ಕುಡಿಯುವ ನೀರಿಗಾಗಿ ಸತ್ಯಾಗ್ರಹ ಮಾಡಿದ ಜಗತ್ತಿನ ಏಕೈಕ ನಾಯಕ ಡಾ. ಬಿ.ಆರ್.ಅಂಬೇಡ್ಕರ್
ಕುಡಿಯುವ ನೀರಿನ ಹಕ್ಕಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ನಡೆಸಿದ ಮಹಾಡ್ ಸತ್ಯಾಗ್ರಹ ಇಡೀ ಜಗತ್ತಿನಲ್ಲೇ ಕುಡಿಯುವ ನೀರಿನ ಹಕ್ಕಿಗಾಗಿ ನಡೆದ ಏಕೈಕ ಸತ್ಯಾಗ್ರಹವಾಗಿದೆ. ಮಹಾರಾಷ್ಟ್ರದ ಮಹಾಡ್ ಎಂಬ ಸಣ್ಣ ಪಟ್ಟಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ರವರ ನೇತೃತ್ವದಲ್ಲಿ 1927ರಲ್ಲಿ ಈ ಚಳವಳಿ ನಡೆಯಿತು. ಈ ಸತ್ಯಾಗ್ರಹವು ಗಾಂಧೀಜಿಯವರ ದಂಡಿ ಯಾತ್ರೆಗಿಂತ ಮೂರು ವರ್ಷಗಳ ಮೊದಲೇ ನಡೆಯಿತು. ಗಾಂಧಿಯವರ ಪ್ರಚಾರದಲ್ಲಿ ಉಪ್ಪುಮುಖ್ಯವಾಗಿದ್ದರೆ ಡಾ.ಅಂಬೇಡ್ಕರ್ರವರ ಸತ್ಯಾಗ್ರಹದಲ್ಲಿ ಕುಡಿಯುವ ನೀರು ಹೋರಾಟದ ಕೇಂದ್ರ ಭಾಗವಾಗಿತ್ತು.
ಆದರೆ ಇತಿಹಾಸವನ್ನು ನೋಡಿದಾಗ ಗಾಂಧಿಯವರು ನಡೆಸಿದ ಉಪ್ಪಿನ ಯಾತ್ರೆಯನ್ನು ‘ಸತ್ಯಾಗ್ರಹ’ ಎಂದು ಕರೆಯುವ ಇತಿಹಾಸಕಾರರು ಕುಡಿಯುವ ನೀರಿನ ಸಮಾನ ಹಕ್ಕಿಗಾಗಿ ಡಾ.ಅಂಬೇಡ್ಕರ್ ನಡೆಸಿದ ಸತ್ಯಾಗ್ರಹವನ್ನು ಸತ್ಯಾಗ್ರಹ ಎಂದು ಎಲ್ಲೂ ದಾಖಲಿಸಲೇ ಇಲ್ಲ. ಇದು ಇತಿಹಾಸಕಾರರು ಮಾಡಿದ ಮಹಾ ದ್ರೋಹ ಎಂದರೆ ತಪ್ಪಾಗಲಾರದು.
