varthabharthi


ಸಿನಿಮಾ

ಮಾತುಕತೆ

‘ರಿಪ್ಪರ್’ ಜೊತೆ ಬರಲಿದ್ದಾರೆ ಕೃಷ್ಣ ಬೆಳ್ತಂಗಡಿ

ವಾರ್ತಾ ಭಾರತಿ : 27 Jun, 2021
ಶಶಿಕರ ಪಾತೂರು

ತೊಂಭತ್ತರ ದಶಕದಲ್ಲಿ ಕರಾವಳಿಯ ಮಂಗಳೂರಿನ ಮಂದಿಗೆ ಸಿಂಹಸ್ವಪ್ನದಂತಿದ್ದ ಹೆಸರು ರಿಪ್ಪರ್ ಚಂದ್ರನ್. ಭಯಾನಕ ಕೊಲೆಗಾರ ಚಂದ್ರನ್ ಮೂಡಿಸಿದ ಭಯವನ್ನು ಸಿನೆಮಾ ಪರದೆಯ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಕೃಷ್ಣ ಬೆಳ್ತಂಗಡಿ. ತಮ್ಮ ಎರಡನೇ ಚಿತ್ರ ಮೂಡಿಬಂದಿರುವ ಸ್ವಾರಸ್ಯವನ್ನು ಅವರು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.ಪತ್ರಕರ್ತರಾಗಿದ್ದ ನಿಮ್ಮನ್ನು ಸಿನೆಮಾ ಕ್ಷೇತ್ರ ಸೆಳೆದಿದ್ದು ಹೇಗೆ?
 
ಮಾಧ್ಯಮ ಕ್ಷೇತ್ರ ಮತ್ತು ನನ್ನ ನಂಟು ಸುಮಾರು ಹದಿನೆಂಟು ವರ್ಷಗಳದ್ದು. ಕೆಲವು ದೈನಿಕಗಳಲ್ಲಿ ವರದಿಗಾರನಾಗಿದ್ದೆ. ಈ ಟಿವಿಯ ಜನಪ್ರಿಯ ‘ಕ್ರೈಂ ಡೈರಿ’ ಟಿವಿ ಶೋಗೆ ಸ್ಕ್ರಿಪ್ಟ್ ರೈಟರ್, ಸೀನಿಯರ್ ರಿಪೋರ್ಟರ್ ಆಗಿದ್ದೆ. ಕ್ರೈಂ, ರಾಜಕೀಯ ಬರೆದು ಸಿನೆಮಾ ವರದಿಗಾರನಾದಾಗ ಸ್ವತಃ ಚಿತ್ರ ನಿರ್ದೇಶಿಸುವ ಕನಸು ಮೂಡಿತು. ಅದಾಗಲೇ ಪುಣೆಯಲ್ಲಿ ನಿರ್ದೇಶನದ ತರಬೇತಿ ನೀಡುತ್ತಿದ್ದ ಧನಂಜಯ ಪಾಂಡಿಯವರ ಬೆಂಗಳೂರು ತಂಡದಲ್ಲಿ ವಿದ್ಯಾರ್ಥಿಯಾಗಿ ಅನುಭವ ಪಡೆದೆ.

ಮೊದಲ ಚಿತ್ರ ನಿರ್ದೇಶಿಸಿದ ಅನುಭವ ಹೇಗಿತ್ತು?
 ನಾನೇ ಕತೆಗಾರನಾಗಿದ್ದ ಕಾರಣ ನಿರ್ದೇಶಿಸಿದ ಪ್ರಥಮ ಚಿತ್ರದಲ್ಲೇ ಒಂದೊಳ್ಳೆಯ ವಿಷಯ ಆರಿಸಿಕೊಂಡು ಪರಿಣಾಮಕಾರಿ ಯಾಗಿ ಚಿತ್ರೀಕರಿಸುವುದು ಕಷ್ಟವಾಗಲಿಲ್ಲ. ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಗೆಲುವು ಎನ್ನುವಂತೆ ಚಿತ್ರದ ಪ್ರಮುಖ ಪಾತ್ರದಲ್ಲಿದ್ದ ಬಾಲನಟಿ ಸುಹಾಸಿನಿಗೆ ರಾಜ್ಯ ಪ್ರಶಸ್ತಿಯೂ ದೊರಕಿತು. ನನ್ನ ಬರವಣಿಗೆಗೆ ಸಿಕ್ಕ ಗುರುತಿಸುವಿಕೆಯಿಂದಾಗಿ ಝೀ ಕನ್ನಡದಲ್ಲಿ ‘ಭಾರತಿ’ ಮತ್ತು ‘ಮೇಘ ಮಯೂರಿ’ ಧಾರಾವಾಹಿಗಳಿಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆಯುವ ಅವಕಾಶ ಸಿಕ್ಕಿತು. ಮಾತ್ರವಲ್ಲ, ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ‘ಭಾರತಿ’ಗೆ ಶ್ರೇಷ್ಠ ಧಾರಾವಾಹಿ ಪ್ರಶಸ್ತಿಯೂ ಲಭಿಸಿತು.

ಎರಡನೇ ಚಿತ್ರ ಇಷ್ಟು ತಡವಾಗಲು ಕಾರಣವೇನು?
  ‘ಬಣ್ಣದ ಕೊಡೆ’ ಚಿತ್ರದ ನಟಿಗೆ ಪ್ರಶಸ್ತಿ ಬರುವುದರೊಂದಿಗೆ ನನಗೆ ಅಂತಹದ್ದೇ ಸಬ್ಜೆಕ್ಟ್ ಆಯ್ದು ಚಿತ್ರ ಮಾಡುವ ಅವಕಾಶಗಳಷ್ಟೇ ಬರತೊಡಗಿದವು. ಆದರೆ ನನಗೆ ಪ್ರಶಸ್ತಿಗಳಿಗಷ್ಟೇ ಮೀಸಲಾಗುವ ಒಲವು ಇರಲಿಲ್ಲ. ಹಾಗಾಗಿ ಸಾಕ್ಷ್ಯಚಿತ್ರ, ಜಾಹೀರಾತುಗಳತ್ತ ಗಮನಹರಿಸಿದೆ. ಇದುವರೆಗೆ ಸುಮಾರು 45ಕ್ಕೂ ಅಧಿಕ ಸಾಕ್ಷಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. ಅವುಗಳಲ್ಲಿ ನಾಲ್ಕು ಚಿತ್ರಗಳಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿದವು. ಬೆಂಗಳೂರು ಸೇರಿದಂತೆ ಕೋಲಾರ, ಮುಂಬೈ, ಹೈದರಾಬಾದ್ ಕಾರ್ಪೊರೇಟ್ ಸಂಸ್ಥೆಗಳಿಗೆ ಎಂಭತ್ತಕ್ಕೂ ಅಧಿಕ ಜಾಹೀರಾತು ನಿರ್ದೇಶಿಸಿದ್ದೇನೆ. ಆದರೆ ಕಮರ್ಷಿಯಲ್ ಅಂಶಗಳಿರುವ ಒಂದು ಚಿತ್ರವನ್ನು ಮಾಡಲು ಕಾಯುತ್ತಲೇ ಇದ್ದೆ. ಅಂತಹದ್ದೊಂದು ವಿಭಿನ್ನ ಅವಕಾಶ ಈಗ ‘ರಿಪ್ಪರ್’ ಮೂಲಕ ಸಾಕಾರಗೊಂಡಿದೆ.

