varthabharthi


ರಾಷ್ಟ್ರೀಯ

ದ್ವೇಷಭಾಷಣ ಫ್ಯಾಷನ್ ಆಗಿದೆ, ಕೋವಿಡ್‍ ಗಿಂತಲೂ ಅಪಾಯಕಾರಿ: 'ಜಾಮಿಯಾ ಶೂಟರ್‌ʼಗೆ ಜಾಮೀನು ತಿರಸ್ಕರಿಸಿದ ಕೋರ್ಟ್‌

ವಾರ್ತಾ ಭಾರತಿ : 16 Jul, 2021

Photo: Twitter

ಚಂಡಿಗಡ,ಜು.16: ಮಹತ್ವದ ಮತ್ತು ಸ್ವಾಗತಾರ್ಹ ತೀರ್ಪೊಂದರಲ್ಲಿ ಹರ್ಯಾಣದ ಗುರ್ಗಾಂವ್ ನ ನ್ಯಾಯಾಲಯವು ದ್ವೇಷ ಭಾಷಣದ ಆರೋಪದಲ್ಲಿ ಕಳೆದ ಸೋಮವಾರ ಬಂಧಿಸಲ್ಪಟ್ಟಿರುವ 19ರ ಹರೆಯದ ವ್ಯಕ್ತಿಗೆ ಜಾಮೀನು ನೀಡಲು ಶುಕ್ರವಾರ ನಿರಾಕರಿಸಿದೆ. 
ಹರ್ಯಾಣ ಬಿಜೆಪಿಯ ವಕ್ತಾರ ಮತ್ತು ಕರ್ಣಿ ಸೇನಾದ ಅಧ್ಯಕ್ಷ ಸೂರಜ್ ಪಾಲ್ ಅಮು ಉಪಸ್ಥಿತರಿದ್ದ ಸಮಾವೇಶವೊಂದರಲ್ಲಿ ಆರೋಪಿಯು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಅಪಹರಿಸುವಂತೆ ಮತ್ತು ಕೊಲ್ಲುವಂತೆ ಕರೆ ನೀಡಿದ್ದ.

ಆರೋಪಿಯು ಕಳೆದ ವರ್ಷದ ಜನವರಿಯಲ್ಲಿ ದಿಲ್ಲಿಯಾ ಜಾಮಿಯಾ ಮಿಲ್ಲಿಯಾ ವಿವಿಯ ಸಮೀಪ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ. ಆ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದ. ಆಗ ಆರೋಪಿಗೆ 17 ವರ್ಷವಾಗಿತ್ತು.
 
ಘಟನೆಯ ವೀಡಿಯೊ ವೀಕ್ಷಿಸಿದ ಬಳಿಕ ಆತ್ಮಸಾಕ್ಷಿಗೆ ತೀವ್ರ ಆಘಾತವುಂಟಾಗಿದೆ ಮತ್ತು ಅವಕಾಶ ದೊರೆತರೆ ತಮ್ಮ ಧಾರ್ಮಿಕ ದ್ವೇಷಕ್ಕಾಗಿ ಅಮಾಯಕರನ್ನು ಕೊಲ್ಲಲು ಸಾಮೂಹಿಕ ನರಮೇಧವನ್ನು ಸಂಘಟಿಸಬಲ್ಲ ಇಂತಹ ವ್ಯಕ್ತಿಗಳನ್ನು ಭಾರತೀಯ ಸಮಾಜವು ಹತ್ತಿಕ್ಕುವುದು ಅಗತ್ಯವಾಗಿದೆ. ನ್ಯಾಯಾಲಯದ ಮುಂದೆ ನಿಂತಿರುವ ಆರೋಪಿಯು ಏನೂ ಗೊತ್ತಿಲ್ಲದ ಸಾದಾ,ಅಮಾಯಕ ಯುವಕನಲ್ಲ. ಆತ ಏನು ಮಾಡಬಲ್ಲ ಎನ್ನುವುದನ್ನು ಆತನ ಹಿಂದಿನ ಕೃತ್ಯಗಳು ತೋರಿಸಿವೆ. ಈಗ ಆತ ತನ್ನ ದ್ವೇಷವನ್ನು ಯಾವುದೇ ಭೀತಿಯಿಲ್ಲದೆ ಕೃತಿಗಿಳಿಸಲು ಮತ್ತು ತನ್ನ ದ್ವೇಷದಲ್ಲಿ ಜನರನ್ನು ಸೇರಿಸಿಕೊಳ್ಳಲು ಸಮರ್ಥನಾಗಿದ್ದಾನೆ ಎಂದು ನ್ಯಾಯಾಲಯವು ಹೇಳಿತು.
 
ವಾಕ್ ಸ್ವಾತಂತ್ರವು ಯಾವುದೇ ಪ್ರಜಾಸತ್ತಾತ್ಮಕ ದೇಶದ ಅವಿಭಾಜ್ಯ ಅಂಗವಾಗಿದೆ,ಆದರೆ ಈ ಸ್ವಾತಂತ್ರಕ್ಕೆ ಸಕಾರಣವಾದ ನಿರ್ಬಂಧಗಳೂ ಇವೆ. ತನಗೆ ವಾಕ್ ಸ್ವಾತಂತ್ರವಿದೆ ಮತ್ತು ನಿರ್ದಿಷ್ಟ ಗುಂಪು ಅಥವಾ ಧಾರ್ಮಿಕ ಸಮುದಾಯದ ವಿರುದ್ಧ ದ್ವೇಷ ಕಾರಬಹುದು ಎಂದು ಯಾರೇ ಆದರೂ ಪ್ರಚೋದನಾತ್ಮಕ ಮಾತುಗಳನ್ನಾಡಲು ಅವಕಾಶವಿಲ್ಲ ಎಂದು ಹೇಳಿದ ನ್ಯಾಯಾಲಯವು,ಪೊಲೀಸರು ಮತ್ತು ರಾಜ್ಯ ಸರಕಾರಕ್ಕೆ ಅವುಗಳ ಸಂವಿಧಾನಾತ್ಮಕ ಕರ್ತವ್ಯಗಳನ್ನೂ ನೆನಪಿಸಿತು. ಭಾರತದ ಪ್ರಜೆಗಳು,ಅವರು ಯಾವುದೇ ಧರ್ಮ,ಪಂಥ ಅಥವಾ ಜಾತಿಗಳಿಗೆ ಸೇರಿರಲಿ,ತಾವು ಅಸುರಕ್ಷಿತರು ಎಂಬ ಭಾವನೆ ಅವರಲ್ಲಿ ಮೂಡದಂತೆ ಮತ್ತು ಇಂತಹ ದ್ವೇಷದ ವ್ಯಾಪಾರಿಗಳು ಯಾವುದೇ ಹೆದರಿಕೆಯಿಲ್ಲದೆ ಪಾರಾಗದಂತೆ ನೋಡಿಕೊಳ್ಳಬೇಕು ಎಂದು ಅದು ಹೇಳಿತು.

ನಿರ್ದಿಷ್ಟ ಧಾರ್ಮಿಕ ಸಮುದಾಯದ ಹೆಣ್ಣುಮಕ್ಕಳನ್ನು ಅಪಹರಿಸುವಂತೆ ಮತ್ತು ಕೊಲ್ಲುವಂತೆ ಪ್ರಚೋದಿಸಿರುವ ಆರೋಪಿಯ ದ್ವೇಷ ಭಾಷಣವೇ ಹಿಂಸೆಯ ಒಂದು ರೂಪವಾಗಿದೆ. ಇಂತಹ ವ್ಯಕ್ತಿಗಳು ಮತ್ತು ಪ್ರಚೋದನಾಕಾರಿ ಭಾಷಣಗಳು ಪ್ರಜಾಪ್ರಭುತ್ವದ ಬೆಳವಣಿಗೆಗೆ ಅಡಚಣೆಗಳಾಗಿವೆ ಎಂದು ನ್ಯಾಯಾಲಯವು ಒತ್ತಿ ಹೇಳಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)