ಅಣೆಕಟ್ಟು ವಿವಾದ: ಈಜಿಪ್ಟ್, ಸುಡಾನ್ ಗೆ ಸೌದಿ ಅರೇಬಿಯ ಬೆಂಬಲ
photo : twitter/@arabnews
ರಿಯಾದ್, ಜು.7: ಇಥಿಯೋಪಿಯಾ ದೇಶ ನೈಲ್ ನದಿಯ ಉಪನದಿಯಲ್ಲಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅಣೆಕಟ್ಟು ವಿವಾದದಲ್ಲಿ ಈಜಿಪ್ಟ್ ಹಾಗೂ ಸುಡಾನ್ ನಿಲುವನ್ನು ಬೆಂಬಲಿಸುವುದಾಗಿ ಸೌದಿ ಅರೆಬಿಯಾ ಹೇಳಿದೆ.
‘ ದಿ ಗ್ರ್ಯಾಂಡ್ ಇಥಿಯೋಪಿಯನ್ ರಿನೈಸೆನ್ಸ್ ಡ್ಯಾಮ್(ಜಿಇಆರ್ಡಿ)’ ನಿರ್ಮಾಣ ಯೋಜನೆ ಇಥಿಯೋಪಿಯಾ ಹಾಗೂ ಈಜಿಪ್ಟ್, ಸುಡಾನ್ ನಡುವಿನ ಸುದೀರ್ಘ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ದೇಶದ ಅಭಿವೃದ್ಧಿಗೆ ಅಣೆಕಟ್ಟು ಯೋಜನೆ ಅತ್ಯಗತ್ಯ ಎಂದು ಇಥಿಯೋಪಿಯಾ ಹೇಳುತ್ತಿದ್ದರೆ, ಇದರಿಂದ ತಮ್ಮ ದೇಶಕ್ಕೆ ನೀರಿನ ಕೊರತೆಯಾಗಬಹುದು ಎಂಬುದು ಈಜಿಪ್ಟ್ ಮತ್ತು ಸುಡಾನ್ ನ ವಾದವಾಗಿದೆ.
ಈ ಮಧ್ಯೆ, ಮಂಗಳವಾರ ಇಥಿಯೋಪಿಯಾ ಜಲಾಶಯಕ್ಕೆ ನೀರು ತುಂಬಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿಯ ರಾಷ್ಟ್ರೀಯ ಮಾಧ್ಯಮ ಎಸ್ಪಿಎ, ತಮ್ಮ ಕಾನೂನುಬದ್ಧ ನೀರಿನ ಹಕ್ಕನ್ನು ರಕ್ಷಿಸಿಕೊಳ್ಳಲು ಮತ್ತು ಅಂತರಾಷ್ಟ್ರೀಯ ನಿಯಮದಂತೆ ಈ ಬಿಕ್ಕಟ್ಟನ್ನು ಪರಿಹರಿಸಬೇಕು ಎಂಬ ಈಜಿಪ್ಟ್ ಮತ್ತು ಸುಡಾನ್ನ ಆಗ್ರಹವನ್ನು ಸೌದಿ ಬೆಂಬಲಿಸುತ್ತದೆ. ಮತ್ತು ಈ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ಮೂರೂ ದೇಶಗಳ ನಡುವಿನ ಮಾತುಕತೆ ಪ್ರಕ್ರಿಯೆಗೆ ತಕ್ಷಣ ಚಾಲನೆ ನೀಡಬೇಕೆಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡುತ್ತದೆ ಎಂದು ಹೇಳಿಕೆ ಬಿಡುಗಡೆಗೊಳಿಸಿದೆ.
ಈ ಮಧ್ಯೆ, ಇಥಿಯೋಪಿಯಾ ಜಲಾಶಯಕ್ಕೆ ನೀರು ತುಂಬಿಸುವುದನ್ನು ತಡೆಯುವಂತೆ ಕೋರುವ ಕರಡು ನಿರ್ಣಯವನ್ನು ಟ್ಯುನೀಷಿಯಾ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಲ್ಲಿಸಿದ್ದು 15 ಸದಸ್ಯರ ಸಮಿತಿಯು ಈ ಬಗ್ಗೆ ಗುರುವಾರ ಚರ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಣೆಕಟ್ಟಿಗೆ ನೀರು ತುಂಬಿಸುವ ಮತ್ತು ನಿರ್ವಹಿಸುವ ಬಗ್ಗೆ ಮೂರೂ ದೇಶಗಳು ಮಾತುಕತೆ ನಡೆಸಿ 6 ತಿಂಗಳೊಳಗೆ ಒಪ್ಪಂದವನ್ನು ರೂಪಿಸಬೇಕು ಮತ್ತು ಈ ಒಪ್ಪಂದವನ್ನು ಆಫ್ರಿಕನ್ ಯೂನಿಯನ್ನ ಅಧ್ಯಕ್ಷ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತಿಮಗೊಳಿಸಬೇಕು. ಮೂರೂ ದೇಶಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಒಪ್ಪಂದ ನಡೆಯಬೇಕು ಮತ್ತು ಒಪ್ಪಂದ ಅಂತಿಮವಾಗುವವರೆಗೆ ಮಾತುಕತೆ ಪ್ರಕ್ರಿಯೆಗೆ ತೊಡಕಾಗುವ ರೀತಿಯ ವರ್ತನೆ ಅಥವಾ ಮತುಗಳನ್ನು ಆಡಬಾರದು. ಇಥಿಯೋಪಿಯಾ ಏಕಪಕ್ಷೀಯವಾಗಿ ಅಣೆಕಟ್ಟಿಗೆ ನೀರು ತುಂಬಿಸುವುದನ್ನು ತಡೆಯಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.