varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 21 Jun, 2021
ಪಿ.ಎ.ರೈ

ಮುಂದಿನ ಚುನಾವಣೆಯಲ್ಲಿಯೂ ‘ಮೋದಿ ಮೋದಿ’ ಎಂದೇನಾದರೂ ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಮತ್ತೆ, ಈಗ ಸ್ಮಶಾನದಲ್ಲಿ ಬೂದಿಯಾಗುತ್ತಿರುವುದು ಶ್ರೀಮಂತರ ಬದುಕೇ?


ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ತಾನು ಎಂದು ತೋರಿಸಬೇಕೆಂದರೆ ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಿದೆ - ಕಪಿಲ್‌ಸಿಬಲ್, ಕಾಂಗ್ರೆಸ್ ಹಿರಿಯ ನಾಯಕ
ಮೊದಲು ಕಾಂಗ್ರೆಸ್ ಎಂಬ ಪಕ್ಷವೊಂದು ಜೀವಂತ ಇದೆ ಎಂದು ದೇಶಕ್ಕೆ ತಿಳಿಸಿದರೆ ಹೇಗೆ?


ನಮ್ಮ ಬಿಜೆಪಿ ಪಕ್ಷದ ವಿಶೇಷವೆಂದರೆ ಇಲ್ಲಿ ಪ್ರಜಾಪ್ರಭುತ್ವ ಇದೆ. ಇಲ್ಲಿ ಹೇಳುವವರು ಕೇಳುವವರೂ ಇದ್ದಾರೆ - ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮ ಪಕ್ಷದಲ್ಲಿ ಹೇಳುವವರೆಂದರೆ ಸುಳ್ಳು ಹೇಳುವವರು, ಕೇಳುವವರೆಂದರೆ ಲಂಚ ಕೇಳುವವರು, ಇಷ್ಟು ನಮಗೆ ಈಗಾಗಲೇ ಗೊತ್ತು. ನಿಮ್ಮಲ್ಲಿ ಪ್ರಜಾಪ್ರಭುತ್ವಕ್ಕೆ ಏನರ್ಥ ಎಂದು ನೀವೇ ವಿವರಿಸಿ ಸಾರ್.


ಕೊರೋನ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ವಿಶ್ವ ಸಮುದಾಯ ‘ಒಂದೇ ಭೂಮಿ ಒಂದೇ ಆರೋಗ್ಯ’ಕಾರ್ಯವಿಧಾನ ಅಳವಡಿಸಿಕೊಳ್ಳಬೇಕು - ನರೇಂದ್ರ ಮೋದಿ, ಪ್ರಧಾನಿ
ಒಂದೊಂದು ರೋಗಕ್ಕೆ ಒಂದೊಂದು ಮದ್ದು ಕೊಡುವುದನ್ನು ಬಿಟ್ಟು ಎಲ್ಲ ರೋಗಕ್ಕೂ ಒಂದೇ ಮದ್ದು ಕೊಡುವ ಸಂಪ್ರದಾಯವನ್ನು ಆರಂಭಿಸಬೇಕು.


ಕೆಲವರು ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ - ಡಿ.ವಿ.ಸದಾನಂದಗೌಡ, ಕೇಂದ್ರಸಚಿವ
ಕೆಲವರು ಅಧಿಕಾರವಿಲ್ಲದ ಬದುಕನ್ನು ಕನಸಿನಲ್ಲಿ ಕಾಣುವುದಕ್ಕೂ ತಯಾರಿಲ್ಲ.


ಹಿಂದಿ ಭಾಷೆ ಹೇರಿಕೆ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ -ಮುಖ್ಯಮಂತ್ರಿ ಚಂದ್ರು, ಮಾಜಿ ಶಾಸಕ
ಅದಕ್ಕೆಂದೇ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆಯಂತೆ.


ಭಾರತಕ್ಕೆ ಯಾವುದೇ ಹೊರಗಿನ ಶತ್ರುಗಳ ಅವಶ್ಯಕತೆಯೇ ಇಲ್ಲ, ಕಾಂಗ್ರೆಸ್ ಪಕ್ಷವೇ ಸಾಕು - ಸಿ.ಟಿ.ರವಿ, ಶಾಸಕ
ಭಾರತದಲ್ಲಿ ನಿಮ್ಮಂಥವರು ಇದ್ದಾರೆಂದು ಚೀನಾದವರಿಗೆ ಗೊತ್ತಾಗಿ ಬಿಟ್ಟರೆ ಅವರು ನಿಮ್ಮ ಮೇಲೆ ಭರವಸೆ ಇಟ್ಟು, ನಮ್ಮ ಮೇಲೆ ಆಕ್ರಮಣದ ಯೋಜನೆಗಳನ್ನೆಲ್ಲ ಕೈಬಿಡುತ್ತಾರೆ.


