ಸೋನು ಸೂದ್ ಭಾವಚಿತ್ರದೊಂದಿಗೆ ಕಾರಿನ ವಿನ್ಯಾಸ: 'ರಿಯಲ್ ಹೀರೊ'ಗೆ ಬಂಟ್ವಾಳದ ಯುವಕನ ವಿನೂತನ ಕೃತಜ್ಞತೆ
ಬಂಟ್ವಾಳ, ಜು.4: ಬಾಲಿವುಡ್ ನಟ ಸೋನು ಸೂದ್ ಕೊರೋನ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡಿರುವುದಕ್ಕೆ ವಿನೂತನವಾಗಿ ಕೃತಜ್ಞತೆ ಸಲ್ಲಿಸಲು ಮುಂದಾಗಿರುವ ಬಂಟ್ವಾಳದ ಯುವಕನೋರ್ವ ತನ್ನ ಕಾರಿಗೆ ಸೋನು ಸೂದ್ ಅವರ ಭಾವಚಿತ್ರ ಹಾಕಿ ವಿನ್ಯಾಸಗೊಳಿಸಿದ್ದಾರೆ.
ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ವೀಡಿಯೋ ಗ್ರಾಫರ್ ಆಗಿರುವ ಶ್ರೀಪ್ರಸಾದ್ ಅವರು ತಮ್ಮ ಹುಂಡೈ ಇಯಾನ್ ಕಾರಿನ ಹೊರಭಾಗದಲ್ಲಿ ಸೋನು ಸೂದ್ ಅವರ ಪೋಟೋ ಹಾಗೂ ಅವರ ಕುರಿತ ಸುದ್ದಿಗಳನ್ನು ಹಾಕಿ ವಿನ್ಯಾಸಗೊಳಿಸಿದ್ದಾರೆ.
''ಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡಿದ ಸೋನು ಸೂದ್ ಅವರಿಗಾಗಿ ಸಣ್ಣ ಖರ್ಚು ಮಾಡಿ ಕಾರನ್ನು ಈ ರೀತಿ ವಿನ್ಯಾಸಗೊಳಿಸಿದ್ದೇನೆ. ಸಾಕಷ್ಟು ಜನರು ಕಾರನ್ನು ಕಂಡು ಯಾಕೆ ಅವರ ಪೋಟೊವನ್ನು ಹಾಕಿರುವುದಾಗಿ ವಿಚಾರಿಸುತ್ತಾರೆ. ಈ ವೇಳೆ ಸೋನು ಸೂದ್ ಅವರ ಮಾನವೀಯ ಸೇವೆಯನ್ನು ಅವರಿಗೆ ತಿಳಿಸುತ್ತೇನೆ'' ಎಂದು ಶ್ರೀಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ತನ್ನ ಈ ಕಾರ್ಯಕ್ಕೆ ತಂಗಿ ಉಷಾ ಜಗದೀಶ್ ಅವರು ಕೂಡ ಸಾಥ್ ನೀಡಿದ್ದಾರೆ ಎನ್ನುತ್ತಾರೆ.
Next Story