ಕೊರೋನ ಲಸಿಕೀಕರಣದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ದ್ವಿತೀಯ
ಫೈಲ್ ಫೋಟೊ
ಉಡುಪಿ, ಜೂ.26: ಸದ್ಯದ ಮಟ್ಟಿಗೆ ಕೋವಿಡ್ ನಿಯಂತ್ರಿಸಬಲ್ಲ ಏಕೈಕ ಪರಿಣಾಮಕಾರಿ ಉಪಕ್ರಮ ಎಂದು ವಿಶ್ವದಾದ್ಯಂತ ಪರಿಗಣಿಸಲ್ಪಟ್ಟಿರುವ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ.
ಬೆಂಗಳೂರಿನ ಕರ್ನಾಟಕ ರಾಜ್ಯ ಕೋವಿಡ್ ವಾರ್ ರೂಮ್ ಇಂದು ಸಂಜೆ ಬಿಡುಗಡೆಗೊಳಿಸಿರುವ ಜೂ.25ರವರೆಗಿನ ಒಂದು ವಾರದ ರಾಜ್ಯ ಕೋವಿಡ್-19 ಅಂಕಿಅಂಶಗಳಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
ಕೋವಿಡ್ ಲಸಿಕೀಕರಣದಲ್ಲಿ ಉಡುಪಿ ಜಿಲ್ಲೆಯಲ್ಲಿ ಇದುವರೆಗಿನ ಸಾಧನೆ ಶೇ.43.24 ಆಗಿದೆ. ಬೆಂಗಳೂರು ನಗರ ಶೇ.58.99 ಸಾಧನೆಯೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ರಾಮನಗರ ಜಿಲ್ಲೆ ಶೇ.40.81, ಮೈಸೂರು ಶೇ.39.96, ಕೋಲಾರ 39.40 ಹಾಗೂ ಕೊಡಗು ಶೇ.38.72 ಸಾಧನೆ ಗಳೊಂದಿಗೆ ಮೂರರಿಂದ ಆರನೇ ಸ್ಥಾನ ಪಡೆದಿವೆ.
ದಕ್ಷಿಣ ಕನ್ನಡ ಜಿಲ್ಲೆ ಶೇ.35.84, ಉತ್ತರ ಕನ್ನಡ ಜಿಲ್ಲೆ ಶೇ.35.33, ಶಿವಮೊಗ್ಗ ಶೇ.31.49 ಹಾಗೂ ಚಿಕ್ಕಮಗಳೂರು ಶೇ.32.99 ಸಾಧನೆ ಮಾಡಿವೆ. ಹಾವೇರಿ ಜಿಲ್ಲೆ ಶೇ.18.51 ಹಾಗೂ ಗುಲ್ಬರ್ಗ ಶೇ.18.79 ಮಂದಿಗೆ ಲಸಿಕೆಯನ್ನು ನೀಡಿ ಕೊನೆಯ ಎರಡು ಸ್ಥಾನಗಳನ್ನು ಹಂಚಿಕೊಂಡಿವೆ ಎಂದು ಅಂಕಿ ಅಂಶ ತಿಳಿಸಿವೆ.
ಶೇ.97.36ಕ್ಕೇರಿದ ಗುಣಮುಖರ ಪ್ರಮಾಣ: ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಶೇ.80ಕ್ಕಿಳಿದಿದ್ದ ಜಿಲ್ಲೆಯ ಗುಣಮುಖ ಪ್ರಮಾಣ, ಇದೀಗ ಜೂ.25ಕ್ಕೆ ಶೇ.97.36ಕ್ಕೇರಿದೆ. ಈ ಅವಧಿಯಲ್ಲಿ ರಾಜ್ಯದ ಸರಾಸರಿ ಗುಣಮುಖ ಪ್ರಮಾಣ ಶೇ.94.87 ಆಗಿದೆ.
