಭಗಳಿಸುವ ದಂಧೆ ಇದ್ದಂತೆ. ಅವರಿಂದ ಜನಪರ ಕಾಳಜಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಒಂದು ಕಾಲದಲ್ಲಿ ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ದೇವರಾಜ ಅರಸು, ಬಸವಲಿಂಗಪ್ಪ, ಶಾಂತವೇರಿ ಗೋಪಾಲಗೌಡ, ಕೆ.ಎಚ್.ರಂಗನಾಥ ಹಾಗೂ ಬಿ.ವಿ.ಕಕ್ಕಿಲ್ಲಾಯರಂತಹ ಅಪರೂಪದ ಮುತ್ಸದ್ದಿಗಳನ್ನು ನೀಡಿದ ಕರ್ನಾಟಕದ ರಾಜಕಾರಣ ಇಂದು ಹಳ್ಳ ಹಿಡಿದು, ಇಡೀ ಭಾರತದಲ್ಲೇ ದುರ್ವಾಸನೆ ಹರಡಿದೆ.
ಇದಕ್ಕೆ ಯಾರು ಕಾರಣ? ಚಾರಿತ್ರವಂತರ ಸಂಸ್ಕಾರ ಪಡೆದ ಪಕ್ಷದ ರಾಜಕಾರಣಿಗಳೇ? ಅಥವಾ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದ ಮತದಾರರೇ? ಎಂದು ಅವಲೋಕಿಸಲು ಹೊರಟರೆ ಎರಡೂ ಕಡೆಯ ಲೋಪ ಎದ್ದು ಕಾಣುತ್ತದೆ. ಹಾಗೆ ನೋಡಿದರೆ, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಕರ್ನಾಟಕದ ಮತದಾರರು ಎಂದೂ ಸ್ಪಷ್ಟ ಬಹುಮತ ನೀಡಿಲ್ಲ. ಎರಡು ಬಾರಿಯೂ ಆಪರೇಷನ್ ಕಮಲದ ದಗಲ್‌ಬಾಜಿ ರಾಜಕಾರಣ ಮಾಡಿಯೇ ಅಧಿಕಾರಕ್ಕೆ ಬಂದಿದೆ.
ಹಿಂದಿನ ಬಾರಿ ಅಧಿಕಾರ ಸೂತ್ರ ಹಿಡಿದಿದ್ದು ಬಳ್ಳಾರಿ ಗಣಿ ಲೂಟಿಯ ಹಣದಿಂದ. ಈ ಬಾರಿಯೂ ಅದು ಅಧಿಕಾರ ವಶಪಡಿಸಿ ಕೊಂಡಿದ್ದು ಅದೇ ಅನೈತಿಕ ಮಾರ್ಗದಿಂದ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೊಬ್ಬರೇ ಅಪರಾಧಿಯಲ್ಲ. ಈಗ ಅವರನ್ನು ಪದಚ್ಯುತಿಗೊಳಿಸಿ ಇನ್ನೊಬ್ಬರಿಗೆ ಕುರ್ಚಿ ನೀಡಲು ಭಿನ್ನಮತಕ್ಕೆ ಪ್ರಚೋದಿಸುತ್ತಿರುವ ವ್ಯಕ್ತಿಯ ಚಾರಿತ್ರ ನಿರ್ಮಾಣ ಮಾಡುವುದಾಗಿ ಹೇಳುವ ಶಿಸ್ತಿನ ಸಂಘಟನೆಯ ಒಳ ಕೈವಾಡವೂ ಸಾಕಷ್ಟಿದೆ.