ರಾಹುಲ್‌ಗಾಂಧಿಯವರಿಗೆ ಜನಸಾಮಾನ್ಯರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡಲಿ -ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಕಾಂಗ್ರೆಸ್ ಆಡಳಿತದ ರಾಜ್ಯಗಳು, ಮೋದಿ ಆಡಳಿತದ ದೇಶದೊಳಗಿರುವುದರಿಂದ ಕಡಿಮೆ ಮಾಡಲು ಸಮಸ್ಯೆ ಆಗಿದೆಯಂತೆ.


ಕಾಂಗ್ರೆಸ್‌ನವರು ಹೆಣ ಮತ್ತು ಹಣದ ಮೇಲೆ ರಾಜಕೀಯ ಮಾಡುವವರು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಬಿಜೆಪಿ ಬಿಟ್ಟರೆ ಇತರ ಪಕ್ಷಗಳು ಹೆಣ ಮತ್ತು ಹಣದಲ್ಲಿ ರಾಜಕೀಯ ಮಾಡಬಾರದೇ?


ಪ್ರಧಾನಿ ಮೋದಿಯವರು ಜನರ ರಕ್ತವನ್ನು ತಿಗಣೆ ಹೀರಿದಂತೆ ಹೀರುತ್ತಿದ್ದಾರೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ತಿಗಣೆಗಳು ಒಕ್ಕೊರಲಿನಲ್ಲಿ ನಿಮ್ಮ ಹೇಳಿಕೆಯನ್ನು ಖಂಡಿಸಿವೆ.


ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಯ ವಿಷಯದಲ್ಲಿ ನಮ್ಮ ಕುಟುಂಬ ಯಾರ ಪರವೂ ಇಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕುಟುಂಬದ ನಿಲುವು ಕೇಳಲು ಇದೇನು ನೆಂಟಸ್ತಿಕೆಯ ವಿಚಾರವೇ?


ನಾನು ಸಚಿವನಾಗಿರುವವರೆಗೆ ರಾಜೀವ್‌ಗಾಂಧಿ ಆರೋಗ್ಯ ವಿವಿ ಕುಲಪತಿ ಸ್ಥಾನದಲ್ಲಿ ಕಳಂಕಿತರು ಕೂರಲು ಸಾಧ್ಯವಿಲ್ಲ - ಡಾ.ಸುಧಾಕರ್, ಸಚಿವ
ಕುರ್ಚಿಯ ಜಾಗದಲ್ಲಿ ಮಂಚವನ್ನು ಒದಗಿಸುವ ಉದ್ದೇಶ ಇದೆಯೇ?


ಕೇಂದ್ರ ಮತ್ತು ರಾಜ್ಯದಲ್ಲಿರುವುದು ಶಾಪಗ್ರಸ್ತ ಸರಕಾರಗಳು - ದಿನೇಶ್ ಗುಂಡೂರಾವ್, ಕೆಪಿಸಿಸಿ ಮಾಜಿ ಅಧ್ಯಕ್ಷ
ನೀವು ವಿರೋಧ ಪಕ್ಷದಲ್ಲಿರುವುದು ವರದಾನದ ಫಲವೇ?


ಪಕ್ಷ ಎನ್ನುವುದು ತಾಯಿ ಇದ್ದಂತೆ. ಅದಕ್ಕೆ ಯಾವತ್ತೂ ದ್ರೋಹ ಬಗೆಯಬಾರದು - ಚಿರಾಗ್ ಪಾಸ್ವಾನ್, ಎಲ್‌ಜೆಪಿ ನಾಯಕ
ತಂದೆಯನ್ನು ಎದೆಯೊಳಗಿಂದ ಕಿತ್ತು ಅಲ್ಲಿ ಮೋದಿಯನ್ನು ಸ್ಥಾಪಿಸಿದ್ದು ಈ ಕಾರಣಕ್ಕಾಗಿಯೇ ?


