ಯಾರ ಸಮುದ್ರ? ಯಾರ ಕರಾವಳಿ? ಯಾರ ಬದುಕು..?
ಇಂದು ನೀಲಿ ಆರ್ಥಿಕತೆಯು ದೇಶದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಮೀನುಗಾರಿಕೆಗೆ ಸರಕಾರದ ಉತ್ತೇಜಕ ಕ್ರಮಗಳು ಸಹ ಅಷ್ಟೇ ಅವಶ್ಯಕ. ಅದರಲ್ಲೂ ವಿಶೇಷವಾಗಿ ಆರ್ಥಿಕ ವೈವಿಧ್ಯೀಕರಣ, ಮೀನುಗಾರಿಕೆ ವಿಧಾನಗಳಿಗೆ ಮೌಲ್ಯವನ್ನು ಹೆಚ್ಚಿಸುವುದು, ಮೀನುಗಳ ವೈಜ್ಞಾನಿಕ ನಿರ್ವಹಣೆ ಮತ್ತು ಮೇಲ್ವಿಚಾರಣೆ ಹಾಗೂ ಹವಾಮಾನ ಮುನ್ಸೂಚನೆ, ಅಂತರ್ರಾಷ್ಟ್ರೀಯ ಆರ್ಥಿಕ ನೀತಿ ಬದಲಾವಣೆಗಳಿಂದ ಆಘಾತಗಳನ್ನು ನಿರ್ವಹಿಸಲು ಸಹಾಯ ಮಾಡುವುದು, ಮೀನುಗಾರರ ಹಣಕಾಸು ಕಾರ್ಯವಿಧಾನಗಳ ಕುರಿತು ಹೆಚ್ಚು ಪರಿಣಾಮಕಾರಿ ಮತ್ತು ಪ್ರಾಯೋಗಿಕ ಯೋಜನೆಯ ಅಗತ್ಯವಿದೆ.
ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚಿನ ಕರಾವಳಿ ಪ್ರದೇಶವನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದು. ಈ ಕರಾವಳಿ ಪ್ರದೇಶವನ್ನು ನಂಬಿಕೊಂಡು ಲಕ್ಷಾಂತರ ಮಂದಿ ಮೀನುಗಾರ ಸಮುದಾಯವು ಜೀವನ ನಡೆಸುತ್ತಿರುವುದು ಸಹ ಸುಳ್ಳಲ್ಲ. ಮೀನುಗಾರಿಕೆ ಇಂದು ‘ನೀಲಿ ಆರ್ಥಿಕತೆ’ ಎಂಬ ಹೆಸರಿನಲ್ಲಿ ಪ್ರಪಂಚದಲ್ಲಿ ಪರಿಚಿತವಾಗಿದೆ. ಇತಿಹಾಸದಿಂದ ಸಣ್ಣ ಮೀನುಗಾರಿಕೆ ಎನ್ನುವುದು ಬಹಳ ಪ್ರಚಲಿತದಲ್ಲಿದೆ. ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶೇಕಡಾ ನಲವತ್ತಕ್ಕೂ ಹೆಚ್ಚಿನವರು ಮಹಿಳೆಯರು ಎನ್ನುವುದು ವಿಶೇಷ. ಅದರಲ್ಲೂ ಮಂಗಳೂರು, ಕಾರವಾರ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಸಮುದಾಯಗಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ. ಇಂದು ಈ ಸಮುದ್ರದ ಮಕ್ಕಳ ಬದುಕು ಮೂರಾಬಟ್ಟೆಯಾಗಿದೆ.
ಮೊದಲೇ ನೂರೆಂಟು ಸಮಸ್ಯೆಗಳಿಂದ ಬಳಲುತ್ತಿದ್ದ ಈ ಸಮುದಾಯವು ಭಾರತೀಯ ನೌಕಾಪಡೆ ಕರಾವಳಿಯುದ್ದಕ್ಕೂ ನೌಕಾನೆಲೆಗಳನ್ನು ಸ್ಥಾಪಿಸಲು ಹೊರಟಾಗ ಸಮಸ್ಯೆ ಅಷ್ಟೇ ಹೆಚ್ಚಾಗಿದ್ದು ಸಹ ಸುಳ್ಳಲ್ಲ. ಅದರಲ್ಲೂ ಅವೈಜ್ಞಾನಿಕ ಮೀನುಗಾರಿಕೆ, ತಲೆಬುಡವಿಲ್ಲದ ಕರಾವಳಿ ಪ್ರದೇಶಗಳ ಅಭಿವೃದ್ಧಿ, ಕರಾವಳಿ ರಸ್ತೆಗಳ ಅಭಿವೃದ್ಧಿ, ಆಯ್ದ ಕರಾವಳಿ ಪ್ರದೇಶಗಳಲ್ಲಿ ವಿಶೇಷ ಮೀನುಗಾರಿಕೆ ಬಂದರುಗಳು ಎಂಬ ವಲಯವನ್ನು ಸ್ಥಾಪಿಸಲು ಹೊರಟಿರುವುದು ಈ ಸಮುದಾಯದ ಬದುಕನ್ನು ಮತ್ತಷ್ಟು ಮೂಲೆಗೆ ತಳ್ಳಿದೆ. ಮಾನವ ನಿರ್ಮಿತ ಕಾರಣಗಳಿಂದ ಆಗುತ್ತಿರುವ ತೊಂದರೆಗಳಿಗಿಂತ ಪ್ರಕೃತಿ ಉಂಟುಮಾಡುತ್ತಿರುವ ತೊಂದರೆೆಗಳು ಸಹ ಮೀನುಗಾರಿಕೆ ಸಮುದಾಯವನ್ನು ಇಕ್ಕಳದಲ್ಲಿ ಸಿಕ್ಕಿಸಿದೆ. ಇಂದು ಅವೈಜ್ಞಾನಿಕವಾಗಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆ ನಡೆಸುತ್ತಿರುವುದರಿಂದ ಸಮಸ್ಯೆಯನ್ನು ಮತ್ತಷ್ಟು ಜೀವಂತವಾಗಿರುವಂತೆ ಮಾಡುತ್ತಿದೆ. ಮುಖ್ಯವಾಗಿ ಸಮುದ್ರದ ಮಾಲಿನ್ಯದಿಂದ ಇತ್ತೀಚೆಗೆ ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಸಹ ಕಡಿಮೆಯಾಗುತ್ತಿದೆ. ಇದು ಈ ಸಮುದಾಯವನ್ನು ಮತ್ತಷ್ಟು ಚಿಂತೆಗೀಡುಮಾಡಿದೆ.
ಜಾಗತೀಕರಣ ಎಲ್ಲಾ ವಲಯವನ್ನು ಕೈಬೀಸಿ ಕರೆಯುತ್ತಿರುವುದರಿಂದ ಅದಕ್ಕೆ ಮೀನುಗಾರಿಕೆ ಸಹ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಖಾಸಗಿ ವಲಯ ಸಹ ಮೀನುಗಾರಿಕೆಗೆ ಕೈಹಾಕಿದ್ದು ಇವರು ಬಳಸುವ ಯಾಂತ್ರಿಕ ಬೋಟುಗಳು ಮೀನುಗಾರಿಕಾ ಸಮುದಾಯಕ್ಕೆ ಉರುಳಾಗಿ ಪರಿಣಮಿಸಿದೆ. ಹೀಗಾಗಿ ಸಾಂಪ್ರದಾಯಿಕ ಮೀನುಗಾರಿಕೆ ಇಂದು ಇನ್ನೊಂದು ಮಜಲನ್ನು ತಲುಪಿದೆ. ಹಾಗೆ ನೋಡಿದರೆ ಮುಂದಿನ ದಿನಗಳಲ್ಲಿ ಸಣ್ಣ ಮೀನುಗಾರಿಕೆ ಅವನತಿ ಹಾದಿಯನ್ನು ಹಿಡಿದರೂ ಆಶ್ಚರ್ಯವಿಲ್ಲ. ದೇಶದ ಕೆಲವು ಕರಾವಳಿ ರಾಜ್ಯಗಳು ಕಡಲ ಮೀನುಗಾರಿಕೆಯ ಮೂಲಕ ಆರ್ಥಿಕ ಅಭಿವೃದ್ಧಿಗೆ ಆಸಕ್ತಿದಾಯಕ ಉತ್ತೇಜನವನ್ನು ತೋರಿಸಿವೆ. ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ಗುಜರಾತ್ ರಾಜ್ಯಗಳು ಇತರ ಮೀನುಗಾರಿಕಾ ವಲಯ ಆಧಾರಿತ ರಾಜ್ಯಗಳಂತೆ ಸಮುದ್ರ ಮೀನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸಿದ್ದವು ಮತ್ತು ಅದರ ಬೆಳವಣಿಗೆ ಹಾಗೂ ವಿಸ್ತರಣೆಯನ್ನು ವಿಶೇಷವಾಗಿ ಆಳ ಸಮುದ್ರ ಮೀನುಗಾರಿಕೆ ಮತ್ತು ಮೀನುಗಾರಿಕಾ ಉತ್ಪನ್ನಗಳ ರಫ್ತಿಗೆ ಉತ್ತೇಜಿಸಿದವು. ಪರಿಣಾಮ ಅತಿಯಾದ ಮೀನುಗಾರಿಕೆ ಪದ್ಧತಿಗಳನ್ನು ಬಳಸಿದ್ದರಿಂದ ಮೀನುಗಾರಿಕೆಯನ್ನೇ ಅವಲಂಬಿಸಿದ್ದ ಸಮುದಾಯಗಳ ಜೀವನೋಪಾಯದ ಸುಸ್ಥಿರತೆಗೆ ಕ್ರಮೇಣ ಅಪಾಯ ಉಂಟಾಯಿತು. ಇಂದು ಈ ರಾಜ್ಯಗಳಲ್ಲಿ ಮೀನುಗಾರಿಕಾ ಸಂಪನ್ಮೂಲಗಳ ದಾಸ್ತಾನು, ಗಮನಾರ್ಹ ಕುಸಿತಕ್ಕೆ ಸಾಕ್ಷಿಯಾಗಿದೆ ಎನ್ನುತ್ತವೆ ಸಂಶೋಧನಾ ವರದಿಗಳು. ಅನಿಯಂತ್ರಿತವಾಗಿ ಬೆಳೆಯುತ್ತಿರುವ ಕರಾವಳಿ ಪ್ರವಾಸೋದ್ಯಮ ಸಹ ಇದಕ್ಕೆ ಸಾತ್ ನೀಡುವಂತಿದೆ. ಸರಕಾರದ ‘ಸಾಗರಮಾಲಾ ಯೋಜನೆ’ ಒಂದು ಅರ್ಥದಲ್ಲಿ ನೀಲಿ ಆರ್ಥಿಕತೆಗೆ ಪೂರಕವಾಗಿದ್ದರೂ ಅದು ತನ್ನದೇ ಆದ ಹಲವಾರು ಆಂತರಿಕ ಸಮಸ್ಯೆಗಳನ್ನು ಹೊಂದಿದೆ. ಇನ್ನು ಕೆಲವೆಡೆ ಅಂತರ್ ರಾಷ್ಟ್ರೀಯ ಗಡಿಯನ್ನು ದಾಟಿ ರಾತ್ರೋರಾತ್ರಿ ಕಳ್ಳತನದಲ್ಲಿ ಮಾಡುವ ಮೀನುಗಾರಿಕೆ ದೇಶೀಯ ಮೀನುಗಾರಿಕೆಯ ವಿಚಾರದಲ್ಲಿ ಮತ್ತಷ್ಟು ತಲೆನೋವು ತರುತ್ತಿದೆ.
