90ರ ಹೊಸ್ತಿಲಲ್ಲಿ ಮುಂಬೈ ಕನ್ನಡದ ಹಿರಿಯಕ್ಕ ಡಾ. ಸುನೀತಾ ಎಂ. ಶೆಟ್ಟಿ
ಈ ನಗರದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯಕ, ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕರ್ಮಭೂಮಿಗೆ, ಮಾತೃಭೂಮಿಗೆ ಋಣಸಂದಾಯ ಕಾಯಕವನ್ನು ಇಲ್ಲಿನ ಸಾಧಕರು ಸದಾ ಮಾಡುತ್ತಲೇ ಬಂದವರು. ಮುಂಬೈ ಕನ್ನಡಿಗರ ಸುದೀರ್ಘವಾದ ಇತಿಹಾಸದಲ್ಲಿ ಅಂತಹವರ ಹೆಜ್ಜೆಗುರುತುಗಳು ಹೊಸ ಪೀಳಿಗೆಯನ್ನು ಕೈಹಿಡಿದು ಮುನ್ನಡೆಸುತ್ತಿವೆ. ದಾರಿದೀವಿಗೆಯಾಗಿ ಬೆಳಗುತ್ತಿವೆ. ಅಂತಹ ಹಿರಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರುಗಳಲ್ಲಿ ಡಾ. ಸುನೀತಾ ಎಂ. ಶೆಟ್ಟಿ ಅವರ ಹೆಸರೂ ಒಂದು. ಇವರು ಜೂನ್ 26ಕ್ಕೆ ಸಾರ್ಥಕ ಎಂಭತ್ತೊಂಭತ್ತು ವಸಂತಗಳನ್ನು ಪೂರೈಸಿ ತೊಂಭತ್ತರ ಹರೆಯಕ್ಕೆ ಕಾಲಿರಿಸಿದ್ದಾರೆ. ಸುನೀತಾ ಅಕ್ಕನಿಗೆ; ಅಮ್ಮನಿಗೆ ತೊಂಭತ್ತು!
‘‘ದೇಶದ ಯಾವ ಮೂಲೆಗೆ ಹೋದರೂ ಅಲ್ಲೊಬ್ಬ ಕನ್ನಡಿಗ ಭೇಟಿಯಾಗುತ್ತಾನೆ, ಮುಂಬೈ ಬಗೆಗೆ ಅರಳಿದ ಕಣ್ಣುಗಳಲ್ಲಿ ಹೊಳಪನ್ನು ಸೂಸುತ್ತಾನೆ. ಇಲ್ಲಿಯ ಹಿರಿಯ ಸಾಹಿತಿಗಳ ಹೆಸರುಗಳನ್ನು ಸ್ಮರಿಸುತ್ತಾನೆ. ಮುಂಬೈಯ ಉದಾರತನ, ಅವಕಾಶಗಳು, ಸಾಹಿತ್ಯದ ವೈವಿಧ್ಯ, ಬಿದ್ದರೂ ಮತ್ತೆ ಮತ್ತೆ ಪುಟಿವ ಇಲ್ಲಿನ ಕನ್ನಡತನವನ್ನು ಹೊಗಳುತ್ತಾನೆ. ಇಂತಹ ಮುಂಬೈಯ ಪರಿಶುದ್ಧತೆಯಲ್ಲಿ ನಾವು ಉಸಿರಾಡುವುದು ಬೇಡವೇ?’’ ಎಂದು ಡಾ. ಸುನೀತಾ ಎಂ. ಶೆಟ್ಟಿಯವರು ತಮ್ಮ ‘ಸಾವಿರದ ಬಿಸಿಲು-ಬೆಳದಿಂಗಳು’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಮುಂಬೈಯಲ್ಲಿ ಬೆಳಗಿದ ಹಣತೆಗಳೆಷ್ಟು! ಈ ನಗರದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯಕ, ಸಾಂಘಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕರ್ಮಭೂಮಿಗೆ, ಮಾತೃಭೂಮಿಗೆ ಋಣಸಂದಾಯ ಕಾಯಕವನ್ನು ಇಲ್ಲಿನ ಸಾಧಕರು ಸದಾ ಮಾಡುತ್ತಲೇ ಬಂದವರು. ಮುಂಬೈ ಕನ್ನಡಿಗರ ಸುದೀರ್ಘವಾದ ಇತಿಹಾಸದಲ್ಲಿ ಅಂತಹವರ ಹೆಜ್ಜೆಗುರುತುಗಳು ಹೊಸ ಪೀಳಿಗೆಯನ್ನು ಕೈಹಿಡಿದು ಮುನ್ನಡೆಸುತ್ತಿವೆ. ದಾರಿದೀವಿಗೆಯಾಗಿ ಬೆಳಗುತ್ತಿವೆ. ಅಂತಹ ಹಿರಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರುಗಳಲ್ಲಿ ಡಾ. ಸುನೀತಾ ಎಂ. ಶೆಟ್ಟಿ ಅವರ ಹೆಸರೂ ಒಂದು. ಜೂನ್ 26ಕ್ಕೆ ಸಾರ್ಥಕ ಎಂಭತ್ತೊಂಭತ್ತು ವಸಂತಗಳನ್ನು ಪೂರೈಸಿ ತೊಂಭತ್ತರ ಹರೆಯಕ್ಕೆ ಕಾಲಿರಿಸಿದ್ದಾರೆ. ಸುನೀತಾ ಅಕ್ಕನಿಗೆ; ಅಮ್ಮನಿಗೆ ತೊಂಭತ್ತು! ಕಳೆದ ವರ್ಷದ ಪ್ರಾರಂಭದಲ್ಲಿ ಕೊರೋನ ಎಲ್ಲರನ್ನೂ ಹತಾಶೆಯ ಮಡುವಲ್ಲಿ ಮುಳುಗಿಸಿ ದಿಕ್ಕುಕಾಣದಾಗಿಸಿದ ಸಂದರ್ಭ. ಆಗ ಸುನೀತಕ್ಕನೆಂಬ ಚೇತನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಿರಾಶೆಗೊಳ್ಳಲಿಲ್ಲ. ಬಂದದ್ದು ಬರಲಿ, ಎದುರಿಸುವುದನ್ನು ನಾವು ಕಲಿಯಬೇಕು, ಇದು ಒಂದು ‘ಮಧ್ಯಂತರ’ ಎಂದು, ಕವಿತೆಗಳ ಜೊತೆ, ತುಳು ಹಾಗೂ ವಿಶ್ವ ಜಾನಪದದೊಂದಿಗೆ ಅನುಸಂಧಾನಕ್ಕಿಳಿಯುತ್ತಾರೆ. ಆಗ ಹುಟ್ಟಿದ್ದು ‘ಮಧ್ಯಂತರ’ ಎಂಬ ಕನ್ನಡ ಕವಿತಾ ಸಂಕಲನ ಮತ್ತು ‘ತಾಸೆ-ತೆಂಬರೆ’ ಎಂಬ ತುಳು ಜಾನಪದ ತೌಲನಿಕ ಅಧ್ಯಯನ ಕೃತಿ. ಈ ಕೃತಿಗಳು ಡಾ. ಸುನೀತಾ ಎಂ. ಶೆಟ್ಟಿ ಅವರ ಚೇತೋಹಾರಿ ಬದುಕಿಗೆ ಒಂದು ನಿದರ್ಶನ. ‘‘ನಾನೊಬ್ಬನೇ ಏನು ಮಾಡಬಲ್ಲೆ ಎನ್ನುವ ಕ್ರಿಯೆಯನ್ನು ಮೊಟಕುಗೊಳಿಸುವ ನಕಾರಾತ್ಮಕ ನಿಲುವಿಗಿಂತ ನಾನೊಬ್ಬನೂ ಏನೆಲ್ಲಾ ಮಾಡಬಲ್ಲೆ ಎನ್ನುವ ದೃಢವಿಶ್ವಾಸ ಒಂದೇ ಜಗತ್ತನ್ನು ರಕ್ಷಿಸ ಬಹುದೇನೋ’’ ಎನ್ನುವ ಯಶವಂತ ಚಿತ್ತಾಲರ (ಬೆನ್ನುಡಿ-ಮೆರವಣಿಗೆ) ಮಾತು ಸುನೀತಾ ಶೆಟ್ಟಿ ಅವರಲ್ಲಿ ಬದುಕಿನ ಮಂತ್ರ ಎಂಬಂತಿದೆ.
ದಕ್ಷಿಣ ಕನ್ನಡದ ಮಂಗಳೂರಿನ ಕಳವಾರು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿಬೆಳೆದ ಪುಟ್ಟ ಹುಡುಗಿ ತಾನು ಮುಂದೆ ಡಾಕ್ಟರ್ ಆಗಬೇಕೆಂಬ ಕನಸನ್ನು ಕಟ್ಟಿಕೊಂಡಾಕೆ. ಅನಿವಾರ್ಯವಾಗಿ ಮುಂಬೈ ನಗರಿಯಲ್ಲಿ ಅಧ್ಯಾಪಿಕೆಯಾಗಿ ತೊಡಗಿಸಿಕೊಂಡದ್ದು ಈ ನಗರದ ಕನ್ನಡಿಗರ ಭಾಗ್ಯ ಅನ್ನಬೇಕು. ಬಾಳೆಕಂದುಗಳ ನಡುವೆ ಕುಣಿದಾಡಿದ, ಚೆಂಡೆ ಅಬ್ಬರಕ್ಕೆ, ಓಬೇಲೆ ಕರೆಗೆ ಓಗೊಟ್ಟಿದ್ದ ಆ ಪುಟ್ಟ ಹುಡುಗಿ ‘‘ಯಾವನು ವರದಕ್ಷಿಣೆ ಇಲ್ಲದೆ ಮದುವೆಯಾಗಲು ಮುಂದೆ ಬರುತ್ತಾನೋ ಆತನನ್ನೇ ಮದುವೆಯಾಗುವುದು’’ ಎಂಬ ಧೀರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಅದೂ ವರದಕ್ಷಿಣೆಯ ಭೂತ ತುಳುನಾಡಿನ ಬಂಟರಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ. ಗಾಂಧೀಜಿಯ ಆದರ್ಶ, ಚಳವಳಿ ಮೊದಲಾದ ಸದ್ಗುಣಗಳ ಗಣಿ ಮಹಾಬಲಶೆಟ್ಟಿಯವರು ಕನಸಿನ ಅರಸನಂತೆ ಇವರಿಗೆ ಜೊತೆಯಾದರು.
ಮದ್ರಾಸ್ ವಿಶ್ವವಿದ್ಯಾನಿಲಯ ನಡೆಸುತ್ತಿದ್ದ ಅಂತರ್‌ಕಾಲೇಜು ಸ್ಪರ್ಧೆಗಳಲ್ಲಿ ಸತತ ಮೂರು ಬಾರಿ ಪ್ರಥಮ ಬಹುಮಾನ ಗಳಿಸಿದ್ದ ಸುನೀತಾ ಶೆಟ್ಟಿ ಪ್ರತಿಭಾನ್ವಿತೆ. ಅಂದಿನ ದಿನಗಳಲ್ಲಿ ಮೊದಲ ಬಾರಿಗೆ ರಂಗವೇರಿ ಕುವೆಂಪುರವರ ‘ರಕ್ತಾಕ್ಷಿ’ ನಾಟಕದ ಪಾತ್ರ ನಿರ್ವಹಿಸಿ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡವರು. ‘ಸುನೀತ’ ಎಂದರೆ ಇಂಗ್ಲಿಷ್‌ನ ‘ಸಾನೆಟ್’ ಎಂಬರಿವು ಬಂದಾಗ ತನ್ನ ಹೆಸರಿನ ಬಗ್ಗೆ ತನಗೇ ಹೆಮ್ಮೆ ಅನ್ನಿಸಿದ್ದು, ತಾನು ಆಗಾಗ ಸುನೀತಗಳನ್ನು ಬರೆಯಲು ಪ್ರಾರಂಭಿಸಿದ್ದನ್ನು ಸುನೀತಕ್ಕ ನೆನೆದುಕೊಳ್ಳುತ್ತಾರೆ. ಮುಂಬೈಯಲ್ಲಿ ನ್ಯಾಷನಲ್ ಕನ್ನಡ ಎಜ್ಯುಕೇಶನ್ ಸೊಸೈಟಿ (ಎನ್‌ಕೆಇಎಸ್) ಶಾಲೆಯಲ್ಲಿ ಅಧ್ಯಾಪಿಕೆಯಾಗಿ ಸೇರಿಕೊಂಡು ಜೊತೆಜೊತೆಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪದವಿ ಪಡೆದಿದ್ದು ಓರ್ವ ಹಠವಾದಿಯ ಸಾಧನೆ. ತಾನು ವೈದ್ಯವೃತ್ತಿಯ ಡಾಕ್ಟರ್ ಆಗದಿದ್ದರೂ ‘ಡಾಕ್ಟರ್’ (ಎಚ್.ಡಿ.) ಆದುದು ಅವರ ಅಧ್ಯಯನ ನಿರತ ಬದುಕಿಗೆ ಸಾಕ್ಷಿ. ‘‘ಡಾ. ಸುನೀತಾ ಶೆಟ್ಟಿ ನನಗೆ ಹಿರಿಯಕ್ಕನಂತೆ ಇರುವವರು. ನಾನು ವಿಶ್ವವಿದ್ಯಾನಿಲಯ ಸೇರಿದ ದಿನದಿಂದಲೇ ನಿಕಟವರ್ತಿಯಾದವರು. ಅವರು ಅರ್ಧಕ್ಕೆ ನಿಲ್ಲಿಸಿದ ತಮ್ಮ ಪಿಎಚ್. ಡಿ. ಅಧ್ಯಯನವನ್ನು ನನ್ನ ಮಾರ್ಗದರ್ಶನದಲ್ಲಿ ಪೂರೈಸುವಂತಾದದ್ದು ನನಗೆ ತೃಪ್ತಿ ಮತ್ತು ಸಮಾಧಾನದ ಅಂಶ. ಸುನೀತಾ ಶೆಟ್ಟಿ ಯವರೊಂದಿಗೆ ಒಬ್ಬ ಒಳ್ಳೆಯ ಕವಿಯನ್ನು ಕಂಡಿದ್ದೇನೆ. ಹೋರಾಟಗಾರ್ತಿಯ ಕಸುವನ್ನು ಕಂಡಿದ್ದೇನೆ. ಅವರ ವಾಗ್ಮಿತೆಯ ಬಗ್ಗೆ, ಅವರು ಕವನವನ್ನು ವಾಚಿಸುವ ವಿಧಾನದ ಬಗ್ಗೆ ಮತ್ತು ತಮ್ಮ ಸುತ್ತಣ ಸಮಾಜದ ಎಲ್ಲರನ್ನೂ ಬೆಳೆಸುತ್ತಲೇ ತಾವು ಬೆಳೆದ ಬಗೆ ನನಗೆ ಬಹಳ ಅಭಿಮಾನದ ಸಂಗತಿಯಾಗಿದೆ’’ ಎಂದು ಡಾ. ವಸಂತಕುಮಾರ್ ತಾಳ್ತಜೆ ಅವರು ಹೇಳಿರುವ ಮಾತುಗಳಿಂದ ಡಾ. ಸುನೀತಾ ಅವರ ವ್ಯಕ್ತಿತ್ವದ ಒಂದು ಮಗ್ಗುಲನ್ನು ಗುರುತಿಸಬಹುದು.
