ಚಲುವಾಂಬ ಸರಕಾರಿ ಆಸ್ಪತ್ರೆಯಲ್ಲಿ ಡಿಜಿಟಲ್ ಸಹಿ ಮೂಲಕ ಜನನ, ಮರಣ ಪ್ರಮಾಣ ಪತ್ರ ವಿತರಣೆ
ಜನನ, ಮರಣದ 21 ದಿನಗಳ ನಂತರ ಪ್ರಮಾಣ ಪತ್ರ ಲಭ್ಯ
ಮೈಸೂರು: ನಗರದ ಚಲುವಾಂಬ ತಾಯಿ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಜನನ, ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಕಾಯುವ ಅಗತ್ಯವಿಲ್ಲ, ಡಿಜಿಟಲ್ ಸಹಿ ಮೂಲಕ ಆನ್‌ಲೈನ್‌ನಲ್ಲಿ ಡೇಟಾ ಎಂಟ್ರಿ ಮಾಡಿ ಕಡ್ಡಾಯವಾಗಿ ವಿತರಣೆ ಮಾಡಲಾಗುತ್ತಿದೆ. ಜನನ ಅಥವಾ ಮರಣ ಪ್ರಮಾಣ ಪತ್ರ ಪಡೆಯಲು ಈ ಹಿಂದೆ ಸಾರ್ವಜನಿಕರು ತಿಂಗಳು ಗಟ್ಟಲೆ ಕಾಯಬೇಕಿತ್ತು. ಜೊತೆಗೆ ಕಚೇರಿಗಳನ್ನು ಅಲೆಯಬೇಕಿತ್ತು. ಆ ವ್ಯವಸ್ಥೆಗೆಲ್ಲಾ ಕಡಿವಾಣ ಹಾಕಿ ಡಿಜಿಟಲ್ ಸಹಿಯೊಂದಿಗೆ ಜನನ ಅಥವಾ ಮರಣ ಹೊಂದಿದ 21 ದಿನಗಳ ನಂತರ ಯಾವುದೇ ದಿನ ಬಂದು ಸೂಕ್ತ ದಾಖಲೆ ತೋರಿಸಿದರೆ ಸ್ಥಳದಲ್ಲಿಯೇ ಜನನ ಮತ್ತು ಮರಣ ಪ್ರಮಾಣವನ್ನು ಪಡೆಯಬಹುದು.
ಡಿಜಿಟಲ್ ಸಹಿ ಮೂಲಕ ಈ ವ್ಯವಸ್ಥೆ ಜಾರಿಯಲ್ಲಿರಬೇಕು ಎಂಬ ಸರಕಾರದ ಆದೇಶವಿದ್ದರೂ ಹಲವಾರು ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗಿಲ್ಲ. ಆದರೆ ಚಲುವಾಂಬ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಎರಡು ತಿಂಗಳುಗಳಿಂದ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದು, ಜನನ ಅಥವಾ ಮರಣ ಹೊಂದಿದ 21 ದಿನಗಳು ಕಳೆದ ನಂತರ ಯಾವ ಸಮಯದಲ್ಲಾದರೂ ಬಂದು ಪ್ರಮಾಣ ಪತ್ರ ಪಡೆಯಬಹುದಾಗಿದೆ.
ಈ ಹಿಂದೆ ಜನನ ಅಥವಾ ಮರಣಹೊಂದಿದವರ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ನಮೂದಿಸಿದ್ದರು. ಆಸ್ಪತ್ರೆಯ ಆರ್.ಎಂ.ಒ ಬಳಿ ಫೈಲ್‌ಗಳನ್ನು ತಂದು ಸಹಿಗಾಗಿ ಕಾಯಬೇಕಿತ್ತು. ಜೊತೆಗೆ ಸಾರ್ವಜನಿಕರು ಜನನ ಅಥವಾ ಮರಣ ಪ್ರಮಾಣ ಪತ್ರ ಬೇಕು ಎಂದು ಅರ್ಜಿ ಬರೆದುಕೊಂಡು ಬಂದು ಆರ್.ಎಂ.ಒ ಸಹಿ ಮಾಡಿಸಿ ನಂತರ ಸಂಬಂಧಪಟ್ಟವರಿಗೆ ನೀಡಬೇಕಿತ್ತು. ಇದರಿಂದ ಕಚೇರಿಯ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಿದ ನೂತನ ಆರ್.ಎಂ.ಒ ಡಾ.ರಾಜೇಂದ್ರ ಕುಮಾರ್ ಡಿಜಿಟಲ್ ಸಹಿಯೊಂದಿಗೆ ಜನನ ಮತ್ತು ಮರಣ ಪ್ರಮಾಣ ಪತ್ರ ಸುಲಭವಾಗಿ ಲಭ್ಯವಾಗುವಂತೆ ಮಾಡಿದ್ದಾರೆ.
