ಏಕೈಕ ಪ್ರಯಾಣಿಕನನ್ನು ಹೊತ್ತು ದುಬೈಗೆ ಹಾರಿದ ಏರ್ ಇಂಡಿಯಾ ವಿಮಾನ !
ದುಬೈ, ಜೂ.23: ಬುಧವಾರ ಪಂಜಾಬ್ ನ ಅಮೃತಸರದಿಂದ ದುಬೈಗೆ ಪ್ರಯಾಣಿಸಿದ ಏರ್ ಇಂಡಿಯಾ ವಿಮಾನದಲ್ಲಿ ಒಬ್ಬರೇ ಪ್ರಯಾಣಿಕರಿದ್ದರು. ವಿಮಾನದಲ್ಲಿ ಒಬ್ಬನೇ ಇದ್ದುದು ವಿಶೇಷ ಅನುಭವವಾಗಿದ್ದು ನನ್ನ ಹೆಜ್ಜೆಗಳೊಂದಿಗೆ ವಿಮಾನದ ಉದ್ದವನ್ನು ಅಳೆಯುತ್ತಿದ್ದೆ ಎಂದು ಯುಎಇಯಲ್ಲಿ ನೆಲೆಸಿರುವ ಉದ್ಯಮಿ ಎಸ್.ಪಿ.ಸಿಂಗ್ ಒಬೆರಾಯ್ ಪ್ರತಿಕ್ರಿಯಿಸಿದ್ದಾರೆ.
ಯುಎಇ ಗೋಲ್ಡನ್ ವೀಸಾ ಹೊಂದಿರುವ ಸಿಂಗ್, ಜೂನ್ 12ರಂದು ಭಾರತಕ್ಕೆ ಪ್ರಯಾಣಿಸಿದ್ದರು. ಪ್ರಯಾಣಿಸಲು ಅವಕಾಶ ನೀಡಲಾಗದು ಎಂದು ನನಗೆ ತಿಳಿಸಲಾಯಿತು. ಆದರೆ ಯುಎಇ ಪ್ರವೇಶಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳೂ ನನ್ನಲ್ಲಿ ಕ್ರಮಬದ್ಧವಾಗಿದ್ದವು. ಗೋಲ್ಡನ್ ವೀಸಾ ಹೊಂದಿದ್ದರೆ ನಿಜವಾಗಿಯೂ ಹಲವು ಪ್ರಯೋಜನಗಳಿವೆ ಮತ್ತು ಈ ದಿನ ಒಂದು ಲಾಭದ ಪ್ರಯೋಜನ ಪಡೆದಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಕೋವಿಡ್ ನೆಗೆಟಿವ್ ವರದಿ ಪ್ರಮಾಣಪತ್ರ ಹೊಂದಿರುವ ಸಿಂಗ್ ದುಬೈಗೆ ಆಗಮಿಸಿದ ಬಳಿಕ ಕೋವಿಡ್-19 ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಿದೆ. ಕಳೆದ ತಿಂಗಳು ಮುಂಬೈಯಿಂದ ದುಬೈಗೆ ಪ್ರಯಾಣಿಸಿದ್ದ ಯುಎಇ ವಿಮಾನದಲ್ಲಿ ದುಬೈ ಮೂಲದ ಸಂಸ್ಥೆಯೊಂದರ ಸಿಇಒ ಭವೇಶ್ ಜವೇರಿ ಏಕೈಕ ಪ್ರಯಾಣಿಕರಾಗಿದ್ದರು.