ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪಾಪದ ಪಾಲೆಷ್ಟು?
ಯುಎಪಿಎ ಮತ್ತು ಎನ್ಐಎ
ಯುಎಪಿಎ ರದ್ದು ಮಾಡುವ ಹೋರಾಟಗಳು ನಿಜವಾದ ಪ್ರಜಾತಾಂತ್ರಿಕ ಕಸುವು ತುಂಬಿಕೊಳ್ಳಬೇಕಾದರೆ ಮತ್ತು ಕಾಂಗ್ರೆಸ್ ಆದಿಯಾಗಿ ಇತರ ವಿರೋಧ ಪಕ್ಷಗಳು ತೋರುವ ಬೆಂಬಲಗಳು ನಿಜವಾದ ಅರ್ಥ ಪಡೆದುಕೊಳ್ಳಬೇಕಾದರೆ ಯುಎಪಿಎ ಮತ್ತು ಎನ್ಐಎ ಜಾರಿಯಾದ ಪಾಪದಲ್ಲಿ ತಮ್ಮ ಪಾತ್ರದ ಬಗ್ಗೆ ಆಳವಾದ ರಾಜಕೀಯ ಪುನರ್ ವಿಮರ್ಶೆ ಮಾಡಿಕೊಳ್ಳಲು ಹಾಗೂ ನೈಜ ಪ್ರಜಾತಾಂತ್ರಿಕ ಆಧಾರದಲ್ಲಿ ತಮ್ಮನ್ನು ಪುನರ್ ನಿರ್ವಚನ ಮಾಡಿಕೊಳ್ಳಲು ಒತ್ತಾಯಿಸಬೇಕಿದೆ.
ಭಾಗ-1
ಸಂತ ಪಾದ್ರಿ ಸ್ಟಾನ್ ಸ್ವಾಮಿಯವರನ್ನು ಮಾತ್ರವಲ್ಲದೆ ಮೋದಿ ಸರಕಾರದ ನೀತಿಗಳಿಗೆ ಬಲಿಯಾದ ಜನರ ಎಲ್ಲಾ ಪ್ರತಿರೋಧಗಳನ್ನೂ, ಈ ದೇಶದ ಪ್ರಜಾತಂತ್ರವನ್ನೂ ಮೋದಿ ಸರಕಾರ ಕಳೆದ ಏಳು ವರ್ಷಗಳಿಂದ ಹಾಡಹಗಲಲ್ಲೇ ಸಾಂಸ್ಥಿಕವಾಗಿ ಕಗ್ಗೊಲೆ ನಡೆಸುತ್ತಿದೆ. ಈ ಎಲ್ಲಾ ಕಗ್ಗೊಲೆಗಳನ್ನು ಕಾನೂನು ಪ್ರಕ್ರಿಯೆಗಳಿಗನುಸಾರವಾಗಿಯೇ ನಡೆಸಲಾಗುತ್ತಿದೆಯೆಂದು ಇತ್ತೀಚೆಗೆ ವಿದೇಶಾಂಗ ಸಚಿವಾಲಯ ವಿಶ್ವಸಂಸ್ಥೆಯ ಮುಂದೆ ಸಮರ್ಥನೆಯನ್ನು ಕೂಡಾ ಮಾಡಿಕೊಂಡಿದೆ. ಮೋದಿ ಸರಕಾರ ಕಾನೂನು ಬದ್ಧವಾಗಿ ನ್ಯಾಯದ ಹತ್ಯೆ ಮಾಡುತ್ತಿರುವುದು ನಿಜ..
