varthabharthi


ಮುಂಬೈ ಸ್ವಗತ

ಶಿಕ್ಷಿತರಾಗಿ ಬದುಕು ಕಟ್ಟಿಕೊಂಡ ‘ತಿರಸ್ಕೃತರು’

ವಾರ್ತಾ ಭಾರತಿ : 16 Jul, 2021
ದಯಾನಂದ ಸಾಲ್ಯಾನ್

ಎಂದಿನವರೆಗೆ ಜನಜಾಗೃತಿ ಮೂಡುವುದಿಲ್ಲವೋ, ಹಿಜ್ರಾ ಸಮುದಾಯದವರೂ ನಮ್ಮಂತೆ ಎಂಬ ಭಾವನೆ ನಮ್ಮಲ್ಲಿ ಎಂದಿನವರೆಗೆ ಉಂಟಾಗುವುದಿಲ್ಲವೋ ಅಂದಿನವರೆಗೆ ನಮಗಿವರು ಪಿಡುಗಾಗಿ ಕಾಣುತ್ತಾರೆ. ಅವರ ಉದ್ಧಾರಕ್ಕಾಗಿ ಬಿ.ಆರ್. ಶೆಟ್ಟಿ ಅವರಂತಹ ಹೃದಯ ವೈಶಾಲ್ಯವಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವವರ ಅವಶ್ಯಕತೆಯಿದೆ.ಎಲ್ಲೂ ಸಲ್ಲದವರು ಈ ಮಾಯಾನಗರಿಯಲ್ಲಿ ಬದುಕು ಕಟ್ಟಬಲ್ಲರು. ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರು. ಎಲ್ಲರಿಂದ ತಿರಸ್ಕರಿಸಲ್ಪಡುವ ‘ಹಿಜ್ರಾ’ರನ್ನು ಈ ಮುಂಬೈ ನಗರ ಪ್ರೀತಿ, ಮಮತೆಯಿಂದ ಆಧರಿಸಿ ಬದುಕು ಕಟ್ಟಿಕೊಳ್ಳುವ ಭರವಸೆಯನ್ನು ನೀಡಿದೆ. ಅವರು ಸ್ವಚ್ಛರಲ್ಲ, ಅವರಿಗೆ ಭಾವನೆಗಳಿಲ್ಲ, ಅಶಿಕ್ಷಿತರು, ಅವರು ನಮ್ಮನ್ನು ಸತಾಯಿಸುತ್ತಾರೆ; ಭಿಕ್ಷೆ ಬೇಡುತ್ತಾರೆ ಎಂದು ಸುಸಂಸ್ಕೃತರೆಂದು ತಮ್ಮನ್ನು ತಾವು ಕರೆದುಕೊಳ್ಳುವ ಮಂದಿ ಆಡುವ ಮಾತು. ಆದರೆ ಇದು ಎಷ್ಟು ನಿಜ? ಈ ಶಹರದ ಉದ್ದಗಲಕ್ಕೂ ಹರಡಿಕೊಂಡಿರುವ ‘ಹಿಜ್ರಾ’ ಸಮುದಾಯದ ಅಂದಾಜು ಸುಮಾರು 1ಲಕ್ಷ ಎಂದು ಹೇಳಲಾಗುತ್ತಿದೆ. ನಮ್ಮ ದೇಶದಲ್ಲಿ ಅವರ ಒಟ್ಟು ಸಂಖ್ಯೆ 4,97,000 (30-5-2014ರ ವರೆಗೆ)ಎಂದು ದಾಖಲೆ ಸಿಗುತ್ತದೆ. ಆದರೆ ತಜ್ಞರ ಪ್ರಕಾರ ಈ ಸಂಖ್ಯೆಯ 6-7 ಪಟ್ಟು ಹೆಚ್ಚು ಜನಸಂಖ್ಯೆ ಅವರದ್ದಿದೆ. ಇವರಲ್ಲಿ ಕನ್ನಡಿಗರ ಸಂಖ್ಯೆ ಸುಮಾರು ಶೇಕಡಾ 5 ಎಂದು ಹೇಳಲಾಗುತ್ತಿದೆ. ಇವರ ಬಗ್ಗೆ ನಾವು ಎಂದಾದರೂ ಯೋಚಿಸಿದ್ದಿದೆಯೇ? ಅವರಿಗೂ ಆಸೆ, ಆಕಾಂಕ್ಷೆ, ಭಾವನೆಗಳಿವೆ; ಅವರೂ ನಮ್ಮಂತೆಯೇ ಎಂದು ಎಂದಾದರೂ ನಾವು ಚಿಂತಿಸಿದ್ದಿದೆಯೇ? ಒಂದೊಮ್ಮೆ ಅವರಿಗೆ ಸರಿಯಾದ ಪ್ರೀತಿ-ಮಮತೆ, ಮಾರ್ಗದರ್ಶನ ದೊರೆಯುತ್ತಿದ್ದರೆ ಇಂದು ಅವರಲ್ಲಿರುವ ಕೆಲವೇ ಕೆಲವು ಡಾಕ್ಟರ್, ಬ್ಯೂಟಿಷಿಯನ್, ಇಂಜಿನಿಯರ್, ಲೆಕ್ಚರರ್ ಬದಲಿಗೆ ಸಾವಿರಾರು ಜನರು ಅವರೊಳಗೆ ಗುರುತಿಸಲ್ಪಡುತ್ತಿದ್ದರು. ‘‘ಅವರೆಲ್ಲ ಅಶಿಕ್ಷಿತರು. ಇವೆಲ್ಲ ‘ಹಿಜ್ರಾ’ ಜನಾಂಗದಲ್ಲಿ ಸಾಧ್ಯವಿಲ್ಲ. ಅವರ ಹೋಲಿಕೆ ನಮ್ಮಿಂದಿಗೆ ಸಲ್ಲದು’’ ಎಂದು ನಮ್ಮಿಳಗಿನ ಅಹಂ ಹೆಡೆ ಎತ್ತಿದರೆ ಅದು ಅವರಿಗಾಗುವ ಅವಮಾನ ಅಲ್ಲ. ನಮಗೆ ನಾವೇ ಮಾಡಿಕೊಳ್ಳುವ ಅವಮಾನ.

ಚೆಂಬೂರಿನಲ್ಲಿರುವ ಮಲ್ಲಿಕಾ (ಹೆಸರನ್ನು ಬದಲಾಯಿಸಲಾಗಿದೆ) ಪದವಿ ಮುಗಿಸಿ, ಎಂ.ಫಿಲ್. ಪೂರೈಸಿ, ಪಿಎಚ್.ಡಿ. ಮಹಾಪ್ರಬಂಧ ಮಂಡಿಸಿ ಪರಿಶ್ರಮಪಟ್ಟು ಡಾಕ್ಟರೇಟ್ ಪದವಿ ಗಳಿಸಿದವರು. ಸುಮಾರು 3 ವರ್ಷ ಅಮೆರಿಕದಲ್ಲಿದ್ದು ಅಲ್ಲೂ ವಿಶೇಷ ಅಧ್ಯಯನ, ಮಾರ್ಗದರ್ಶನ ಪಡೆದು ಬಂದವರು. ಮೂಲತಃ ಆಂಧ್ರದವರಾದ ಮಲ್ಲಿಕಾರ ಮಾತುಗಳು ನಮ್ಮ ಅಂತರಂಗ ತಟ್ಟಬೇಕು. ಆಗ ಬಹುಶ ನಮ್ಮಲ್ಲಿನ ಅಹಂ ಇಲ್ಲವಾಗಬಹುದು. ‘‘ನಮ್ಮ ಪುರಾಣಗಳಲ್ಲಿನ ಮೋಹಿನಿ ಅರ್ಧನಾರೀಶ್ವರ ಪಾತ್ರಗಳನ್ನು ಗಮನಿಸಿ. ಇತಿಹಾಸದುದ್ದಕ್ಕೂ ನಮ್ಮ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಗಮನಿಸಬೇಕು. ಆದರೆ ಅಂತಹ ವ್ಯಕ್ತಿತ್ವ ಇಂದು ಸಮಾಜದ ಅವಗಣನೆಗೆ, ತಿರಸ್ಕಾರಕ್ಕೆ ಏಕೆ ಕಾರಣವಾಯಿತು ಎಂಬುವುದನ್ನು ಗಮನಿಸಬೇಕು. ಭಿಕ್ಷೆ ನಾವು ಮಾತ್ರ ಬಿಡುತ್ತೇವೆಯೇ? ಇತರರು ಬೇಡುತ್ತಿಲ್ಲವೇ?’’ ಎಂದು ಮಲ್ಲಿಕಾ ಯಾವುದೇ ಉದ್ವೇಗ, ರೋಷ ಇಲ್ಲದೆ ಪ್ರಶ್ನೆ ಮಾಡುತ್ತಾರೆ. ಅವರು ಇದಕ್ಕೆ ಕೊಡುವ ಕಾರಣವನ್ನು ನಾವು ಗಮನಿಸಬೇಕು. ‘‘ನಮ್ಮ ಸಮಾಜ ಆ ರೀತಿ ಹೆಣೆಯಲ್ಪಟ್ಟಿದೆ. ನಾವು ನಮ್ಮ ಮನೆ, ಜಾತಿ, ಧರ್ಮ ಮತ್ತು ಸುತ್ತಲಿನ ಸಮಾಜವನ್ನು ಮೀರುವಂತಿಲ್ಲ. ಹಿಜ್ರಾ ಸಮುದಾಯಕ್ಕೆ ಅವರದ್ದೇ ಆದ ನೋವು, ಯಾತನೆ, ಸಂಕಷ್ಟಗಳಿವೆ. ಅವರು ತಾನು, ತನ್ನ ಪರಿವಾರ ಎಂದು ಒದ್ದಾಡುವ ರೀತಿಯನ್ನು ನೀವು ಗಮನಿಸಬೇಕು. ನಮ್ಮಲ್ಲಿ ಎರಡು ರೀತಿಯ ಮಂದಿ ಇದ್ದಾರೆ. ಒಂದು ‘ನಾವು ಇಂತಹವರು’ ಎಂದು ಯಾವುದೇ ರೀತಿಯಿಂದಲೂ ತೋರಿಸಿಕೊಳ್ಳಲಾರದವರು. ಇನ್ನೊಂದು ‘ನಾವು ಇಂತಹವರೇ’ ಎಂದು ಬಿಂದಾಸ್ ಆಗಿ ತಮ್ಮನ್ನು ತಾವು ತೋರಿಸಿಕೊಳ್ಳುವವರು. ಸಮಾಜ ಜಾಗೃತಗೊಳ್ಳಬೇಕು. ನಮ್ಮಲ್ಲೂ ಹಲವರು ವೈದ್ಯರು, ಇಂಜಿನಿಯರ್, ಲೆಕ್ಚರರ್, ಬ್ಯೂಟಿಷಿಯನ್ ಆಗಿ ಇತರರಿಗೆ ಮಾದರಿಯಾಗಿದ್ದಾರೆ. ನಮಗೂ ಮದುವೆಯಾಗಬೇಕು, ದತ್ತಕ್ಕೆ ಮಗು ಪಡೆದು ತಾಯಂದಿರಾಗಬೇಕು ಎಂಬ ಆಸೆ ಇಲ್ಲವೇ? ನಮ್ಮ ಸಮಾಜವೊಂದು ಕೆಸರಿನಂತೆ. ಅಲ್ಲಿಂದ ನಾವು ಹೊರಗೆ ಬರಲು ಪ್ರಯತ್ನಿಸಿದಷ್ಟೂ ಅದರ ಆಳಕ್ಕೆ ನಮ್ಮನ್ನು ಸೆಳೆಯುತ್ತದೆ. ನಮ್ಮೆಳಗೂ ಕಿನ್ನರ್, ಹಿಜ್ರಾ, ಟ್ರಾನ್ಸ್‌ಜೆಂಡರ್ ಎಂಬ ಭೇದಗಳಿವೆ. ಮೇಲ್ನೋಟಕ್ಕೆ ನಾವೆಲ್ಲರೂ ಒಂದೇ. ಚಿಕ್ಕ ವಯಸ್ಸಿನಲ್ಲೇ ಮನೆಯಿಂದ ಹೊರಗೆ ಹೋಗ ಬೇಕಾದಂತಹ ನಮ್ಮವರ ಬದುಕು ನಿಮಗಿಂತ ಬೇರೆಯೇ?’’ ಎಂದು ಮಲ್ಲಿಕಾ ಕೇಳುತ್ತಾರೆ.

‘‘ನಮ್ಮವರಿಗೆ ಮುಖ್ಯವಾಗಿ ಬೇಕಾದುದು ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ’’ ಎಂದು ತನ್ನ ಜೀವನದ ಪುಟಗಳನ್ನು ತೆರೆದಿಡುವ ಮಲ್ಲಿಕಾ ಮಧ್ಯಮವರ್ಗದಿಂದ ಬಂದವರು. ಅವರಿಗೆ ದೊರೆತ ಪ್ರೋತ್ಸಾಹ ಇತರರಿಗೂ ಸಿಗಬೇಕಾದ ಅಗತ್ಯವಿದೆ. ಏಶ್ಯದ ಅತಿದೊಡ್ಡ ಕೊಳೆಗೇರಿ ಎಂಬ ಅಭಿಶಾಪಕ್ಕೆ ತುತ್ತಾದ ಧಾರಾವಿಯ ಹೃದಯಭಾಗದಲ್ಲಿ ಒಂದು ದೇವಿಯ ಮಂದಿರವಿದೆ. ಅದರ ಅರ್ಚಕರಾಗಿರುವವರು ಓರ್ವ ಹಿಜ್ರಾ. ಅವರ ಸಹೋದರಿಯರು, ಸಹೋದರರು ಅವರ ಊರಾದ ಕನ್ನೂರಿನಲ್ಲಿ ಇದ್ದಾರೆ. ಅವರೆಲ್ಲರಿಗೂ ಮದುವೆ ಮಾಡಿ, ಇಂದೂ ಅಲ್ಲಿನ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳುವ ಭಾರ ಇವರದ್ದು. ಇಂತಹ ಹಿಜ್ರಾ ಸಮಾಜದಲ್ಲೂ ನೂರಾರು ಜನರು ಪ್ರತಿಷ್ಠೆಯ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿನ ಕೆಲವೊಂದು ಹೊಟೇಲ್ ಉದ್ಯಮ ಅಥವಾ ಇನ್ನಿತರ ಕೆಲವೊಂದು ಉದ್ಯಮಗಳಿಗೆ ಹಿಜ್ರಾರಿಂದ ಸಾಲವನ್ನು ಪಡೆದು ಉದ್ಯಮ ನಡೆಸುತ್ತಿರುವುದು ಇಲ್ಲಿ ಕೆಲವರಿಗಷ್ಟೇ ಗೊತ್ತು. ಆದರೆ ಮಲ್ಲಿಕಾ ಅಥವಾ ಇನ್ನಿತರರಂತೆ ಹಿಜ್ರಾ ಸಮುದಾಯ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಾಯ ಹಸ್ತ ನೀಡುವವರು ಬೇಕು. ಅಂತಹ ಹೃದಯವಂತ ಶ್ರೀಮಂತ ಮನಸ್ಸುಗಳಿಗೆ ಈ ಶಹರದಲ್ಲಿ ಬರವಿಲ್ಲ. ಅದರಲ್ಲೂ ಹೆಚ್ಚಾಗಿ ಕನ್ನಡಿಗರು.

ಇಲ್ಲಿ ಈಗ ಅಂತಹ ಧೀಮಂತ ವ್ಯಕ್ತಿತ್ವದ ಬಿ.ಆರ್. ಶೆಟ್ಟಿ ಮುಖ್ಯರು. ಮೂಲತಃ ಅವಿಭಜಿತ ದಕ್ಷಿಣಕನ್ನಡದ ತೋನ್ಸೆಯ ಬಡಾನಿಡಿಯೂರು ರಘುರಾಮ ಶೆಟ್ಟಿ ತಮ್ಮ ಬದುಕಿನ ನೌಕೆ ಏರಿ ಎಳವೆಯಲ್ಲಿ (1971) ಮುಂಬೈಗೆ ಆಗಮಿಸಿದವರು. ತನ್ನನ್ನು ಮುಂಬೈಗೆ ಬರಲು ಸಹಕರಿಸಿದ, ಕೆಮಿಕಲ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರ ಮಾವನ ಸಾವು ಅವರಿಗೆ ಆಘಾತವನ್ನು ತಂದಿತ್ತು. ಇಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಬ್ಯಾಂಕೊಂದರಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡ ಬಿ.ಆರ್. ಶೆಟ್ಟಿಯವರು ಈ ಮಹಾನಗರದಲ್ಲಿ ಮುಂದೆ ಸಾಧನೆಯ ಹೆಜ್ಜೆಗುರುತುಗಳನ್ನು ಭದ್ರವಾಗಿ ಊರಿದರು. ಬಿ.ಆರ್. ಶೆಟ್ಟ್ಟಿಯವರಿಗೆ ಮುಂಬೈ ಕಮಿಷನರ್ ಆಗಿದ್ದ ಜಿ. ಆರ್. ಖೈರ್ನಾರ್ ಅವರು ಆಪ್ತಮಿತ್ರರಾದರು. ಖೈರ್ನಾರ್ ಬಿ.ಆರ್. ಶೆಟ್ಟ್ಟಿಯವರಿಗೆ ಗುರುವಿನಂತೆ; ಅಣ್ಣನಂತೆ ಇದ್ದವರು. ಒಮ್ಮೆ ಖೈರ್ನಾರ್ ಬಿ.ಆರ್. ಶೆಟ್ಟಿಯವರೊಂದಿಗೆ ‘‘ಶೆಟ್ಟಿ, ಈ ಜನರ ಬದುಕು ನೋಡು. ಅವರು ನಮ್ಮ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆ ನಿಟ್ಟಿನಲ್ಲಿ ಅವರಿಗೆ ನೀನು ಏನಾದರೂ ಮಾಡು. ನಿನಗೆ ಏನಾದರೂ ಸಹಾಯ ಬೇಕಿದ್ದರೆ ನಾನಿದ್ದೇನೆ’’ ಎಂದು ಹಿಜ್ರಾ ಸಮುದಾಯದ ಕುರಿತು ಕಾಳಜಿ ವ್ಯಕ್ತಪಡಿಸಿದರು. ಖೈರ್ನಾರ್ ಈಗಾಗಲೇ ಕಾಮಾಟಿಪುರದಲ್ಲಿ ಬಲವಂತವಾಗಿ ದೂಡಲ್ಪಟ್ಟವರ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಆಗಲೇ ತನ್ನ ಬ್ಯಾಂಕ್ ನೌಕರಿಯನ್ನು ಬಿಟ್ಟು ತನ್ನದೇ ಆದ ಪಿಗ್ಮಿ ಎಜೆಂಟ್ ಸಂಸ್ಥೆಯನ್ನು ತೆರೆದು ಸಾವಿರಾರು ಬಡ ಕನ್ನಡ ಮಕ್ಕಳಿಗೆ ದಾರಿದೀಪವಾದವರು ಬಿ.ಆರ್. ಶೆಟ್ಟಿ.

ಇಂತಹ ಸದಾ ಸಮಾಜ ಸೇವೆಯ ತುಡಿತ ಹೊಂದಿರುವ ಇವರು ಖೈರ್ನಾರ್ ಹೇಳಿದಂತೆ ಹಿಜ್ರಾ ಸಮುದಾಯಕ್ಕೆ ಏನಾದರೂ ಮಾಡಬೇಕೆಂದು ಚಿಂತಿಸಿದರು. ಅದರ ಫಲ ರೂಪ ಹುಟ್ಟಿಕೊಂಡದ್ದು ‘ಯೂನಿಕ್ ರಿಕವರಿ’. ಬ್ಯಾಂಕ್‌ಗಳಿಂದ ಪಡೆದ ಸಾಲದ ಬಾಕಿ ಮೊತ್ತ, ಕ್ರೆಡಿಟ್ ಕಾರ್ಡ್‌ಗಳ ಬಾಕಿ ಮೊತ್ತಗಳ ವಸೂಲಿಯಲ್ಲಿ ಹಿಜ್ರಾರನ್ನು ಬಿ.ಆರ್. ಶೆಟ್ಟಿ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡರು. ಸಾಲ ವಸೂಲಿಗೆ ಕಂಪೆನಿ ಪರವಾಗಿ ಹೋಗುವ ಇವರಿಗೆ ಕಂಪೆನಿಯ ಗುರುತು ಚೀಟಿ ಇರುತ್ತಿತ್ತು. ಸಾಲ ವಸೂಲಿ ಮಾಡುವ ಈ ಕಾಯಕಕ್ಕೆ ಬಿ. ಆರ್. ಶೆಟ್ಟಿಯವರ ಕಂಪೆನಿಯಲ್ಲಿ ಸುಮಾರು ಹದಿನೈದು ಮಂದಿ ಹಿಜ್ರಾ ಸೇರಿಕೊಂಡರು. ಅಲ್ಲಿ ಅವರಿಗೆ ಒಂದು ಶಿಸ್ತಿನ, ಮರ್ಯಾದೆಯ ಬದುಕು ಅಂದರೇನು ಎಂಬುದು ಅರಿವಾಯಿತು. ಮಲ್ಲಿಕಾ ಬಿ. ಆರ್. ಶೆಟ್ಟರ ಸಂಪರ್ಕಕ್ಕೆ ಬರುವಾಗ ಸುಮಾರು ಹದಿನೆಂಟು ವರ್ಷ ವಯಸ್ಸು. ‘‘ನಮಗೂ ಜೀ ಎಂದು ಸಂಬೋಧನೆಯಿಂದ ಕರೆಯುವ, ಗೌರವಿಸುವ ಪರಿಪಾಠ ಬಿ.ಆರ್. ಶೆಟ್ಟಿ ಸಾಬ್ ಅವರಿಂದ ಪ್ರಥಮವಾಗಿ ದಕ್ಕಿತು’’ ಎಂದು ಕೃತಜ್ಞತೆಯಿಂದ ಇಂದು ನೆನೆಯುತ್ತಾರೆ ಮಲ್ಲಿಕಾ.

 ಮಧ್ಯಾಹ್ನದ ಊಟ, ತಿಂಡಿ, ಇತರ ಖರ್ಚಿನ ಜೊತೆಗೆ 150 ರೂ.ನಂತೆ ದಿನಸಂಬಳ ಇವರಿಗೆ ಸಿಗುತ್ತಿತ್ತು. ಆಗ ಇವರಿಂದ ಅತ್ಯುತ್ತಮ ರೀತಿಯಲ್ಲಿ ಬ್ಯಾಂಕುಗಳ ಸಾಲವೂ ಮರುಪಾವತಿ ಆಗುತ್ತಿತ್ತು. ಬಿ.ಆರ್. ಶೆಟ್ಟಿಯವರ ಈ ಪ್ರಯೋಗ, ಅದರ ಯಶಸ್ಸನ್ನು ಕಂಡು ಇತರ ಬ್ಯಾಂಕುಗಳೂ ‘‘ನಮಗೂ ನಿಮ್ಮ ಸೇವೆಯ ಅಗತ್ಯವಿದೆ’’ ಎಂದು ಮುಂದೆ ಬಂದವು. ಸಿಂಡಿಕೇಟ್‌ನಂತಹ ರಾಷ್ಟ್ರೀಕೃತ ಬ್ಯಾಂಕ್‌ಗಳೂ ಇವರ ಸೇವೆಯ ಲಾಭ ಪಡೆದವು. ಅಂತಹ ಸುಮಾರು ಹತ್ತು ಬ್ಯಾಂಕುಗಳ ಅಧಿಕೃತ ಸಾಲ ವಸೂಲಿಯ ಏಜೆಂಟ್ ಆಗಿ ‘ಯೂನಿಕ್ ರಿಕವರಿ’ ನೇಮಕಗೊಂಡಿತು. ಪ್ರಾರಂಭದಲ್ಲಿ ‘ಯೂನಿಕ್ ರಿಕವರಿ’ಯು ‘‘ನೀವು ಸಾಲ ತೆಗೆದುಕೊಂಡಿರುವ ಕ್ರೆಡಿಟ್ ಕಾರ್ಡ್‌ನ ಬಾಕಿ ಮೊತ್ತವನ್ನು ವಸೂಲಿ ಮಾಡಲು ನಮ್ಮನ್ನು ಏಜೆಂಟರನ್ನಾಗಿ ಬ್ಯಾಂಕು ನೇಮಿಸಿದೆ. ತಾವು ಒಂದು ವಾರದೊಳಗೆ ಹಣ ಪಾವತಿಸಬೇಕು.’’ ಎಂದು ನೋಟಿಸ್ ಒಂದನ್ನು ಕಳಿಸುತ್ತದೆ. ಆ ದಿನದಂದು ಶೆಟ್ಟರ ಆಫೀಸ್‌ನಿಂದ ಓರ್ವ ಸಾಲ ಮರುಪಾವತಿ ಪಡೆಯಲೆಂದು ಹೋಗುತ್ತಾನೆ. ಅಂದು ಸಮರ್ಪಕ ರೀತಿಯಲ್ಲಿ ಉತ್ತರ ಸಿಗದಿದ್ದರೆ ಮುಂದಿನ ಪ್ರಯೋಗ ‘ಯೂನಿಕ್ ರಿಕವರಿ’ಯ ಹಿಜ್ರಾರದ್ದು. ಈ ರೀತಿ ಶಿಸ್ತುಬದ್ಧವಾಗಿ ನಡೆಯುತ್ತಿದ್ದ ಈ ಕೆಲಸ ಅತಿಶೀಘ್ರವೇ ದೇಶವಿದೇಶಗಳಿಗೆ ಸುದ್ದಿಯ ವಸ್ತುವಾಯಿತು. ಬಿಬಿಸಿಯಲ್ಲಿ ಪ್ರಥಮವಾಗಿ ಈ ಸುದ್ದಿ ಪ್ರಕಟ ಪ್ರಚಾರಗೊಂಡು ಶ್ಲಾಘನೆಗೆ ಪಾತ್ರವಾಯಿತು. ಆದರೆ 1998ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆ ಬದುಕಿದ್ದು ಕೇವಲ ಮೂರು ವರ್ಷ ಮಾತ್ರ. ಉತ್ತಮ ಕಾರ್ಯಕ್ಕೆ ಅಡ್ಡಗಾಲು ಇದ್ದೇ ಇರುತ್ತದೆ. ‘‘ಸಾಲ ಪಡೆದವರಲ್ಲಿ ಎಲ್ಲಾ ರೀತಿಯ ಜನರೂ ಇರುತ್ತಾರೆ. ಅಂತಹವರಲ್ಲಿ ಕೆಲವರು ಬ್ಯಾಂಕಿಗೆ ಹಣ ಕಟ್ಟುವ ಬದಲು ಅಲ್ಲಿ ಇಲ್ಲಿ ಹಣ ಕೊಟ್ಟು ಪೊಲೀಸರನ್ನು ನಮ್ಮ ವಿರುದ್ಧ ಎತ್ತಿ ಕಟ್ಟುತ್ತಾರೆ’’ ಎಂದು ಹೇಳುವ ಬಿ.ಆರ್. ಶೆಟ್ಟಿ ರೋಸಿ ಹೋಗಿ ಕೊನೆಗೆ ಈ ಸಂಸ್ಥೆಯನ್ನು ಮುಚ್ಚಿಬಿಟ್ಟರು.

