ಕೊನೆಗೂ ಶೇ. 4.65ಕ್ಕಿಳಿದ ದಕ್ಷಿಣ ಕನ್ನಡದ ಕೋವಿಡ್ ಪಾಸಿಟಿವಿಟಿ
ವ್ಯಾಕ್ಸಿನೇಷನ್‌ನಲ್ಲಿ ಉಡುಪಿ ದ್ವಿತೀಯ
ಉಡುಪಿ, ಜು.1: ಬಹು ದಿನಗಳ ನಿರೀಕ್ಷೆಯ ಬಳಿಕ ದಕ್ಷಿಣ ಕನ್ನಡದ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇದೀಗ 5ಕ್ಕಿಂತ ಕೆಳಗಿಳಿದಿದ್ದು, ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಗೆ ಹಾದಿ ಸುಗಮಗೊಂಡಂತಾಗಿದೆ. ಕರ್ನಾಟಕ ಕೋವಿಡ್ ವಾರ್‌ರೂಮ್ ಇಂದು ಸಂಜೆ ಪ್ರಕಟಿಸಿದ ಜೂ.30ರವರೆಗಿನ ಕೋವಿಡ್ ಸಮಗ್ರ ಅಂಕಿಅಂಶಗಳಲ್ಲಿ ದಕ್ಷಿಣ ಕನ್ನಡದ ಪಾಸಿಟಿವಿಟಿ ಪ್ರಮಾಣ ಶೇ.4.65 ಆಗಿದೆ.
ದಕ್ಷಿಣ ಕನ್ನಡದೊಂದಿಗೆ ಮೈಸೂರಿನ ಪಾಸಿಟಿವಿಟಿ ರೇಟ್ ಸಹ ಶೇ.4.72 ಕ್ಕಿಳಿದಿದೆ. ಸದ್ಯ ಕೊಡಗು (ಶೇ.7.54) ಹಾಗೂ ಹಾಸನ (ಶೇ.5.43) ಜಿಲ್ಲೆಗಳ ಪಾಸಿಟಿವಿಟಿ ಮಾತ್ರ ಶೇ.5ಕ್ಕಿಂತ ಮೇಲಿದೆ. ಕಳೆದ ಜೂ.23ರಂದು ಶೇ.5ಕ್ಕಿಂತ ಕೆಳಗೆ ಬಂದ ಉಡುಪಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಜೂ.30ಕ್ಕೆ ಶೇ.3.95ಕ್ಕಿಳಿದಿದೆ. ಚಿಕ್ಕಮಗಳೂರು (3.69), ಕೋಲಾರ (3.58) ಹಾಗೂ ದಾವಣಗೆರೆ (3.22) ಜಿಲ್ಲೆಗಳ ಪಾಸಿಟಿವಿಟಿಯಲ್ಲಿ ಉತ್ತಮ ಸಾಧನೆ ತೋರಿಸುತ್ತಿವೆ. ಸದ್ಯ ಕರ್ನಾಟಕ ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ.2.25 ಆಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ.
ವ್ಯಾಕ್ಸಿನೇಷನ್‌ನಲ್ಲಿ ಉಡುಪಿ ದ್ವಿತೀಯ: ಕೋವಿಡ್ ಲಸಿಕೀಕರಣದಲ್ಲಿ ಬೆಂಗಳೂರು ನಗರ ಶೇ.63.72ರಷ್ಟು ಜನರಿಗೆ ಲಸಿಕೆ ನೀಡುವ ಮೂಲಕ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಉಡುಪಿ ಜಿಲ್ಲೆ ಶೇ.46.78 ಮಂದಿಗೆ ಲಸಿಕೆ ನೀಡಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ರಾಮನಗರ ಶೇ.42.55 ಮಂದಿಗೆ ಲಸಿಕೆ ನೀಡಿ ಮೂರನೇ ಸ್ಥಾನದಲ್ಲಿದೆ.
ಉಳಿದಂತೆ ಮೈಸೂರು ಶೇ.41.83, ಕೋಲಾರ 40.83, ಕೊಡಗು ಶೇ.40.16 ಸಾಧನೆಯೊಂದಿಗೆ ರಾಜ್ಯದಲ್ಲಿ 4ರಿಂದ ಆರರೊಳಗಿನ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಶೇ.39.35 ಮಂದಿಗೆ ಲಸಿಕೆಯನ್ನು ನೀಡಿ 7ನೇ ಸ್ಥಾನದಲ್ಲಿದೆ.
ಜಿಲ್ಲಾ ಮಟ್ಟದಲ್ಲಿ ಕೋವಿಡ್ ಪ್ರಕರಣಗಳ ಒಟ್ಟಾರೆಯಾಗಿ ಸಾವಿನ ಪ್ರಮಾಣದಲ್ಲಿ ಚಿತ್ರದುರ್ಗ ಶೇ.0.51ರೊಂದಿಗೆ ಅಗ್ರಸ್ಥಾನದಲ್ಲಿದೆ. ಉಡುಪಿ ಜಿಲ್ಲೆ ಶೇ.0.59ರೊಂದಿಗೆ ಎರಡನೇ ಸ್ಥಾನವನ್ನು ಹೊಂದಿದೆ. ಇದರಲ್ಲಿ ದಕ್ಷಿಣ ಕನ್ನಡ ಶೇ.1.28 ಹಾಗೂ ಉತ್ತರ ಕನ್ನಡ ಶೇ.1.32 ಪ್ರಮಾಣ ವನ್ನು ಹೊಂದಿವೆ. ರಾಜ್ಯದಲ್ಲಿ ಹಾವೇರಿ ಶೇ.2.76ರ ಪ್ರಮಾಣದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ದಕ್ಷಿಣ ಕನ್ನಡದಲ್ಲಿ ಹೆಚ್ಚು ಪರೀಕ್ಷೆ: ಈಗಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಗಳೂರು ನಗರವನ್ನು ಹೊರತು ಪಡಿಸಿದರೆ ಪ್ರತಿದಿನ ಅತೀ ಹೆಚ್ಚು ಪರೀಕ್ಷೆಗಳು ನಡೆಯುತ್ತವೆ. ಕಳೆದ ಹತ್ತು ದಿನಗಳ ಸರಾಸರಿಯನ್ನು ಲೆಕ್ಕಕ್ಕೆ ಹಿಡಿದರೆ ಬೆಂಗಳೂರು ನಗರದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 62,907 ಮಂದಿಯ ಪರೀಕ್ಷೆ ನಡೆದರೆ, ದಕ್ಷಿಣ ಕನ್ನಡದಲ್ಲಿ ಇದು 38,361 ಆಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 34,170, ಕೊಡಗು 33,873, ಹಾಸನ 31,214, ಉತ್ತರ ಕನ್ನಡದಲ್ಲಿ 31,088, ಚಿಕ್ಕಮಗಳೂರು 30,903 ಮಂದಿಯ ಪರೀಕ್ಷೆ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈ ಸಂಖ್ಯೆ 23,216 ಆಗಿದೆ.
ಗುಣಮುಖರ ಪ್ರಮಾಣ ಹೆಚ್ಚಳ: ರಾಜ್ಯದಲ್ಲೀಗ ಕೋವಿಡ್‌ನಿಂದ ಗುಣಮುಖ ರಾಗುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ರಾಜ್ಯದಲ್ಲಿ ಈ ಪ್ರಮಾಣ ಶೇ.96.08 ಆಗಿದೆ. ಉಡುಪಿ ಜಿಲ್ಲೆಯಲ್ಲಿ ಶೇ.97.83, ಉತ್ತರ ಕನ್ನಡದಲ್ಲಿ ಶೇ.97.28, ಶಿವಮೊಗ್ಗದಲ್ಲಿ ಶೇ.95.93, ಚಿಕ್ಕ ಮಗಳೂರು ಶೇ.95.54, ದಕ್ಷಿಣ ಕನ್ನಡ ಶೇ.93.69 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ದ.ಕ.ದಲ್ಲಿ ಗ್ರಾಮೀಣ ಜನರೇ ಹೆಚ್ಚು: ಕಳೆದ 14ದಿನಗಳ ಅಂಕಿಅಂಶದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ಅತೀ ಹೆಚ್ಚಿನ ಗ್ರಾಮೀಣ ವಾಸಿಗಳು ಕೋವಿಡ್‌ಗೆ ಪಾಸಿಟಿವ್ ಆಗಿದ್ದಾರೆ. ಇಲ್ಲಿ ಈಗ 4439 ಮಂದಿ ಗ್ರಾಮೀಣ ಜನರು ಹಾಗೂ 2172 ಮಂದಿ ನಗರವಾಸಿಗಳು ಕೋವಿಡ್‌ಗೆ ಪಾಸಿಟಿವ್ ಆಗಿದ್ದಾರೆ. ಮೈಸೂರಿನಲ್ಲಿ ಈಗಲೂ ಅತಿ ಹೆಚ್ಚು ನಗರವಾಸಿಗಳು (3823)ಗಳಿದ್ದು ಇಲ್ಲಿ 2592 ಮಂದಿ ಗ್ರಾಮೀಣ ಜನರು ಪಾಸಿಟಿವ್ ಆಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1417 ಗ್ರಾಮೀಣ ಹಾಗೂ 332 ನಗರವಾಸಿಗಳು ಕೋವಿಡ್‌ಗೆ ಪಾಸಿಟಿವ್ ಇದ್ದಾರೆ.
ಮಾಳ ಗ್ರಾಮದಲ್ಲಿ ಹೆಚ್ಚು ಪ್ರಕರಣ: ಕಳೆದೊಂದು ವಾರದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದ ರಾಜ್ಯದಲ್ಲಿ ಅಗ್ರ 20 ಗ್ರಾಮಗಳಲ್ಲಿ ಉಡುಪಿ ಜಿಲ್ಲೆಯ ಮಾಳ ಗ್ರಾಮ ಸ್ಥಾನ ಪಡೆದಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ, ಐನಕೀಡು ಹಾಗೂ ಓಳಮೊರು ಗ್ರಾಮಗಳು ಸ್ಥಾನ ಪಡೆದಿವೆ. ರಾಜ್ಯದ 20 ನಗರ ಪ್ರದೇಶಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಉಳ್ಳಾಲ, ಉತ್ತರ ಕನ್ನಡದ ಸಿದ್ಧಾಪುರ, ಶಿವಮೊಗ್ಗ ಜಿಲ್ಲೆಯ ಸಾಗರ, ಚಿಕ್ಕಮಗಳೂರಿನ ಕೊಪ್ಪ ಪಟ್ಟಣಗಳು ಸ್ಥಾನ ಪಡೆದಿವೆ.