varthabharthi


ಪ್ರಚಲಿತ

ವಿಶ್ವವಿದ್ಯಾನಿಲಯಗಳಲ್ಲಿ ‘ಅರ್ಬನ್ ಗೋಡ್ಸೆ’ಗಳು

ವಾರ್ತಾ ಭಾರತಿ : 12 Jul, 2021
ಸನತ್ ಕುಮಾರ್ ಬೆಳಗಲಿ

ಇಂದಿನ ಯಾವುದೇ ಶಾಲಾ ವಿದ್ಯಾರ್ಥಿಯನ್ನು ಕೊಂಚ ಪುರುಸೊತ್ತು ಮಾಡಿಕೊಂಡು ಮಾತಾಡಿಸಿ ನೋಡಿ. ಆತನ ಬಾಯಲ್ಲಿ ಗಾಂಧೀಜಿ ಒಬ್ಬ ಖಳನಾಯಕನಾಗಿ ಹೊರಬರುತ್ತಾರೆ. ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಇನ್ನಿಲ್ಲದ ದ್ವೇಷದ ಮಾತುಗಳು ಹೊರಬರುತ್ತವೆ. ತಮ್ಮ ಜೊತೆಗೆ ಓದುವ ತಮ್ಮದೇ ವಯಸ್ಸಿನ ಗೆಳೆಯರನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂಬ ನಂಜಿನ ಮಾತುಗಳು ಉದುರುತ್ತವೆ.ಇಂದಿನ ಮಕ್ಕಳು ನಾಳಿನ ನಾಗರಿಕರು. ಶಿಕ್ಷಣ ಎಂಬುದು ಮಕ್ಕಳ ಮನಸ್ಸನ್ನು ಅರಳಿಸಬೇಕು. ಇದರಲ್ಲಿ ಪಾಠ ಮಾಡುವ ಶಿಕ್ಷಕರ ಪಾತ್ರ ತುಂಬಾ ಮುಖ್ಯ. ಅದು ಪ್ರಾಥಮಿಕ ಶಾಲೆ ಇರಲಿ, ಇಲ್ಲವೇ ವಿಶ್ವವಿದ್ಯಾನಿಲಯ ಆಗಿರಲಿ ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಅಕ್ಷರ ಕಲಿಯುವ ಜೊತೆ ಅಂತಃಕರಣ ರೂಢಿಸಿಕೊಳ್ಳುವಂಥ ವಿದ್ಯೆ ಅವರಿಗೆ ಸಿಗಬೇಕು. ಎಲ್ಲಕ್ಕಿಂತ ಮೊದಲು ಜಾತಿ ಮತಗಳಾಚೆ, ಮನುಷ್ಯರೆಲ್ಲ ಒಂದೇ’ ಎಂಬುದನ್ನು ಅವರು ಅರಿತುಕೊಂಡರೆ ಉತ್ತಮ ನಾಗರಿಕರಾಗುತ್ತಾರೆ. ಮನುಷ್ಯರಲ್ಲಿ ಜಾತಿ, ಮತ ಹುಡುಕಲು ಹೊರಟರೆ, ನಾಥುರಾಮ್ ಗೋಡ್ಸೆಯಾಗುತ್ತಾರೆ. ಹಾಗಾಗದಂತೆ ಎಚ್ಚರ ವಹಿಸಬೇಕಾದದ್ದು ಪಾಠ ಮಾಡುವ ಶಿಕ್ಷಕರ ಕರ್ತವ್ಯ.

ಈ ಹಿನ್ನೆಲೆಯಲ್ಲಿ ನಮ್ಮ ಇಂದಿನ ಬಾಲವಾಡಿ, ಪ್ರಾಥಮಿಕ ಶಾಲೆಯಿಂದ ಆರಂಭಗೊಂಡು ಕಾಲೇಜು, ವಿಶ್ವವಿದ್ಯಾನಿಲಯಗಳವರೆಗಿನ ಇಂದಿನ ವಿದ್ಯಾರ್ಥಿಗಳ ಮನಸ್ಥಿತಿ ಗಮನಿಸಿದರೆ ಆತಂಕದ ಚಿತ್ರ ಕಣ್ಣೆದುರು ಬಂದು ನಿಲ್ಲುತ್ತದೆ. ಕಟ್ಟುವ ಬದಲಾಗಿ ಕೆಡವುವ ಮನೋವ್ಯಾಧಿ ಮಕ್ಕಳಲ್ಲಿ ವ್ಯಾಪಕವಾಗುತ್ತಿದೆ.

ಇಂದಿನ ಯಾವುದೇ ಶಾಲಾ ವಿದ್ಯಾರ್ಥಿಯನ್ನು ಕೊಂಚ ಪುರುಸೊತ್ತು ಮಾಡಿಕೊಂಡು ಮಾತಾಡಿಸಿ ನೋಡಿ. ಆತನ ಬಾಯಲ್ಲಿ ಗಾಂಧೀಜಿ ಒಬ್ಬ ಖಳನಾಯಕನಾಗಿ ಹೊರಬರುತ್ತಾರೆ. ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಇನ್ನಿಲ್ಲದ ದ್ವೇಷದ ಮಾತುಗಳು ಹೊರಬರುತ್ತವೆ. ತಮ್ಮ ಜೊತೆಗೆ ಓದುವ ತಮ್ಮದೇ ವಯಸ್ಸಿನ ಗೆಳೆಯರನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂಬ ನಂಜಿನ ಮಾತುಗಳು ಉದುರುತ್ತವೆ.

ಎಳೆಯ ಮಕ್ಕಳ ಮೆದುಳಲ್ಲಿ ಈ ವಿಷವನ್ನು ಯಾರು ತುಂಬಿದರೆಂದು ಶೋಧಿಸಿ ಹೇಳಬೇಕಾಗಿಲ್ಲ. ಅವರಿಗೆ ಪಾಠ ಮಾಡುವ ಶಿಕ್ಷಕರೇ ಮಕ್ಕಳ ಮೆದುಳಿಗೆ ವಿಷಲೇಪನ ಮಾಡುವ ಅಪಚಾರ ಮಾಡುತ್ತಾರೆ. ಎಲ್ಲ ಶಿಕ್ಷಕರೂ ಹೀಗಿದ್ದಾರೆಂದಲ್ಲ. ಆದರೆ, ಬಹತೇಕ ಶಿಕ್ಷಕರು ಇಂಥವರೇ ಇದ್ದಾರೆ ಎಂಬುದು ಸುಳ್ಳಲ್ಲ.
ಶತಮಾನಗಳಿಂದ ಲಕ್ಷಾಂತರ ಜನರನ್ನು ಅಕ್ಷರದಿಂದ ದೂರವಿಟ್ಟವರು ಈಗ ಹಿಂದುತ್ವದ ವೇಷ ಹಾಕಿಕೊಂಡು ಬಂದಿದ್ದಾರೆ. ಸ್ವಾತಂತ್ರಾ ನಂತರ ಸಮುದಾಯಗಳ ಮೇಲೆ ತಮ್ಮ ಹಿಡಿತ ಕಳೆದುಕೊಂಡ ಈ ಜನ ಅದಕ್ಕೆ ಅಡ್ಡಿಯಾಗಿರುವ ಸಂವಿಧಾನದ ಮೇಲೆ ಒಳಗೊಳಗೆ ವಿಷ ಕಾರುತ್ತಾರೆ. ಅದನ್ನು ಬದಲಿಸಲು ಪೂರಕ ವಾತಾವರಣವನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ. ಇದಕ್ಕಾಗಿ ಅವರು ಆರಿಸಿಕೊಂಡಿದ್ದು ಶೈಕ್ಷಣಿಕ ಕ್ಷೇತ್ರವನ್ನು. ಇದು ಅತ್ಯಂತ ದೂರದೃಷ್ಟಿಯ ಗುಪ್ತ ಕಾರ್ಯಸೂಚಿ. ಇದರ ಫಲಿತಾಂಶವನ್ನು ಮುಂದಿನ ಐವತ್ತು ವರ್ಷಗಳಲ್ಲಿ ಅವರು ನಿರೀಕ್ಷಿಸುತ್ತಾರೆ.