ರಿಪ್ಪರ್ ಚಂದ್ರನ್ ಕತೆಯೇ ಸ್ಫೂರ್ತಿಯಾಗಲು ಕಾರಣವೇನು?
 ಒಮ್ಮೆ ಕಾರ್ಯನಿಮಿತ್ತ ಮಂಗಳೂರಿಗೆ ತೆರಳಿದ್ದ ನಾನು ಸ್ಥಳೀಯರ ಜೊತೆಗೆ ಮಾತನಾಡುವ ವೇಳೆ ಯಾವುದೋ ಕಾರಣಕ್ಕಾಗಿ ರಿಪ್ಪರ್ ಚಂದ್ರನ್ ವಿಚಾರವೂ ಬಂತು. ಆತ ಆ ಕಾಲದಲ್ಲಿ ಸ್ಥಳೀಯರಲ್ಲಿ ಮೂಡಿಸಿದ್ದ ಭಯ ಮತ್ತು ಆತ ದರೋಡೆ ಮಾಡುತ್ತಿದ್ದ ರೀತಿಯ ಬಗ್ಗೆ ಕೇಳಿದಾಗ ಇದನ್ನೇ ಒಂದು ಚಿತ್ರವಾಗಿಸಿದರೆ ಹೇಗೆ ಎನ್ನುವ ಯೋಚನೆ ಮೂಡಿತು. ಯಾಕೆಂದರೆ ಮೊದಲೇ ನನಗೆ ಥ್ರಿಲ್ಲರ್ ಚಿತ್ರ ಮಾಡುವ ಆಸೆಯಿತ್ತು. ಅದಕ್ಕೆ ಈ ಕತೆ ಪೂರಕವಾಗಿತ್ತು. ನಿಧಾನಕ್ಕೆ ಕಾರ್ಯರೂಪಕ್ಕೂ ಬಂತು. ಅಂದಹಾಗೆ ಚಿತ್ರದಲ್ಲಿ ರಿಪ್ಪರ್ ಹೆಸರು ರುದ್ರ.

ನೀವು ಇದನ್ನು ಚಂದ್ರನ್ ವ್ಯಕ್ತಿಚಿತ್ರವಾಗಿಯೇ ಮಾಡಬಹುದಿತ್ತಲ್ಲವೇ?
 ಮೊದಲು ಬಯೋಪಿಕ್ ಮಾಡಲೆಂದೇ ಪ್ರಯತ್ನಿಸಿದ್ದೆ. ಆದರೆ ನನ್ನ ಅಧ್ಯಯನದಲ್ಲಿ ಆತನ ಬಗ್ಗೆ ಅಧಿಕೃತ ಎನ್ನುವಂತಹ ಮಾಹಿತಿಗಳಿಗೆ ಕೊರತೆ ಇತ್ತು. ‘‘ಚಂದ್ರನ್ ಬಗ್ಗೆ ಚೆನ್ನಾಗಿ ಗೊತ್ತು’’ ಎಂದು ಕತೆ ಹೇಳಿದ ನಾಲ್ಕೈದು ಮಂದಿಯ ಅಭಿಪ್ರಾಯಗಳಲ್ಲೇ ಸಾಮ್ಯತೆ ಇರಲಿಲ್ಲ. ಆಗ ಅವುಗಳಿಂದ ಪ್ರಮುಖ ಅಂಶವನ್ನಷ್ಟೇ ಆಯ್ದುಕೊಂಡು ನಾನೇ ಒಂದು ಹೊಸ ಕತೆ ಮಾಡಬೇಕಾಯಿತು. ಹಾಗಾಗಿ ಕರಾವಳಿಯ ಮಂಗಳೂರು ಭಾಗದಲ್ಲಿ ನಡೆದ ನೈಜ ಘಟನೆಗಳನ್ನು ಆಧಾರವಾಗಿಸಿಕೊಂಡು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಒಂದಷ್ಟು ಮಾರ್ಪಾಟುಗಳನ್ನು ಮಾಡಿ ‘ರಿಪ್ಪರ್’ ಕತೆ ಸಿದ್ಧಗೊಳಿಸಿದ್ದೇನೆ. ಚಿತ್ರದಲ್ಲಿ ಒಂದು ಪಾತ್ರವನ್ನು ನಾನೇ ಮಾಡಿದ್ದೇನೆ.

‘ರಿಪ್ಪರ್’ನಲ್ಲಿ ಪ್ರೇಕ್ಷಕರಿಗೆ ಆಕರ್ಷಕವೆನಿಸುವ ಅಂಶಗಳು ಯಾವುವು?
 ಇದರಲ್ಲೊಂದು ಪ್ರೇಮಕತೆ ಕೂಡ ಇರಲಿದೆ. ಕೊಲೆಗಾರನನ್ನು ಕಣ್ಣಾರೆ ಕಂಡಿರುವ ನಾಯಕಿ ಮತ್ತು ಆಕೆಯನ್ನು ಕೊಲೆಗಾರನಿಂದ ತಪ್ಪಿಸಲು ನಾಯಕ ಪಡುವ ಪ್ರಯತ್ನ ಚಿತ್ರದ ಆಕರ್ಷಕ ಅಂಶಗಳಾಗಲಿವೆ. ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿರುವ ಕೌಸ್ತುಭ್ ಜಯಕುಮಾರ್ ರಿಪ್ಪರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಪ್ಪರ್ ಪತ್ನಿಯಾಗಿ ಮುಂಬೈ ನಟಿ ಅಮುಲ್ ಗೌಡ ನಟಿಸಿದ್ದಾರೆ. ಸಿನೆಮಾ, ಕಿರುತೆರೆ ನಟ ಪುತ್ತೂರಿನ ಶ್ರೀರಾಮ್ ನಾಯಕನಾಗಿ ಮತ್ತು ಕೊಡಗಿನ ಸಾನ್ವಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆಗುಂಬೆ, ಮಂಗಳೂರು ಮತ್ತು ಕರಾವಳಿಯ ಹಲವು ಕಡೆಗಳಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆಸಲಾಗಿದೆ. ಹಿತನ್ ಹಾಸನ್ ಸಂಗೀತದಲ್ಲಿ ಎರಡು ಹಾಡುಗಳಿವೆ.

ಸಿನೆಮಾ ಕನಸಿನೊಂದಿಗೆ ಬೆಂಗಳೂರಿಗೆ ಕಾಲಿಡುವವರಿಗೆ ನಿಮ್ಮ ಸಲಹೆ ಏನು?
 ಬೆಂಗಳೂರಿನಲ್ಲಿ ಯಾವುದೇ ಸಂಪರ್ಕಗಳಿರದೆ ನೇರವಾಗಿ ಸಿನೆಮಾ ವ್ಯಾಮೋಹದಿಂದ ಬಂದರೆ ಬದುಕು ಕಟ್ಟಿಕೊಳ್ಳುವುದೇ ಕಷ್ಟ. ಆರಂಭದ ಆರು ವರ್ಷಗಳ ಕಾಲ ನಾನು ಕೂಡ ತುಂಬಾ ಶ್ರಮಪಟ್ಟಿದ್ದೇನೆ. ಯಾಕೆಂದರೆ ಇಲ್ಲಿ ಅಪರಿಚಿತರಿಂದ ಸಹಕಾರ ಸಿಗುವುದು ದೂರದ ಮಾತು. ಬಹುಶಃ ಇದು ಬೆಂಗಳೂರು ಎಂದು ಅಲ್ಲ, ಯಾವುದೇ ಊರಿಗೆ ಹೋದರೂ ಕಷ್ಟಗಳನ್ನು ಎದುರಿಸುವ ಮನಸ್ಥಿತಿಯಿಂದಲೇ ಕಾಲಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಇರಲೇಬೇಕು. ನೋವು, ಅವಮಾನದ ದಾರಿ ಎದುರಿಸಲು ಸಿದ್ಧರಿರಬೇಕು. ಅದು ದಾರಿಯಷ್ಟೇ. ಅದನ್ನು ದಾಟಿ ಕನಸು ನನಸಾಗಿಸುವ ಛಲ ಇರಬೇಕು. ಆಸಕ್ತಿಯ ಕೆಲಸದಲ್ಲಿ ಸಣ್ಣ ಅವಕಾಶ ದೊರಕಿದರೂ ಅದನ್ನು ಸಂಪೂರ್ಣ ಸಮರ್ಪಣಾ ಮನೋಭಾವದಿಂದ ನಿರ್ವಹಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)