ಎನ್.ಕೆ.ಇ.ಎಸ್., ಮುಂದೆ ಖಾಲ್ಸಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇರಿಕೊಂಡ ನಂತರ ಅಲ್ಲಿನ ವಾತಾವರಣವೇ ಬದಲಾಯಿತು. ‘ಕನ್ನಡ ಪ್ರೇಮಿ ಮಂಡಳಿ’ ಎಂಬ ವಿದ್ಯಾರ್ಥಿಗಳ ಸಂಘ ಕಟ್ಟಿದರು. ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸುತ್ತಿದ್ದರು. ಖಾಲ್ಸಾ ಕಾಲೇಜಿನ ಮರಾಠಿ, ಗುಜರಾತಿ, ಇಂಗ್ಲಿಷ್ ಮೊದಲಾದ ವಿಭಾಗಗಳ ಸಂಘಟನೆಗಳಿಗಿಂತ ‘ಕನ್ನಡ ಪ್ರೇಮಿ ಮಂಡಳಿ’ ಒಂದು ಕೈ ಮುಂದೆ ಹೋಗಿ ಕಾಲೇಜಿನ ಗೌರವದ, ಅಭಿಮಾನದ ದ್ಯೋತಕವಾಯಿತು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಎಂ.ಎ. ತರಗತಿಗಳಿಗೆ ಅಧ್ಯಾಪನ, ಅಲ್ಲಿನ ಪಠ್ಯ ಮಂಡಳಿ ಹಾಗೂ ಪುಣೆ ಕನ್ನಡ ವಿಭಾಗದ ಪಠ್ಯ ಮಂಡಳಿಯ ಸದಸ್ಯೆಯಾಗಿ ಗೈದ ಸಾಧನೆ ಅನುಪಮ. ಇಲ್ಲಿನ ಪಠ್ಯಗಳಲ್ಲಿ ಕರಾವಳಿ ಕರ್ನಾಟಕದ ಜಾನಪದವನ್ನು ಸೇರಿಸಿಕೊಳ್ಳುವಲ್ಲಿ ಇವರ ಪಾತ್ರ ಹಿರಿದು. ಯಾವತ್ತೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳಾಗಿ ಸರ್ವರ ಗೌರವಕ್ಕೆ ಪಾತ್ರರಾದವರು ಡಾ. ಸುನೀತಾ ಎಂ. ಶೆಟ್ಟಿ. ಸುನೀತಾ ಶೆಟ್ಟಿ ಅವರ ಪಿಎಚ್. ಡಿ. ಅಧ್ಯಯನದ ವಸ್ತು ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ’. ಓರ್ವ ನಿಷ್ಠುರವಾದಿ, ಕೋಪಿಷ್ಟ ಎಂದು ಕಾರಂತರ ಬಗ್ಗೆ ಕೇಳಿ ತಿಳಿದಿದ್ದ ಸುನೀತಾ ಶೆಟ್ಟಿ ಅವರು ಕಾರಂತರ ಒಪ್ಪಿಗೆ ಪಡೆಯಲೆಂದು ಅವರ ಸಾಲಿಗ್ರಾಮದ ಮನೆಗೆ ಅಳುಕುತ್ತಲೇ ಹೋದರು. ಅವರನ್ನು ಹೇಗೆ ಮಾತನಾಡಿಸಲಿ ಎಂಬ ಅಂಜಿಕೆಯಿಂದಿರುವಾಗ, ಕಾರಂತರ ನಗುಮುಖದ ಸ್ವಾಗತ ಆ ಅಂಜಿಕೆಯನ್ನು ದೂರ ಮಾಡಿತ್ತು. ಆದರೂ ಭೀತಿಯಿಂದಲೇ ಕಾರಂತರ ಜೊತೆ ಮಾತಿಗಿಳಿದಾಗ ಕಾರಂತರ ಮೊದಲ ಪ್ರಶ್ನೆ ‘‘ವಿಶ್ವ ಸಾಹಿತ್ಯದ ಬಗೆಗೆ ನಿಮಗೆ ಏನು ಗೊತ್ತಿದೆ?’’ ಆಗ ತಾನು ಓದಿದ ಇಂಗ್ಲಿಷ್ ಸಾಹಿತ್ಯ ಮತ್ತು ಮರಾಠಿ ಸಾಹಿತ್ಯದ ಜ್ಞಾನವನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಿದಾಗ ಕಾರಂತರು ನಕ್ಕರಂತೆ. ‘‘ಕನ್ನಡ ಸಾಹಿತ್ಯವಲ್ಲದೆ ಉಳಿದ ಭಾಷೆಗಳ ಸಾಹಿತ್ಯವನ್ನು ನಾನು ಗಂಭೀರವಾಗಿ ಓದಿಕೊಂಡವನಲ್ಲ. ನನಗೆ ನನ್ನದೇ ಮಾರ್ಗ. ಬರವಣಿಗೆಯಲ್ಲಿ ಪ್ರಾಮಾಣಿಕತೆ ಇದ್ದರೆ ಸಾಕು’’ ಎಂದು ಕಾರಂತರು ಹೇಳಿದ್ದರು. ಮುಂದೆ ಪಿಎಚ್.ಡಿ. ದೊರೆತ ಮೇಲೆ ಬರೆದ ಪತ್ರಕ್ಕೆ ಪ್ರತಿಯಾಗಿ ಕಾರಂತರು ಮಾರುತ್ತರ ಬರೆದ ಸಾಲುಗಳು ಎಲ್ಲ ಪ್ರಶಸ್ತಿ, ಪುರಸ್ಕಾರಗಳನ್ನು ಮೀರಿದ್ದೆಂದು ಸುನೀತಾ ಶೆಟ್ಟಿ ಅವರ ಅನಿಸಿಕೆ. ‘‘ಯಾರ ವಶೀಲಿಯ ಅಗತ್ಯವಿಲ್ಲ, ನಮ್ಮ ನಮ್ಮ ಅನುಭವಗಳೇ ನಮಗೆ ಸಾಕು’’ ಕಾರಂತರು ಬರೆದ ಈ ಸಾಲುಗಳು ಡಾ. ಸುನೀತಾ ಶೆಟ್ಟಿ ಅವರ ಬದುಕಿನ ಒಂದು ತತ್ವವಾಗಿ ಇಂದೂ ಉಳಿದುಕೊಂಡಿದೆ.