ಪಿಎಂ ಕೇರ್ಸ್ ಫಂಡ್ ಲೆಕ್ಕವನ್ನು ಯಾರೂ ಕೇಳಬಾರದು ಎಂದು ಕೇಂದ್ರ ಸರಕಾರ ಫರ್ಮಾನು ಹೊರಡಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ - ಎಂ.ಬಿ.ಪಾಟೀಲ್, ಮಾಜಿ ಸಚಿವ
ದೇಶದ ಜನರಿಗೆ ಆ ವಿಷಯದಲ್ಲಿ ಯಾವ ಅನುಮಾನವೂ ಉಳಿದಿಲ್ಲ.


ಹಿಂದೂ ಸಮಾಜಕ್ಕಾಗಿ ಏನು ಮಾಡಲಾಗದಿದ್ದರೂ ತೊಂದರೆಯಿಲ್ಲ, ಕನಿಷ್ಠ ಮೂವರು ಮಕ್ಕಳನ್ನಾದರೂ ಹುಟ್ಟಿಸಿ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಯಾಕೆ ನಿಮ್ಮ ರಾಜಕೀಯಕ್ಕಾಗಿ ಅವರನ್ನು ಬಲಿ ಕೊಡುವುದಕ್ಕೋ?


ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಪ್ರಾದೇಶಿಕ ಪಕ್ಷವೇ ಬೇಕು ಎಂಬ ಬಯಕೆ ಜನರಲ್ಲಿದೆ - ವೈ.ಎಸ್.ವಿ.ದತ್ತಾ, ಜೆಡಿಎಸ್ ಮಾಜಿ ಶಾಸಕ
ಪ್ರಾದೇಶಿಕ ಪಕ್ಷಗಳು ಅಪ್ಪ - ಮಕ್ಕಳ ಹಿತಾಸಕ್ತಿ ರಕ್ಷಣೆಗೆ ಸೀಮಿತವಾದರೆ?


ನನ್ನ ಅಪ್ಪನಿಗೆ ಸಿನೆಮಾ ತಯಾರಿಸುವುದು ಗೊತ್ತಿತ್ತೇ ಹೊರತು ಅದರಲ್ಲಿ ಕಾಸು ಮಾಡುವುದು ಹೇಗೆ ಎಂದು ಗೊತ್ತಿರಲಿಲ್ಲ - ಆಮೀರ್‌ಖಾನ್, ನಟ
ಮಗ ಅದರಲ್ಲಿ ಯಶಸ್ವಿಯಾಗಿರುವುದು ನೋಡಿ ಅವರಿಗೆ ಅಚ್ಚರಿ ಆಗಿರಬೇಕು.


ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಶೋತ್ತರಗಳನ್ನು ಈಡೇರಿಸಲು ನಾನು ಶೀಘ್ರವೇ ಎಐಎಡಿಎಂಕೆ ಪಕ್ಷಕ್ಕೆ ಮರಳಲಿದ್ದೇನೆ- ಶಶಿಕಲಾ, ಎಐಎಡಿಎಂಕೆ ಪದಚ್ಯುತ ನಾಯಕಿ
ನಿಮ್ಮನ್ನು ಮರಳಿ ಜೈಲಿಗೆ ಕಳಿಸಲು ಸಿಬಿಐ ಕೂಡ ಸಿದ್ಧವಾಗಿ ನಿಂತಿದೆ.


ವಿವಿಧ ಪಕ್ಷಗಳಿಂದ ಬಿಜೆಪಿಗೆ ಬಂದ 17 ಶಾಸಕರು ಸಚಿವರಾದ ಬಳಿಕ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ - ಕೆ.ಎಸ್.ಈಶ್ವರಪ್ಪ, ಸಚಿವ
ನೀವು ಒಬ್ಬರು ಮಾತ್ರ ಹೊರಟು ಹೋದರೆ ಸಾಕು, ಎಲ್ಲ ಗೊಂದಲಗಳು ನಿವಾರಣೆಯಾಗುತ್ತವೆ ಎಂದು ಪಕ್ಷದಲ್ಲಿ ಹೆಚ್ಚಿನವರು ಹೇಳಿಕೊಳ್ಳುತ್ತಿದ್ದಾರಲ್ಲಾ!


ರಾಜ್ಯದಲ್ಲಿ ನಾಯಕತ್ವದ ಗೊಂದಲ ಎಲ್ಲಿ, ಹೇಗೆ ಹುಟ್ಟಿತು ಎಂಬುದು ನನಗೆ ಗೊತ್ತಾಗುತ್ತಿಲ್ಲ - ಜಗದೀಶ್ ಶೆಟ್ಟರ್, ಸಚಿವ
ಗೊಂದಲ ಸೃಷ್ಟಿಸಿದವರಿಗೆ ಅದು ಗೊತ್ತಾಗುವುದೂ ಇಲ್ಲ.


ಕೆಲವರು ಈಗಾಗಲೇ ಸೂಟು ಬೂಟು ಹೊಲಿಸಿಕೊಂಡು ಮುಖ್ಯಮಂತ್ರಿ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ - ಎಂ.ಪಿ.ರೇಣುಕಾಚಾರ್ಯ, ಶಾಸಕ
ಕೇಂದ್ರ ವರಿಷ್ಠರು ಯಡಿಯೂರಪ್ಪರಿಗೆ ರಾಜ್ಯಪಾಲರ ಸೂಟ್ ಹೊಲಿಯುತ್ತಿರುವ ವದಂತಿಗಳಿವೆ.


ಎಲ್ಲಿಗೆ ಹೋದರೂ ಬುಡಕ್ಕೆ ಇಡೋರು ಒಬ್ಬರು ಇದ್ದೇ ಇರುತ್ತಾರೆ - ಶಾಮನೂರು ಶಿವಶಂಕರಪ್ಪ, ಶಾಸಕ
ಅಲ್ಲಿ ಬುಡಕ್ಕೆ ಇಟ್ಟು ಬಂದವರು, ಇಲ್ಲಿ ಬುಡಕ್ಕೆ ಇಡದೆ ಬಿಡುತ್ತಾರೆಯೇ?


ಜೂನ್ 18ರ ಬಳಿಕ ಯಡಿಯೂರಪ್ಪ ಹೊಸರೂಪದಲ್ಲಿ ಜನರ ಮುಂದೆ ಬರಲಿದ್ದಾರೆ - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ವೀಡಿಯೊ ಏನಾದರೂ ಬಿಡುಗಡೆ ಆಗಲಿಕ್ಕುಂಟೇ?


ಸತ್ಕಾರ್ಯಗಳೇ ಸುಖ ನಿದ್ದೆಯ ಗುಟ್ಟು - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ನಿಮ್ಮ ನಿದ್ರಾರಹಿತ ರಾತ್ರಿಗಳ ಗುಟ್ಟು ರಟ್ಟಾಯಿತು ಬಿಡಿ.


ಮುಖ್ಯಮಂತ್ರಿಯಾಗುವ ಆಸೆ ನನಗೂ ಇದೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು - ಆರ್.ಅಶೋಕ್, ಸಚಿವ
ಕಾಲ ಎನ್ನುವುದಕ್ಕೆ ಯಮ ಎನ್ನುವ ಅರ್ಥವೂ ಇದೆ.


ನನ್ನ ತೂಕ ಜಾಸ್ತಿಯಾಗಿದ್ದಾಗ ಹಲವರು ನನ್ನನ್ನೂ ಆಂಟಿ ಎಂದು ಕರೆಯುತ್ತಿದ್ದರು. ಈಗ ಸಣಕಲಿ ಎಂದು ಕರೆಯುತ್ತಿದ್ದಾರೆ - ಪ್ರಿಯಾಮಣಿ, ನಟಿ
ಸಣಕಲಿ ಆಂಟಿ ಎಂದು ಕರೆಸಿಕೊಳ್ಳುವುದಕ್ಕಿಂತ ಕೇವಲ ಆಂಟಿ ಎಂದು ಕರೆಸಿಕೊಳ್ಳುವುದು ಚೆನ್ನಾಗಿತ್ತು.


ಸಿದ್ದರಾಮಯ್ಯರಂತಹ ನಾಯಕರು ಕಾಂಗ್ರೆಸ್‌ನಲ್ಲಿ ಇರುವುದರಿಂದಲೇ ಆ ಪಕ್ಷ ಉಳಿದಿದೆ - ಎಚ್.ಡಿ.ರೇವಣ್ಣ, ಮಾಜಿ ಸಚಿವ
 ಅವ್ರ ನಿಮ್ಮ ಕಡೆ ಇದ್ದಿದ್ದರೆ ನಿಮ್ಮ ಪಕ್ಷ ಇಂದು ಜೀವಂತ ಉಳಿದಿರುತ್ತಿತ್ತು ಎಂದು ಅನಿಸುತ್ತಿಲ್ಲವೇ ನಿಮಗೆ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು