ಓ ಮೆಣಸೇ...
ಆರ್ಥಿಕ ಅಪರಾಧ ಎಸಗಿ ದೇಶಬಿಟ್ಟು ಪರಾರಿಯಾಗಿರುವವರನ್ನು ಬೆನ್ನಟ್ಟಲಾಗುತ್ತಿದೆ - ನಿರ್ಮಾಲಾ ಸೀತಾರಾಮನ್, ಕೇಂದ್ರ ಸಚಿವೆ
ನಿಮ್ಮ ಶಕ್ತಿ ಸಾಮರ್ಥ್ಯಗಳೆಲ್ಲ ಸರಕಾರದ ವಿಮರ್ಶಕರನ್ನು ಬೇಟೆಯಾಡುವುದರಲ್ಲಿ ತೊಡಗಿರುವಾಗ ಬೇರೆ ಕೆಲಸಗಳಿಗೆ ಸಮಯವೆಲ್ಲಿದೆ?
ಬಿಜೆಪಿಯಲ್ಲಿ ಮೂಲ, ವಲಸಿಗರೆಂಬುದಿಲ್ಲ, ಒಮ್ಮೆ ಹೊಸಿಲಿಗೆ ಮೊಳೆ ಹೊಡೆದು ಸೊಸೆಯನ್ನು ಒಳ ಕರೆದುಕೊಂಡರೆ ಆಕೆ ಮಗಳಿದ್ದಂತೆ - ಬಿ.ಸಿ.ಪಾಟೀಲ್, ಸಚಿವ
ಎಲ್ಲರೂ ಹೊಲಸಿನಲ್ಲೇ ಮುಳುಗಿರುವಾಗ ಮತ್ತೆ ತಾರತಮ್ಯದ ಅಗತ್ಯವೇ ಏನಿದೆ?
ಮಾಜಿ ಸಚಿವ ಝಮೀರ್ ಅಹಮದ್ ಒಬ್ಬ ಗುಜರಿ ಗಿರಾಕಿ - ಎಂ.ಪಿ.ರೇಣುಕಾಚಾರ್ಯ, ಸಿಎಂ ಕಾರ್ಯದರ್ಶಿ
ನಿಮ್ಮನ್ನು ಖರೀದಿಸಲು ಬಂದಿದ್ದರೇ?
ರಾಹುಲ್ ಗಾಂಧಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಶಕ್ತಿಯನ್ನು ತೋರಿಸಬಲ್ಲ ಧೀಮಂತ ನಾಯಕ - ಅಭಯ್‌ಚಂದ್ರಜೈನ್, ಮಾಜಿ ಸಚಿವ
ಈ ಬಾರಿ ಒಲಿಂಪಿಕ್ಸ್‌ಗೆ ಕಳುಹಿಸೋಣವೇ?
ಬ್ರಹ್ಮ ಬಂದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮಂಥವರು ಹೀಗೆಲ್ಲಾ ಹತಾಶೆಯ ಮಾತುಗಳನ್ನಾಡಿದರೆ ಕಾಂಗ್ರೆಸ್‌ನಲ್ಲಿ ಆಶಾವಾದ ಚಿಗುರದೆ ಇರುತ್ತದೆಯೇ?
ದೇಶದಲ್ಲಿ ಹಲವು ಕಾಂಗ್ರೆಸ್‌ಗಳಿವೆ. ಈ ರಾಜ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯರ ಮತ್ತೆರಡು ಕಾಂಗ್ರೆಸ್ ಹುಟ್ಟಿಕೊಳ್ಳಲಿದೆ - ಆರ್.ಅಶೋಕ್, ಸಚಿವ
ನೀವು ಯಾವ ಕಾಂಗ್ರೆಸ್ ಸೇರಲಿದ್ದೀರಿ?
ನಮ್ಮ ತ್ಯಾಗದಿಂದಲೇ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಚನೆಯಾಗಿರುವುದು - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಈಗ ಆ ಸರಕಾರ ಅಲುಗಾಡುತ್ತಿರುವುದು ನಿಮ್ಮ ಅದೇ ತ್ಯಾಗದಿಂದ ತಾನೇ?
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಕರ್ನಾಟಕಕ್ಕೆ ಬಂದು ಹೋದದ್ದು ‘ಬಂದ ಪುಟ್ಟಾ - ಹೋದ ಪುಟ್ಟಾ’ ಎಂಬಂತಾಗಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ನಿಮ್ಮನ್ನು ನಿರಾಶೆ ಮಾಡಿ ಹೋದರೇ?
ನಾನು ಬುದ್ಧಿಜೀವಿಗಳನ್ನು ಧ್ವಂಸ ಮಾಡಲೆಂದೇ ಹುಟ್ಟಿದವಳು - ಕಂಗನಾ ರಣಾವತ್, ನಟಿ
ನಿಮ್ಮ ಅಕ್ರಮ ಕಟ್ಟಡ ಧ್ವಂಸ ಮಾಡಿರುವುದು ಬುದ್ಧಿ ಜೀವಿಗಳೇ?
ಪ್ರಧಾನಿ ಮೋದಿ ಪೌರುಷವಿಲ್ಲದ ಉತ್ತರ ಕುಮಾರನಂತೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿZA
ಪ್ರಶ್ನೆಗಳಿಗೆ ಉತ್ತರವೇ ಇಲ್ಲದ ಉತ್ತರ ಕುಮಾರ
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ - ಝಮೀರ್ ಅಹಮದ್, ಶಾಸಕ
ಕರ್ನಾಟಕಕ್ಕೆ ಯಾರು?
ರಾಮನ ಹೆಸರು ಹೇಳುವವರ ಪಕ್ಷದಲ್ಲಿ ರಾಮಾಯಣ, ಮಹಾಭಾರತ ಎಲ್ಲವೂ ನಡೆಯುತ್ತಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಕನಿಷ್ಠ ಆ ಪಕ್ಷ ನಡೆಯುತ್ತಾ ಇದೆ. ನೀವು ಪೂರ್ತಿ ಮಲಗಿದ್ದೀರಲ್ಲ?
ಸುಧಾರಣೆ ಎನ್ನುವುದು ತ್ಯಾಗದಿಂದ ಬರುತ್ತದೆಯೇ ಹೊರತು ಏಕಾಏಕಿ ನಾಯಕತ್ವ ಪ್ರಶ್ನೆಮಾಡುವುದರಿಂದಲ್ಲ - ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಮುಖಂಡ
ತಾವೇಕೆ ಪಕ್ಷವನ್ನು ತ್ಯಾಗ ಮಾಡಿ ನೋಡ ಬಾರದು?
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವೆಂದು ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಮಗೆ ಬಂದಿದೆ - ಜಗದೀಶ್ ಶೆಟ್ಟರ್, ಸಚಿವ
ತಕ್ಷಣ ಸ್ಥಾನವನ್ನು ಖಾಲಿ ಮಾಡಿ ಎಂದು ಕೆಲವರು ಬೋರ್ಡ್ ಹಾಕಿಕೊಂಡು ದಿಲ್ಲಿಯಲ್ಲಿ ಓಡಾಡುತ್ತಿದ್ದಾರಂತೆ.
ಯೋಗದಿಂದ ಜಗತ್ತಿನ ಎಲ್ಲ ದೇಶಗಳು ಒಂದೇ ಕುಟುಂಬ ಆಗುವ ಅವಕಾಶವಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ನಿಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಅದನ್ನು ಸಾಬೀತುಪಡಿಸಬಲ್ಲಿರಾ?
ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಯುವ ಸ್ಥಿತಿ ಇದೆ - ಆರ್.ಅಶೋಕ್, ಸಚಿವ
ನಿಮ್ಮ ಸರಕಾರದ ಮುಖ್ಯಮಂತ್ರಿ ಹುದ್ದೆಗೆ ಅವರ ಅಭ್ಯರ್ಥಿಗಳೂ ಇದ್ದಾರೇನು?
ಸಿಎಂ ಯಡಿಯೂರಪ್ಪ ಸ್ಟಾರ್ ಲೀಡರ್, ಅವರಿಲ್ಲದೆ ಪಕ್ಷ ಮುನ್ನಡೆಸುವುದು ಕಷ್ಟ - ಎಂ.ಪಿ.ಕುಮಾರಸ್ವಾಮಿ, ಶಾಸಕ
ಹೌದು ಕಾರ್ಗತ್ತಲಲ್ಲಿ ಇರುವವರು ಸ್ಟಾರ್‌ಗಳಿಂದಲೇ ಮಾರ್ಗದರ್ಶನ ಪಡೆಯಬೇಕಾಗುತ್ತದೆ.
ಮೋಡ ಸೂರ್ಯನನ್ನು ಮರೆಮಾಚಲು ಸಾಧ್ಯವೇ? ಮರೆ ಮಾಚಿದರೂ ಕೆಲಕಾಲ ಮಾತ್ರ - ಸಿ.ಟಿ.ರವಿ, ಶಾಸಕ
ನಿಮ್ಮನ್ನು ಬಲ್ಲವರೆಲ್ಲ ನಿಮ್ಮನ್ನೇ ಮೋಡಕ್ಕೆ ಹೋಲಿಸಲು ಕಾರಣ?
ಅಫ್ಘಾನಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ
ಅಲ್ಲೂ ಅವರು ಸಂಸದರಾಗುತ್ತಿದ್ದಾರೆಯೇ?
ಯೋಗದ ಮೂಲ ಭಾರತ ಅಲ್ಲ, ನೇಪಾಳ -ಕೆ.ಪಿ.ಶರ್ಮಾ ಬಲಿ, ನೇಪಾಳದ ಹಂಗಾಮಿ ಪ್ರಧಾನಿ
ನೀವು ಹಾಗೆಲ್ಲ ಹೇಳಿದರೆ, ನೇಪಾಳ ಭಾರತದ ಅವಿಭಾಜ್ಯ ಅಂಗ ಎಂಬ ಅಭಿಯಾನ ಆರಂಭವಾದೀತು.
ಕಾಂಗ್ರೆಸ್‌ನಲ್ಲಿ ಈಗ ಮ್ಯೂಸಿಕಲ್ ಚೇರ್ ಆಟ ಆರಂಭವಾಗಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಆ ವಿಷಯವು ನೀವು ಜಗತ್ತಿಗೆ ತಿಳಿಸಬೇಕಾದಷ್ಟು ಗುಟ್ಟಿನಲ್ಲಿದ್ದರೆ ಅದು ಚಿಂತಾಜನಕ ವಿಷಯವೇನಲ್ಲ.
ಗೋತ್ರಗಳ ಆಧಾರದಲ್ಲಿ ಗೋತಳಿ ಅಭಿವೃದ್ಧಿ ಪಡಿಸಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ - ಪ್ರಭು ಚವ್ಹಾಣ್, ಸಚಿವ
ಅಲ್ಲೂ ಕುಲ ಮಹಿಮೆಯ ಚರ್ಚೆ ಆರಂಭಿಸಲಿದ್ದೀರಾ?
ತುಳುವಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆಯನ್ನು ಬೆಂಬಲಿಸುವುದಿಲ್ಲ - ಶೋಭಾ ಕರಂದ್ಲಾಜೆ, ಸಂಸದೆ
ತುಳುವರಿಗೆ ಎಂಆರ್‌ಪಿಎಲ್‌ನಲ್ಲಿ ಉದ್ಯೋಗದ ಬೇಡಿಕೆಯನ್ನಾದರೂ ಬೆಂಬಲಿಸಬಹುದಲ್ಲ?
ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದಾರೆ - ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡ
ಕಾಲು ಮಾತ್ರ ಅಲ್ಲ, ಪಂಚೆ, ಚಡ್ಡಿ ಎಲ್ಲ ಎಳೆಯುತ್ತಿರುವ ಸುದ್ದಿಗಳು ಬರುತ್ತಿವೆ.
ಭಾರತ ಟೆಸ್ಟ್ ತಂಡಕ್ಕೆ ಸರಿಯಾದ ಮನಸ್ಥಿತಿಯ ಸರಿಯಾದ ಆಟಗಾರರ ಅಗತ್ಯವಿದೆ - ವಿರಾಟ್‌ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ
ಆಟಗಾರರಿಗೆ ಕ್ರಿಕೆಟ್ ಆಟದ ಬಗ್ಗೆಯೂ ಒಂದಿಷ್ಟು ಜ್ಞಾನ ಇದ್ದರೆ ಒಳ್ಳೆಯದಲ್ಲವೇ?
ಮುಂದಿನ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನು ಅಥವಾ ನನ್ನ ಮಕ್ಕಳೇ ಚುನಾವಣೆಗೆ ಸ್ಪರ್ಧಿಸುತ್ತೇವೆ- ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಇದುವೇ ನಿಮ್ಮ ಸಂಸ್ಕೃತಿಯಾಗಿದ್ದರೆ ಮತ್ತೆ ಚುನಾವಣೆಯೆಲ್ಲಾ ಯಾತಕ್ಕೆ? ನೇರವಾಗಿ ಪಟ್ಟಾಭಿಷೇಕವನ್ನೇ ಏರ್ಪಡಿಸಬಹುದಲ್ಲ?
ನಾನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದೇನೆಯೇ ಎಂಬುದನ್ನು ಸಂದರ್ಭ ಬಂದಾಗ ಹೇಳುತ್ತೇನೆ - ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಮುಖಂಡ
ನೀವು ಸ್ಪರ್ಧೆಯಲ್ಲಿ ಇಲ್ಲ ಎಂದು ಗೊತ್ತಾಗಿ ಬಿಟ್ಟರೆ ರಾಜ್ಯಕ್ಕೇ ಹೃದಯಾಘಾತವಾದೀತು.