ಮೇಲೆ ಉಲ್ಲೇಖಿಸಿದ ಮಲ್ಲಿಕಾರಿಗೆ ಕಲಿಯಬೇಕೆಂಬ ತುಡಿತವಿತ್ತು. ಬಿ.ಆರ್. ಶೆಟ್ಟಿ ಅವರ ಬಳಿ ತನ್ನ ಆರ್ಥಿಕ ಸಮಸ್ಯೆಯನ್ನು ಹೇಳಿಕೊಂಡರು. ಬಿ.ಆರ್. ಶೆಟ್ಟಿಯವರು ತನಗೆ ಪರಿಚಯದ ಉದಾರದಾನಿ ಹೊಟೇಲ್ ಮಾಲಕರ ಬಳಿ, ಕನ್ನಡಿಗ ಉದ್ಯಮಿಗಳ ಬಳಿಯಿಂದ ಸಹಾಯ ಪಡೆದು ಆಕೆಯ ವಿದ್ಯಾಭ್ಯಾಸಕ್ಕೆ ನೆರವು ನೀಡಿದರು. ಮುಂದೆ ನಡೆದದ್ದು ಇತಿಹಾಸ. ಮಲ್ಲಿಕಾ ಡಾಕ್ಟರೇಟ್ ಪಡೆದು ಇತಿಹಾಸ ನಿರ್ಮಿಸುತ್ತಾರೆ. ಅವರನ್ನು ಮಾತನಾಡಿಸಿದರೆ ಅವರಿಗೆ ‘ಸಮಾಜ ಕಲಿಸಿದ ವಿದ್ಯೆ’ಯ ಅರಿವೂ ನಮಗಾಗುತ್ತದೆ.

 ಜನಕಲ್ಯಾಣ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು ಹತ್ತು ವರ್ಷ ಉದ್ಯೋಗದಲ್ಲಿದ್ದ ಬಿ.ಆರ್. ಶೆಟ್ಟಿ ಮುಂದೆ ಅದೇ ಬ್ಯಾಂಕ್ ಅಲ್ಲದೆ ಭಂಡಾರಿ ಕೋ-ಅಪರೇಟಿವ್ ಬ್ಯಾಂಕ್, ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಸರ್ವೋದಯ ಕೋ-ಆಪರೇಟಿವ್ ಬ್ಯಾಂಕ್, ರಾಮೇಶ್ವರ ಕೋ-ಆಪರೇಟಿವ್ ಬ್ಯಾಂಕ್, ಸ್ವಸ್ತಿಕ್ ಜನತಾ ಸಹಕಾರಿ ಬ್ಯಾಂಕ್ ಹೀಗೆ ಸುಮಾರು ಹದಿನೆಂಟು ಬ್ಯಾಂಕ್‌ಗಳ ಪಿಗ್ಮಿ ಏಜೆಂಟರಾಗಿ ಸುಮಾರು 850 ತುಳು-ಕನ್ನಡಿಗರಿಗೆ ಹಾಗೂ ಇತರರಿಗೂ ಉದ್ಯೋಗ ನೀಡಿದ್ದಾರೆ. ಇವರಲ್ಲಿ ಹಲವಾರು ಸ್ವಾವಲಂಬಿಗಳಾಗಿ ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಪಿಗ್ಮಿ ಮರಾಠಿಗರಿಗೆ ಹೊಸ ಕಲ್ಪನೆ. ಪಿಗ್ಮಿಯನ್ನು ಮರಾಠಿಗರ ಹಾಗೂ ಇತರರ ಬ್ಯಾಂಕುಗಳಿಗೆ ವಿಸ್ತರಿಸಿದ ಕೀರ್ತಿ ಬಿ.ಆರ್. ಶೆಟ್ಟಿ ಅವರದ್ದು. ಹಲವಾರು ಬ್ಯಾಂಕುಗಳ ನಿರ್ದೇಶಕರಾಗಿ, ಸಲಹೆಗಾರರಾಗಿ ದುಡಿದ ಇವರ ಸಹಾಯವನ್ನು ಇಂದೂ ಕೆಲವೊಂದು ಸಂಸ್ಥೆಗಳು ಪಡೆಯುತ್ತಿವೆ. ‘ಯೂನಿಕ್ ರಿಕವರಿ’ ಮೂಲಕ ಹಿಜ್ರಾ ಜನಾಂಗಕ್ಕೆ ಹೊಸ ದಿಕ್ಕುದೆಸೆಯ ಜೊತೆಗೆ ಸ್ವಾವಲಂಬನೆಯ ಬದುಕು ಎಂದರೇನು ಎಂದು ತಿಳಿ ಹೇಳಿದವರು ಬಿ. ಆರ್. ಶೆಟ್ಟಿ. ‘‘ಅವರ ಸಮುದಾಯದಲ್ಲಿ ಸಾವಿರಾರು ಕನ್ನಡಿಗರಿದ್ದಾರೆ’’ ಎಂದು ಹೇಳುವ ಶೆಟ್ಟರು, ‘‘ಅವರಲ್ಲಿ ಹೆಚ್ಚಿನವರು ಕಲಬುರಗಿ ಹಾಗೂ ಆಂಧ್ರದ ಗಡಿಭಾಗದ ಜನ’’ ಎಂದು ನಮಗೆ ಮಾಹಿತಿ ಒದಗಿಸುತ್ತಾರೆ.