ಆದರೆ ಅಂತಹ ಅತ್ಯಂತ ಪ್ರಜಾತಂತ್ರವಿರೋಧಿ ಕಾನೂನನ್ನು ಮಾಡಿ ಮೋದಿ ಕೈಗೆ ಕೊಟ್ಟಿದ್ದು ಮಾತ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎಂಬುದು ಈ ದೇಶದ ಪ್ರಜಾತಂತ್ರ ಎದುರಿಸುತ್ತಿರುವ ಸಂಕೀರ್ಣ ಸವಾಲಿಗೆ ದ್ಯೋತಕದಂತಿದೆ. ಹೀಗಾಗಿ ಸ್ಟಾನ್ ಸ್ವಾಮಿಯವರ ಸಾಂಸ್ಥಿಕ ಹತ್ಯೆಯ ನಂತರ ದೇಶಾದ್ಯಂತ ಯುಎಪಿಎ ಹಾಗೂ ಎನ್ಐಎ (National Investigation Agency)ಯ ವಿರುದ್ಧ ಭುಗಿಲೆದ್ದಿರುವ ಆಕ್ರೋಶವು ತಾರ್ಕಿಕವಾದ ಅಂತ್ಯ ಹಾಗೂ ನೈಜ ಪ್ರಜಾತಾಂತ್ರಿಕ ಪರಿಹಾರಗಳನ್ನು ಪಡೆದುಕೊಳ್ಳಬೇಕೆಂದರೆ ಯುಎಪಿಎ ಪಾಪದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಅದೇ ರೀತಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಕಾನೂನನ್ನು ಜಾರಿಗೆ ತರುವಾಗ ಸಂಸ್ತ್ತನಲ್ಲಿ ಸಾಂಕೇತಿಕವಾದರೂ ಪ್ರತಿರೋಧ ವ್ಯಕ್ತಪಡಿಸಿದ ಎಡಪಕ್ಷಗಳನ್ನೂ ಹಾಗೂ ಒಂದೆರಡು ಪ್ರಾದೇಶಿಕ ಪಕ್ಷಗಳನ್ನು ಬಿಟ್ಟರೆ ಭಾರತದ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಪ್ರಜಾತಂತ್ರ ವಿರೋಧಿ ಕಾನೂನನ್ನು ಸಮ್ಮತಿಸಿರುವುದು ಈ ದೇಶ ಎಂತಹ ಶಿಥಿಲ ಪ್ರಜಾತಂತ್ರದ ಹಂದರದ ಮೇಲೆ ನಿಂತಿದೆ ಎಂಬುದನ್ನೂ ಮನವರಿಕೆ ಮಾಡಿಸಬೇಕಿದೆ.
ಹೀಗಾಗಿ ಯುಎಪಿಎ ರದ್ದು ಮಾಡುವ ಹೋರಾಟಗಳು ನಿಜವಾದ ಪ್ರಜಾತಾಂತ್ರಿಕ ಕಸುವು ತುಂಬಿಕೊಳ್ಳಬೇಕಾದರೆ ಮತ್ತು ಕಾಂಗ್ರೆಸ್ ಆದಿಯಾಗಿ ಇತರ ವಿರೋಧ ಪಕ್ಷಗಳು ತೋರುವ ಬೆಂಬಲಗಳು ನಿಜವಾದ ಅರ್ಥ ಪಡೆದುಕೊಳ್ಳಬೇಕಾದರೆ ಯುಎಪಿಎ ಮತ್ತು ಎನ್ಐಎ ಜಾರಿಯಾದ ಪಾಪದಲ್ಲಿ ತಮ್ಮ ಪಾತ್ರದ ಬಗ್ಗೆ ಆಳವಾದ ರಾಜಕೀಯ ಪುನರ್ ವಿಮರ್ಶೆ ಮಾಡಿಕೊಳ್ಳಲು ಹಾಗೂ ನೈಜ ಪ್ರಜಾತಾಂತ್ರಿಕ ಆಧಾರದಲ್ಲಿ ತಮ್ಮನ್ನು ಪುನರ್ ನಿರ್ವಚನ ಮಾಡಿಕೊಳ್ಳಲು ಒತ್ತಾಯಿಸಬೇಕಿದೆ.
