ದಿಢೀರನೆ ರಾತ್ರಿ ಲಾಕ್ ಡೌನ್ ಘೋಷಿಸಿದ ಅಬುಧಾಬಿ
photo: business standard
ಅಬುಧಾಬಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಆತಂಕದ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ಹಠಾತ್ತನೇ ಗುರುವಾರ ತಡ ರಾತ್ರಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ದೇಶದ ಉಳಿದ ಭಾಗಗಳು ಪ್ರವಾಸೋದ್ಯಮಕ್ಕೆ ಮುಕ್ತವಾಗಿದ್ದರೂ ಕೂಡ ಅಬುಧಾಬಿ ಮಾತ್ರ ಈ ನಿರ್ಧಾರಕ್ಕೆ ಬಂದಿದೆ.
ಲಾಕ್ಡೌನ್ ಸೋಮವಾರದಿಂದ ಪ್ರಾರಂಭವಾಗಲಿದೆ ಹಾಗೂ ಪ್ರತಿದಿನ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ಲಾಕ್ ಡೌನ್ ಇರುತ್ತದೆ ಎಂದು ಸರ್ಕಾರಿ ಸ್ವಾಮ್ಯದ WAM ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೋಮವಾರದಿಂದ ಯುಎಇಯಲ್ಲಿ ಸುದೀರ್ಘ ಈದ್ ಅಲ್-ಅಧಾ ರಜಾದಿನಗಳು ಪ್ರಾರಂಭವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಬುಧಾಬಿ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಲಾಕ್ ಡೌನ್ ಘೋಷಿಸಲಾಗಿದೆ ಎನ್ನಲಾಗಿದೆ.
ಅಬುಧಾಬಿಯ ತುರ್ತು, ಬಿಕ್ಕಟ್ಟು ಹಾಗೂ ವಿಪತ್ತುಗಳ ಸಮಿತಿಯು ಲಾಕ್ಡೌನ್ ಅನ್ನು ರಾಷ್ಟ್ರೀಯ ಶುದ್ದೀಕರಣದ ಕಾರ್ಯಕ್ರಮದ ಭಾಗವೆಂದು ವಿವರಿಸಿದೆ. ಯುಎಇ, ಸಾಂಕ್ರಾಮಿಕ ರೋಗದ ಆರಂಭವಾದ 2020 ರಲ್ಲಿ ಲಾಕ್ಡೌನ್ ಸಮಯದಲ್ಲಿ ಇದೇ ಪದವನ್ನು ಬಳಸಿತ್ತು.
ಒಂದು ವರ್ಷದ ಹಿಂದೆ ದುಬೈ ಪ್ರವಾಸೋದ್ಯಮಕ್ಕಾಗಿ ಮತ್ತೆ ತೆರೆದ ನಂತರ ಅಬುಧಾಬಿ ಕಠಿಣ ನಿಲುವು ತಳೆದಿತ್ತು. ಅಬುಧಾಬಿ ಪ್ರವೇಶಿಸುವವರಿಗೆ ಆರ್ ಟಿ ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿತ್ತು. ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮದ ಹೊರತಾಗಿಯೂ ದುಬೈನಲ್ಲಿ ನಿತ್ಯ 1,500ಕ್ಕೂ ಅಧಿಕ ಕೋವಿಡ್ ಕೇಸ್ ಗಳು ದೃಢಪಡುತ್ತಿವೆ. ಆದಾಗ್ಯೂ ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಮುಕ್ತಗೊಳಿಸಲಾಗಿದೆ.