ಹೊನ್ನಾರು ಒಕ್ಕಲು-ರೈತ ಆಂದೋಲನದ ಕವಿತೆಗಳು
ಕಳೆದೊಂದು ದಶಕದಲ್ಲಿ ಭಾರತೀಯ ಸಾಹಿತ್ಯವನ್ನು ಆಂದೋಲನಗಳು, ಹೋರಾಟಗಳು ತೀವ್ರವಾಗಿ ಪ್ರಭಾವಿಸಿವೆ. ಬಹುಶಃ ಸ್ವಾತಂತ್ರಾನಂತರ ಪ್ರಜಾಸತ್ತಾತ್ಮಕವಾಗಿ ಆಳುತ್ತಿರುವ ಪ್ರಭುತ್ವದ ವಿರುದ್ಧ ಸಾಹಿತ್ಯ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲು. ಕನ್ನಡ ಸಾಹಿತ್ಯದಲ್ಲಿ ಬಂಡಾಯ, ದಲಿತ ಚಳವಳಿಗಳನ್ನು ಗುರುತಿಸಲಾಗುತ್ತದೆಯಾದರೂ, ಅದು ಸುದೀರ್ಘವಾಗಿ ಪ್ರಭಾವ ಬೀರುವಂತಹದ್ದಾಗಿರಲಿಲ್ಲ. ಸಾಹಿತ್ಯವನ್ನು ಅಧ್ಯಯನ ಮಾಡುವುದಕ್ಕಾಗಿಯಷ್ಟೇ ಈ ಪ್ರಕಾರಗಳು ಸೀಮಿತಗೊಂಡಿದ್ದವು. ಸಿದ್ದಲಿಂಗಯ್ಯ, ಬರಗೂರು ಮೊದಲಾದವರ ಬರಹಗಳು ಅಂದಿನ ಹೋರಾಟಗಳಿಗೆ ಸ್ಫೂರ್ತಿಯಾಗಿದ್ದು ನಿಜ. ಇಂದು ತಮ್ಮ ತಾಯ್ನೆಲದ ಬೇರುಗಳನ್ನು ಉಳಿಸಿಕೊಳ್ಳಲು ತಳಸ್ತರದಿಂದ ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ಕೇವಲ ಅಕಾಡಮಿಕ್ ಜನರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಪೌರತ್ವವನ್ನು ಪ್ರಶ್ನಿಸುವ ಕಾಯ್ದೆಯ ವಿರುದ್ಧ ಅನಕ್ಷರಸ್ಥ ಮುಸ್ಲಿಮರು, ಮಹಿಳೆಯರೂ ಬೀದಿಗಿಳಿದು ಹೋರಾಡುತ್ತಿದ್ದಾರೆ. ರೈತರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿ ಪ್ರತಿಭಟನೆಗಿಳಿದಿದ್ದಾರೆ. ನೋಟು ನಿಷೇಧ, ಕೋಮುಗಲಭೆಗಳು, ಭ್ರಷ್ಟಾಚಾರ, ಕಾರ್ಪೊರೇಟೀಕರಣ, ಬೆಲೆಯೇರಿಕೆ ಇವೆಲ್ಲದರಿಂದ ಜನ ತತ್ತರಿಸಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಲಾಕ್‌ಡೌನ್ ಪರಿಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಿದೆ. ಇಂತಹ ಸಂದರ್ಭದಲ್ಲಿ ಕಾವ್ಯ ಸಹಜವಾಗಿಯೇ ಜನರ ನೋವು, ನಲಿವುಗಳನ್ನು ಮಾತನಾಡುತ್ತದೆ. ಮಾತನಾಡಬೇಕು ಕೂಡ. ಸಿಎಎ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾವ್ಯಗಳು ಬೆಂಕಿಯಂತೆ ಪ್ರಜ್ವಲಿಸಿವೆ. ಹಾಗೆಯೇ ರೈತ ಆಂದೋಲನಗಳಿಗೂ ಕಾವ್ಯ ಮಿಡಿದಿದೆ. ಕನ್ನಡದಲ್ಲಿ ಹೊರ ಬಂದಿರುವ ‘ಹೊನ್ನಾರು ಒಕ್ಕಲು’ ಕವನ ಸಂಕಲನ ರೈತ ಆಂದೋಲನದಿಂದ ಸಿಡಿದ ಸಾಲುಗಳನ್ನು ಒಳಗೊಂಡಿದೆ. ಈ ಕೃತಿಯನ್ನು ಹಿರಿಯ ಕವಯತ್ರಿಗಳಾಗಿರುವ ಡಾ. ಕೆ. ಷರೀಫಾ ಮತ್ತು ಯಮುನಾ ಗಾಂವ್ಕರ್ ಸಂಪಾದಿಸಿದ್ದಾರೆ. ‘ಸರಕಾರ ರೊಕ್ಕ ಮುದ್ರಿಸಬಹುದು ಹೊರತು
ತುಂಡು ರೊಟ್ಟಿಯನ್ನಲ್ಲ ನೆನಪಿರಲಿ...’