ಜನನ ಅಥವಾ ಮರಣ ಹೊಂದಿದವರು 21 ದಿನ ಕಳೆದ ನಂತರ ಆಸ್ಪತ್ರೆಯ ರೆಕಾರ್ಡ್ ರೂಮ್ ಗೆ ಬಂದು ತಾವು ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದ್ದ ದಾಖಲಾತಿ ತೋರಿಸಿದರೆ ಆ ದಾಖಲಾತಿ ನಂಬರ್‌ನಲ್ಲಿ ತಾಯಿ ಮತ್ತು ಮಕ್ಕಳ ಸಂಪೂರ್ಣ ವಿವರ ಬರುತ್ತದೆ. ಇದರಲ್ಲಿ ಜನನ ಹೊಂದಿದವರು ಅಥವಾ ಮರಣ ಹೊಂದಿದವರ ಎಲ್ಲಾ ಮಾಹಿತಿಗಳು ಲಭ್ಯ ಇರುತ್ತದೆ. ಇದರ ಆಧಾರದ ಮೇಲೆ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಮೊದಲಿಗೆ ಜನನ ಹೊಂದಿದ ಮಗುವಿನ ತಾಯಿ ಹೆಸರನ್ನು ನೀಡಿ ಮಗು ಹೆಣ್ಣು ಅಥವಾ ಗಂಡು ಎಂದು ನಮೂದಿಸಿ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಲಾಗುವುದು. ನಂತರ ಇನ್ನು ಹೆಚ್ಚಿನ ಪ್ರಮಾಣ ಪತ್ರ ಬೇಕು ಎಂದರೆ ನಮ್ಮ ಕಚೇರಿಗೆ ಬಂದು ಒಂದಕ್ಕೆ 5 ರೂ. ನಂತೆ 4 ಜನನ ಅಥವಾ ಮರಣ ಪ್ರಮಾಣ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
‘ಜನನಿ ಸುರಕ್ಷಾ ಯೋಜನೆ’ ಮೂಲಕ ತಾಯಿ ಆರೈಕೆಗೆ 600 ರೂ.ನೀಡಿಕೆ
ತಾಯಿ ಕಾರ್ಡ್ ಹೊಂದಿರುವ ಮಹಿಳೆ ತನ್ನ ಮಗುವಿಗೆ ಜನ್ಮ ನೀಡಿದ ನಂತರ ‘‘ಜನನಿ ಸುರಕ್ಷಾ ಯೋಜನೆ’’ ಮೂಲಕ 600 ರೂ. ಗಳನ್ನು ಬಾಣಂತಿ ತಾಯಿಯ ಆರೈಕೆಗೆ ನೀಡಲಾಗುವುದು. ಈ ಯೋಜನೆಯ ಶೇ.70 ರಷ್ಟು ಗುರಿಯನ್ನು ಚಲುವಾಂಬ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತಲುಪಿದೆ . ತಾಯಿ ಕಾರ್ಡ್, ಬಿಪಿಎಲ್, ಆಧಾರ್ ಮತ್ತು ಬ್ಯಾಂಕ್ ಪಾಸ್‌ಬುಕ್ ನಕಲನ್ನು ಆಕೆಗೆ ಹೆರಿಗೆ ಆಗುವ ಯಾವುದೇ ಸರಕಾರಿ ಆಸ್ಪತ್ರೆಗೆ ನೀಡಿದರೆ ‘‘ಜನನಿ ಸುರಕ್ಷ ಯೋಜನೆ’’ ಮೂಲಕ 600 ರೂ.ನೀಡುತ್ತದೆ.
ಡಾ.ರಾಜೇಂದ್ರ ಕುಮಾರ್,- ಆರ್.ಎಂ.ಒ, ಚಲುವಾಂಬ ತಾಯಿ, ಮಕ್ಕಳ ಸರಕಾರಿ ಆಸ್ಪತೆ