ಯುಎಇ, ವಿಯೆಟ್ನಾಂ, ಇಥಿಯೋಪಿಯ, ಅಫ್ಘಾನಿಸ್ತಾನದ ಪ್ರಯಾಣಿಕರಿಗೆ ಸೌದಿ ಪ್ರವೇಶಕ್ಕೆ ನಿರ್ಬಂಧ
ರಿಯಾದ್, ಜು.3: ಕೋವಿಡ್-19 ಸೋಂಕಿಗಿಂತಲೂ ಅಧಿಕ ಸಾಂಕ್ರಾಮಿಕವಾಗಿರುವ ರೂಪಾಂತರಿತ ಸೋಂಕು ಹೆಚ್ಚಿರುವ ಯುಇಎ, ಇಥಿಯೋಪಿಯಾ ಮತ್ತು ವಿಯೆಟ್ನಾಂಗೆ ಪೂರ್ವಾನುಮತಿಯಿಲ್ಲದೆ ಪ್ರಯಾಣ ನಿರ್ಬಂಧಿಸಲಾಗಿದೆ ಎಂದು ಸೌದಿ ಅರೆಬಿಯಾದ ಆಂತರಿಕ ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ .
ಈ ದೇಶಗಳಿಂದ ಬರುವ ಮತ್ತು ಹೋಗುವ ವಿಮಾನ ಸಂಚಾರವನ್ನು ಜುಲೈ 4ರ ರಾತ್ರಿ 11 ಗಂಟೆಯಿಂದ ಅಮಾನತುಗೊಳಿಸಲಾಗುವುದು. ಈ ದಿನಾಂಕದ ಬಳಿಕ ಈ ದೇಶಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಈಗ ಇರುವ ನಿಯಮದಂತೆ, ಈ ಅವಧಿಗೂ ಮುನ್ನ ಸೌದಿ ಅರೆಬಿಯಾಗೆ ಆಗಮಿಸುವ ಸೌದಿಯ ಪ್ರಜೆಗಳಿಗೆ ಕ್ವಾರಂಟೈನ್ ಇರುವುದಿಲ್ಲ.
ಜೊತೆಗೆ. ಅಪಘಾನಿಸ್ತಾನದಿಂದ ಪ್ರವೇಶವನ್ನೂ ಅಮಾನತುಗೊಳಿಸಲಾಗಿದೆ. ಸೌದಿ ಅರೆಬಿಯಾ ಪ್ರವಾಸ ನಿಬರ್ಂಧಿಸಿರುವ ದೇಶಗಳಿಗೆ ಭೇಟಿ ನೀಡಿದ ವಿದೇಶೀಯರು ಸೌದಿಗೆ ಭೇಟಿ ನೀಡುವ ಕನಿಷ್ಟ 14 ದಿನಗಳ ಮೊದಲು ಆ ದೇಶದಿಂದ ತೆರಳಿದ್ದರೆ ಅವರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಹೇಳಿಕೆ ತಿಳಿಸಿದೆ. ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಪಡೆದವರು ಅಥವಾ ಸೋಂಕಿನಿಂದ ಚೇತರಿಸಿಕೊಂಡವರು ಕೆಲ ದೇಶಗಳಿಗೆ ಪ್ರಯಾಣಿಸಲು ಸೌದಿ ಅರೆಬಿಯಾ ಅನುಮತಿಸಿದೆ. ಒಂದು ಡೋಸ್ ಲಸಿಕೆ ಪಡೆದವರು 14 ದಿನದ ಬಳಿಕ, ಸೋಂಕಿನಿಂದ ಚೇತರಿಸಿಕೊಂಡವರು ನೆಗೆಟಿವ್ ವರದಿ ಬಂದ 6 ತಿಂಗಳ ಬಳಿಕ ವಿದೇಶಕ್ಕೆ ತೆರಳಬಹುದಾಗಿದೆ.