ಮತ್ತೊಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಆರಂಭಿಸಲಿರುವ ಸೌದಿ ಅರೆಬಿಯಾ
photo: twitter/@RoyalSaudiNews
ರಿಯಾದ್, ಜೂ.30: ಸೌದಿ ಅರೇಬಿಯಾವನ್ನು ಜಾಗತಿಕ ಲಾಜಿಸ್ಟಿಕ್ ಕೇಂದ್ರವನ್ನಾಗಿಸುವ ವಿಸ್ತತ ಕಾರ್ಯಯೋಜನೆಯ ಭಾಗವಾಗಿ ದೇಶದಲ್ಲಿ 2ನೇ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಆರಂಭಿಸಲಾಗುವುದು ಎಂದು ಸೌದಿ ಅರೆಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮಂಗಳವಾರ ಹೇಳಿದ್ದಾರೆ. ತೈಲದಿಂದ ಲಭಿಸುವ ಆದಾಯವನ್ನು ವೈವಿಧ್ಯಮಯ ವ್ಯವಹಾರದಲ್ಲಿ ತೊಡಗಿಸುವ ಈ ಉಪಕ್ರಮದಿಂದ ಜಾಗತಿಕ ವಾಯು ಸಾರಿಗೆ ಸಂಚಾರದಲ್ಲಿ ಸೌದಿ ಅರೇಬಿಯಾ 5ನೇ ಸ್ಥಾನಕ್ಕೇರಲಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ಆದರೆ ನೂತನ ವಿಮಾನಯಾನ ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ ಒದಗಿಸಿಲ್ಲ. ಅರಬ್ ದೇಶಗಳ ಪೈಕಿ ಬಲಿಷ್ಟ ಆರ್ಥಿಕತೆಯನ್ನು ಹೊಂದಿರುವ ಸೌದಿ ಅರೇಬಿಯಾದ ತೈಲೇತರ ಆದಾಯವನ್ನು 2030ರ ವೇಳೆಗೆ 12 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ.
ಬಂದರು, ರೈಲು ಮತ್ತು ರಸ್ತೆ ನೆಟ್ವರ್ಕ್ ಅಭಿವೃದ್ಧಿ ಸೇರಿದಂತೆ ದೇಶವನ್ನು 3 ಖಂಡಗಳೊಂದಿಗೆ ಸಂಪರ್ಕಿಸುವ ಜಾಗತಿಕ ಲಾಜಿಸ್ಟಿಕ್ ಕೇಂದ್ರವನ್ನಾಗಿಸಿದರೆ ಈಗ ಜಿಡಿಪಿಗೆ ಸಾರಿಗೆ ಮತ್ತು ಲಾಜಿಸ್ಟಿಕ್ ಕ್ಷೇತ್ರದಿಂದ ಸೇರ್ಪಡೆಯಾಗುವ 6% ಪಾಲು 10%ಕ್ಕೆ ಏರಿಕೆಯಾಗಲಿದೆ ಮತ್ತು ಪ್ರವಾಸೋದ್ಯಮ, ಹಜ್, ಉಮ್ರಾದಂತಹ ಇತರ ಕ್ಷೇತ್ರಗಳು ತಮ್ಮ ರಾಷ್ಟ್ರೀಯ ಗುರಿಯನ್ನು ಸಾಧಿಸಲು ನೆರವಾಗಲಿದೆ ಎಂದು ಮೂಲಗಳು ಹೇಳಿವೆ. ಈಗ ಸೌದಿ ಅರೇಬಿಯನ್ ಏರ್ಲೈನ್ಸ್ ಎಂಬ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಹೊಂದಿರುವ ಸೌದಿ, ತನ್ನ ಗಾತ್ರಕ್ಕೆ ಹೋಲಿಸಿದರೆ ಈ ವಲಯದಲ್ಲಿ ಅತ್ಯಂತ ಚಿಕ್ಕ ಪ್ರಮಾಣದಲ್ಲಿ ವಿಮಾನಯಾನ ಸಂಸ್ಥೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಹೆಚ್ಚುವರಿ ವಿಮಾನಯಾನ ಸಂಸ್ಥೆಯ ಸೇರ್ಪಡೆಯಾದರೆ, ಸೌದಿ ಅರೇಬಿಯಾದಿಂದ 250ಕ್ಕೂ ಅಧಿಕ ಅಂತರಾಷ್ಟ್ರೀಯ ವಿಮಾನನಿಲ್ದಾಣಗಳಿಗೆ ಸಂಪರ್ಕ ಸಾಧ್ಯವಾಗಲಿದೆ ಮತ್ತು ಸರಕು ಸಾಗಣೆ ಸಾಮರ್ಥ್ಯ ದ್ವಿಗುಣಗೊಂಡು 4.5 ಮಿಲಿಯನ್ ಟನ್ಗೆ ತಲುಪಲಿದೆ. ಹೊಸ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಆರಂಭಿಸುವ ಪ್ರಕ್ರಿಯೆಯ ಅಂಗವಾಗಿ , ರಿಯಾದ್ನಲ್ಲಿ ಹೊಸ ವಿಮಾನನಿಲ್ದಾಣ ಸ್ಥಾಪಿಸಲು ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿ(ಪಿಐಎಫ್) ಯೋಜನೆ ರೂಪಿಸಿದೆ ಎಂದು ಈ ವರ್ಷದ ಆರಂಭದಲ್ಲಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.