ಇದರಲ್ಲಿ ಯಾದಗಿರಿ ಜಿಲ್ಲೆ ಶೇ.98.78ರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ರಾಯಚೂರು 98.77ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಲಬುರ್ಗಿ ಶೇ.98.30 ಹಾಗೂ ಬೀದರ್ 98.13ರೊಂದಿಗೆ ನಂತರದ ಸ್ಥಾನಗಳನ್ನು ಹೊಂದಿವೆ. ಗುಣಮುಖರ ಪ್ರಮಾಣದಲ್ಲಿ ಚಿಕ್ಕಮಗಳೂರು ಶೇ.94.88, ದಕ್ಷಿಣ ಕನ್ನಡ ಶೇ.91.72, ಕೊಡಗು 93.62, ಶಿವಮೊಗ್ಗ 95.06 ಹಾಗೂ ಉತ್ತರಕನ್ನಡ ಶೇ.96.47 ಸಾಧನೆ ಮಾಡಿವೆ.
ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ಪರೀಕ್ಷೆ: ಪ್ರತಿದಿನ ನಡೆಯುವ ಕೋವಿಡ್ ಪರೀಕ್ಷೆಯ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು ನಗರವನ್ನು ಹೊರತು ಪಡಿಸಿದರೆ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನ ಒಂದು ಮಿಲಿಯ (10 ಲಕ್ಷ) ಮಂದಿಯಲ್ಲಿ 42,857 ಮಂದಿಯ ಪರೀಕ್ಷೆ ನಡೆಯುತ್ತಿದೆ. ಇದೇ ವೇಳೆ ಕೊಡಗಿನಲ್ಲಿ 33,882, ಉಡುಪಿಯಲ್ಲಿ 26,821 ಮಂದಿಯ ಪರೀಕ್ಷೆ ಯನ್ನು ನಡೆಸಲಾಗುತ್ತಿದೆ. 8,694 ಮಂದಿಯ ಪರೀಕ್ಷೆಯೊಂದಿಗೆ ರಾಯಚೂರು ಕೊನೆಯ ಸ್ಥಾನದಲ್ಲಿದೆ.
ಕಳೆದ 14 ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡು ಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇಲ್ಲಿ 5342 ಮಂದಿ ಸೋಂಕಿತರು ಪತ್ತೆಯಾದರೆ ನಗರ ಪ್ರದೇಶಗಳಲ್ಲಿ 2721 ಮಂದಿ ಕಂಡುಬಂದಿದ್ದಾರೆ. ನಗರ ಪ್ರದೇಶದಲ್ಲಿ ಅತಿ ಹೆಚ್ಚು ಸೋಂಕಿತರಿರುವುದು ಮೈಸೂರು ಜಿಲ್ಲೆಯಲ್ಲಿ. ಇಲ್ಲಿ 4623 ಮಂದಿ ಸೋಂಕಿತರಿದ್ದಾರೆ.
ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1598 ಮಂದಿ ಸೋಂಕಿತರಿದ್ದರೆ ನಗರದ ಭಾಗಗಳಲ್ಲಿ 376 ಮಂದಿ ಮಾತ್ರ ಕಂಡುಬಂದಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಶೇ.4.14ಕ್ಕಿಳಿದ ಪಾಸಿಟಿವಿಟಿ ರೇಟ್
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗಳ ಸತತ ಪ್ರಯತ್ನದ ಫಲವಾಗಿ ಶೇ.5 ಪಾಸಿಟಿವಿಟಿ ಗುರಿಯನ್ನು ಕಳೆದ ಜೂ.23ರಂದು ಸಾಧಿಸಿದ ಉಡುಪಿ ಜಿಲ್ಲೆಯ ಕಳೆದ ಏಳು ದಿನಗಳ ಸರಾಸರಿ ಪಾಸಿಟಿವಿಟಿ ಪ್ರಮಾಣ ಜೂ.25ಕ್ಕೆ ಶೇ.4.14 ಆಗಿದೆ ಎಂದು ವಾರ್ರೂಮ್ ಅಂಕಿಅಂಶ ತಿಳಿಸಿದೆ. ಜೂ.23ಕ್ಕೆ 4.8ಕ್ಕಿಳಿದಿದ್ದ ಜಿಲ್ಲೆಯ ಪಾಸಿಟಿವಿಟಿ ಜೂ.24ಕ್ಕೆ ಶೇ.4.4ಕ್ಕೆ ಇಳಿದಿತ್ತು. ಈ ಮೂಲಕ ಜಿಲ್ಲಾಡಳಿತ ಸಮಾಧಾನದ ನಿಟ್ಟುಸಿರುವ ಬಿಡುವಂತಾಗಿದೆ.
ರಾಜ್ಯದಲ್ಲಿ ಈಗಲೂ ನಾಲ್ಕು ಜಿಲ್ಲೆಗಳ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಮೇಲಿದೆ. ಇದರಲ್ಲಿ ದಕ್ಷಿಣ ಕನ್ನಡ ಸಹ ಸೇರಿದೆ. ಕೊಡಗು ಜಿಲ್ಲೆ ಶೇ.8.55 ಪಾಸಿಟಿವಿಟಿಯೊಂದಿಗೆ ಈಗ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮೈಸೂರು ಶೇ.7.42, ಮಂಗಳೂರು ಶೇ.6.09 ಹಾಗೂ ಹಾಸನ ಶೇ.5.68 ಪಾಸಿಟಿವಿಟಿ ಪ್ರಮಾಣದೊಂದಿಗೆ ಎರಡರಿಂದ ನಾಲ್ಕನೇ ಸ್ಥಾನದಲ್ಲಿವೆ. ದಾವಣಗೆರೆ (4.88), ಚಾಮರಾಜನಗರ (4.58) ಹಾಗೂ ಚಿಕ್ಕಮಗಳೂರು (4.24) ಇದೀಗ ಶೇ.5ರೊಳಗೆ ಪಾಸಿಟಿವಿಟಿಯನ್ನು ತಗ್ಗಿಸಿದ ಜಿಲ್ಲೆಗಳಾಗಿವೆ.
ಬೀದರ್ (ಶೇ.0.36), ಬಾಗಲಕೋಟೆ (0.49), ಯಾದಗಿರಿ (0.56) ಹಾಗೂ ಕಲಬುರ್ಗಿ (0.90) ಶೇ.1ಕ್ಕಿಂತ ಕೆಳಗೆ ತಮ್ಮ ಪಾಸಿಟಿವಿಟಿ ಪ್ರಮಾಣ ವನ್ನು ಇಳಿಸಿದ ಜಿಲ್ಲೆಗಳಾಗಿ ಸಾಧನೆ ಮಾಡಿವೆ.ಕಳೆದ ಏಳು ದಿನಗಳ ಕರ್ನಾಟಕ ರಾಜ್ಯದ ಪಾಸಿಟಿವಿಟಿ ರೇಟ್ ಶೇ.2.75 ಆಗಿದೆ.
ಪಾಸಿಟಿವಿಟಿ ಇನ್ನೂ ಕೆಳಗಿಳಿಯಬೇಕು
''ಪಾಸಿಟಿವಿಟಿ ಇನ್ನೂ ಕೆಳಗಿಳಿಯಬೇಕು, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಇನ್ನಷ್ಟು ಕಡಿಮೆಗೊಳ್ಳಬೇಕು. ಶೇ.5ಕ್ಕಿಂತ ಕಡಿಮೆಯಾ ಗಿದೆ ಎಂದು ಸುಮ್ಮನಿರುವಂತಿಲ್ಲ. ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸ ಬೇಕು. ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕೆಳಗಿಳಿಸುವ ಗುರಿ ಹೊಂದಿರಬೇಕು. ಇದಕ್ಕಾಗಿ ಪರೀಕ್ಷೆಯನ್ನು ಹೆಚ್ಚು ಮಾಡಬೇಕು''.
-ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ.