ದುಬೈ ಬಂದರಿನಲ್ಲಿ ಹೊತ್ತಿಕೊಂಡ ಬೆಂಕಿ ನಿಯಂತ್ರಣಕ್ಕೆ
Photo: twitter
ದುಬೈ, ಜು. 8: ದುಬೈಯ ಪ್ರಧಾನ ಬಂದರಿನಲ್ಲಿ ಕಂಟೇನರ್ ಹಡಗೊಂದರಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಹಾಗೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಎಮಿರೇಟ್ ಮಾಧ್ಯಮ ಕಚೇರಿ ಗುರುವಾರ ತಿಳಿಸಿದೆ.
ಸ್ಫೋಟವೊಂದು ಸಂಭವಿಸಿದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಆದರೆ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ.
ಸ್ಫೋಟದಿಂದಾಗಿ ತಮ್ಮ ಮನೆಗಳ ಕಿಟಿಕಿ ಮತ್ತು ಬಾಗಿಲುಗಳು ನಡುಗಿವೆ ಎಂಬುದಾಗಿ ಸ್ಫೋಟ ನಡೆದ ಸ್ಥಳದಲ್ಲಿ ವಾಸಿಸುವ ಮೂವರು ನಿವಾಸಿಗಳು ಹೇಳಿದ್ದಾರೆ.
‘‘ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿದ್ದ ಕಂಟೇನರೊಂದರ ಒಳಗೆ ಸ್ಫೋಟ ಸಂಭವಿಸಿತು. ಅದರ ಬೆನ್ನಿಗೇ ಬೆಂಕಿ ಹೊತ್ತಿಕೊಂಡಿತು. ಯಾವುದೇ ಸಾವು-ನೋವು ವರದಿಯಾಗಿಲ್ಲ’’ ಎಂದು ದುಬೈ ಮಾಧ್ಯಮ ಕಚೇರಿ ಟ್ವಿಟರ್ನಲ್ಲಿ ಹೇಳಿದೆ.
‘‘ಹಡಗು ಲಂಗರು ಹಾಕಲು ಸಿದ್ಧತೆಗಳನ್ನು ನಡೆಸುತ್ತಿತ್ತು’’ ಎಂದು ಕಚೇರಿಯು ಇನ್ನೊಂದು ಟ್ವೀಟ್ನಲ್ಲಿ ಹೇಲಿದೆ.
ವಿಮಾನವಾಹಕ ಯುದ್ಧನೌಕೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಈ ಬಂದರು ಹೊಂದಿದೆ. 2017ರಲ್ಲಿ ಈ ಬಂದರು ಅಮೆರಿಕ ಸೇನೆಯು ಅತಿ ಹೆಚ್ಚು ಬಳಸಿದ ಅಮೆರಿಕದ ಹೊರಗಿನ ಬಂದರಾಗಿದೆ.