ಭಾರತ-ಪಾಕ್ ವಿಮಾನಯಾನ ನಿರ್ಬಂಧದ ಬಗ್ಗೆ ನಿರಂತರ ಪರಿಶೀಲನೆ: ಯುಎಇ ಅಧಿಕಾರಿ ಹೇಳಿಕೆ
ಅಬುಧಾಬಿ, ಜು.15: ಭಾರತ, ಪಾಕಿಸ್ತಾನ ಹಾಗೂ ಇತರ ದೇಶಗಳಲ್ಲಿ ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಯುಎಇ ಅಧಿಕಾರಿಗಳು ಹೇಳಿದ್ದಾರೆ. ಭಾರತ, ಪಾಕಿಸ್ತಾನದ ಜತೆ ವಿಮಾನಯಾನ ಸಂಪರ್ಕ ಪುನರಾರಂಭಿಸುವುದು ಸರಕಾರದ ಪರಿಶೀಲನೆ ಮತ್ತು ಈ ದೇಶಗಳಲ್ಲಿ ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿದ ಬೆಳವಣಿಗೆಯನ್ನು ಆಧರಿಸಿದೆ. ಸರಕಾರದ ಸೂಚನೆಯನ್ನು ನಿರೀಕ್ಷಿಸುತ್ತಿದ್ದೇವೆ. ಈ ಎರಡು ದೇಶಗಳಷ್ಟೇ ಅಲ್ಲ, ಜಾಗತಿಕ ಪರಿಸ್ಥಿತಿಯನ್ನೂ ನಿರಂತರ ಪರಿಶೀಲಿಸಲಾಗುತ್ತಿದೆ ಎಂದು ಎಮಿರೇಟ್ಸ್‌ನ ಮುಖ್ಯ ವಿರ್ನಹಣಾಧಿಕಾರಿ ಎಡೆಲ್ ಅಲ್ ರೆಧಾ ಗುರುವಾರ ವರ್ಚುವಲ್ ಸುದ್ಧಿಗೋಷ್ಟಿಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಭಾರತ ಉಪಖಂಡದಿಂದ ವಿಮಾನಯಾನ ಸೇವೆಯನ್ನು ಯುಎಇ ಎಪ್ರಿಲ್ 24ರಿಂದ ನಿಬರ್ಂಧಿಸಿದೆ. ಯುಎಇಯಿಂದ ಈಗ ಸುಮಾರು 120 ದೇಶಗಳಿಗೆ ವಿಮಾನಸಂಚಾರ ಆರಂಭವಾಗಿದೆ. ವಾಯುಯಾನ ಕ್ಷೇತ್ರ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿರುವ ಲಕ್ಷಣ ಇದಾಗಿದೆ. ವಾಯುಯಾನ ಕ್ಷೇತ್ರ ಅಂತರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿರುವುದರಿಂದ ಈ ಕ್ಷೇತ್ರದ ಚೇತರಿಕೆ ವಿಳಂಬವಾಗಬಹುದು ಎಂದು ಈ ಹಿಂದೆಯೇ ಹೇಳಿದ್ದೇವೆ. ದುಬೈಯಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಕೆಲವು ಮಾರ್ಗಗಳಲ್ಲಿ ಸರಾಸರಿ 70ರಿಂದ 75%ದಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಆರಂಭದ ತಿಂಗಳಿಗೆ ಹೋಲಿಸಿದರೆ ಈಗ ವಿಮಾನ ಪ್ರಯಾಣಿಕರ ಸಂಖ್ಯೆ ಬಹುತೇಕ ದ್ವಿಗುಣವಾಗಿದೆ ಎಂದವರು ಹೇಳಿದ್ದಾರೆ.