ಅದಕ್ಕೆಂದೇ ಭಾರತೀಯ ಜನತಾ ಪಕ್ಷ ಎಂಬ ಆರೆಸ್ಸೆಸ್‌ನ ರಾಜಕೀಯ ವೇದಿಕೆ ಅಧಿಕಾರಕ್ಕೆ ಬಂದಾಗೆಲ್ಲ ಮೊದಲು ಕಣ್ಣು ಹಾಕುವುದು ಶಿಕ್ಷಣ ರಂಗದ ಮೇಲೆ. 1977ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಮೊದಲ ಕಾಂಗ್ರೆಸ್ಸೆತರ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗ, ಶಿಕ್ಷಣ ಸಚಿವ ಖಾತೆಯನ್ನು ಸಂಘ ಪರಿವಾರ ಪಟ್ಟು ಹಿಡಿದು ತನ್ನದಾಗಿಸಿಕೊಂಡಿತು. ಆಗ ಶಿಕ್ಷಣ ಸಚಿವರಾಗಿದ್ದ ಮುರಳಿ ಮನೋಹರ ಜೋಶಿ ಶೈಕ್ಷಣಿಕ ರಂಗವನ್ನು ಕೋಮುವಾದೀಕರಣಗೊಳಿಸಲು ಹೊರಟಾಗ ಮಧು ಲಿಮಯೆ, ಜಾರ್ಜ್ ಫೆನಾರ್ಂಡಿಸ್ ಮೊದಲಾದ ಸೋಷಲಿಸ್ಟರು ಬಂಡೆದ್ದು ಸರಕಾರದಿಂದ ಹೊರ ಬಿದ್ದಿದ್ದು ಈಗ ಇತಿಹಾಸ.
ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಗುಪ್ತ ಕಾರ್ಯಸೂಚಿಗೆ ಪೂರಕವಾಗಿ ಜನಾಭಿಪ್ರಾಯ ರೂಪಿಸಲು ಹೊಸ ಪೀಳಿಗೆಯ ಮೆದುಳು ತೊಳೆಯುವ ಕಾರ್ಯಕ್ಕೆ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಷಡ್ಯಂತ್ರ ರೂಪಿಸಿದೆ.

ಇತ್ತೀಚೆಗೆ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕನೊಬ್ಬ ಮಾನವಹಕ್ಕು ಪರ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿ ಅವರನ್ನು ದೇಶದ್ರೋಹಿ ಎಂದು ವರ್ಣಿಸಿ ಪತ್ರಿಕೆಯೊಂದಕ್ಕೆ ಬರೆಯುವ ತನ್ನ ಅಂಕಣದಲ್ಲಿ ನಿಂದಿಸಿದ. ಈತನ ಬರಹ ಓದಿದರೆ ಡಾ.ಕಲಬುರ್ಗಿ, ಗೌರಿಲಂಕೇಶ್, ಅನಂತಮೂರ್ತಿ, ದೊರೆಸ್ವಾಮಿ ಸಾವಿಗೀಡಾದಾಗ ಸಂಭ್ರಮಿಸಿ ಪಟಾಕಿ ಹಾರಿಸಿದ ಕೋಮುವಾದಿ ಸಂಘಟನೆಗಳ ಅವಿವೇಕಿಗಳಿಗೂ ಈತನಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ. ತನ್ನ ವಾದದ ಸಮರ್ಥನೆಗೆ ಬಾಬಾಸಾಹೇಬರ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದ. ಸ್ಟಾನ್ ಸ್ವಾಮಿ ಮತಾಂತರ ಮಾಡುತ್ತಿದ್ದ, ಆತ ಅರ್ಬನ್ ನಕ್ಸಲ್ ಆಗಿದ್ದ, ಭಾರತ ಸರಕಾರದ ವಿರುದ್ಧ ಸಶಸ್ತ್ರ ದಂಗೆಗೆ ಪ್ರಚೋದಿಸುತ್ತಿದ್ದ ಎಂದು ಕರಪತ್ರ ಬರೆದಂತೆ ಅಂಕಣ ಬರಹ ಬರೆದಿದ್ದ. ಬಾಬಾಸಾಹೇಬರ ಮೊಮ್ಮಗಳು ರಮಾಬಾಯಿಯನ್ನು ವಿವಾಹವಾಗಿರುವ ಹೆಸರಾಂತ ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ದೇಶದ್ರೋಹಿ ಎಂದು ಕರೆದು ಅವರ ಬಂಧನವನ್ನು ಸಮರ್ಥಿಸಿದ್ದ. ಇಂಥ ಅರ್ಬನ್ ಗೋಡ್ಸೆವಾದಿಗಳು ಒಂದಲ್ಲ ಎರಡಲ್ಲ, ದೇಶದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನುಸುಳಿ ಬೇರು ಬಿಡುತ್ತಿದ್ದಾರೆ.
ಜನಾಂಗದ್ವೇಷ ಹೆಸರಿನಲ್ಲಿ ಗೋಡ್ಸೆವಾದಿ ಸಂಘಟನೆಗಳು ಮಾಡುವ ಕ್ರಿಮಿನಲ್ ಕೃತ್ಯಗಳಿಗೆಲ್ಲ ಇಂಥ ಅರ್ಬನ್ ಗೋಡ್ಸೆವಾದಿಗಳು ಸಮರ್ಥನೆ ನೀಡುತ್ತಾ ಬಂದಿದ್ದಾರೆ.