ತಾತ್ಕಾಲಿಕ POTAವನ್ನು ಶಾಶ್ವತ ಯುಎಪಿಎ ಗೊಳಿಸಿದ ಯುಪಿಎ ಸರಕಾರ:
ಒಂದು ಭಯೋತ್ಪಾದಕ ನಿಗ್ರಹ ಕಾಯ್ದೆಯಾಗಿ ಯುಎಪಿಎ ಜಾರಿಯಾಗುವ ಮುನ್ನ 1985ರಲ್ಲಿ ಕಾಂಗ್ರೆಸ್ ಸರಕಾರ TADA (Terrorist And Disruptive Activities Prevention Act)ವನ್ನು ಜಾರಿಗೊಳಿಸಿತ್ತು. ಇದು ಭಯೋತ್ಪಾದನೆಯ ಹೆಸರಲ್ಲಿ ಪೊಲೀಸ್ ಸರ್ವಾಧಿಕಾರಗಳಿಗೆ ಹಾಗೂ ಹಿಂಸಾಚಾರಗಳಿಗೆ ಕಾನೂನು ಬದ್ಧ ಪರವಾನಿಗೆ ಕೊಟ್ಟಿತು. ಆದರೆ ಇದರಿಂದ ನಿಜವಾಗಿ ಭಯೋತ್ಪಾದನೆಯಲ್ಲಿ ತೊಡಗಿದ್ದ ಆತಂಕವಾದಿಗಳಿಗಿಂತ ಆಗಿನ ಕಾಂಗ್ರೆಸ್ ಸರಕಾರದ ನೀತಿಗಳನ್ನು ವಿರೋಧಿಸುತ್ತಿದ್ದ ರಾಜಕೀಯ ಭಿನ್ನಮತೀಯರು ಮತ್ತು ದಲಿತರು ಮತ್ತು ಆದಿವಾಸಿಗಳೇ ಹತ್ತಾರು ವರ್ಷ ಜೈಲಿನಲ್ಲಿ ಕೊಳೆಯುವಂತಾಯಿತು. ಇಷ್ಟಾದರೂ TADA ಕಾಯ್ದೆಯು ಒಂದು ತಾತ್ಕಾಲಿಕ ಕಾಯ್ದೆಯಾಗಿದ್ದು, ಎರಡು ವರ್ಷಗಳಿಗೊಮ್ಮೆ ಸಂಸ್ತ್ತನ ಅನುಮೋದನೆಗೊಂಡು ವಿಸ್ತರಿಸಿಕೊಳ್ಳಬೇಕಾದ ಪ್ರಜಾತಾಂತ್ರಿಕ ಉಸ್ತುವಾರಿಯನ್ನಾದರೂ ಹೊಂದಿತ್ತು. ಆ ಕಾರಣದಿಂದಾಗಿಯೇ ದೇಶಾದ್ಯಂತ TADA ಕಾಯ್ದೆಯ ವಿರುದ್ಧ ಹೋರಾಟ ಭುಗಿಲೆದ್ದಿದ್ದರಿಂದ 1995ರಲ್ಲಿ ಸಂಸ್ತ್ತನಲ್ಲಿ ಅದರ ವಿಸ್ತರಣೆ ಅನುಮೋದನೆಯಾಗದೆ TADA ರದ್ದಾಯಿತು.