ಈಗ ಮುಖ್ಯಮಂತ್ರಿಯವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ಜನಪ್ರತಿನಿಧಿಗಳು ಹಣ, ಅಧಿಕಾರಕ್ಕಾಗಿ ತಾನು ಮಾರಾಟವಾಗಲಿಲ್ಲ ಎಂದು ಎದೆ ಮುಟ್ಟಿ ಹೇಳಿಕೊಳ್ಳಲಿ. ಈ ರೀತಿ ಮಾರಾಟವಾಗಿ ಮುಂಬೈಗೆ ಹೋಗಿ ಮಜಾ ಮಾಡಿ ಬಂದವರನ್ನು ಕರ್ನಾಟಕದ ಮತದಾರರು ಉಪಚುನಾವಣೆಯಲ್ಲಿ ಗೆಲ್ಲಿಸಿ ಶಾಸನಸಭೆಗೆ ಕಳುಹಿಸಿದರು. ಇಂತಹವರ ಬೆಂಬಲ ಪಡೆದು ಬಿಜೆಪಿ ಸರಕಾರ ರಚನೆಯಾಯಿತು. ಈ ಅನೈತಿಕ ರಾಜಕಾರಣಕ್ಕೆ ಮಹಾ ಪರಿಶುದ್ಧ ವಿಶ್ವಗುರು ಮತ್ತು ಆತನ ಪರಮಾಪ್ತ ಮಿತ್ರ ಮಾತ್ರವಲ್ಲ, ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಕೃಪಾಶಿರ್ವಾದವೂ ಇತ್ತು. ನೈತಿಕತೆ, ಅನೈತಿಕತೆ ಇವರಿಗೆ ಮುಖ್ಯವಲ್ಲ. ಒಟ್ಟಾರೆ ತಿನ್ನುವವರು ತಿನ್ನಲಿ, ಲೂಟಿ ಹೊಡೆಯುವವರು ಹೊಡೆಯಲಿ, ತಮ್ಮ ಕಾರ್ಯಸೂಚಿ ಜಾರಿಗೆ ಬರಬೇಕು.
ಕಳೆದ ವಿಧಾನಸಭೆಯ ಚುನಾವಣೆಗೆ ಮುನ್ನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಕರ್ನಾಟಕಕ್ಕೆ ಸುಭದ್ರ ಸರಕಾರ ನೀಡಿತ್ತು. ಐದು ವರ್ಷ ಯಾವುದೇ ರಾಜಕೀಯ ಅಸ್ಥಿರತೆ, ಭಿನ್ನಮತ, ಬುಡಮೇಲು ಚಟುವಟಿಕೆ ಇರಲಿಲ್ಲ. ಅಷ್ಟಿಷ್ಟು ಇದ್ದರೂ ಬೀದಿಗೆ ಬಂದಿರಲಿಲ್ಲ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಬಡ ರೈತರ ಸಾಲಮನ್ನಾದಂತಹ ಕ್ರಮಗಳು ನೊಂದವರ ಕಣ್ಣೀರನ್ನು ಒರೆಸಿದವು. ಆದರೂ ಮತದಾರರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಲಿಲ್ಲ. ಅದರ ಪರಿಣಾಮವಾಗಿ ಕರ್ನಾಟಕ ಮತ್ತೆ ಈ ದುಸ್ಥಿತಿ ಎದುರಿಸಬೇಕಾಗಿ ಬಂದಿದೆ.
ನನಗೆ ತಿಳುವಳಿಕೆ ಬಂದಾಗಿನಿಂದ ಕರ್ನಾಟಕದ ರಾಜಕಾರಣ ನೋಡುತ್ತಿದ್ದೇನೆ. ಅದರಲ್ಲೂ ಎಪ್ಪತ್ತರ ದಶಕದಲ್ಲಿ ಪತ್ರಿಕೋದ್ಯಮವನ್ನು ಪ್ರವೇಶಿಸಿದಾಗಿನಿಂದ ನಿಕಟವಾಗಿ ಗಮನಿಸುತ್ತಿರುವೆ. ಹಿಂದೆಂದೂ ಇಂದಿನಷ್ಟು ಗಟಾರಕ್ಕೆ ನಮ್ಮ ರಾಜಕಾರಣ ಇಳಿದಿರಲಿಲ್ಲ.
ಕೊರೋನ ವೈರಾಣು ಬಂದೆರಗಿದಾಗಲೂ ರಾಜ್ಯದ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸುವ ಚಟುವಟಿಕೆಗಳು ಬಿರುಸಾಗಿಯೇ ನಡೆದಿದ್ದವು. ಜನಸಾಮಾನ್ಯರು ಬೆಡ್, ಆಮ್ಲಜನಕ, ವೆಂಟಿಲೇಟರ್ ಸಲುವಾಗಿ ಅಂಗಲಾಚುತ್ತಿರುವಾಗಲೂ ರಾಜಕಾರಣಿಗಳ ಅಧಿಕಾರದಾಹ ಮತ್ತು ಭಿನ್ನಮತೀಯ ಚಟುವಟಿಗೆಳು ನಿಂತಿರಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳರು, ಧಾರವಾಡದ ಬೆಲ್ಲದ್, ಯೋಗೇಶ್ವರ್ ಹೇಳಿಕೆ ನೀಡುತ್ತಲೇ ಇದ್ದರು ಮತ್ತು ಇದ್ದಾರೆ. ದಿಲ್ಲಿಯ ದೊರೆಗಳ ಒಳ ಪ್ರಚೋದನೆ ಇಲ್ಲದೇ ಇಂತಹ ಹೇಳಿಕೆ ನೀಡುವ ಧೈರ್ಯ ಯಾರಿಗೂ ಬರುವುದಿಲ್ಲ.