ಈ ದೇಶದಲ್ಲಿ ಸ್ವಾತಂತ್ರಾ ನಂತರದ ಮೊದಲ ಭಯೋತ್ಪಾದಕ ಕೃತ್ಯ ಗಾಂಧಿ ಹತ್ಯೆ. ಈ ಗಾಂಧಿ ಹತ್ಯೆಯನ್ನೂ ಇಂದಿಗೂ ಸಮರ್ಥಿಸಲಾಗುತ್ತಿದೆ. ‘ಪಾಕಿಸ್ತಾನ ನಿರ್ಮಾಣವಾಗಲು ಗಾಂಧಿ ಕಾರಣ. ಆತ ದೇಶ ದ್ರೋಹಿ. ಆತನನ್ನು ಕೊಂದ ನಾಥೂರಾಮ ಗೋಡ್ಸೆ ದೇಶ ಭಕ್ತ’ ಎಂಬ ಮಾತುಗಳು ಈಗ ಶಾಲಾ ಮಕ್ಕಳ ಬಾಯಿಯಿಂದ ಬರುತ್ತಿರುವುದು ಈ ದೇಶದ ದುರಂತ.

 ಅಯೋಧ್ಯೆಯ ಬಾಬರಿ ಮಸೀದಿಯನ್ನು ಮುಟ್ಟುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿ ಅದನ್ನು ಹಾಡಹಗಲೇ ಕೆಡವಿದರು. ಆಗ ಪೂಜೆಗೆ ಕೂತಿದ್ದ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಮಸೀದಿಯ ಗುಮ್ಮಟಗಳು ನೆಲಕ್ಕುರುಳುವವರೆಗೆ ಪೂಜೆಯಿಂದ ಮೇಲೇಳಲಿಲ್ಲ ಎಂದು ಗಿರೀಶ್ ಕಾರ್ನಾಡ್ ತಮ್ಮ ‘ಆಡಾಡತ ಆಯುಷ್ಯ’ ಪುಸ್ತಕದಲ್ಲಿ ಬರೆದಿದ್ದಾರೆ.

ತೊಂಭತ್ತರ ದಶಕದಲ್ಲಿ ಒಡಿಶಾದಲ್ಲಿ ಕುಷ್ಠರೋಗಿಗಳ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಕ್ರೈಸ್ತ ಧರ್ಮ ಪ್ರಚಾರಕ ಗ್ರಹಾಂ ಸ್ಟೈನ್ ಮತ್ತು ಅವರ ಇಬ್ಬರು ಮಕ್ಕಳನ್ನು ಅವರು ಕೂತಿದ್ದ ಜೀಪ್‌ಗೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದರು. ಹಾಗೆ ಸುಟ್ಟು ಹಾಕಿದ ದಾರಾಸಿಂಗನನ್ನು ಇವರು ಹೆಗಲ ಮೇಲೆ ಹೊತ್ತುಕೊಂಡು ಮೊವಣಿಗೆ ಮಾಡಿದರು. ಅವರ ಹತ್ಯೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡರು. ‘ಆತ ಮತಾಂತರಿಯಾಗಿದ್ದ ಅದಕ್ಕೆ ಈ ಶಿಕ್ಷೆ’ ಎಂದರು. ಆಗ ವಾಜಪೇಯಿ ಪ್ರಧಾನಿ. ಅವರೂ ಜಾಣ ಮೌನ ತಾಳಿದರು.