ಸುನೀತಾ ಶೆಟ್ಟಿ ಅವರ ಮೊದಲ ಹಂತದ ಕನ್ನಡ ಕಾವ್ಯ ಕೃಷಿ ಮಹತ್ವದ್ದೆಂದು ಹೇಳುವಂತಿಲ್ಲ. ಆದರೆ ಅವರ ಅನುಭವದ ಮೂಸೆಯಲ್ಲಿ ಗಟ್ಟಿಕಾಳುಗಳಾಗಿ ಮೂಡಿಬಂದದ್ದು ಎರಡನೇ ಹಂತದ (‘ಪಯಣ’-ಕವಿತಾ ಸಂಗ್ರಹದೊಂದಿಗೆ) ಕವಿತೆಗಳಲ್ಲಿ ಕಾಣಬಹುದು. ಆದರೆ ಇವರ ತುಳು ಕವಿತೆಗಳು ಪ್ರಾರಂಭದಿಂದಲೇ ಜಾನಪದ ಸತ್ವವನ್ನು ಪಡೆದು ಧ್ವನಿಪೂರ್ಣವಾಗಿ ಹೊರ ಬಂದಿವೆ. ಅವರ ಪ್ರಥಮ ತುಳು ಕವಿತಾ ಸಂಕಲನ ‘ಪಿಂಗಾರ’ಕ್ಕೆ ಕಯ್ಯೆರ ಕಿಞ್ಞಣ್ಣ ರೈಯವರು ಬರೆಯುತ್ತಾ, ‘‘ಅರ್ಥಕ್ಕೆ ಸರಿಯಾಗಿ ಶಬ್ದಗಳನ್ನು ಜೋಡಿಸುವ ಲಯ-ಛಂದಸ್ಸು ಕವಿತೆ ಎಂಬ ಹೆಣ್ಣಿನ ಸೌಂದರ್ಯದ ರೂಪ. ಅಂತಹ ಛಂದಸ್ಸು ಈ ಕವಿಗೆ ಅಂಗೈ ನೆಲ್ಲಿಕಾಯಿ’’ ಎಂದು ಉಲ್ಲೇಖಿಸಿದ್ದಾರೆ. ಕನ್ನಡದಲ್ಲೂ ‘ಪಯಣ’ ಸಂಕಲನದಿಂದ ಮೊದಲ್ಗೊಂಡು ಎಲ್ಲಾ ಸಂಕಲನಗಳು ಧ್ವನಿಪೂರ್ಣವಾಗಿ, ಲಯಬದ್ಧವಾಗಿ ವೈವಿಧ್ಯ ವಸ್ತುಗಳೊಂದಿಗೆ ಜನಸಾಮಾನ್ಯರಿಂದ ವಿಮರ್ಶಕರವರೆಗೆ ಮೆಚ್ಚುಗೆಗೆ ಪಾತ್ರವಾದವುಗಳು. ‘ನಾನು ನನ್ನ ಅಮ್ಮನಂತಲ್ಲ...’; ಅಕ್ಷಯ ಸೀರೆಯ ಮಂತ್ರದಗುಳಿಗೆ ಬಲಿಯಾಗಿ/ಷಂಡತನದ ಧರ್ಮವನ್ನು ಸಾರಲು/ ನಾನು ಹೊಗೆಯ ಮಗಳಲ್ಲ’ ಮುಂತಾದ ಒಂದೆರಡು ಉದಾಹರಣೆಗಳಿಂದಲೇ ಡಾ. ಸುನೀತಾ ಶೆಟ್ಟಿ ಅವರ ಕಾವ್ಯದ ಗಟ್ಟಿತನವನ್ನು ಗುರುತಿಸಬಹುದು. ‘ಮೆರವಣಿಗೆ’ ‘ತಾಸೆ-ತೆಂಬರೆ’ ಕೃತಿಗಳು ತುಳು ಜಾನಪದ ಕುರಿತ ಅವರ ಆಸಕ್ತಿಯನ್ನು ತಿಳಿಸುತ್ತದೆ. ಸದಾ ಕ್ರಿಯಾಶೀಲ ಮನಸ್ಸಿನ ಡಾ. ಸುನೀತಾ ಶೆಟ್ಟಿ ಪ್ರವಾಸಪ್ರಿಯರು. ಸಂದರ್ಭ ಸಿಕ್ಕಾಗಲೆಲ್ಲ ಅವಕಾಶ ಕೈಚೆಲ್ಲದೆ ಸಂಚಾರಕ್ಕೆ ತನ್ನನ್ನು ತಾನು ತಯಾರುಗೊಳಿಸುವ ಪರಿಯ ಸೊಬಗೇ ಬೇರೆ. ಹೋದಲ್ಲಿನ ಪರಿಸರ, ಜನಜೀವನ, ಇತಿಹಾಸ, ರಾಜಕೀಯ ಸ್ಥಿತಿಗತಿ, ಜಾನಪದ ಕಲೆ ಮತ್ತು ಬದುಕು ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಕೃತಿ ರೂಪಕ್ಕಿಳಿಸುವ ರೀತಿ ಅನುಕರಣೀಯ. ‘ಪೊಣ್ಣ ಉಡಲು ಬೆಂಗ್‌ದ ಕಡಲ್’ ಎರಡು ಅನುವಾದಿತ ನಾಟಕಗಳನ್ನು ನೀಡಿ ತುಳು ರಂಗಭೂಮಿಯನ್ನು ಅವರು ಸಂಪನ್ನಗೊಳಿಸಿದ್ದಾರೆ. ಮುಂಬೈಯ ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವವರು ಡಾ. ಸುನೀತಾ ಶೆಟ್ಟಿ. ಇಲ್ಲಿನ ತುಳು ಸಂಘಗಳು, ಸಾಹಿತ್ಯ ಬಳಗ, ಕರ್ನಾಟಕ ಸಂಘ, ಕನ್ನಡ ಕಲಾಕೇಂದ್ರ, ಗೋರೆಗಾಂವ್ ಕರ್ನಾಟಕ ಸಂಘ ಹೀಗೆ ಎಲ್ಲಾ ಸಂಘಗಳಿಗೆ ಬೇಕಾದವರು ಸುನೀತಾ ಶೆಟ್ಟಿ.
‘ಬಂಟ್ಸ್ ಸಂಘ’ದ ‘ಬಂಟರ ವಾಣಿ’ ಮಾಸಿಕದ ಸಂಪಾದಕ ವಿಭಾಗದಲ್ಲಿ, ಮಹಿಳಾ ವಿಭಾಗದಲ್ಲಿ ಸಾಂಸ್ಕೃತಿಕ, ಸಾಹಿತ್ಯ ಸಮಿತಿಗಳಲ್ಲಿ ಸಕ್ರಿಯರಾಗಿದ್ದಾರೆ. ಬಂಟರ ಸಂಘದ ಮೂಲಕ ಪ್ರತಿಭಾನ್ವಿತ ಬಡ ಮಕ್ಕಳನ್ನು ದತ್ತು ಸ್ವೀಕರಿಸಿ ಅವರ ವರ್ಷಪೂರ್ತಿ ಖರ್ಚನ್ನು ನೀಡುತ್ತಾ ಬಂದಿದ್ದಾರೆ. ಕನ್ನಡ ಪ್ರೇಮಿ ಮಂಡಳಿ, ಖಾಲ್ಸಾ ಕಾಲೇಜು ಹೆಸರಲ್ಲಿ ಮುಂಬೈ ಕನ್ನಡ ಸಂಘಕ್ಕೆ ದತ್ತಿ ನೀಡಿ ಅದರಿಂದ ಪ್ರತಿ ವರ್ಷ ವಿವಿಧ ವಿಷಯಗಳ ಕುರಿತು ದತ್ತಿ ಕಾರ್ಯಕ್ರಮ ನಡೆಯುವಂತೆ ಮಾಡಿದ್ದಾರೆ. ‘ಕರಾವಳಿ ಲೇಖಕಿಯರ ಸಂಘ’ಕ್ಕೆ ಅವರು ನೀಡಿದ ಮೊತ್ತದ ಠೇವಣಿಯಿಂದ ಬರುವ ಬಡ್ಡಿ ಹಣದಿಂದ ಪ್ರತಿವರ್ಷ ಸಂಘವು ‘ತೌಳವ ಸಿರಿ’ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. ಕನ್ನಡ-ತುಳು ಭಾಷೆಯಲ್ಲಿ ಬರೆಯುವವರಿಗೆ ಪ್ರಾಶಸ್ತ್ಯವನ್ನು ಇಲ್ಲಿ ನೀಡಲಾಗುತ್ತಿದೆ. ಹಾಗೆಯೇ ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ ಕರ್ನಾಟಕ ಸರಕಾರ ಡಾ. ಸುನೀತಾ ಶೆಟ್ಟಿ ಅವರಿಗೆ ನೀಡಿದ್ದ ಸಂದರ್ಭದಲ್ಲಿ ದೊರೆತ 1ಲಕ್ಷ ರೂ. ಮೊತ್ತಕ್ಕೆ ಒಂದಿಷ್ಟು ತಾನೂ ಸೇರಿಸಿ ಇಲ್ಲಿನ ಪ್ರತಿಷ್ಠಿತ ಸಂಘಕ್ಕೆ ‘ಡಾ. ಸುನೀತಾ ಎಂ. ಶೆಟ್ಟಿ ಸಾಹಿತ್ಯ ಪ್ರಶಸ್ತಿ’ ಹೆಸರಿನಲ್ಲಿ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲೆಂದು ಈ ಮೊತ್ತವನ್ನು ನೀಡಿದ್ದರು. ಪ್ರಾರಂಭದಲ್ಲಿ 2016ರವರೆಗೆ ಈ ಪ್ರಶಸ್ತಿಯು ಉತ್ತಮ ರೀತಿಯಿಂದ ಪ್ರದಾನಿಸ್ವಲ್ಪಡುತ್ತಿತ್ತು. ಆ ನಂತರ ಕೆಲ ವರ್ಷ ಈ ಪ್ರಶಸ್ತಿಯ ಸುದ್ದಿಯಿಲ್ಲ. ಆ ಒಟ್ಟು ಮೊತ್ತದ ಬಡ್ಡಿಯೂ ಲೆಕ್ಕಪತ್ರದಲ್ಲಿ ಕಂಡು ಬಂದಿಲ್ಲ. 2020ರಲ್ಲಿ ಮತ್ತೆ ಪ್ರಶಸ್ತಿ ನೀಡಲಾಯಿತು. ಇದೀಗ ಕೊರೋನ ಎಂಬ ನೆಪ. ಆದರೂ ಪ್ರಶಸ್ತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಮುಂಬೈ ಕನ್ನಡಿಗರು ಎಚ್ಚೆತ್ತುಕೊಂಡು ಪ್ರಶ್ನಿಸಬೇಕಾಗಿದೆ.
ಡಾ. ಸುನೀತಾ ಶೆಟ್ಟಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅನುಪಮವಾದುದು. ಶಿಕ್ಷಕಿಯಾಗಿದ್ದ ಅವರ ಸಾವಿರಾರು ವಿದ್ಯಾರ್ಥಿಗಳ ಬಳಗ ದೇಶವಿದೇಶಗಳಲ್ಲಿ ಹಬ್ಬಿದೆ. ಹಲವಾರು ಸಾಧನೆಗಳನ್ನು, ಗರಿಮೆಯನ್ನು ಮೆರೆದ ತಮ್ಮ ವಿದ್ಯಾರ್ಥಿಗಳನ್ನು ಬಾಯಿತುಂಬಾ ಹೆಸರಿಸುವ ಡಾ. ಸುನೀತಾ ಶೆಟ್ಟಿಯವರ ವಿದ್ಯಾರ್ಥಿಗಳಲ್ಲಿ ಸಮರ್ಥ ಸಂಘಟಕ ಜಯ ಸಿ. ಸುವರ್ಣ ಅವರನ್ನು ಗುರುತಿಸಬಹುದು. 1993ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರ ಜಸ್ಟಿಸ್ ಬಿ. ಎನ್. ಶ್ರೀಕೃಷ್ಣ ಅವರ ಏಕವ್ಯಕ್ತಿ ‘ಶ್ರೀಕೃಷ್ಣ ಆಯೋಗ’ ರೂಪಿಸಿತ್ತು. ಸುಪ್ರೀಂ ಕೋರ್ಟ್‌ನ ನಿವೃತ್ತ ಜಡ್ಜ್ ಆಗಿರುವ ಜಸ್ಟಿಸ್ ಬಿ. ಎನ್. ಕೃಷ್ಣ ಅವರು ಸುನೀತಾ ಶೆಟ್ಟಿಯವರ ವಿದ್ಯಾರ್ಥಿ. ಮಹಾರಾಷ್ಟ್ರದ ಎಸಿಪಿ ಪೊಲೀಸ್ ಅಧಿಕಾರಿ ಸುಶೀಲಾ ಶೆಟ್ಟಿ ಕೂಡ ಡಾ. ಸುನೀತಾ ಶೆಟ್ಟಿ ಅವರ ಪಠ್ಯದ ಹಾಗೂ ಬದುಕಿನ ಪಾಠಗಳನ್ನು ಕಲಿತವರು. ಕರ್ನಾಟಕದ ಕಾಪುವಿನ ಶಾಸಕರು ಹಾಗೂ ಮಾಜಿ ಸಚಿವ ದಿ. ವಸಂತ ವಿ. ಸಾಲಿಯಾನ್ ಅವರು ಕೂಡಾ ಡಾ. ಸುನೀತಾ ಎಂ. ಶೆಟ್ಟಿ ಅವರ ಹೆಮ್ಮೆಯ ವಿದ್ಯಾರ್ಥಿಗಳಲ್ಲಿ ಓರ್ವರು. ವಸಂತ ಸಾಲ್ಯಾನ್ ಅವರು ತಮ್ಮ ವಿದ್ಯಾ ಗುರುಗಳನ್ನು ಎಂದೂ ಮರೆತಿರಲಿಲ್ಲ. ಬದುಕಿನ ಕೊನೆಯವರೆಗೂ ಡಾ. ಸುನೀತಾ ಶೆಟ್ಟಿ ಅವರಿಗೆ ದೀಪಾವಳಿ ಸಂದರ್ಭ ನಿರಂತರ ಶುಭಾಶಯ ಪತ್ರಗಳನ್ನು ಕಳುಹಿಸುತ್ತಿದ್ದರು. ‘ನಿನಾದ’ ಕವಿತಾಸಂಕಲನದಿಂದ ‘ಮಧ್ಯಂತರ’ದ ತನಕ ಸುಮಾರು ಮೂವತ್ತೇಳು ಕನ್ನಡ-ತುಳು ವೈವಿಧ್ಯಪೂರ್ಣ ಕೃತಿಗಳನ್ನು ನೀಡಿರುವ ಡಾ. ಸುನೀತಾ ಶೆಟ್ಟಿ ಅವರ ಬದುಕಿನಂತೆಯೇ ಕೃತಿಗಳು ಅರ್ಥಪೂರ್ಣವಾಗಿವೆ. ಮಕ್ಕಳಾದ ಭೂಮಿಕಾ, ಭರತ, ಸತ್ಯರಿಗೆ ಕನ್ನಡದಲ್ಲೇ ವಿದ್ಯೆ ನೀಡಿ ತುಳುವಿನ ಸಾಂಸ್ಕೃತಿಕ ಬದುಕನ್ನು ಉಣಬಡಿಸಿರುವ ಸುನೀತಾ ಶೆಟ್ಟಿ, ಮುದ್ದು ಮೊಮ್ಮಕ್ಕಳೊಂದಿಗೆ ಈಗ ಸುಖಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರನ್ನು ಕನ್ನಡ ಸಾಹಿತ್ಯ ಲೋಕ ಗುರುತಿಸಬೇಕು, ಗೌರವಿಸಬೇಕು, ಮಾತ್ರವಲ್ಲದೆ, ಇಲ್ಲಿನ ಹೊಸ ಪೀಳಿಗೆಯಿಂದ ಗಟ್ಟಿ ಸಾಹಿತ್ಯದ ರಚನೆ ಆಗಬೇಕೆಂಬ ಉದ್ದೇಶದಿಂದ ಸಮಾನಮನಸ್ಕ ಮಹಿಳೆಯರನ್ನು ಒಟ್ಟುಗೂಡಿಸಿ ಅವರು ಕಟ್ಟಿಕೊಂಡ ಸಂಸ್ಥೆ ‘ಸೃಜನಾ’ ಬಳಗ’. ಪಂಚಭಾಷಾ ಪ್ರವೀಣೆಯಾಗಿರುವ ಸುನೀತಾ ಶೆಟ್ಟಿಯವರು ಭಾಷೆ, ಪ್ರಾಂತ, ಧರ್ಮಗಳನ್ನು ಮೀರಿ ನಿಂತವರು. ಎಲ್ಲಾ ಪ್ರಶಸ್ತಿ, ಪುರಸ್ಕಾರ, ಹೊಗಳಿಕೆಗಳನ್ನು ಮೀರಿ ನಿಂತ ಡಾ. ಸುನೀತಾ ಎಂ. ಶೆಟ್ಟಿ ತುಳು ಕನ್ನಡಿಗರ ಹೆಮ್ಮೆಯ ಅಕ್ಕ; ಕೆಲವರಿಗೆ ಅಮ್ಮ. ‘‘ಡಾ. ಸುನೀತಾ ಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಮಾಡಿರುವ ಸಾಧನೆ ಮೌಲ್ಯಯುತವಾದುದು. ಕರ್ನಾಟಕ ಸರಕಾರದ ಅತ್ತಿಮಬ್ಬೆ ಪ್ರಶಸ್ತಿ ಪಡೆದಿರುವ ಏಕಮೇವ ಮುಂಬೈ ಮಹಿಳೆ. ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಎರಡು ಸಲ ಪುಸ್ತಕ ಪ್ರಶಸ್ತಿ ಹಾಗೂ ಗೌರವ ಪುರಸ್ಕಾರ ನೀಡಿ ಗೌರವಿಸಿದೆ. ತುಳುನಾಡಿನವರಾಗಿದ್ದು ಮುಂಬೈಯಲ್ಲಿ ಎಲ್ಲರೊಡನೆ ಸಂಪರ್ಕದಿಂದಿದ್ದಾರೆ’’ ಎಂಬ ಡಾ. ವಾಮನ ನಂದಾವರರ ಮಾತುಗಳ ಮೂಲಕ ಸರ್ವ ಕನ್ನಡಿಗರ ಪರವಾಗಿ ಸುನೀತಾ ಅಮ್ಮನವರಿಗೆ ತೊಂಭತ್ತರ ಸಂಭ್ರಮ ಹರ್ಷೋಲ್ಲಾಸ ತರಲೆಂದು ಹಾರೈಕೆ.