ಹಾಗೆ ನೋಡಿದರೆ ಅನೈತಿಕ ವಿಧಾನಗಳಿಂದ ಅಧಿಕಾರಕ್ಕೆ ಬಂದ ರಾಜ್ಯದ ಬಿಜೆಪಿ ಸರಕಾರಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ಅಷ್ಟೇನೂ ಕಿರಿ ಕಿರಿ ಇಲ್ಲ. ಬಿಜೆಪಿಯೊಳಗಿನ ಒಳ ಕಚ್ಚಾಟಗಳು, ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಕಮಲ ಕಮಂಡಲದ ಮಸಲತ್ತುಗಳೇ ಕೊರೋನ ಕಾಲದಲ್ಲೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಬಂದವು. ಈಗಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಮಠಾಧೀಶರಲ್ಲೂ ಎರಡು ಗುಂಪುಗಳಾಗಿವೆ.
ರಾಜ್ಯ ಬಿಜೆಪಿಯ ಬೀದಿ ಕಾಳಗಕ್ಕೆ ತೆರೆ ಎಳೆಯಲು ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದು ಮೂರು ದಿನ ನಡೆಸಿದ ಕಸರತ್ತು ಎಷ್ಟರ ಮಟ್ಟಿಗೆ ಫಲಕಾರಿಯಾಗಿದೆ ಎಂಬುದನ್ನು ಬರಲಿರುವ ದಿನಗಳೇ ಹೇಳಬೇಕು. ಅರುಣ್ ಸಿಂಗ್ ದಿಲ್ಲಿಗೆ ಹೋಗಿ ವರಿಷ್ಠರೆಂದು ಕರೆಯಲ್ಪಡುವ ನಾಯಕರಿಬ್ಬರಿಗೆ ವರದಿ ನೀಡಿದ ನಂತರ ಅವರು ಕೈಗೊಳ್ಳುವ ತೀರ್ಮಾನದ ಮೇಲೆ ಮುಂದಿನದೆಲ್ಲವೂ ನಿರ್ಧಾರವಾಗುತ್ತವೆೆ.ಅದೇನೇ ಇರಲಿ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಮೇಲುಗೈ ಸಾಧಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಆರೋಪಗಳಿಲ್ಲವೆಂದಲ್ಲ. ಆದರೆ, ಆರೋಪ ಮಾಡುವವರಿಗೆ ನೈತಿಕತೆ ಇದ್ದರೆ ಅದಕ್ಕೊಂದು ಅರ್ಥ ಬರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುವ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ನೀಡಿದ್ದರೆ ಆತ ಯಡಿಯೂರಪ್ಪ ಇಂದ್ರ, ಚಂದ್ರ ಎಂದು ಹೊಗಳಿಕೊಂಡು ಇರುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಯಡಿಯೂರಪ್ಪವಿರುದ್ಧ ಧ್ವನಿಯೆತ್ತಿದ ಭಿನ್ನಮತೀಯರ ಹಿಂದೆ ಯಾರಿದ್ದಾರೆಂಬುದು ಗುಟ್ಟಿನ ಸಂಗತಿಯಲ್ಲ. ತನ್ನ ಸೂತ್ರದ ಗೊಂಬೆಯ ಮೂಲಕ ಆಡಳಿತವನ್ನು ಸಂಪೂರ್ಣ ಕೈವಶ ಮಾಡಿಕೊಳ್ಳಬೇಕೆಂಬ ಶಿಸ್ತಿನ ಸಂಘಟನೆ. ಈ ಅಶಿಸ್ತಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಯಡಿಯೂರಪ್ಪ ಬಣದ ಕೆಲವರು ಗುಟ್ಟಾಗಿ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪನವರನ್ನು ಬದಲಿಸಿದರೆ ಅವರ ಜಾಗಕ್ಕೆ ಬರುವವರೇನೂ ಮಹಾ ಪ್ರಾಮಾಣಿಕರಲ್ಲ. ದಕ್ಷರಲ್ಲ ಎಂಬುದು ಗೊತ್ತಿದ್ದೇ, ನಾಯಕತ್ವದ ಬಗ್ಗೆ ತುಟಿ ಬಿಚ್ಚಿದರೆ ಶಿಸ್ತು ಕ್ರಮ ಎದುರಿಸಬೇಕಾದೀತೆಂದು ಅರುಣ್ ಸಿಂಗ್ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ಸರಕಾರದ ಪತನ ನಿರೀಕ್ಷಿಸುತ್ತಿರುವ ಪ್ರತಿಪಕ್ಷಗಳಿಗೆ ಅನುಕೂಲ ಮಾಡಿ ಕೊಟ್ಟಂತಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಚಿಂತೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಕಾಂಗ್ರೆಸ್‌ಗೆ ಬಿಜೆಪಿ ಎಂದೂ ಪರ್ಯಾಯವಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೂ ರಾಜ್ಯದಲ್ಲಿ ಸ್ಥಿರ ಸರಕಾರವನ್ನು ನೀಡುವಲ್ಲಿ ಅದು ವಿಫಲಗೊಂಡಿದೆ. ಅಷ್ಟೇ ಅಲ್ಲ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯವಾದ ನೆರವನ್ನು ಪಡೆಯುವಲ್ಲಿ ರಾಜ್ಯದ ಬಿಜೆಪಿ ಸಂಸದರು, ಶಾಸಕರು ವಿಫಲಗೊಂಡಿದ್ದಾರೆ.
ಯಡಿಯೂರಪ್ಪನವರ ಜಾಗಕ್ಕೆ ಬರಲು ಸಕ್ಕರೆ ಮತ್ತು ಆಟೊಮೊಬೈಲ್ ಉದ್ಯಮ ನಡೆಸುವ ರಾಜಕಾರಣಿಗಳು ಸಜ್ಜಾಗಿದ್ದಾರೆ. ಉದ್ಯಮಿಗಳಿಗೆ, ಬಂಡವಾಳಗಾರರಿಗೆ ರಾಜಕೀಯ ಅಧಿಕಾರ ಎಂಬುದು ಬಂಡವಾಳ ಹೂಡಿ ಲಾಭಗಳಿಸುವ ದಂಧೆ ಇದ್ದಂತೆ. ಅವರಿಂದ ಜನಪರ ಕಾಳಜಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹವರ ಬೆಂಬಲದಿಂದಲೇ ರಾಜಕಾರಣ ಮಾಡುತ್ತ್ತಾ ಬಂದ ಯಡಿಯೂರಪ್ಪನವರ ಬಗ್ಗೆ ತಕರಾರುಗಳಿದ್ದರೂ ಅವರಿಗೆ ವೀರಶೈವ ಲಿಂಗಾಯತರ ಬೆಂಬಲವಿದೆ. ಸದ್ಯಕ್ಕೆ ಅವರ ಸ್ಥಾನ ಪಲ್ಲಟ ಮಾಡುವುದು ಸುಲಭವಲ್ಲ.