ಅವರ ಸದ್ಯದ ಟಾರ್ಗೆಟ್ ಮುಸಲ್ಮಾನರು ಮತ್ತು ಕ್ರೈಸ್ತರಾಗಿರಬಹುದು. ಆದರೆ, ಸೈದ್ಧಾಂತಿಕವಾಗಿ ತಮ್ಮನ್ನು ಒಪ್ಪದ ಯಾರನ್ನೂ ಅವರು ಸುಮ್ಮನೇ ಬಿಡುವುದಿಲ್ಲ. ಅದರಲ್ಲೂ ‘ತಮ್ಮ ಹಿಂದೂ ರಾಷ್ಟ್ರ’ ಅಜೆಂಡಾವನ್ನು ವಿರೋಧಿಸುವ ಎಲ್ಲರ ಮೇಲೂ ಹಗೆ ಸಾಧಿಸುತ್ತಾರೆ. ಅಂಥವರನ್ನು ದೇಶದ್ರೋಹಿಗಳೆಂದು ಬ್ರಾಂಡ್ ಮಾಡುತ್ತಾರೆ. ಬ್ರಿಟಿಷರ ಪಾದಸೇವೆ ಮಾಡಿದ ಅವರ ಸಂಘಟನೆಯಿಂದ ಯಾವ ದೇಶಭಕ್ತರೂ ಬರಲಿಲ್ಲ. ಅದಕ್ಕೆ ಅವರು ಭಗತ್ ಸಿಂಗ್, ಆಝಾದರನ್ನು ಹೈಜಾಕ್ ಮಾಡಲು ಯತ್ನಿಸುತ್ತಾರೆ. ಹಿಂದೆ ನರ್ಮದಾ ಅಣೆಕಟ್ಟಿನಿಂದ ನಿರಾಶ್ರಿತರಾದ ಜನರ ಪರವಾಗಿ ಹೋರಾಡುತ್ತ ಬಂದ ಮೇಧಾ ಪಾಟ್ಕರ್ ಮೇಲೆ ಹಲ್ಲೆ ಮಾಡಿದರು. ಆರ್ಯ ಸಮಾಜದ ಸನ್ಯಾಸಿ ಸ್ವಾಮಿ ಅಗ್ನಿವೇಶ ಅವರನ್ನು ನಡು ರಸ್ತೆಯಲ್ಲಿ ಉರುಳಾಡಿಸಿ ಹೊಡೆದರು. ಛತ್ತೀಸಗಡದಲ್ಲಿ ಹಿಮಾಂಶು ಕುಮಾರ ಎಂಬ ಗಾಂಧಿವಾದಿಯ ಆಶ್ರಮದ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ ಕುಮಾರ್ ಮೇಲೆ ನ್ಯಾಯಾಲಯದ ಅಂಗಳದಲ್ಲೇ ಹಲ್ಲೆ ಮಾಡಿದರು. ಇಂಥ ನೂರಾರು ಉದಾಹರಣೆ ಕೊಡಬಹುದು.

ವಿದ್ಯಾರ್ಥಿಗಳಿದ್ದಾಗಲೇ ಅವರಿಂದ ಬ್ರೈನ್ ವಾಶಗೊಳಗಾದವರು ಈಗ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಬೇರು ಬಿಟ್ಟಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇದ್ದಾರೆ. ನ್ಯಾಯಾಂಗದಲ್ಲಿ ನುಸುಳಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲಿ ಇದ್ದಾರೆ. ಮಠ ಪೀಠಗಳನ್ನು ಅಲಂಕರಿಸಿದ್ದಾರೆ. ಹೀಗೆ ಭಾರತೀಯ ಸಮಾಜದ ಎಲ್ಲ ಕಡೆ ನುಸುಳಿದ್ದಾರೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ 84 ವರ್ಷದ ಸ್ಟಾನ್ ಸ್ವಾಮಿ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅವರಲ್ಲದೆ ಇನ್ನೂ 15 ಮಂದಿಅಪರೂಪದ ಚಿಂತಕರು, ಲೇಖಕರು, ಹೋರಾಟಗಾರರು ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದ ಜೈಲಿನಲ್ಲಿ ಇದ್ದಾರೆ.