1999ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ 2002ರಲ್ಲಿ Prevention Of Terrorism Act- POTA ಎಂಬ ಅತ್ಯಂತ ಕರಾಳ ಕಾಯ್ದೆಯನ್ನು ಜಾರಿಗೆ ತಂದಿತು. ಇದು TADA ಕಾಯ್ದೆಯಲ್ಲಿದ್ದ ಎಲ್ಲಾ ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿದ್ದಲ್ಲದೆ ಆರೋಪಿಗೆ 180 ದಿನಗಳ ಕಾಲ ಜಾಮೀನು ನಿರಾಕರಿಸುವ, ನಿರಪರಾಧಿಯೆಂದು ಸಾಬೀತು ಮಾಡಿಕೊಳ್ಳುವ ಹೊಣೆಯನ್ನು ಆರೋಪಿಯ ಮೇಲೆ ವರ್ಗಾಯಿಸುವ, ಪೊಲೀಸ್ ಅಧಿಕಾರಿಯ ಮುಂದೆ ಮಾಡಿಕೊಳ್ಳುವ ತಪೊಪ್ಪಿಗೆಯನ್ನು ಸಾಕ್ಷಿಯೆಂದು ಪರಿಗಣಿಸುವ, ಸರಕಾರ ವಿರೋಧಿ ಅಭಿಪ್ರಾಯ ಹಾಗೂ ಪ್ರತಿಭಟನೆಗಳನ್ನು ದೇಶದ್ರೋಹಿ ಭಯೋತ್ಪಾದಕ ಕೃತ್ಯಗಳೆಂದು ಪರಿಗಣಿಸುವಂತಹ ಹತ್ತು ಹಲವು ಕರಾಳ ಅಂಶಗಳನ್ನು ಹೊಂದಿತ್ತು.
ಆದರೂ ಅದೂ ಕೂಡಾ ಸಂಸ್ತ್ತನಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಅನುಮೋದನೆಗೊಳ್ಳಬೇಕಾಗಿದ್ದ ವಿಶೇಷವಾದ ಹಾಗೂ ತಾತ್ಕಾಲಿಕ ಕಾಯ್ದೆಯಾಗಿತ್ತು. 2004ರ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟ ಸೋಲುವುದರೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಸರಕಾರ ಅಧಿಕಾರಕ್ಕೆ ಬಂದಿತು. ಈ ಸರಕಾರಕ್ಕೆ 59 ಸಂಸದರ ಬಲವನ್ನು ಹೊಂದಿದ್ದ ಎಡಪಕ್ಷಗಳು ಹೊರಗಿನಿಂದ ಬೆಂಬಲವನ್ನೂ ಕೊಟ್ಟವು ಹಾಗೂ ಈ ಬಹು ಪಕ್ಷಗಳ ಸರಕಾರಕ್ಕೆ ಬುನಾದಿಯಾಗಿ ಒಂದು ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಲಾಯಿತು. ಅದರಲ್ಲಿ ಪ್ರಜಾತಂತ್ರ ವಿರೋಧಿ POTA ಕಾಯ್ದೆಯು ರದ್ದುಗೊಳಿಸುವ ಆಶ್ವಾಸನೆಯನ್ನು ನೀಡಲಾಗಿತ್ತು.
ಅದರಂತೆ ಯುಪಿಎ ಸರಕಾರ 2004ರ ಡಿಸೆಂಬರ್ನಲ್ಲಿ POTA ಕಾಯ್ದೆಯನ್ನೇನೋ ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿತು. ಆದರೆ 1967ರಲ್ಲಿ ಜಾರಿ ಮಾಡಲಾಗಿದ್ದ ಯುಎಪಿಎ ಕಾಯ್ದೆಗೆ ಆಮೂಲಾಗ್ರ ತಿದ್ದುಪಡಿಗಳನ್ನು ತರುವ ಮಸೂದೆಯನ್ನು ಅದರ ಜೊತೆಜೊತೆಗೇ ಮಂಡಿಸಿತು. ಹಳೆಯ ಯುಎಪಿಎ ಕಾಯ್ದೆಗೆ ಟೆರರಿಸ್ಟ್ ಚಟುವಟಿಕೆಗಳನ್ನೂ ನಿಗ್ರಹಿಸುವ ಹೊಸ ಪರಿಚ್ಛೇದವನ್ನು ಸೇರಿಸಿತು ಹಾಗೂ ಟೆರರಿಸಂ ಎಂದರೆ ಏನು? ಮತ್ತು ಯಾವ್ಯಾವ ಸಂಘಟನೆಗಳು ಟೆರರಿಸ್ಟ್ ಎಂದು ಎನ್ಡಿಎ ಸರಕಾರ ಘೋಷಿಸಿತ್ತೋ ಅದೆಲ್ಲವನ್ನೂ ಅನಾಮತ್ತಾಗಿ ಯುಎಪಿಎ ಕಾಯ್ದೆಯ ಶೆಡ್ಯೂಲಿನಲ್ಲಿ ಸೇರಿಸಿತು. ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ 1985ರ TADA ಅಥವಾ ಎನ್ಡಿಎ ಸರಕಾರದ POTA ಕಾಯ್ದೆಯ ತರಹ ಈ ಹೊಸ ಯುಎಪಿಎ ಕಾಯ್ದೆ ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಸ್ತ್ತನಿಂದ ಅನುಮೋದನೆಗೊಳ್ಳುವ ತಾತ್ಕಾಲಿಕ ಕಾಯ್ದೆಯಾಗದೆ ಒಂದು ಶಾಶ್ವತ ಕಾಯ್ದೆಯಾಗಿಬಿಟ್ಟಿತು.
ಆ ಅರ್ಥದಲ್ಲಿ TADA ಅಥವಾ POTAಗಳ ಮೇಲಿದ್ದ ಪ್ರಜಾತಾಂತ್ರಿಕ ಉಸ್ತುವಾರಿಯೂ ಸಹ ಯುಎಪಿಎ ಕಾಯ್ದೆ ಮೇಲೆ ಇರದಂತೆ ಕಾಂಗ್ರೆಸ್ ಸರಕಾರ ತಿದ್ದುಪಡಿಯನ್ನು ತಂದಿತು. ಹೀಗಾಗಿ ಇಂದಿನ ಪ್ರಜಾತಾಂತ್ರಿಕ ಕಗ್ಗೊಲೆಗೆ ಬೇಕಾದ ಶಾಸನ ಬಲವನ್ನು ಕೊಟ್ಟಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ!
ಕಾಂಗ್ರೆಸ್ ಸರಕಾರ ಮುಂದಿಟ್ಟ ಈ ಹೊಸ ಯುಎಪಿಎ ಮಸೂದೆಯ ಬಗ್ಗೆ 2004ರ ಡಿಸೆಂಬರ್ 6 ಮತ್ತು 9ರಂದು ಲೋಕಸಭೆಯಲ್ಲಿ ಹಾಗೂ ಡಿಸೆಂಬರ್ 13 ರಂದು ರಾಜ್ಯಸಭೆಯಲ್ಲಿ ಚರ್ಚೆಯಾಗುತ್ತದೆ. ಯುಪಿಎ ಸರಕಾರದ ಕನಿಷ್ಠ ಸಾಮಾನ್ಯ ಕಾರ್ಯಕ್ರಮದಲ್ಲಿ ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ಬಿಜೆಪಿ ಅಮಾಯಕರನ್ನು ಹಾಗೂ ಅಲ್ಪಸಂಖ್ಯಾತರನ್ನೂ ಬಲಿಹಾಕಲು ಬಳಸಿಕೊಂಡ ರೀತಿಯ ಬಗ್ಗೆ ಸ್ಪಷ್ಟವಾದ ಖಂಡನೆಗಳಿದ್ದರೂ, ಕಾಂಗ್ರೆಸ್ ಪಕ್ಷ ತನ್ನ ಹೊಸ ಯುಎಪಿಎ ಮಸೂದೆಯನ್ನು ಸಮರ್ಥಿಸಿಕೊಳ್ಳಲು ಕೊಟ್ಟ ಸಮರ್ಥನೆಗಳು ಬಿಜೆಪಿಗಿಂತ ಯಾವುದೇ ರೀತಿಯಲ್ಲೂ ಭಿನ್ನವಿರಲಿಲ್ಲ.
ಎಡ ಪಕ್ಷಗಳು ಈ ಸರಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟ ಹಾಗೂ ಯುಪಿಎ ಸರಕಾರ ಸ್ಥಾಪನೆಯಾಗಲು ಕಾರಣವಾದ ಪ್ರಮುಖ ಘಟಕಗಳು. ಆದರೆ ಯುಪಿಎಯ ಸಂಯೋಜನಾ ಸಭೆಯಲ್ಲಿ ಈ ಬಗ್ಗೆ ಎಡಪಕ್ಷಗಳ ಅಭಿಪ್ರಾಯವನ್ನು ಕೇಳಿದ ಶಾಸ್ತ್ರ ಮಾಡಿದ ಕಾಂಗ್ರೆಸ್ ಪಕ್ಷ ಸಂಸ್ತ್ತನಲ್ಲಿ ಎರಡು ಪ್ರಮುಖ ಎಡಪಕ್ಷಗಳು ಮುಂದಿಟ್ಟ ಯಾವುದೇ ಸಲಹೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಕನಿಷ್ಠ ಮಸೂದೆಯನ್ನು ಸಂಸ್ತ್ತನ ವಿಷಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ಒತ್ತಾಯವನ್ನೂ ಸರಕಾರ ಒಪ್ಪಿಕೊಳ್ಳುವುದಿಲ್ಲ. ಆದರೂ ತಮ್ಮ ಎಲ್ಲಾ ಕಾಳಜಿಗಳನ್ನು ಕಾಯ್ದೆಗೆ ನಿಯಮಾವಳಿಗಳನ್ನು ರಚಿಸುವಾಗ ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸರಕಾರ ಕೊಟ್ಟ ಭರವಸೆಯನ್ನು ಎಡ ಹಾಗೂ ಇನ್ನಿತರ ಪಕ್ಷಗಳು ಒಪ್ಪಿಕೊಂಡವು. ಆನಂತರದಲ್ಲಿ ಯುಎಪಿಎಯಂತಹ ಕರಾಳ ಕಾಯ್ದೆ ಸಂಸದೀಯ ಉಸ್ತುವಾರಿಯೂ ಇಲ್ಲದ ಶಾಶ್ವತ ಕಾಯ್ದೆಯಾಗಿ ಸರ್ವಾಧಿಕಾರಿ ಸರಕಾರದ ಹಾಗೂ ಪೊಲೀಸರ ಬತ್ತಳಿಕೆಯನ್ನು ಸೇರಿಕೊಂಡುಬಿಟ್ಟಿತು.
ಆಸಕ್ತರು ಆಗ ನಡೆದ ಸಂಸದೀಯ ಚರ್ಚೆಯನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು: https://eparlib.nic.in/bitstream/123456789/730920/1/864.pdf
2008ರ ತಿದ್ದುಪಡಿಗಳು-ಪ್ರಜಾತಂತ್ರದ ಕಗ್ಗೊಲೆಗೆ ರಾಜಮಾರ್ಗ
2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ನುಸುಳಿ ಬಂದ ಉಗ್ರರು ಮುಂಬೈ ಮೇಲೆ ದಾಳಿ ಮಾಡಿ 150ಕ್ಕೂ ಹೆಚ್ಚು ಜನ ಬಲಿಯಾದದ್ದು ಈ ಕಾಯ್ದೆಯನ್ನು ಬಳಸಿಕೊಂಡು ಜನರನ್ನು ಸದೆಬಡಿಯಲು ಬೇಕಾದ ಉಗ್ರಬಲವನ್ನು ತಂದುಕೊಟ್ಟಿತು!. ಇಂತಹ ಭಯೋತ್ಪಾದನೆಯನ್ನು ದೇಶ ಒಗ್ಗಟ್ಟಾಗಿ ಎದುರಿಸುವ ಅಗತ್ಯವಿತ್ತು. ಆದರೆ ಇದಾದ ಕೇವಲ ಆರು ತಿಂಗಳ ಆನಂತರ 2009ರಲ್ಲಿ ಸಾರ್ವತ್ರಿಕ ಚುನಾವಣೆ ಇದ್ದಿದ್ದರಿಂದ ಬಿಜೆಪಿ ಈ ದುರಂತವನ್ನು ಕೂಡಾ ತನ್ನ ಕೋಮುವಾದಿ ರಾಜಕಾರಣಕ್ಕೆ ದಾಳವಾಗಿ ಬಳಸಿಕೊಂಡಿತು.
ಮುಂಬೈ ದಾಳಿಯನ್ನು ನೆಪವಾಗಿರಿಸಿಕೊಂಡು ಈ ದೇಶದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವ ಹಾಗೂ ಇಸ್ಲಾಂ ಆಚರಣೆಗಳನ್ನೂ ಉಗ್ರವಾದದ ಬೆಂಬಲವೆಂದು ನೋಡುವ ಕಥನವನ್ನೂ ಹರಿಬಿಟ್ಟಿತು ಹಾಗೂ ಕಾಂಗ್ರೆಸ್ ಇಂತಹ ಉಗ್ರವಾದವನ್ನು ಹತ್ತಿಕ್ಕಲು ಅಸಮರ್ಥ ಎಂಬ ಕಥನವನ್ನೂ ಹುಟ್ಟುಹಾಕಿತು. ಕೋಮುವಾದಿ ದಾಳಿಯನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಶಕ್ತಿಯುತವಾದ ಪ್ರಜಾತಾಂತ್ರಿಕ ನೆಲೆಯಿಂದ ಎದುರಿಸುವ ಸಾಂವಿಧಾನಿಕ ಬದ್ಧತೆಯನ್ನಾಗಲೀ, ಪ್ರಾಮಾಣಿಕತೆಯಾಗಲೀ ತೋರದ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ತಾನು ಹೆಚ್ಚು ರಾಷ್ಟ್ರಭಕ್ತ ಎಂದು ಸಾಬೀತು ಮಾಡಲು ಯುಎಪಿಎ ಕಾಯ್ದೆಗೆ ಇನ್ನಷ್ಟು ಕರಾಳ, ವಿಕರಾಳ ಅಂಶಗಳನ್ನು ಸೇರಿಸಿತು. ಮುಂಬೈ ದಾಳಿ 2008ರ ನವೆಂಬರ್ನಲ್ಲಿ ನಡೆದರೆ ಕೇವಲ ಮೂರು ವಾರದಲ್ಲಿ ಅಂದರೆ ಡಿಸೆಂಬರ್ 13ರಂದು ಲೋಕಸಭೆಯಲ್ಲಿ ಯುಎಪಿಎ ತಿದ್ದುಪಡಿ ಹಾಗೂ ಹೊಸ ಎನ್ಐಎ (National Investigation Agency -ರಾಷ್ಟ್ರೀಯ ತನಿಖಾ ಸಂಸ್ಥೆ) ರಚಿಸುವ ಮಸೂದೆಯನ್ನು ಕಾಂಗ್ರೆಸ್ ಮಂಡಿಸಿತು.
ಯುಎಪಿಎ ಹೊಸ ತಿದ್ದುಪಡಿಗಳು:
- 2008ರ ಹೊಸ ತಿದ್ದುಪಡಿಯು ಸೆಕ್ಷನ್ 15ಕ್ಕೆ ತಂದ ತಿದ್ದುಪಡಿಯ ಪ್ರಕಾರ, ದೇಶದ ಭದ್ರತೆ ಮತ್ತು ಸಾರ್ವಭೌಮತೆಯ ಮೇಲೆ ಬಾಂಬು ಬಂದೂಕುಗಳಿಂದ ದಾಳಿ ಮಾಡಿದರೆ ಮಾತ್ರವಲ್ಲ ‘‘ಇತರ ಯಾವುದೇ ಕ್ರಮಗಳ ಮೂಲಕ’’ ಭಯೋತ್ಪಾದನೆಯನ್ನುಂಟು ಮಾಡಲು ಪ್ರಯತ್ನಿಸುವುದೂ ಕೂಡ ಭಯೋತ್ಪಾದನೆಯಾಯಿತು ಹಾಗೂ ಆ ಕ್ರಮಗಳು ಯಾವುದು ಎಂಬ ನಿರ್ವಚನೆಯನ್ನು ಪೊಲೀಸರಿಗೆ ಬಿಟ್ಟುಕೊಡಲಾಯಿತು. ಇದರ ಜೊತೆಗೆ ಭಯೋತ್ಪಾದನೆಯೆಂಬ ಪರಿಣಾಮ ಸಂಭವಿಸದಿದ್ದರೂ ಅಂತಹ ಸಾಧ್ಯತೆ (... likely) ಇದ್ದರೂ ಅದನ್ನು ಟೆರರಿಸ್ಟ್ ಆ್ಯಕ್ಟ್ ಎಂದು ಪರಿಗಣಿಸಬೇಕೆಂದಿತು.
ಆದರೆ ಸರಕಾರ ಯಾವುದನ್ನು ಬೇಕಾದರೂ ಟೆರರಿಸ್ಟ್ ಆ್ಯಕ್ಟ್ ಎಂದು ಭಾವಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಿತು. -ಸೆಕ್ಷನ್ 43 D (27) ಎಂಬ ಹೊಸ ಸೇರ್ಪಡೆಯನ್ನು ಮಾಡಲಾಯಿತು. ಇದರ ಪ್ರಕಾರ ಚಾರ್ಜ್ಶೀಟ್ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರವೂ, ಆರೋಪಿಯನ್ನು ಜಾಮೀನು ಕೊಡದಿರುವ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಿತು. ಹೀಗೆ ಈ ಕಾಯ್ದೆಯಡಿ ಬಂಧಿತರಾದವರಿಗೆ ವಿಚಾರಣೆ ಮುಗಿಯುವವರೆಗೆ ಅಂದರೆ 10ರಿಂದ 20 ವರ್ಷಗಳ ಕಾಲ ಜಾಮೀನು ಕೂಡ ಸಿಗದಿರುವ ಅಮಾನುಷ ಅವಕಾಶವನ್ನು ಒದಗಿಸಿದ್ದು 2008ರ ತಿದ್ದುಪಡಿಗಳೇ..ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರಿಗೆ ಇದ್ದ ಅವಕಾಶವನ್ನು 90 ದಿನಗಳಿಂದ 180 ದಿನಗಳವರೆಗೆ ವಿಸ್ತರಿಸುವ ಅವಕಾಶವನ್ನು ನೀಡಲಾಯಿತು. ಸೆಕ್ಷನ್ 43 E ಎಂಬ ಹೊಸ ಸೇರ್ಪಡೆಯ ಮೂಲಕ ನಿರಪರಾಧಿತ್ವವನ್ನು ಸಾಬೀತು ಮಾಡುವ ಹೊಣೆಗಾರಿಕೆಯನ್ನು ಆರೋಪಿಗೆ ವರ್ಗಾಯಿಸಲಾಯಿತು. ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕುಗಳನ್ನು ಹಾಗೂ ಮಾನವ ಹಕ್ಕುಗಳನ್ನು ಗಂಭೀರವಾಗಿ ಉಲ್ಲಂಘನೆ ಮಾಡುವ ಹಾಗೂ ಜಗತ್ತಿನ ಯಾವ ನಾಗರಿಕ ದೇಶಗಳಲ್ಲೂ ಇಲ್ಲದ ಇನ್ನೂ ಹಲವಾರು ಅಂಶಗಳನ್ನು ಈ ತಿದ್ದುಪಡಿಯ ಮೂಲಕ ಸೇರಿಸಲಾಯಿತು.
(ಮುಂದಿನ ಬುಧವಾರಕ್ಕೆ ಮುಂದುವರಿಯುವುದು)