ಈ ಮಧ್ಯೆ ಅಂತರ್ರಾಷ್ಟ್ರೀಯ ಸಾಗರೋತ್ತರ ಸಂಸ್ಥೆಯು ಪ್ರತಿಯೊಂದು ದೇಶದ ಕರಾವಳಿಯ ತೀರದಿಂದ ಬಹುದೂರದವರೆಗೆ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಂಬಂಧ ಇದ್ದ ನಿಯಮಗಳನ್ನು ಸ್ವಲ್ಪ ಸ್ವಲ್ಪವಾಗಿಯೇ ಸಡಿಲ ಮಾಡುತ್ತಿದೆ. ಇಂದು ಯಾವುದೇ ದೇಶವು ತನ್ನ ತೀರದಿಂದ ಅತೀ ದೂರದವರೆಗೂ ಮೀನುಗಾರಿಕೆಯನ್ನು ಮಾಡಬಹುದಾಗಿದೆ. ಇದರಿಂದ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರಂತರವಾಗಿ ಹಡಗಿನ ಮೂಲಕ ಇಂದು ಅಂತರ್ರಾಷ್ಟ್ರೀಯ ಖಾಸಗಿ ಸಂಸ್ಥೆಗಳು ಮೀನುಗಾರಿಕೆ ನಡೆಸುತ್ತಿವೆ. ಇವುಗಳು ಬಳಸುತ್ತಿರುವ ತಂತ್ರಜ್ಞಾನ, ಬಂಡವಾಳ ಹೂಡುವಿಕೆ, ಉದ್ಯೋಗ ಸೃಷ್ಟಿ ಮೀನುಗಾರಿಕೆಯಲ್ಲಿ ನವೀನತೆ ಮುಂತಾದವು ನೀಲಿ ಆರ್ಥಿಕತೆಗೆ ಪೂರಕವಾಗಿದ್ದರೂ ಇದು ಸಾಗರದಲ್ಲಿನ ಮತ್ಸ್ಯ ಸಂಪತ್ತು ಮತ್ತು ಅದನ್ನೇ ನಂಬಿಕೊಂಡಿರುವ ಮೀನುಗಾರಿಕೆ ಸಮುದಾಯವನ್ನು ಅತ್ಯಂತ ದುಸ್ಥಿರ ಪರಿಸ್ಥಿತಿಗೆ ತಳ್ಳಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆಯೆಂದರೆ ಒಡಿಶಾದ ಚಿಲ್ಕಾ ಸರೋವರದಲ್ಲಿ ಮೀನುಗಾರಿಕೆಯನ್ನು ಅವಲಂಬಿಸಿ ಬದುಕುತ್ತಿರುವ ಈ ಸಮುದಾಯವು ಇಂದು ಸಂಕ್ರಮಣಕಾಲದಲ್ಲಿ ಇದೆ. ಸರೋವರದಲ್ಲಿ ಆಧುನಿಕ ಮೀನುಗಾರಿಕೆ ತಂತ್ರ ಜ್ಞಾನಗಳ ಬಳಕೆ ಆಗುತ್ತಿದ್ದಂತೆ ಮೀನುಗಳ ಸಂಖ್ಯೆ ಕಡಿಮೆಯಾಯಿತು. ಈಗ ಈ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಜೀವನವು ವಿಚಿತ್ರ ಸಂಕೀರ್ಣ ತಿರುವನ್ನು ಪಡೆದುಕೊಳ್ಳುತ್ತಿದೆ. ಇದನ್ನು ಯಾರೂ ಗಮನಿಸುತ್ತಿಲ್ಲ ಅಷ್ಟೇ.
ಸುಸ್ಥಿರ ಮೀನುಗಾರಿಕೆಗೆ ಇನ್ನೊಂದು ಅಪಾಯವೆಂದರೆ ಅದು ವಾಣಿಜ್ಯ ಹಡಗುಗಳ ಸಂಚಾರ ಅದರಲ್ಲೂ ಪೆಟ್ರೋಲನ್ನು ಸಾಗಿಸುವ ಹಡಗುಗಳ ನಿರಂತರ ಸಂಚಾರ ಮತ್ತು ಅದರಿಂದ ಸೋರುವ ಪೆಟ್ರೋಲ್ ಮತ್ತಿತರ ಉಪ ಉತ್ಪನ್ನಗಳು ನಿಧಾನವಾಗಿ ಸಮುದ್ರವನ್ನು ಸೇರಿ ಮೀನುಗಳ ಸಂತತಿಯನ್ನು ಕಡಿಮೆ ಮಾಡುತ್ತದೆ ಎನ್ನುವ ವರದಿಗಳು. ಇತ್ತೀಚಿನ ಕೆಲವು ಅಂತರ್ರಾಷ್ಟ್ರೀಯ ನಿಯತಕಾಲಿಕೆಗಳ ಪ್ರಕಾರ ಪ್ರತಿವರ್ಷ ಹೆಚ್ಚು ಕಡಿಮೆ 3,00,000 ಕೆಜಿಗೂ ಅಧಿಕ ಪ್ಲಾಸ್ಟಿಕ್ ಇಂದು ಸಮುದ್ರದ ಒಡಲನ್ನು ಸೇರುತ್ತಿದೆ. ಪ್ಲಾಸ್ಟಿಕ್ ಭೂಮಾಲಿನ್ಯ ಉಂಟುಮಾಡುವುದರ ಜೊತೆಗೆ ಸಮುದ್ರ ಮಾಲಿನ್ಯವನ್ನು ಸಹ ಉಂಟು ಮಾಡುತ್ತಿದೆ. ಇದರೊಂದಿಗೆ ಹಳೆಯ ಹಡಗುಗಳನ್ನು ಒಡೆಯುವ ಉದ್ಯಮ ಇಂದು ವೇಗವಾಗಿ ಬೆಳೆಯುತ್ತಿದ್ದು ಇದರಿಂದ ಉತ್ಪತ್ತಿಯಾಗುವ ವಸ್ತುಗಳು ಸಹ ಸಮುದ್ರವನ್ನು ಸೇರುತ್ತಿವೆ. ಇದು ಸಹ ಮೀನುಗಳ ಸಂತತಿ ಕಡಿಮೆಯಾಗುವುದಕ್ಕೆ ಒಂದು ಮೂಲಭೂತ ಕಾರಣವಾಗಿದೆ.
ಅತಿಯಾದ ಮಾನವನ ಹಸ್ತಕ್ಷೇಪದಿಂದ ಇಂದು ಪ್ರಕೃತಿ ಮುನಿದು ನಿಂತಿದೆ. ಇದರಲ್ಲಿ ಅತಿ ಮುಖ್ಯವಾಗಿ ಕರಾವಳಿ ವಲಯಗಳಲ್ಲಿನ ಭವಿಷ್ಯದ ತಾಪಮಾನ ಬದಲಾವಣೆಯು ಕರಾವಳಿ ವಲಯದ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಗಳನ್ನು ತಜ್ಞರು ಹೇಳುತ್ತಿದ್ದಾರೆ. ಅದರಲ್ಲೂ ಭಾರತೀಯ ಕರಾವಳಿ ವಲಯಗಳ ನಿರಂತರ ಸವೆತ, ಪ್ರವಾಹ, ಹದಗೆಡುತ್ತಿರುವ ಕರಾವಳಿ ಪರಿಸರ ವ್ಯವಸ್ಥೆ, ಮ್ಯಾಂಗ್ರೋವ್ ಮತ್ತು ಲವಣಯುಕ್ತೀಕರಣದ ಕ್ಷೀಣಿಸುವಿಕೆ, ಚಂಡಮಾರುತಗಳಿಂದ ಕರಾವಳಿ ಹವಾಮಾನದಲ್ಲಿ ಉಂಟಾಗುವ ಸಮಸ್ಯೆಗಳು ಸಹ ಸಮುದ್ರದ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಏರುತ್ತಿರುವ ತಾಪಮಾನದಿಂದಾಗಿ ಸಮುದ್ರದ ನೀರಿನ ಮಟ್ಟ ಒಂದೇ ಸಮನೆ ಹೆಚ್ಚುತ್ತಿದ್ದು ಅಕ್ಕಪಕ್ಕದ ಕೃಷಿ ಭೂಮಿಗಳನ್ನು ಸಹ ನುಂಗಿ ಹಾಕುತ್ತಿದೆ. ಇದರಿಂದ ಸಮುದ್ರ ದಡದಲ್ಲಿ ವಾಸಿಸುತ್ತಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭ ಬರುತ್ತಿದೆ. ಹೀಗಾಗಿ ತಲೆಮಾರುಗಳ ಮೂಲಸ್ಥಾನವನ್ನು ಕಳೆದುಕೊಳ್ಳುವ ಅಪಾಯ ಇವರು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಆರಂಭವಾಗಿರುವ ಸಮುದ್ರ ಗಣಿಗಾರಿಕೆ ಇನ್ನೊಂದು ರೀತಿಯಲ್ಲಿ ಮೀನುಗಾರರನ್ನು ದುಃಸ್ವಪ್ನದಂತೆ ಕಾಡುತ್ತಿದೆ. ಚಿನ್ನ ಮತ್ತಿತರ ಅಮೂಲ್ಯ ಲೋಹಗಳನ್ನು ಹುಡುಕಾಡುವ ಬರದಲ್ಲಿ ಮೀನುಗಳ ಸಂತತಿ ನಾಶವಾಗುತ್ತಿದೆ. ಗಣಿಗಾರಿಕೆಯಿಂದ ಉಂಟಾಗುವ ತ್ಯಾಜ್ಯವಸ್ತುಗಳು ಮೀನುಗಳ ಪ್ರಾಣವನ್ನೇ ತೆಗೆಯುತ್ತವೆ. ಇಂತಹ ಗಣಿಗಾರಿಕೆ ಭೂಖಂಡದ ಶೆಲ್ಫ್ (ಕಾಂಟಿನೆಂಟಲ್ ಶೆಲ್ಫ್)ನ ಮೇಲೆ ಗಮನಾರ್ಹವಾದ ಪರಿಸರ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಇದರೊಂದಿಗೆ ದೇಶದ ರಕ್ಷಣಾ ಸಂಸ್ಥೆಗಳು ವಿಶೇಷವಾಗಿ ನೌಕಾಪಡೆಗಳು ಕರಾವಳಿ ತೀರಗಳನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಮೀನುಗಾರಿಕಾ ಸಮುದಾಯಕ್ಕೆ ಮತ್ತೊಂದು ಬೆದರಿಕೆಯಾಗಿದೆ. ಇದರಿಂದಾಗಿ ಹೆಚ್ಚಿನ ಕರಾವಳಿ ಪ್ರದೇಶಗಳು ಕಡಿಮೆಯಾಗುತ್ತಿವೆ ಅಥವಾ ಕಣ್ಮರೆಯಾಗುತ್ತಿವೆ ಮತ್ತು ಮೀನುಗಾರಿಕಾ ಅವಕಾಶಗಳು ಕಡಿಮೆಯಾಗುತ್ತಿವೆ. ಕಡಲ ಸವೆತವನ್ನು ಮತ್ತು ಅಬ್ಬರವನ್ನು ತಡೆಯಲು ಬೆಳೆಸುವ tetra pod ತಂತ್ರಜ್ಞಾನ ಎಲ್ಲಾ ಕರಾವಳಿ ಪ್ರದೇಶಕ್ಕೆ ಇನ್ನೂ ಬಂದಿಲ್ಲ.
ಕರಾವಳಿ ಪ್ರದೇಶಗಳನ್ನು ಸರಕಾರ ವಶಕ್ಕೆ ಪಡೆಯುವ ಸಂದರ್ಭದಲ್ಲಿ ‘ಪುನರ್ ಗೇಹಮ್’ ಯೋಜನೆ ಮೂಲಕ ನೀಡುತ್ತಿರುವ ಪರಿಹಾರಧನ ಯಾವುದಕ್ಕೂ ಸಾಲದಾಗಿದೆ. ಇದರ ನಡುವೆ ಕೊರೋನ ಇನ್ನೊಂದು ರೀತಿಯಲ್ಲಿ ಮೀನುಗಾರರ ಬದುಕನ್ನು ಹಾಳುಮಾಡಿದೆ. ಮಾನವ ಶಾಸ್ತ್ರೀಯವಾಗಿ ಹೇಳುವುದಾದರೆ ಯಾವುದೇ ರೀತಿಯ ಆರ್ಥಿಕ ಬದಲಾವಣೆ, ಕ್ರಮೇಣ ಸಾಮಾಜಿಕ ಬದಲಾವಣೆಗೆ ನಾಂದಿಯಾಗುತ್ತದೆ. ಎಷ್ಟೇ ಮೀನುಗಾರಿಕೆ ನಡೆಸಿದರೂ ಇವರಲ್ಲಿ ಬಡತನ ಮಾತ್ರ ಇನ್ನೂ ಹಾಗೆಯೇ ಮುಂದುವರಿಯುತ್ತಿದೆ. ಕೆಲವರು ಆಧುನಿಕ ಜೀವನವನ್ನು ಬೆನ್ನುಹತ್ತಿ, ಇರುವುದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಮೀನುಗಾರರ ಆರ್ಥಿಕ ಜೀವನ ಏರುಪೇರುಗಳಿಂದ ಕೂಡಿರುವುದರಿಂದ ಮೀನುಗಾರರ ಸಮುದಾಯದಲ್ಲಿ ಸಾಂಸ್ಕೃತಿಕ ಪಲ್ಲಟಗಳು ಸಾಮಾನ್ಯವಾಗುತ್ತಿದೆ. ಇದರಿಂದಾಗಿ ಮೀನುಗಾರಿಕೆ ಸಮುದಾಯಗಳ ಪರಂಪರೆ ನಷ್ಟವಾಗುತ್ತದೆ. ಮೀನುಗಾರಿಕೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಕರಾವಳಿ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಅನುಕೂಲಕರ ಲಿಂಗ ಅನುಪಾತವು ಮೀನುಗಾರರ ಉನ್ನತ ಸ್ಥಾನಮಾನದ ಸೂಚಕಗಳಾಗಿ ಮೊದಲು ಮುಖ್ಯ ಅಸ್ಮಿತೆಯಾಗಿ ಕಂಡುಬರುತ್ತಿತ್ತು. ಈಗ ಅದು ಗಮನಾರ್ಹವಾಗಿ ಕಡಿಮೆಯಾಗಿದೆ. ಮಾಲಕತ್ವದ ನಿಯಂತ್ರಣದಲ್ಲಿನ ಗೊಂದಲ, ಲಿಂಗ ತಾರತಮ್ಯ ಈ ಸಮುದಾಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದನ್ನು ಗಮನಿಸಬಹುದು.
