ದುಬೈ ಬಂದರಿನಲ್ಲಿ ಸ್ಫೋಟ, ಬೆಂಕಿ
ದುಬೈ, ಜು.8: ಇಲ್ಲಿನ ಮುಖ್ಯ ಬಂದರಿನಲ್ಲಿ ಸರಕು ಸಾಗಾಟ ಹಡಗಿನಲ್ಲಿ ಸ್ಫೋಟ ಮತ್ತು ಬೆಂಕಿ ಅನಾಹುತ ಸಂಭವಿಸಿದೆ.
ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲು ವಾಸಿಸುತ್ತಿದ್ದವರ ಮೂರು ಮನೆಗಳ ಬಾಗಿಲು ಹಾಗೂ ಕಿಟಕಿಗಳು ಕಂಪಿಸಿದವು ಎಂದು ತಿಳಿದುಬಂದಿದೆ.
"ಜೆಬೆಲ್ ಅಲಿ ಬಂದರಿನಲ್ಲಿ ಹಡಗೊಂದರಲ್ಲಿ ಈ ಸ್ಫೋಟ ಸಂಭವಿಸಿದ ಬಳಿಕ ಕಂಟೈನರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಸಾವು ಸೋವು ಸಂಭವಿಸಿಲ್ಲ ಎಂದು ದುಬೈ ಮಾಧ್ಯಮ ಕಚೇರಿ ಟ್ವೀಟ್ ಮಾಡಿದೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಈ ಹಡಗು ನಿಲುಗಡೆಗೆ ಸಜ್ಜಾಗುತ್ತಿತ್ತು ಎಂದು ವಿವರಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆಯಲ್ಲಿ ತೊಡಗಿರುವ ವಿಡಿಯೊವನ್ನು ಕೂಡಾ ಟ್ವೀಟ್ ಮಾಡಲಾಗಿದೆ. ಹೆಲಿಕಾಪ್ಟರ್ ಒಂದನ್ನು ಕೂಡಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಎಎಫ್ಪಿ ಪ್ರತಿನಿಧಿ ವರದಿ ಮಾಡಿದ್ದಾರೆ.
ವಿಮಾನ ವಾಹಕವನ್ನು ನಿಭಾಯಿಸುವ ಸಾಮರ್ಥ್ಯವನ್ನೂ ಹೊಂದಿದ ಈ ಬಂದರು, 2017ರಲ್ಲಿ ಅಮೆರಿಕದಿಂದ ಹೊರಗಿರುವ ಅಮೆರಿಕ ನೌಕಾಪಡೆಯ ಅತ್ಯಂತ ದಟ್ಟಣೆಯ ಬಂದರು ಕೂಡಾ ಆಗಿತ್ತು.
ಈ ಘಟನೆಯಿಂದಾಗಿ ಇತರ ಹಡಗುಗಳ ಮಾಮೂಲಿ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.