ಈ ಮಹಾನಗರದಲ್ಲಿ ಮಲಾಡ್-ಮಾಲ್ವಾಣಿ, ವಿಕ್ರೋಲಿ ಪಾರ್ಕ್ ಸೈಡ್, ಆ್ಯಂಟಪ್ ಹಿಲ್-ದಾದರ್ ಹತ್ತಿರ, ಘಾಟ್ಕೋಪರ್, ಭಾಂಡೂಪ್-ಮುಲುಂಡ್‌ಗಳಲ್ಲಿ ಹಿಜ್ರಾ ಸಮುದಾಯದವರ ಸಂಖ್ಯೆ ಅಪಾರವಾಗಿದೆ. ಗುರು ಶಿಷ್ಯರಾಗಿ ತಮ್ಮಷ್ಟಕ್ಕೆ ತಾವು ಬದುಕುತ್ತಿರುವ ಇವರೆಂದರೆ ಸರಕಾರಕ್ಕೂ ಅಷ್ಟಕ್ಕಷ್ಟೆ. ಆದರೆ 2014ರಲ್ಲಿ ಸರಕಾರ ಮತ ಪಡೆಯುವ ಲೆಕ್ಕಾಚಾರಕ್ಕಾಗಿ ಇವರ ಕಾಟಾಚಾರದ ಎಣಿಕೆಗೆ ಮುಂದಾದಾಗ ದೊರೆತ ಇವರ ಸಂಖ್ಯೆ ಕೇವಲ 28,341!. ಆನಂತರ ಅದರ ಹಿನ್ನೆಲೆಯಲ್ಲಿ ಮಾಡಿದ ಸರ್ವೇ ಪ್ರಕಾರ ಅವರ ಸಂಖ್ಯೆ ಲಕ್ಷೋಪಲಕ್ಷಗಳನ್ನೂ ಮೀರಿದೆ ಎಂದರಿತ ಸರಕಾರ ಅವರಿಗೆ ಮತದ ಹಕ್ಕು ಹಾಗೂ ಇನ್ನಿತರ ಕೆಲವೊಂದು ಹಕ್ಕುಗಳನ್ನು ನೀಡಲು ಮುಂದಾಯಿತು. ಆದರೆ ಎಂದಿನವರೆಗೆ ಜನಜಾಗೃತಿ ಮೂಡುವುದಿಲ್ಲವೋ, ಅವರೂ ನಮ್ಮಂತೆ ಎಂಬ ಭಾವನೆ ನಮ್ಮಲ್ಲಿ ಎಂದಿನವರೆಗೆ ಉಂಟಾಗುವುದಿಲ್ಲವೋ ಅಂದಿನವರೆಗೆ ನಮಗಿವರು ಪಿಡುಗಾಗಿ ಕಾಣುತ್ತಾರೆ. ಅವರ ಉದ್ಧಾರಕ್ಕಾಗಿ ಬಿ.ಆರ್. ಶೆಟ್ಟಿ ಅವರಂತಹ ಹೃದಯ ವೈಶಾಲ್ಯವಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದವರ ಅವಶ್ಯಕತೆಯಿದೆ. ನಾವು, ಅವರು ನಮ್ಮವರು ನಮ್ಮ ಹಾಗೆಯೇ ಇರುವವರು ಎಂದು ತಿಳಿದು ಅರಿತು ಅವರೊಂದಿಗೆ ವರ್ತಿಸುವ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)