ಕವಿ ವರವರರಾವ್, ಆದಿವಾಸಿಗಳ ಏಳಿಗೆಗಾಗಿ ತಮ್ಮ ಬದುಕನ್ನೇ ಅರ್ಪಿಸಿದ ಐಐಟಿ ಪದವೀಧರೆ ಮತ್ತು ಹೆಸರಾಂತ ನ್ಯಾಯವಾದಿ ಸುಧಾ ಭಾರದ್ವಾಜ್, ಶಿಕ್ಷಣ ತಜ್ಞೆ ಶೋಮಾ ಸೇನ್,ಬಾಬಾಸಾಹೇಬರ ಬೌದ್ಧಿಕ ವಾರಸುದಾರ ಖ್ಯಾತ ಚಿಂತಕ ಆನಂದ್ ತೇಲ್ತುಂಬ್ಡೆ, ಮಾನವ ಹಕ್ಕು ಹೋರಾಟಗಾರ ರೋನಾ ವಿಲ್ಸನ್,ವರ್ನನ್ ಗೊನ್ಸಾಲ್ವಿಸ್, ಪತ್ರಕರ್ತ ಮತ್ತು ಜನತಾಂತ್ರಿಕ ಹಕ್ಕುಗಳ ಪರ ಹೋರಾಟಗಾರ ಗೌತಮ ನವ್ಲಾಖಾ, ದಿಲ್ಲಿಯ ವಿದ್ಯಾರ್ಥಿ ಗಳ ನೆಚ್ಚಿನ ಪ್ರಾಧ್ಯಾಪಕ ಡಾ.ಹನಿಬಾಬು,ಅಂಬೇಡ್ಕರ್‌ವಾದಿ ಲೇಖಕ ಸುಧೀರ್ ಡವಳೆ,ಮಹೇಶ ರಾವುತ್,ನ್ಯಾಯವಾದಿ ಸುರೇಂದ್ರ ಗಾಡ್ಲಿಂಗ್ ಅರುಣ ಫೆರಿರಾ ಮುಂತಾದ ಅಪರೂಪದ ಜೀವಿಗಳ ಪ್ರಾಣ ಅಪಾಯದಲ್ಲಿದೆ. ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ.

ಇದೆಲ್ಲದರ ಜೊತೆಗ ನಮ್ಮ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ನುಸುಳಿದ ಕೋಮುವಾದಿ ವಿಷ ಜಂತುಗಳಿಂದ ನಮ್ಮ ಮಕ್ಕಳನ್ನು ನಾವು ಕಾಪಾಡಬೇಕಾಗಿದೆ.ಈ ಕೋಮು ವೈರಾಣು ಕೊರೋನ ವೈರಾಣುಗಿಂತ ಗಂಡಾಂತರಕಾರಿ ಇದಕ್ಕೆ ಲಸಿಕೆಯನ್ನು ಕಂಡು ಹಿಡಿಯಲು ಪರದಾಡಬೇಕಿಲ್ಲ.
ನಮ್ಮ ಈ ನೆಲದಲ್ಲೇ ಬುದ್ಧ, ಬಸವಣ್ಣ, ಬಾಬಾಸಾಹೇಬರು ಎಂಬ ಲಸಿಕೆಗಳ ಜೊತೆ ಗಾಂಧಿ, ವಿವೇಕಾನಂದ, ಸುಭಾಷ್ ಚಂದ್ರ ಭೋಸ್,ಜ್ಯೋತಿಬಾ ಫುಲೆ,ಭಗತ್ ಸಿಂಗ್, ಶಿಶುನಾಳ ಶರೀಫ ಸಾಹೇಬ, ಸೂಫಿ, ಸಿದ್ದಾರೂಢ, ಶಾಹು ಮಹಾರಾಜ ಹೀಗೆ ಸಾವಿರಾರು ಜೀವ ಸೆಲೆಗಳಿವೆ.
 ಮುಚ್ಚಿ ಹೋಗುತ್ತಿರುವ ಆ ಸೆಲೆಗಳ ಸುತ್ತ ಬೆಳೆದ ಕಸ ಕಡ್ಡಿಗಳನ್ನು ಶುದ್ಧ ಮಾಡಿ ಅವುಗಳಿಂದ ಮಾನವ ಪ್ರೇಮದ ಅಂತಃಕರಣದ ನೀರನ್ನು ಹೊರ ಚಿಮ್ಮಿಸಿ ಭಾರತದ ಬದುಕನ್ನು ಹಸನುಗೊಳಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)