ದಲಿತರ ಗಂಟಲು ಬಾಯಾರಿಕೆಯಿಂದ ಒಣಗಿ ಪ್ರಾಣ ಹೋಗುತ್ತಿದ್ದರೂ ಚಾವ್ದಾರ್ ಕೆರೆಯಿಂದ ಒಂದು ತೊಟ್ಟು ನೀರು ಸಿಗುತ್ತಿರಲಿಲ್ಲ. ಅಸ್ಪಶ್ಯರು ಕೂಡ ಹಿಂದೂಗಳಂತೆಯೇ ಹಿಂದೂ ದೇವರುಗಳನ್ನು ಪೂಜಿಸುತ್ತಿದ್ದರೂ, ಸಹಸ್ರಾರು ವರ್ಷಗಳಿಂದ ಹಿಂದೂ ಧರ್ಮಕ್ಕೆ ಕಟ್ಟುಬಿದ್ದಿದ್ದರೂ ಈ ಕೆರೆಯಿಂದ ಅವರಿಗೆ ಒಂದೇ ಒಂದು ಹನಿ ನೀರು ಸಿಗುತ್ತಿರಲಿಲ್ಲ. ಮಹಾಡ್ ಮಹಾನಗರ ಪಾಲಿಕೆಯು 1924ರಲ್ಲಿಯೇ ಕೆರೆಯ ನೀರನ್ನು ಹಿಂದುಳಿದ ವರ್ಗದ ಜನರೂ ಕೂಡ ಬಳಸಬಹುದು ಎಂದು ನಿರ್ಣಯ ಮಾಡಿದ್ದರೂ ಅದು ಈಡೇರಿರಲಿಲ್ಲ. ಆದ್ದರಿಂದ ಅದೇ ಕೆರೆಯಿಂದ ನೀರನ್ನು ತೆಗೆದುಕೊಳ್ಳುವ ಮೂಲಕ ದಲಿತರು ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ತಮ್ಮ ಹಕ್ಕುಗಳನ್ನು ಸ್ಥಾಪಿಸಲು ನಿರ್ಧರಿಸಿದರು.
1927ರ ಮಾರ್ಚ್ 19 ಮತ್ತು 20ರಂದು ಚಳವಳಿ ನಡೆಯುವುದೆಂದು ತೀರ್ಮಾನಿಸಲಾಯಿತು. ಸಭೆಯ ಮೊದಲ ದಿನ ಸ್ಥಳೀಯ ಹಾಗೂ ಹೊರಗಡೆಯಿಂದ ಬಂದ ಕೆಲವು ಹಿಂದೂ ವಕ್ತಾರರು ಇವರ ಪರವಾಗಿ ಭಾಷಣಗಳನ್ನು ಮಾಡಿ, ನ್ಯಾಯಯುತ ಹಕ್ಕುಗಳು ದೊರೆಯಲೇಬೇಕು ಇದಕ್ಕಾಗಿ ಅಗತ್ಯ ಇರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಘೋಷಿಸಿದರು. ಇದಲ್ಲದೆ ವಿಷಯ ಸಮಿತಿಯು ಅಂದು ರಾತ್ರಿ ಸಭೆ ಸೇರಿ ಯಾವ ಯಾವ ಮೇಲ್ವರ್ಗದ ಜನರು ಸಭೆಯಲ್ಲಿ ಪಾಲ್ಗೊಂಡಿದ್ದರೋ ಅವರ ಅನುಮತಿ ಪಡೆದುಕೊಂಡು, ಒಂದು ಗುಂಪು ಚಾವ್ದಾರ್ ಕೆರೆಗೆ ಹೋಗಿ ಅಲ್ಲಿಂದ ನೀರು ತೆಗೆದುಕೊಂಡು ತಮ್ಮ ಹಕ್ಕುಗಳನ್ನು ಸ್ಥಾಪಿಸಿಕೊಳ್ಳಲು ಪರಿಶಿಷ್ಟರಿಗೆ ನೆರವು ನೀಡಬೇಕು ಎಂದು ನಿರ್ಧರಿಸಿತು. ಮಾರನೆಯ ದಿನ ಬೆಳಗ್ಗೆ ಸಭೆ ಸೇರಿದ ಈ ಸಮಿತಿಯು ಪುನಃ ಹಿಂದೂ ಪ್ರತಿನಿಧಿಗಳಿಗೆ ಕರೆ ಕಳುಹಿಸಿತು. ತೆಗೆದುಕೊಂಡಿರುವ ನಿರ್ಣಯಗಳಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿತು. ಅಂತರ್ಜಾತಿ ವಿವಾಹದ ವಿಷಯವೊಂದನ್ನು ಬಿಟ್ಟು ಉಳಿದ ವಿಷಯಗಳಿಗೆ ಎರಡೂ ಪಕ್ಷಗಳವರು ಸಹಿ ಹಾಕಿದರು.
ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ಮೇಲು ಕೀಳೆಂಬ ತಾರತಮ್ಯವನ್ನು ಬೇರು ಸಹಿತ ಕಿತ್ತೊಗೆಯಬೇಕೆಂದು ಒತ್ತಿ ಹೇಳಿದರು. ಸ್ವಸಹಾಯ, ಸ್ವಾಭಿಮಾನ ಮತ್ತು ಸ್ವಂತ ಶಕ್ತಿಯ ಮೇಲೆ ತಮ್ಮ ಜನರು ಮುಂದೆ ಬರಬೇಕು. ತಮ್ಮ ಅನುಯಾಯಿಗಳು ಸರಕಾರಿ ಹುದ್ದೆಗಳಿಗೆ ಸೇರಬೇಕು. ಅವರಿಗೆ ನೀಡುತ್ತಿರುವ ವತನದಂತಹ ಭಿಕ್ಷೆಗಳನ್ನು ನಿರಾಕರಿಸಿ ಸ್ವಂತ ವ್ಯವಸಾಯ ಮಾಡಲು ಅರಣ್ಯ ಜಮೀನನ್ನು ವಶಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ‘‘ಚಾವ್ದಾರ್ ಕೆರೆಯ ನೀರನ್ನು ಮುಟ್ಟಿ ನಾನು ಜೈಲಿಗೆ ಹೋಗಲು ಸಿದ್ಧ, ನಿಮ್ಮಲ್ಲಿ ಎಷ್ಟು ಜನ ಜೈಲಿಗೆ ಹೋಗಲು ಸಿದ್ಧರಿದ್ದೀರಿ? ಹೆಸರು ಕೊಡಿ’’ ಎಂದು ಸತ್ಯಾಗ್ರಹದಲ್ಲಿ ಪಾಲ್ಗೊಂಡವರನ್ನು ಕೇಳಿದರು. ಆಗ ತಾವೂ ಸಿದ್ಧ ಎಂದು ಹೆಸರು ಬರೆಸಿದವರ ಸಂಖ್ಯೆ ಮೂರು ಸಾವಿರವನ್ನೂ ದಾಟಿತ್ತು. ಸಮ್ಮೇಳನದಲ್ಲಿ ಭಾಗವಹಿಸಿದ್ದವರಲ್ಲಿ ಹೆಚ್ಚಿನವರು ಜೈಲಿಗೆ ಹೋಗಲು ಸಿದ್ಧರಾಗಿಯೇ ಬಂದಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಶಾಂತಿಯಿಂದ ಮೊವಣಿಗೆಯಲ್ಲಿ ಹೊರಟರು. ಮೊವಣಿಗೆಯ ಮುಂಭಾಗದಲ್ಲಿ ಅಂಬೇಡ್ಕರ್ ಸಾಗಿದರು. ಇತಿಹಾಸದಲ್ಲಿ ಮೊದಲ ಬಾರಿಗೆ ಮಹಾನ್ ನಾಯಕನ ಮುಂದಾಳತ್ವದಲ್ಲಿ ನೀರಿಗಾಗಿ ಸತ್ಯಾಗ್ರಹ ಆರಂಭವಾಯಿತು. ಈ ಮೊವಣಿಗೆಯು ಅತ್ಯಂತ ಶಾಂತಿಯಿಂದ ಹೊರಟಿತ್ತು. ಮೊವಣಿಗೆಯು ಮಹಾಡ್ನ ಮುಖ್ಯ ರಸ್ತೆಗಳಲ್ಲಿ ಸಾಗಿ ಚಾವ್ದಾರ್ ಕೆರೆಯ ಬಳಿ ಕೊನೆಗೊಂಡಿತು. ಡಾ.ಅಂಬೇಡ್ಕರ್ ತಾವೇ ಖುದ್ದಾಗಿ ಕೆರೆಯ ಏರಿಯ ಮೇಲೆ ನಿಂತರು. ಕೆರೆಯಿಂದ ನೀರನ್ನು ತೆಗೆದುಕೊಂಡು ಕುಡಿದರು. ಅವರ ಹಿಂದೆ ಮೊವಣಿಗೆಯಲ್ಲಿ ಬಂದಿದ್ದ ಸಾವಿರಾರು ಜನರೂ ಕೂಡ ನೀರು ಕುಡಿದರು. ಆನಂತರ ಅವರೆಲ್ಲರೂ ಬಂದ ರೀತಿಯಲ್ಲಿಯೇ ಶಾಂತವಾಗಿ ತಾವು ಸಭೆ ಸೇರಿದ್ದ ಸ್ಥಳಕ್ಕೆ ವಾಪಸಾದರು.
ಇದಾದ ಸ್ವಲ್ಪಹೊತ್ತಿನಲ್ಲಿ ಕೆಲವರು, ‘‘ಅಸ್ಪಶ್ಯರು ವೀರೇಶ್ವರ ದೇವಸ್ಥಾನವನ್ನು ಪ್ರವೇಶಿಸುವ ಹುನ್ನಾರ ನಡೆಸಿದ್ದಾರೆ’’ ಎಂಬ ಸುಳ್ಳು ವದಂತಿಯನ್ನು ಹಬ್ಬಿಸಿಬಿಟ್ಟರು. ಈ ಕಿಡಿಗೇಡಿಗಳ ನೀಚತನದಿಂದ ಸರಿಯಾಗಿ ಸತ್ಯವನ್ನು ತಿಳಿದುಕೊಳ್ಳದ ಕೆಲವು ಮೇಲ್ವರ್ಗದ ಜನರು ಬೊಂಬುಗಳನ್ನು ಹಿಡಿದು ಪ್ರತಿಯೊಂದು ರಸ್ತೆಯಲ್ಲೂ ಸೇರತೊಡಗಿದರು. ಮಹಾಡ್ನ ಸಂಪ್ರದಾಯವಾದಿಗಳು ಬೊಂಬು, ದೊಣ್ಣೆಗಳನ್ನು ಹಿಡಿದುಕೊಂಡು ಓಡಾಡುತ್ತಾ ಇಡೀ ನಗರವನ್ನೇ ರೌಡಿಗಳ ಕೂಟವನ್ನಾಗಿ ಮಾಡಿದರು. ಕೆಲವರು ತಮ್ಮ ಧರ್ಮ ಮತ್ತು ದೇವರು ಅಪಾಯದಲ್ಲಿದ್ದಾರೆ ಎಂದು ಬೊಬ್ಬೆ ಹೊಡೆಯತೊಡಗಿದರು. ಆಗ ಸಮ್ಮೇಳನಕ್ಕೆ ಆಗಮಿಸಿದ್ದ ಜನರಲ್ಲಿ ಬಹುಪಾಲು ಜನರು ಹೊರಟು ಹೋಗಿದ್ದರು, ಇನ್ನು ಕೆಲವರು ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿಕೊಂಡು ನಗರ ವೀಕ್ಷಣೆಗೆಂದು ತೆರಳಿದ್ದರೆ ಕೆಲವರು ಊರಿಗೆ ಹೊರಡಲು ಊಟ ಸೇವಿಸುವುದರಲ್ಲಿ ನಿರತರಾಗಿದ್ದರು. ಶಾಂತಿಯಿಂದ ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅಸ್ಪಶ್ಯರ ಮೇಲೆ ಏಕಾಏಕಿ ಎರಗಿ ಅವರ ಆಹಾರ ಪದಾರ್ಥಗಳನ್ನು ಮಣ್ಣಿನಲ್ಲಿ ಚೆಲ್ಲಲಾಯಿತು. ಅವರ ವಸ್ತುಗಳನ್ನು ಎಲ್ಲೆಂದರೆಲ್ಲಿ ಬಿಸಾಡಲಾಯಿತು. ಕೆಲವರನ್ನು ಥಳಿಸಿದರು. ಸಂಪ್ರದಾಯವಾದಿಗಳು ತಮ್ಮ ಆತ್ಮಸಾಕ್ಷಿ ಕಳೆದುಕೊಂಡಿದ್ದರ ಜೊತೆಗೆ ತಮ್ಮ ಮೇಲಿನ ಪರಿಜ್ಞಾನವನ್ನೇ ಕಳೆದುಕೊಂಡುಬಿಟ್ಟಿದ್ದರು.
ನಗರಪಾಲಿಕೆಯ ಮುಖ್ಯಸ್ಥರು ಮತ್ತು ಪೊಲೀಸರು ಇವರ ಅಟ್ಟಹಾಸವನ್ನು ನಿಯಂತ್ರಿಸಲು ವಿಫಲರಾಗಿ ಅತಿಥಿ ಗೃಹದಲ್ಲಿದ್ದ ಡಾ.ಅಂಬೇಡ್ಕರ್ ಅವರನ್ನು ಭೇಟಿ ಮಾಡಿದರು. ತಮ್ಮ ಸಹಚರರೊಂದಿಗೆ ಅಂಬೇಡ್ಕರ್ ಘಟನೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದರು. ದಾರಿಯಲ್ಲಿ ಸಾಗುವಾಗ ಗುಂಪೊಂದು ಅವರನ್ನು ಅಡ್ಡಹಾಕಲು ಪ್ರಯತ್ನಿಸಿತು. ಅದಕ್ಕೆ ಅಂಬೇಡ್ಕರ್ ದೇವಸ್ಥಾನವನ್ನು ಪ್ರವೇಶ ಮಾಡುವ ಯಾವ ಉದ್ದೇಶವೂ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು. ಆಗಲೇ ಸುಮಾರು 20 ಜನ ದಲಿತರು ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲದೆ ಕೆಲವು ಕಿಡಿಗೇಡಿಗಳು ಮಹಾಡ್ನಲ್ಲಿ ಗಲಾಟೆ ಮಾಡಿದ್ದಲ್ಲದೆ ಅಕ್ಕಪಕ್ಕದ ಹಳ್ಳಿಗಳಿಗೂ ವಿಷಯ ಮುಟ್ಟಿಸಿ ಅಲ್ಲಿಯೂ ಕೆಲವು ದಲಿತ ಮಹಿಳೆಯರು ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲು ಕಾರಣರಾದರು. ಈ ವೇಳೆಗೆ ನೂರಾರು ದಲಿತರು ಕೂಡ ಒಂದೆಡೆ ಸೇರಿ ಅಂಬೇಡ್ಕರ್ ಅವರ ಮಾತಿಗಾಗಿ ಕಾಯುತ್ತಿದ್ದರು. ಅವರ ಒಂದೇ ಒಂದು ಸೂಚನೆ ಸಿಕ್ಕಿದ್ದರೆ ಇಡೀ ಮಹಾಡ್ ರಣರಂಗವಾಗಿ ಮಾರ್ಪಾಟಾಗಿ ರಕ್ತದ ಕೋಡಿ ಹರಿಯುತ್ತಿತ್ತು. ಸಭೆಗೆ ಬಂದಿದ್ದವರ ಸಂಖ್ಯೆಯೂ ಹೆಚ್ಚೇ ಇತ್ತು. ಅಲ್ಲಿ ಸೇರಿದ್ದ ಹೆಚ್ಚಿನವರು ಮಿಲಿಟರಿ ಸೇವೆಯಿಂದ ನಿವೃತ್ತರಾಗಿದ್ದ ದೃಢಕಾಯರಾಗಿದ್ದರು. ಅವರಿಗೇನಾದರೂ ಅಂಬೇಡ್ಕರ್ ಅವರು ಸೂಚನೆ ಕೊಟ್ಟಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಆದರೆ ಅಂಬೇಡ್ಕರ್ ಮಾತ್ರ ಶಾಂತಿ ಮತ್ತು ಸಂಯಮದಿಂದ ಇರುವಂತೆ ಮನವಿ ಮಾಡಿಕೊಂಡರು. ದಲಿತರು ತಮ್ಮ ನಾಯಕನ ಮನವಿಗೆ ಸ್ಪಂದಿಸಿದರು. ಏನೇ ಆದರೂ ತಮ್ಮ ಹೋರಾಟ ಅಹಿಂಸಾತ್ಮಕ ಮತ್ತು ಕಾನೂನು ಬದ್ಧವಾಗಿಯೇ ಇರಬೇಕೆಂದು ಅವರು ತೀರ್ಮಾನಿಸಿದ್ದರಿಂದ ಕಾನೂನನ್ನು ಮುರಿಯುವ ಯಾವ ಯೋಚನೆಯನ್ನೂ ಮಾಡಲಿಲ್ಲ.