ಕರ್ನಾಟಕದಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ ಪಕ್ಕದ ಕೇರಳ ರಾಜ್ಯದ ರಾಜಕಾರಣವನ್ನು ನಾವು ಗಮನಿಸಬೇಕು. ಅಲ್ಲಿ ವಿಧಾನಸಭೆ ಚುನಾವಣೆ ನಡೆದು ಎಡರಂಗ ಅಧಿಕಾರಕ್ಕೆ ಬಂತು. ಫಲಿತಾಂಶ ಬಂದ ಒಂದೆರಡು ದಿನಗಳಲ್ಲೇ ಸರಕಾರ ಅಸ್ತಿತ್ವಕ್ಕೆ ಬಂತು. ಮರುಕ್ಷಣದಲ್ಲೇ ಸಚಿವ ಸಂಪುಟ ರಚನೆಯಾಯಿತು. ಈ ಬಾರಿ ಹಳಬರನ್ನೆಲ್ಲ ಕೈ ಬಿಟ್ಟು ಹೊಸ ಯುವಕರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಾಯಿತು. ಕೋವಿಡ್ ಮೊದಲ ಅಲೆ ನಿಭಾಯಿಸುವಲ್ಲಿ ಅಂತರ್‌ರಾಷ್ಟ್ರೀಯ ಮನ್ನಣೆ ಪಡೆದಿದ್ದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ಬದಲಾಗಿ ಇನ್ನೊಬ್ಬ ಯುವ ಸಂಗಾತಿಗೆ ಅವಕಾಶ ನೀಡಿದಾಗಲೂ ಅಲ್ಲಿ ಅಪಸ್ವರ ಕೇಳಿ ಬರಲಿಲ್ಲ. ಶೈಲಜಾ ಟೀಚರ್ ಮುನಿಸಿಕೊಳ್ಳಲಿಲ್ಲ. ಎಲ್ಲ ಸುಗಮವಾಗಿ ನಡೆಯಿತು. ಒಂದು ಸಂಘಟನೆಯ ಪಕ್ಷದ ಶಿಸ್ತು ಅಂದರೆ ಇದು.
ಸಿರಿವಂತರ ಕೃಪಾಶ್ರಯದಲ್ಲಿ ಸಂಘಟನೆ ಕಟ್ಟಿ ಲಾಠಿ ತಿರುಗಿಸುವುದು, ಜನಸಾಮಾನ್ಯರ ನಡುವೆ ಕೋಮು ಬೆಂಕಿಯನ್ನು ಹಚ್ಚುವುದು ಶಿಸ್ತಲ್ಲ. ದೇಶಭಕ್ತಿಯೂ ಅಲ್ಲ. ಅಂತಲೇ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಪರ ಕಾಳಜಿ ಇರುವ, ನೈತಿಕತೆಯ ಸ್ಪರ್ಶವಿರುವ, ಶಿಸ್ತು ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಬದ್ಧವಾದ, ಕೋಮು ಸೌಹಾರ್ದವನ್ನು ಕಾಪಾಡಲು ಯಾವುದೇ ಬೆಲೆಯನ್ನಾದರೂ ತೆರುವ ಪಕ್ಷ ಯಾವುದೇ ಇರಲಿ, ಅದು ಮೂಡಿ ಬರಬೇಕು. ಕೇರಳದಲ್ಲಿ ಎಡಪಂಥೀಯ ಸರಕಾರದ ಪ್ರಯೋಗ ಯಶಸ್ವಿಯಾಗಿದ್ದರೂ ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಲ್ಲಿ ವಿಫಲಗೊಂಡಿದೆ. ವೈಫಲ್ಯದ ಕಾರಣ, ಲೋಪ ದೋಷಗಳನ್ನು ಕಂಡು ಹಿಡಿದರೆ, ತಪ್ಪುಗಳನ್ನು ಸರಿಪಡಿಸಿಕೊಂಡರೆ ಎಡಪಂಥೀಯ ಪಕ್ಷಗಳಿಗೆ ಈಗಲೂ ಉತ್ತಮ ಅವಕಾಶವಿದೆ.
ಇದು ಕರ್ನಾಟಕ ಮಾತ್ರವಲ್ಲ ಭಾರತದ ಇಂದಿನ ರಾಜಕೀಯ ಚಿತ್ರಣ. ವ್ಯವಸ್ಥೆ ಅವ್ಯವಸ್ಥೆಯಾಗಿ, ಮುಂದೆ ಕುವ್ಯವಸ್ಥೆಯ ರೂಪ ತಾಳಿ ಸುವ್ಯವಸ್ಥೆ ಬರುತ್ತದೆ ಎಂದು ಸೋಷಲಿಸ್ಟ್ ನಾಯಕ ರಾಮ್ ಮನೋಹರ್ ಲೋಹಿಯಾ ಹೇಳುತ್ತಿದ್ದರು. ಈಗ ಕುವ್ಯವಸ್ಥೆಯ ನಡುವೆ ಇದ್ದೇವೆ. ಸುವ್ಯವಸ್ಥೆಯ ದಿನಗಳಿಗಾಗಿ ಕನಸು ಕಾಣೋಣ. ಕನಸು ಕಾಣುವುದು ಕೂಡ ಮುಂದಿನ ಭರವಸೆಯ ದಾರಿ ತೋರಿಸುತ್ತದೆ.