ಜಾತಿ ಬಂಧನದಿಂದ ಬಿಡುಗಡೆ ಯಾವಾಗ?
ಜಾತೀಯತೆ ವಿರುದ್ಧ ಜನ ಜಾಗೃತಿ ಮೂಡಿಸಿದ ನಾರಾಯಣ ಗುರುಗಳು ಜನಿಸಿದ ಕೇರಳದಲ್ಲಿ ಮನುವಾದಿ ಪಕ್ಷಕ್ಕೆ ಜಾಗವಿಲ್ಲ. ಅಲ್ಲಿ ಎಡಪಂಥೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಪುರೋಹಿತಶಾಹಿ ವಿರುದ್ಧ ಬಂಡೆದ್ದ ಪೆರಿಯಾರರ ತಮಿಳುನಾಡಿನಲ್ಲೂ ಅವರಿಗೆ ಅವಕಾಶವಿಲ್ಲ. ಡಿಎಂಕೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಂಧ್ರಪ್ರದೇಶ, ತೆಲಂಗಾಣದಲ್ಲೂ ಅವರು ಗೆಲ್ಲುವುದಿಲ್ಲ. ಆದರೆ, ವೇದಕ್ಕೆ ಒರೆಯ ಕಟ್ಟಿ ಆಗಮದ ಮೂಗ ಕೊಯ್ಯುವುದಾಗಿ ಹೇಳಿದ ಅಣ್ಣ ಬಸವಣ್ಣನವರ ನಾಡಿನಲ್ಲಿ ಶ್ರೇಣೀಕೃತ ಜಾತಿಪದ್ಧತಿಯ ಸಮರ್ಥಕರು ಕೋಮುವಾದಿಗಳು ಹೇಗೆ ಅಧಿಕಾರಕ್ಕೆ ಬರುತ್ತಾರೆ?
ಇನ್ನೊಂದು ಜಾತಿಯನ್ನು ಇಲ್ಲವೇ ಧರ್ಮವನ್ನು ಟೀಕಿಸುವ ಮೊದಲು ನಾವು ಜನಿಸಿ ಬಂದ ಜಾತಿ, ಮತಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ವಿಮರ್ಶಿಸಬೇಕು. ತನ್ನ ಜಾತಿ, ತನ್ನ ಧರ್ಮ ಮಾತ್ರ ಶ್ರೇಷ್ಠ ಎನ್ನುವವನಿಗೆ ಇನ್ನೊಂದು ಜಾತಿ ಧರ್ಮವನ್ನು ಟೀಕಿಸುವ ನೈತಿಕ ಹಕ್ಕು ಇರುವುದಿಲ್ಲ. ಉದಾಹರಣೆಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಮೋಹನ ಭಾಗವತರು ಎಂದೂ ಹಿಂದೂ ಧರ್ಮವನ್ನು ವಿಮರ್ಶಿಸುವುದಿಲ್ಲ. ಕೆಟ್ಟವರು, ಒಳ್ಳೆಯವರು ಎಲ್ಲ ಜಾತಿ, ಮತಗಳಲ್ಲಿ ಇರುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಧರ್ಮದೊಂದಿಗೆ ರಾಜಕಾರಣ ಮತ್ತು ವಾಣಿಜ್ಯ ಬೆರೆತಾಗ ಹೀಗಾಗುತ್ತದೆ.
ಹನ್ನೆರಡನೇ ಶತಮಾನದ ಬಸವಣ್ಣ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದಿದ್ದು ಇನ್ನೊಂದು ಹೊಸ ಜಾತಿಯನ್ನು ಇಲ್ಲವೇ ಧರ್ಮವನ್ನು ಸೃಷ್ಟಿಸಲು ಅಲ್ಲ. ಜಾತಿಭೇದ, ವರ್ಗಭೇದವಿಲ್ಲದ ಸಮಾಜವೊಂದರ ನಿರ್ಮಾಣ ಬಸವಣ್ಣನ ಕನಸಾಗಿತ್ತು. ಅದಕ್ಕೆಂದೇ ಜಾತಿಯ ಸಂಕೇತವಾದ ಜನಿವಾರವನ್ನು ಕಳಚಿದ ಬಸವಣ್ಣ ‘ಆನು ಹಾರುವನೆಂದಡೆ ಕೂಡಲ ಸಂಗಯ್ಯ ನಗುವನಯ್ಯೆ’ ಎಂದು ಹೇಳಿದ.
ಹಾಗಿದ್ದರೆ ನೀನು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ತನ್ನ ಐಡಂಟಿಟಿ ಹೇಳಿಕೊಳ್ಳಲು ಮೇಲು ಕೀಳಿನ ಬಲೆ ಹರಿದು ನಿಂತು ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಿ’ ಎಂದು ನುಡಿದಿದ್ದು ಸುಮ್ಮನೆ ಅಲ್ಲ. ನುಡಿದಂತೆ ನಡೆಯಲು ಶ್ರೇಣೀಕೃತ ವ್ಯವಸ್ಥೆಯ ಮೇಲ್ತುದಿಯಿಂದ ಕೆಳಗಿಳಿದು ಬಂದ. ಇದನ್ನೇ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ‘ಚಳವಳಿಯಲ್ಲಿ ಡಿ ಕ್ಲಾಸ್ ಆಗಬೇಕು’ ಎನ್ನಲಾಗುತ್ತದೆ. ಇದರರ್ಥ ಎಂಥ ಸಿರಿವಂತಿಕೆಯಲ್ಲಿಜನಿಸಿದರೂ ಅದರ ದುರಹಂಕಾರ ಕಳಚಿ, ಶ್ರಮಜೀವಿಗಳ ಜೊತೆ ಬೆರೆಯಬೇಕೆಂದು ವ್ಯಾಖ್ಯಾನಿಸಲಾಗುತ್ತದೆ. ಭಾರತೀಯ ಸಂದರ್ಭದಲ್ಲಿ ‘ಡಿ ಕ್ಲಾಸ್’ ಮಾತ್ರವಲ್ಲ, ಬಸವಣ್ಣನವರಂತೆ ‘ಡಿ ಕಾಸ್ಟ್’ ಕೂಡ ಆದಾಗ ಮಾತ್ರ ಆತ ನಿಜವಾದ ಮಾನವತಾವಾದಿ ಎನ್ನಿಸಿಕೊಳ್ಳುತ್ತಾನೆ.
ಜನಿಸಿದ ಕೂಸಿಗೆ ಜಾತಿ, ಮತ ಅಥವಾ ಧರ್ಮದ ಬಂಧನ ಇರುವುದಿಲ್ಲ. ಆ ಮಗು ಜನಿಸಿದ ಸಮಾಜ, ಮನೆ,ಮನೆತನ, ತಾಯಿ, ತಂದೆ, ಪರಿಸರ ಇವೆಲ್ಲ ಸೇರಿ ಬೆಳೆಯುತ್ತದೆ. ದೊಡ್ಡವನಾಗುತ್ತ ಕ್ರಮೇಣ ಜಾತಿಯ ಕೊಳೆ ಅಂಟಿಕೊಳ್ಳುತ್ತದೆ. ಈ ಜಾತಿ ಬಂಧನ ಕಳಚಿಕೊಂಡವರು ಮಾತ್ರ ಬಸವಣ್ಣ, ಬುದ್ಧ ವತ್ತು ಬಾಬಾಸಾಹೇಬ್ ಅಂಬೇಡ್ಕರ್ ಆಗಲು ಸಾಧ್ಯ.
ಅದಕ್ಕೆಂದೇ ಕವಿ ಸಿದ್ದಯ್ಯ ಪುರಾಣಿಕರು ‘ಮೊದಲು ಮಾನವನಾಗು’ ಎಂದು ಕರೆ ನೀಡಿದರು. ರಾಷ್ಟ್ರಕವಿ ಕುವೆಂಪು ಅವರು ಇನ್ನೂ ಮುಂದೆ ಹೋಗಿ ‘ವಿಶ್ವ ಮಾನವನಾಗು’ ಎಂಬ ಸಂದೇಶ ನೀಡಿದರು. ಆದರೆ, ನಾವು ಇಂದು ಏನಾಗಿದ್ದೇವೆ? ಜಾತಿ ಮಾತ್ರವಲ್ಲ ಜಾತಿಗೊಬ್ಬ ಮಠಾಧೀಶ, ಆತನಿಗೊಬ್ಬ ರಾಜಕಾರಣಿಯ ಆಸರೆ, ಐಷಾರಾಮಿ ಜೀವನ. ಇದರ ಮುಂದಿನ ಹೆಜ್ಜೆ ಧರ್ಮ, ತನ್ನ ಧರ್ಮದ ಹೆಸರಿನಲ್ಲಿ ಇನ್ನೊಂದು ಧರ್ಮದ ದ್ವೇಷ. ಇದು ಇಂದಿನ ಭಾರತ. ಜಗತ್ತೂ ಕೂಡ ಇದಕ್ಕಿಂತ ಭಿನ್ನವಲ್ಲ.
ಬ್ರಾಹ್ಮಣರು, ಜೈನರು, ವೀರಶೈವರು, ಲಿಂಗಾಯತರು ಆಗಿರಲಿ ಇಲ್ಲವೇ ಯಾವುದೇ ಮತಕ್ಕೆ ಸೇರಿದವರಾಗಿರಲಿ, ಮನುಷ್ಯರೆಂದು ಕರೆದುಕೊಳ್ಳುವವರು ಜಾತಿ ಮತ್ತು ಮತದ ಸಂಕೋಲೆಯನ್ನು ಮೊದಲು ಬಿಡಿಸಿಕೊಳ್ಳಬೇಕು. ಜಾತಿ ಬಂಧನದಿಂದ ಬಿಡುಗಡೆಯಾಗದೆ ಸಹನೀಯ, ಸಮಾನತೆಯ ಸಮಾಜವನ್ನು ನಿರ್ಮಿಸಲು ಆಗದು.
ಹುಟ್ಟು ಆಕಸ್ಮಿಕ, ಜಾತಿ ಆಕಸ್ಮಿಕವಲ್ಲ. ಅದು ತಾಯಿಯ ಗರ್ಭದಿಂದ ಬರಲಿಲ್ಲ. ಶತಮಾನಗಳಿಂದ ಬೇರು ಬಿಟ್ಟಿರುವ ಸಾಮಾಜಿಕ ವ್ಯವಸ್ಥೆಯ ಕೊಳೆಯಾಗಿ, ಅದು ಮನುಷ್ಯನಿಗೆ ಅಂಟಿಕೊಳ್ಳುತ್ತದೆ. ಶರಣರು ಇದನ್ನು ಜಾತಿ ಸೂತಕವೆಂದು ಕರೆದರು. ಅದರ ವಿರುದ್ಧ ನೇರವಾಗಿ ಹೋರಾಟಕ್ಕೆ ಇಳಿದರು.
ಜಾತಿ ವ್ಯವಸ್ಥೆ ಮತ್ತು ಕಂದಾಚಾರಗಳ ವಿರುದ್ಧ ಬಸವಣ್ಣನವರಿಗಿಂತ ಮುಂಚೆ ಬುದ್ಧ ಮತ್ತು ಮಹಾವೀರರು ಧ್ವನಿಯೆತ್ತಿದರು. ಬಸವಣ್ಣನವರಿಗಿಂತ 40 ವರ್ಷಗಳ ಹಿಂದೆ ತಮಿಳು ನೆಲದಲ್ಲಿ ರಾಮಾನುಜರು ಧ್ವನಿ ಎತ್ತಿದರು. ಅವರ ಆಶಯಗಳನ್ನು ಎತ್ತಿ ಹಿಡಿಯುವವರು ನಂತರ ಧರ್ಮವನ್ನು ಕಟ್ಟಿಕೊಂಡರು. ಅವು ಬೌದ್ಧ, ಜೈನ ಧರ್ಮಗಳಾದವು.
ಬಸವಣ್ಣನವರ ಅನುಯಾಯಿಗಳು ಲಿಂಗಾಯತ ಧರ್ಮ ಕಟ್ಟಿಕೊಂಡರೂ ಅವು ಮೇಲಿನೆರಡು ಧರ್ಮಗಳಷ್ಟು ವ್ಯಾಪಕವಾಗಿ ಬೆಳೆಯಲಿಲ್ಲ. ಬಸವಣ್ಣನವರ ತವರು ಭೂಮಿಯಲ್ಲಿ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವುದು ನೋಡುತ್ತಿದ್ದೇವೆ. ಇದಕ್ಕೆ ಕಾರಣ ನಾರಾಯಣಗುರುಗಳ ಕೇರಳ ದಂತೆ ಮತ್ತು ಪೆರಿಯಾರರ ತಮಿಳುನಾಡಿನಂತೆ ಬಸವಣ್ಣನವರ ಆಶಯಗಳು ಕರ್ನಾಟಕದ ನೆಲದಲ್ಲಿ ಬೇರು ಬಿಡಲಿಲ್ಲ ಅಥವಾ ಬೇರು ಬಿಡಲು ಅವಕಾಶ ಸಿಗಲಿಲ್ಲ.
ಬಸವಣ್ಣನವರನ್ನು ಮೊದಲು ಎತ್ತು ಎಂದು ಕರೆದು ಪೂಜೆ ಮಾಡಿದವರು, ನಂತರ ಮೂರ್ತಿ ಮಾಡಿ ನಿಲ್ಲಿಸಲು ಸೀಮಿತಗೊಳಿಸಿದರು. ನನಗೆ ತಿಳಿದಂತೆ ಬಹುಶಃ ಬಸವಣ್ಣನವರ ಕುರಿತು ಸಂಶೋಧನೆ ಮಾಡಿ ಅವರ ಸಾಹಿತ್ಯ ಬೆಳಕಿಗೆ ತಂದವರು ಬಿಜಾಪುರದ ಫ.ಗು.ಹಳಕಟ್ಟಿ ಅವರು. ಆದರೂ ಬಸವಣ್ಣನ ಹೆಸರು ಬಳಸಿಕೊಳ್ಳುವವರೂ ಜಾತಿ ಬಂಧನದಿಂದ ಹೊರಗೆ ಬರಲಿಲ್ಲ ಎಂಬುದು ಕಹಿಯಾದರೂ ಕಟುವಾದ ಸತ್ಯ.
ಜಾತೀಯತೆ ವಿರುದ್ಧ ಜನ ಜಾಗೃತಿ ಮೂಡಿಸಿದ ನಾರಾಯಣ ಗುರುಗಳು ಜನಿಸಿದ ಕೇರಳದಲ್ಲಿ ಮನುವಾದಿ ಪಕ್ಷಕ್ಕೆ ಜಾಗವಿಲ್ಲ. ಅಲ್ಲಿ ಎಡಪಂಥೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಪುರೋಹಿತಶಾಹಿ ವಿರುದ್ಧ ಬಂಡೆದ್ದ ಪೆರಿಯಾರರ ತಮಿಳುನಾಡಿನಲ್ಲೂ ಅವರಿಗೆ ಅವಕಾಶವಿಲ್ಲ. ಡಿಎಂಕೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಂಧ್ರಪ್ರದೇಶ, ತೆಲಂಗಾಣದಲ್ಲೂ ಅವರು ಗೆಲ್ಲುವುದಿಲ್ಲ. ಆದರೆ, ವೇದಕ್ಕೆ ಒರೆಯ ಕಟ್ಟಿ ಆಗಮದ ಮೂಗ ಕೊಯ್ಯುವುದಾಗಿ ಹೇಳಿದ ಅಣ್ಣ ಬಸವಣ್ಣನವರ ನಾಡಿನಲ್ಲಿ ಶ್ರೇಣೀಕೃತ ಜಾತಿಪದ್ಧತಿಯ ಸಮರ್ಥಕರು ಕೋಮುವಾದಿಗಳು ಹೇಗೆ ಅಧಿಕಾರಕ್ಕೆ ಬರುತ್ತಾರೆ? ಬಸವಣ್ಣನವರ, ಕನಕದಾಸರ ಆಶಯಗಳಿಗೆ ದ್ರೋಹ ಬಗೆದವರಾರು? ಬಸವಣ್ಣ, ಬುದ್ಧ, ಬಾಬಾಸಾಹೇಬರು ಬರೀ ಪೋಟೊ ಕಟ್ ಹಾಕಿ ಗೋಡೆಗೆ ತೂಗು ಹಾಕಲು ಇರುವುದೇ? ಕೊರೋನದಿಂದ ಕಾಯಕ ಜೀವಿಗಳು ಬೀದಿಗೆ ಬಿದ್ದಿರುವಾಗ ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಕರಗಿ ಲಕ್ಷ ಲಕ್ಷ ರೂ. ಸಂಗ್ರಹಿಸಿ ಕೊಟ್ಟವರಾರು? ಬೂಟಾಟಿಕೆಯ ಒಣ ಮಾತುಗಳಿಂದ ಸಮಾಜ ಬದಲಾಗುವುದಿಲ್ಲ. ಬದಲಾವಣೆ ಪ್ರಕ್ರಿಯೆ ಅಪಾರ ತ್ಯಾಗ ಬಯಸುತ್ತದೆ.
‘ಮರಣವೇ ಮಹಾನವಮಿ’ ಎಂದು ಎಲ್ಲ ತ್ಯಾಗಕ್ಕೂ ತಯಾರಾದ ಬಸವಣ್ಣನವರ ದಿಟ್ಟತನ ಬೇಕಾಗುತ್ತದೆ. ಬಸವಣ್ಣನವರು ಸಂಪತ್ತಿನ ಸಂಗ್ರಹದ ವಿರುದ್ಧ ಮಾತಾಡಿದರು. ಈಗ ದೇಶದ ಸಂಪತ್ತು ಅಂಬಾನಿ, ಅದಾನಿಯಂಥ ಕಾರ್ಪೊರೇಟ್ ತಿಮಿಂಗಿಲಗಳ ಒಡಲಿಗೆ ಸೇರಿದೆ. ಅದರ ಬಗ್ಗೆ ಧ್ವನಿಯೆತ್ತಬೇಕು. ಅದು ಸಾಧ್ಯವಾಗದಿದ್ದರೆ, ಈ ಮಹಾಚೇತನಗಳನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಿ. ಅವರ ಹೆಸರಿನ ದುರ್ಬಳಕೆ ಮಾಡಿಕೊಳ್ಳಬೇಡಿ.
ಜಾತಿ ಎಂಬ ಸಂಕೋಲೆಯಿಂದ ಬಂಧಿತವಾದ ನಾವು ಬಸವಣ್ಣ, ಮಹಾವೀರ, ಕನಕದಾಸರಂಥ ಮಹಾ ಚೇತನ ಸ್ವರೂಪಿಗಳನ್ನು ಕೂಡ ಜಾತಿ ಎಂಬ ಜೈಲಿನಲ್ಲಿ ಬಂಧಿಸಿಟ್ಟಿದ್ದೇವೆ. ಜನಿವಾರ ಕಿತ್ತು ಬಿಸಾಡಿದವನಿಗೆ ಶಿವದಾರ ತೊಡಿಸಿದ್ದೇವೆ. ವಿವೇಕಾನಂದರಂಥ ವಿಶ್ವ ಮಾನವರನ್ನು ಹಿಂದುತ್ವದ ಐಕಾನ್ ಮಾಡುತ್ತಿರುವುದನ್ನು ನೋಡಿಯೂ ಸುಮ್ಮನಿದ್ದೇವೆ.
ಬ್ರಾಹ್ಮಣವಾದದ ವಿರೋಧ ಇದೇನು ಹೊಸದಲ್ಲ. ಶತಮಾನದ ಹಿಂದೆಯೇ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಸರ್ ಸಿದ್ದಪ್ಪ ಕಂಬಳಿಯವರು ಬ್ರಾಹ್ಮಣೇತರ ಸಮ್ಮೇಳನ ಸಂಘಟಿಸಿದ್ದರು. ಅದರಲ್ಲಿ ಕೊಲ್ಲಾಪುರದ ಶಾಹು ಮಹಾರಾಜರು ಪಾಲ್ಗೊಂಡಿದ್ದರು. ಸಿದ್ದಪ್ಪ ಕಂಬಳಿಯವರು ಮುಂಬೈ ಪ್ರಾಂತದಲ್ಲಿ ಮಂತ್ರಿಯಾಗಿದ್ದರು. ನಂತರ 80ರ ದಶಕದಲ್ಲಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಬ್ರಾಹ್ಮಣ ಸಮ್ಮೇಳನ ನಡೆದಾಗ ನಾವೆಲ್ಲ ಅಂದರೆ ಎಡಪಂಥೀಯರು ಮತ್ತು ಸಮಾಜವಾದಿಗಳು ಜೊತೆ ಸೇರಿ ಪ್ರತಿಭಟನಾ ಸಭೆ ನಡೆಸಿದ್ದೆವು.
ಚಂಪಾ ಅವರ ಜೊತೆ ಬ್ರಾಹ್ಮಣ ಸಮುದಾಯದಿಂದಲೇ ಬಂದ ಸಂಯುಕ್ತ ಕರ್ನಾಟಕದಲ್ಲಿ ನನ್ನ ಸಹೋದ್ಯೋಗಿ ಯಾಗಿದ್ದ ಜಿ.ಎಚ್.ರಾಘವೇಂದ್ರ ಅದರ ನೇತೃತ್ವ ವಹಿಸಿದ್ದರು. ಬ್ರಾಹ್ಮಣ್ಯದ ವಿರುದ್ಧ ಅದೇ ಸಮಾಜದಲ್ಲಿ ಜನಿಸಿದ ಜಾತಿ ಬಂಧನದಿಂದ ಹೊರಗೆ ಬಂದ ಅನೇಕರು ಬಂಡೆದ್ದ ಉದಾಹರಣೆಗಳಿವೆ. ಉಡುಪಿಯ ಜಿ.ರಾಜಶೇಖರ, ಫಣಿರಾಜ, ಅನಂತಮೂರ್ತಿ ಹೀಗೆ ಅನೇಕರನ್ನು ಹೆಸರಿಸಬಹುದು. ಅಸ್ಪಶ್ಯರ ಮಕ್ಕಳ ಏಳಿಗೆಗಾಗಿ ಹಗಲಿರುಳು ದುಡಿದ ಕುದ್ಮುಲ್ ರಂಗರಾವ್, ಮೈಸೂರಿನ ಗೋಪಾಲಸ್ವಾಮಿ ಅಯ್ಯರ್, ಬಿಜಾಪುರದ ಕಾಕಾ ಕಾರ್ಖಾನಿಸ್ ಇಂತಹ ಮಹಾತ್ಮರನ್ನು ಮರೆಯಲಾದೀತೇ.
ನಾನು ಹೇಳಲು ಹೊರಟಿದ್ದು ಇಷ್ಟೇ. ಬ್ರಾಹ್ಮಣ ಸಮುದಾಯದಲ್ಲಿ ಅದನ್ನು ಒಪ್ಪದ ಪ್ರಗತಿಪರರು, ವಿಚಾರವಂತರೂ ಇದ್ದಾರೆ. ಅದೇ ರೀತಿ ಲಿಂಗಾಯತ, ಒಕ್ಕಲಿಗ ಸಮುದಾಯದಲ್ಲೂ ತಮ್ಮ ಜಾತಿಯ ಕಂದಾಚಾರಗಳ ವಿರುದ್ಧ ಮಾತಾಡುವವರಿದ್ದಾರೆ. ಪಿ.ಲಂಕೇಶ್, ಪ್ರೊ.ಚಂದ್ರಶೇಖರ ಪಾಟೀಲರು ತಮ್ಮ ಜಾತಿಗಳ ಜೊತೆ ಎಂದಿಗೂ ಗುರುತಿಸಿಕೊಳ್ಳಲಿಲ್ಲ. ಈ ರೀತಿ ತಮ್ಮ ತಮ್ಮ ಜಾತಿಗಳ ಒಳಗೆ ಒಂದು ಒಳ ಬಂಡಾಯ ನಡೆಯಬೇಕಾಗಿದೆ.
ಬ್ರಾಹ್ಮಣವಾದದ ಬಗ್ಗೆ ನಟ ಚೇತನ್ ಆಡಿದ ಮಾತು ಈಗ ವಿವಾದದ ಅಲೆ ಎಬ್ಬಿಸಿದೆ. ತಾತ್ವಿಕವಾಗಿ ಚೇತನ್ ಆಡಿದ ಮಾತು ಸರಿಯಾಗಿದೆ. ಆದರೆ, ಬ್ರಾಹ್ಮಣವಾದ ಮತ್ತು ಬ್ರಾಹ್ಮಣರ ನಡುವಿನ ಗೆರೆ ತೆಳುವಾದದ್ದು. ಅನೇಕ ಬಾರಿ ಇದು ಸಾರ್ವತ್ರಿಕ ಸ್ವರೂಪ ಪಡೆದಾಗ, ಒಂದು ಜಾತಿಯ ಜನರ ಆಕ್ರೋಶಕ್ಕೆ ಕಾರಣವಾಗುವ ಅಪಾಯವೂ ಇದೆ. ಹಾಗಾಗದಂತೆ ಎಚ್ಚರ ವಹಿಸಬೇಕಾಗುತ್ತದೆ.
ಬ್ರಾಹ್ಮಣವಾದ ಟೀಕಿಸುವ ಜೊತೆಗೆ ಪಾಳೇಗಾರಿಕೆ ಗೌಡಕಿ ಗತ್ತನ್ನೂ, ಬ್ರಾಹ್ಮಣೇತರ ಸಮುದಾಯಗಳ ನವ ಬ್ರಾಹ್ಮಣ್ಯವನ್ನೂ ವಿರೋಧಿಸಬೇಕಾಗುತ್ತದೆ. ಶೂದ್ರರ ನವ ಬ್ರಾಹ್ಮಣ್ಯ ಬ್ರಾಹ್ಮಣವಾದಕ್ಕಿಂತ ಅಪಾಯಕಾರಿ ಎಂದು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಹೇಳುತ್ತಿದ್ದರು.
ಹಿಂದೆ ಬಿಜಾಪುರ ಜಿಲ್ಲೆಯಲ್ಲಿ ಇಂಚಗೇರಿ ಮಠದ ಮಹಾದೇವರಿದ್ದರು. ಅವರು ಸಾವಿರಾರು ಅಂತರ್ಜಾತಿ ಮದುವೆಗಳನ್ನು ಮಾಡಿಸಿದರು. ಬಸವಣ್ಣನವರ ತತ್ವವನ್ನು ಅವರು ಹೇಳಲಿಲ್ಲ, ಆಚರಣೆಗೆ ತಂದರು. ಜಾತಿ ರಹಿತ ಮದುವೆಗಳಿಂದ ಮಾತ್ರ ಜಾತಿ ವ್ಯವಸ್ಥೆಯ ನಿರ್ಮೂಲನೆ ಸಾಧ್ಯ ಎಂದು ಬಾಬಾಸಾಹೇಬ ಅಂಬೇಡ್ಕರ್ ಹೇಳಿದರು. ಬಸವಣ್ಣನವರ ಹೆಸರು ಹೇಳುವ ಮಠಾಧೀಶರು ತಮ್ಮ ಜಾತಿಯವನು ಮುಖ್ಯ ಮಂತ್ರಿಯಾಗಬೇಕೆಂದು ಹೇಳುವುದನ್ನು ಬಿಟ್ಟು ಬಸವಣ್ಣನವರಂತೆ ಜಾತಿ ರಹಿತ, ವರದಕ್ಷಿಣೆ ರಹಿತ ಮದುವೆಗಳಿಗೆ ಮುಂದಾಗಬೇಕಿದೆ.
ಸ್ವಾತಂತ್ರ ನಂತರದ ಮೊದಲ ಐದಾರು ದಶಕಗಳಲ್ಲಿ ಜಾತಿಯ ವ್ಯಾಮೋಹ ಅಷ್ಟಾಗಿ ಇರಲಿಲ್ಲ. ಜಾತಿಯ ಹೆಸರುಗಳನ್ನು, ಸಂಕೇತಗಳನ್ನು ಅಷ್ಟಾಗಿ ಬಳಸುತ್ತಿರಲಿಲ್ಲ. ತಮ್ಮ ಮಕ್ಕಳಿಗೆ ಜಾತ್ಯತೀತ ಹೆಸರುಗಳನ್ನು ಇಡುತ್ತಿದ್ದರು. ಆ ಕಾಲದಲ್ಲಿ ಜನಿಸಿದ ಅನೇಕರ ಮನೆಗಳಲ್ಲಿ ಸುಭಾಷ್, ಗಾಂಧಿ, ಜವಾಹರರಿದ್ದಾರೆ. ಕೆಲ ಜೈನ ಕುಟುಂಬಗಳಲ್ಲಿ ಬಸವರಾಜ ಎಂಬ ಹೆಸರುಗಳನ್ನು ಇಟ್ಟಿದ್ದಾರೆ. ಕೆಲ ಹಿಂದೂ ಮನೆಗಳಲ್ಲಿ ಫಕೀರಪ್ಪ, ಹುಸೇನಪ್ಪರು ಇದ್ದಾರೆ. ಕನ್ನಡವನ್ನು ಕಟ್ಟಿದ ಸಾಹಿತಿಗಳಾದ ಕುವೆಂಪು, ಕಾರಂತ, ಬೇಂದ್ರೆ, ಲಂಕೇಶ್, ಚಂಪಾ, ತೇಜಸ್ವಿ, ಕಾಳೇಗೌಡ ನಾಗವಾರ, ರಾಮದಾಸ ಮುಂತಾದವರು ತಮ್ಮ ಜಾತಿಗಳ ಜೊತೆ ಗುರುತಿಸಿಕೊಳ್ಳಲಿಲ್ಲ.
ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು, ಪ್ರೊ. ನಂಜುಂಡಸ್ವಾಮಿ. ಕಮ್ಯುನಿಸ್ಟ್ ನಾಯಕರಾದ ಕೃಷ್ಣನ್, ಕಕ್ಕಿಲ್ಲಾಯ, ವಿ.ಎನ್.ಪಾಟೀಲ, ಗಂಗಾಧರ ನಮೋಶಿ ಅಂಥವರೂ ಕೂಡ ಜಾತಿಯನ್ನು ದೂರವಿಟ್ಟರು. ಆದರೆ, ಈಗ ಹೆಸರಿನ ಜೊತೆಗೆ ಜಾತಿಯ ಉಪನಾಮವನ್ನು ಬಳಸುವುದು ಸಾಮಾನ್ಯವಾಗಿದೆ. 90ರ ದಶಕದ ನಂತರ ಜಾತಿಯ ಜೊತೆ ಕೋಮುವಾದದ ಮತ್ತೇರಿದೆ. ಜಾತಿ, ಕೋಮುಗಳು ಚುನಾವಣೆಗಳಲ್ಲಿ ಮತ ತರುವ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ ನಗರಗಳಲ್ಲೂ ಕೂಡ ಜಾತಿಯನ್ನು ಪತ್ತೆ ಹಚ್ಚಿ ಮನೆಯನ್ನು ಬಾಡಿಗೆ ಕೊಡಲಾಗುತ್ತಿದೆ. ಸಕಲ ಜೀವಾತ್ಮರ ಲೇಸನು ಬಯಸುವ ಬದಲಾಗಿ ಜಾತಿ ಜೀವಾತ್ಮರ ಲೇಸನ್ನು ಬಯಸುವ ಮನೋಭಾವ ಹೆಚ್ಚಾಗುತ್ತಿದೆ. ಇದು ಸರಿ ದಾರಿಗೆ ಬರಬೇಕೆಂದರೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ, ಮೇಲ್ವರ್ಗಗಳ ಜನರು ಜಾತಿ ಎಂಬ ಬಂಧನದಿಂದ ಬಿಡುಗಡೆಯಾಗಿ ಮನುಷ್ಯರಾಗಬೇಕಾಗಿದೆ.
ನಮ್ಮ ಹೋರಾಟ ಎಲ್ಲ ವಿಧದ ಜಾತಿವಾದ ಮತ್ತು ಕೋಮುವಾದದ ವಿರುದ್ಧ ಆಗಿರಬೇಕು. ಅದರಲ್ಲೂ ಬಹುಮುಖಿ ಭಾರತವನ್ನು ಏಕಧರ್ಮೀಯ ಫ್ಯಾಶಿಸ್ಟ್ ರಾಷ್ಟ್ರ ಮಾಡಲು ನಡೆದಿರುವ ಹುನ್ನಾರದ ವಿರುದ್ಧ ಎಲ್ಲ ದೇಶಪ್ರೇಮಿಗಳು ಮತ್ತು ಮಾನವಪ್ರೇಮಿ ಸಮುದಾಯದ ಜನರು ಒಂದಾಗಬೇಕಿದೆ. ಈ ಸೌಹಾರ್ದ ಮತ್ತು ಸಹಬಾಳ್ವೆಯ ದೇಶವನ್ನು ಕಾಪಾಡಬೇಕಿದೆ.