ಈ ಘಟನೆಯನ್ನು ಪ್ರತಿಭಟಿಸಿ ಮಹಾಡ್ ನಗರದ ಮುನ್ಸಿಪಾಲಿಟಿಯ ಪೌರ ಕಾರ್ಮಿಕರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಮಹಾಡ್ ಸಮ್ಮೇಳನದ ಅನುಭವ ಅಂಬೇಡ್ಕರ್ ಅವರಿಗೆ ಸಂಘಟನೆ ಮತ್ತು ಹೋರಾಟದ ಸಾಧ್ಯತೆಗಳ ಬಗ್ಗೆ ಅಪಾರವಾದ ಭರವಸೆಯನ್ನು ಮೂಡಿಸಿತು. ಮಹಾಡ್ನ ಚಾವ್ದಾರ್ ಕೆರೆಯ ನೀರನ್ನು ಕುಡಿಯಲು ನಿಮ್ನ ವರ್ಗದವರ ಮೊವಣಿಗೆಯನ್ನು ಮುನ್ನ್ನಡೆಸುವ ಮೂಲಕ ಸಾರ್ವಜನಿಕ ನೀರಿನ ಮೂಲಗಳಿಂದ ಸಿಗುವ ನೀರು ಎಲ್ಲರಿಗೂ ಸಮಾನವಾಗಿ ಸಿಗಬೇಕು ಅದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದ ಅಂಬೇಡ್ಕರ್ ಆ ಮೂಲಕ ದಲಿತ ವಿಮೋಚನೆಯ ಬೀಜಗಳನ್ನು ಬಿತ್ತಿದ್ದರು. ‘‘ನಾವು ಚಾವ್ದಾರ್ ಕೆರೆಗೆ ಅದರ ನೀರನ್ನು ಕುಡಿಯಲು ಹೋಗುತ್ತಿಲ್ಲ. ನಾವೂ ಸಹ ಇತರರಂತೆ ಮನುಷ್ಯರು ಎಂದು ಪ್ರತಿಪಾದಿಸಲು ನಾವು ಕೆರೆಗೆ ಹೋಗುತ್ತಿದ್ದೇವೆ. ಸಮಾನತೆಯನ್ನು ಸ್ಥಾಪಿಸಲು ಈ ಸತ್ಯಾಗ್ರಹವನ್ನು ಕರೆಯಲಾಗಿದೆ’’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಸಮರ್ಥ ಮುಂದಾಳತ್ವದಲ್ಲಿ ಶೋಷಿತ ಹಾಗೂ ಅಮಾನವೀಯವಾಗಿ ನಡೆಸಲ್ಪಟ್ಟ ಸಾವಿರಾರು ಜನರು ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದರು.
ತಲೆತಲಾಂತರದಿಂದ ಬಂದ ತಮ್ಮ ಸಮಸ್ಯೆಗಳ ವಿರುದ್ಧ ಧನಿಯೇರಿಸುವುದರೊಂದಿಗೆ ಅವುಗಳ ನಿವಾರಣೆಯತ್ತ ತಮ್ಮ ಪ್ರಯತ್ನವನ್ನು ಬಹಳ ಉತ್ಸಾಹದಿಂದಲೇ ಆರಂಭಿಸಿದರು. ಅವರಲ್ಲಿ ಧೈರ್ಯ ತುಂಬಿತ್ತು. ನಾಲ್ಕು ಮಂದಿಯ ಎದುರು ತಲೆಯೆತ್ತಿ ನಿಂತಿದ್ದಲ್ಲದೆ ತಮ್ಮ ಮೈಗಳಿಗೆ ಅಂಟಿಕೊಂಡಿದ್ದ ಧೂಳನ್ನು ಕೆಡವಿಕೊಂಡರು. ಡಿಸೆಂಬರ್ 25,1927ರಂದು ಮಹಾಡ್ನಲ್ಲಿ ಮತ್ತೆ ಡಾ.