‘ನೀವು ಜಲಫಿರಂಗಿ ಸಿಡಿಸಬಹುದು ನಮ್ಮ ಮೈಮೇಲೆ
ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ...’ ಇಂತಹ ಅದ್ಭುತ ಸಾಲುಗಳನ್ನೊಳಗೊಂಡ 64 ಪದ್ಯಗಳನ್ನು ಈ ಕೃತಿ ಒಳಗೊಂಡಿದೆ. ಹಿರಿಯರು, ಮಧ್ಯಮರು, ಯುವಕರು ಈ ಕವಿತೆಗಳಲ್ಲಿ ಸಂಗಮಿಸಿದ್ದಾರೆ. ಕುವೆಂಪು ಅವರ ರೈತರ ದೃಷ್ಟಿ ಕವಿತೆಯಿಂದ ತೆರೆದುಕೊಳ್ಳುವ ಸಂಕಲನ ಬರಗೂರು, ವೈದೇಹಿ, ಬೇಂದ್ರೆ, ಸಿದ್ದಲಿಂಗಯ್ಯ, ಮಾಲತಿ ಪಟ್ಟಣ ಶೆಟ್ಟಿ, ಎಸ್. ಜಿ. ಸಿದ್ದರಾಮಯ್ಯ, ರಂಜಾನ್ ದರ್ಗಾ, ಪೀರ್ ಬಾಷ, ಶಿವಸುಂದರ್, ವಿಲ್ಸನ್ ಕಟೀಲ್, ವಿನಯಾ ಒಕ್ಕುಂದ, ಹಂದಲಗೆರೆ ಗಿರೀಶ್, ಚಿದಾನಂದ ಸಾಲಿ, ಮಮತಾ ಅರಸೀಕೆರೆ....ಹೀಗೆ ನಾಡಿನ ಹಿರಿ, ಕಿರಿಯ ಕವಿಗಳಿಂದ ಬರೆಸಿಕೊಂಡಿದೆ. ಇಲ್ಲಿರುವ ಕವಿತೆಗಳು ಕೇವಲ ಘೋಷಣೆಯ ಪದ್ಯಗಳಷ್ಟೇ ಅಲ್ಲ. ಇವು ವರ್ತಮಾನವನ್ನು ಅತ್ಯಂತ ಸಮರ್ಥ ರೂಪಕಗಳಲ್ಲಿ ಕಟ್ಟಿಕೊಟ್ಟಿವೆ. ದೇಶದಲ್ಲಿ ಕಾವ್ಯ ಹೊಸದಿಕ್ಕಿಗೆ ಹೊರಳುವ ಸೂಚನೆಯನ್ನು ಸಂಕಲನ ನೀಡುತ್ತದೆ. ಮತ್ತು ಬರೇ ವಿದ್ವತ್ ಪಂಡಿತರಿಗೆ ಸೀಮಿತವಾಗಿದ್ದ ಕನ್ನಡ ಕಾವ್ಯಗಳು ತಳಸ್ತರದ ಜನರಿಗೆ ತಲುಪುತ್ತಿರುವ ಆಶಾದಾಯಕ ಬೆಳವಣಿಗೆಗಳನ್ನು ಕೃತಿ ಹೇಳುತ್ತದೆ.
‘ಪ್ರತಿಭಟಿಸುತ್ತಿದ್ದ ರೈತನ ಕಂಬನಿಯೊಂದು ಜಾರಿ
ಕಲ್ಲಿನ ಮೇಲೆ ಬಿತ್ತು-
ಕಲ್ಲು ಮೆಲ್ಲನೆ ಗುನುಗಿತು-
‘ನಾನು ಅಕ್ಕಿಯ ಕಾಳಾಗುತ್ತಿದ್ದರೆ
ಈ ಹೊತ್ತಿಗೆ ಕಂಬನಿಯ ಬೆಂಕಿಗೆ ಬೆಂದು ಅನ್ನವಾಗುತ್ತಿದ್ದೆ!’ ವಿಲ್ಸನ್ ಕಟೀಲ್ ಬರೆದಿರುವ ಈ ಸಾಲು ಪ್ರಭುತ್ವವನ್ನು ಅತ್ಯಂತ ಕಟುವಾಗಿ ವ್ಯಂಗ್ಯ ಮಾಡುತ್ತದೆ. ಇಂತಹ ಪರಿಣಾಮಕಾರಿ ಸಾಲುಗಳನ್ನು ಪುಟಪುಟದಲ್ಲೂ ಕಾಣಬಹುದು. ಕ್ರಿಯಾಮಾಧ್ಯಮ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 148. ಮುಖಬೆಲೆ 125 ರೂ. ಆಸಕ್ತರು 90360 82005 ದೂರವಾಣಿಯನ್ನು ಸಂಪರ್ಕಿಸಬಹುದು.