ಇಂದು ನೀಲಿ ಆರ್ಥಿಕತೆಯು ದೇಶದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಮೀನುಗಾರಿಕೆಗೆ ಸರಕಾರದ ಉತ್ತೇಜಕ ಕ್ರಮಗಳು ಸಹ ಅಷ್ಟೇ ಅವಶ್ಯಕ. ಅದರಲ್ಲೂ ವಿಶೇಷವಾಗಿ ಆರ್ಥಿಕ ವೈವಿಧ್ಯೀಕರಣ, ಮೀನುಗಾರಿಕೆ ವಿಧಾನಗಳಿಗೆ ಮೌಲ್ಯವನ್ನು ಹೆಚ್ಚಿಸುವುದು, ಮೀನುಗಳ ವೈಜ್ಞಾನಿಕ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮತ್ತು ಹವಾಮಾನ ಮುನ್ಸೂಚನೆ, ಅಂತರ್ರಾಷ್ಟ್ರೀಯ ಆರ್ಥಿಕ ನೀತಿ ಬದಲಾವಣೆಗಳಿಂದ ಆಘಾತಗಳನ್ನು ನಿರ್ವಹಿಸಲು ಸಹಾಯ ಮಾಡುವುದು, ಮೀನುಗಾರರ ಹಣಕಾಸು ಕಾರ್ಯವಿಧಾನಗಳ ಕುರಿತು ಹೆಚ್ಚು ಪರಿಣಾಮಕಾರಿ ಮತ್ತು ಪ್ರಾಯೋಗಿಕ ಯೋಜನೆಯ ಅಗತ್ಯವಿದೆ. ಮೀನುಗಾರಿಕೆ ಉದ್ಯಮ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದರೂ, ನೇರ ಮಾರುಕಟ್ಟೆ ಮತ್ತು ವಿತರಣೆಗಳ ಮೂಲಕ ಸ್ಥಳೀಯ ಮಾರಾಟದಲ್ಲಿ ಹೆಚ್ಚಳ, ಮಾರಾಟದ ಹಕ್ಕುಗಳನ್ನು ಕಾಪಾಡುವ ಸಾಮೂಹಿಕ ಕ್ರಮಗಳು, ಮಾರುಕಟ್ಟೆ ಬಿಕ್ಕಟ್ಟು ನಿರ್ವಹಣೆ, ಸಮುದಾಯಗಳು ಮತ್ತು ಸರಕಾರಗಳ ನಡುವಿನ ಸಹಯೋಗ, ಕೆಲವು ಕರಾವಳಿ ಪ್ರದೇಶದಲ್ಲಿ ಕಂಡುಬಂದಿವೆ. ಇದು ಉತ್ತಮ ಬೆಳವಣಿಗೆಯಾಗಿದ್ದು ಪರಿಣಾಮಕಾರಿಯಾದ ಅಲ್ಪಮತ್ತು ದೀರ್ಘಕಾಲೀನ ಪ್ರತಿಕ್ರಿಯೆಗಳನ್ನು ಸಮನ್ವಯಗೊಳಿಸಲು, ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಇದು ಸಕಾಲವಾಗಿದೆ. ಮುಖ್ಯವಾಗಿ ಬದಲಾಗುತ್ತಿರುವ ಪರಿಸರ ಮತ್ತು ವ್ಯಾಪಾರ ನೀತಿಗಳ ವಿಚಾರದಲ್ಲಿ ಬರುವ ದಿನಗಳಲ್ಲಿ ಆದಷ್ಟು ಬೇಗ ಹೊಂದಿಕೊಳ್ಳುವ ಕಲೆಯನ್ನು ಈ ಸಮುದ್ರದ ಮಕ್ಕಳಿಗೆ ಕಲಿಸಬೇಕಾಗಿದೆ.