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಸಮಾವೇಶ ನಡೆಯಿತು. ಅಂಬೇಡ್ಕರ್ರ ಭಾಷಣದ ಆನಂತರ ಅಸಮಾನತೆಯನ್ನು ಧಿಕ್ಕರಿಸುವ ಸಾಂಕೇತಿಕವಾಗಿ ಅಲ್ಲಿ ಮನುಸ್ಮತಿಯನ್ನು ಸುಡಲಾಯಿತು. ಈ ನಡುವೆ ಚಾವ್ದಾರ್ ಕೆರೆ ಖಾಸಗಿ ಆಸ್ತಿ ಎಂತಲೂ, ಅದನ್ನು ಮೊದಲಿನಿಂದಲೂ ಉಚ್ಚ ವರ್ಗದವರು ಬಳಸುತ್ತಾ ಬಂದಿದ್ದು, ಬೇರೆಯವರಿಗೆ ಪ್ರವೇಶ ನೀಡಬಾರದು ಎಂದು ಮೇಲ್ವರ್ಗದವರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದರು. ಜಿಲ್ಲಾಧಿಕಾರಿಗಳು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸತ್ಯಾಗ್ರಹವನ್ನು ಮುಂದೂಡಬೇಕೆಂದು ಮನವಿ ಮಾಡಿದರು. ಹಾಗಾಗಿ ಅಂಬೇಡ್ಕರ್ ಒಂದಿಷ್ಟು ಸಮಯ ಸತ್ಯಾಗ್ರಹವನ್ನು ಮುಂದೂಡಿದರು.
ತಡೆಯಾಜ್ಞೆಯ ವಿರುದ್ಧ ನ್ಯಾಯಾಲಯದಲ್ಲಿ ಅಂಬೇಡ್ಕರ್ ಪ್ರಬಲವಾಗಿ ವಾದ ಮಂಡಿಸಿದರು. ಕೆಲವು ದಿನಗಳ ನಂತರ ಮಹಾಡ್ ನ್ಯಾಯಾಧೀಶರು ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವು ಮಾಡಿದರು. ತೆರವು ಮಾಡಿದ ಜೊತೆಗೆ ಕೆರೆಯ ನೀರನ್ನು ಅಸ್ಪಶ್ಯರು ಬಳಸುವುದಕ್ಕೆ ಅನುಮತಿಯನ್ನೂ ನೀಡಲಾಯಿತು. ಅಂಬೇಡ್ಕರ್ ಮಹಾಡ್ನಲ್ಲಿ ಮತ್ತೆ ಸಭೆ ಸೇರಿಸಿ ಈಗ ತಾವು ಸತ್ಯಾಗ್ರಹ ನಡೆಸಲು ಸೂಕ್ತ ಸಮಯ ಒದಗಿ ಬಂದಿದೆ. ಹೋರಾಟವನ್ನು ಪುನರಾರಂಭ ಮಾಡಲು ಸೂಕ್ತ ದಿನಾಂಕವನ್ನು ನಿಗದಿ ಮಾಡುವಂತೆ ಸಭಿಕರಿಗೆ ಸೂಚಿಸಿದರು. ಫೆಬ್ರವರಿ 26, 1928ರಂದು ಮುಂಬೈಯಲ್ಲಿ ಒಂದು ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ಮಹಾಡ್ ಸತ್ಯಾಗ್ರಹವನ್ನು ಮತ್ತೆ ಆರಂಭಿಸಬೇಕೆಂದು ನಿರ್ಧಾರ ಮಾಡಲಾಯಿತು. ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಸಾಗಿದ ಈ ಪ್ರಕರಣವನ್ನು ಅಂಬೇಡ್ಕರ್ ಗೆದ್ದದ್ದು 1937ರಲ್ಲಿ. ಅಂಬೇಡ್ಕರ್ ಅಷ್ಟರಲ್ಲಿ ತಮ್ಮ ಹೋರಾಟದಲ್ಲಿ ಬಹಳ ದೂರ ಸಾಗಿದ್ದರು. ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಬಹಳ ದೂರ ಕರೆದುಕೊಂಡು ಹೋಗಿಬಿಟ್ಟದ್ದರು.