ಸಮುದ್ರಕ್ಕೆ ಇಳಿಯದಂತೆ ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಉಡುಪಿ, ಜು.12: ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಪಶ್ಚಿಮ ಕರಾವಳಿಯ ಅರಬಿಸಮುದ್ರದಲ್ಲಿ ಗಂಟೆಗೆ 40ರಿಂದ 50ಕಿ.ಮೀ., ಕೆಲವೊಮ್ಮೆ 60ಕಿ.ಮೀ. ವೇಗದ ಗಾಳಿಯು ಬೀಸುವ ಸಾಧ್ಯತೆ ಇದ್ದು, ಇದರಿಂದ ಕರಾವಳಿ ಮೂರು ಜಿಲ್ಲೆಗಳ ಸಮುದ್ರ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ವಿಭಾಗದ ಬೆಂಗಳೂರು ಕೇಂದ್ರವು ಎಚ್ಚರಿಕೆ ನೀಡಿದೆ.
ಮಂಗಳವಾರ ಮಧ್ಯರಾತ್ರಿಯ 11:30ರವರೆಗೆ ಮಂಗಳೂರಿನಿಂದ ಕಾರವಾರದ ಕರಾವಳಿ ತೀರದುದ್ದಕ್ಕೂ 2.5ಮೀ.ನಿಂದ 3.9ಮೀ.ಎತ್ತರದ ತೆರೆಗಳು ಏಳುವ ಸಂಭವವಿದ್ದು, ಅಲೆಗಳ ವೇಗ ಸೆಕೆಂಡ್ಗೆ 51ರಿಂದ 76ಸೆ.ಮಿ. ಆಗಿರುತ್ತದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ನಾಳೆಯಿಂದ ಮುಂದಿನ ಐದು ದಿನಗಳ ಕಾಲ (ಜು.13ರಿಂದ 17ರವರೆಗೆ) ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗಾಳಿಯಿಂದ ಕೂಡಿದ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಈ ದಿನಗಳಲ್ಲಿ 64.5ಮಿ.ಮೀ.ನಿಂದ 115.6ಮಿ.ಮೀ. ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ.
ಮನೆಗಳಿಗೆ ಹಾನಿ: ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಮರ ಬಿದ್ದು ಮನೆಗಳಿಗೆ ಹಾನಿ ಯಾಗಿರುವ ಬಗ್ಗೆ ವರದಿಗಳು ಬಂದಿವೆ. ಸತತವಾಗಿ ಮಳೆ ಸುರಿಯುತಿದ್ದರೂ ವಿಶೇಷ ಗಾಳಿ ಇಲ್ಲದ ಕಾರಣ ಹೆಚ್ಚಿನ ಹಾನಿಗಳು ಸಂಭವಿಸಿಲ್ಲ.
ಉಡುಪಿ ತಾಲೂಕು ಕೆಳಾರ್ಕಳಬೆಟ್ಟು ಗ್ರಾಮದ ಚಂದ್ರಶೇಖರ ಆಚಾರ್ಯ ಎಂಬವರ ವಾಸ್ತವ್ಯದ ಪಕ್ಕಾ ಮನೆಯ ಮಣ್ಣಿನ ಗೋಡೆ ಗಾಳಿಮಳೆಯಿಂದ ಕುಸಿದು ಭಾಗಶ: ಹಾನಿಯಾಗಿದ್ದು 50,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ ಗೋಪಾಲಕೃಷ್ಣ ಎಂಬವರ ಮನೆಯ ಮೇಲೆ ಮರಬಿದ್ದು 25ಸಾವಿರ ರೂ.ಗಳಷ್ಟು ಹಾನಿ ಸಂಭವಿಸಿದೆ.
ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಶಂಕರ ಮೆಂಡನ್ ಇವರ ವಾಸ್ತವ್ಯದ ಮನೆಯೂ ಮಳೆಗೆ ಭಾಗಶ: ಹಾನಿಯಾಗಿ 25,000ರೂ. ಹಾಗೂ ವಡೇರಹೋಬಳಿ ಗ್ರಾಮದ ಮಂಜುನಾಥ ದೇವಾಡಿಗ ವಾಸದ ಪಕ್ಕಾ ಮನೆಗೆ ಭಾಗಶ: ಹಾನಿಯಾಗಿ 30,000ರೂ.ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ರೂಮ್ನ ಮಾಹಿತಿ ತಿಳಿಸಿದೆ.