ಭೂಮಿಗೆ ಉಂಗುರಗಳಿದ್ದರೆ...?
ನಮ್ಮ ಸೌರವ್ಯೆಹದಲ್ಲಿರುವ ಪ್ರತಿಯೊಂದು ಗ್ರಹವು ವಿಶೇಷತೆಗಳಿಂದ ಕೂಡಿದೆ. ಬುಧನ ಕುಬ್ಜತೆ, ಮಂಗಳನ ಕೆಂಪು, ಗುರು ಗ್ರಹದ ದೈತ್ಯತೆ, ಭೂಮಿಯ ಜೀವವೈವಿಧ್ಯತೆ, ಶುಕ್ರನ ಹೊಳಪು, ಶನಿಯ ಉಂಗುರ, ಯುರೇನಸ್, ನೆಪ್ಚೂನ್‌ನ ಮಂಜು ಹೀಗೆ ಪ್ರತಿಯೊಂದು ಗ್ರಹವೂ ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿವೆ. ನಮ್ಮ ಭೂಮಿಯು ಎಲ್ಲಾ ಗ್ರಹಗಳಿಗಿಂತ ವಿಭಿನ್ನವಾದುದು. ಏಕೆಂದರೆ ಸದ್ಯಕ್ಕೆ ನಮ್ಮ ಸೌರವ್ಯೆಹದಲ್ಲಿ ಜೀವಿಗಳಿರುವ ಏಕೈಕ ಗ್ರಹವೆಂದರೆ ಅದು ಭೂಮಿ ಮಾತ್ರ. ಬೇರೆ ಗ್ರಹಗಳಿಗಿರುವ ವಿಶೇಷತೆ ನಮ್ಮ ಗ್ರಹಕ್ಕೆ ಇದ್ದಿದ್ದರೆ ಏನಾಗುತ್ತಿತ್ತು? ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಶನಿಯ ಸುಂದರ ಉಂಗುರಗಳು ಭೂಮಿಗೆ ಇದ್ದಿದ್ದರೆ ಏನಾಗುತ್ತಿತ್ತು? ಎಂಬುದು ಕುತೂಹಲಕ್ಕೆ ಕಾರಣವಾಗುತ್ತದೆ. ಹಾಗಾದರೆ ಭೂಮಿಗೆ ಉಂಗುರಗಳಿದ್ದರೆ ಏನಾಗುತ್ತಿತ್ತು? ಎಂಬ ಕಾಲ್ಪನಿಕತೆಗೆ ತಾರ್ಕಿಕವಾದವನ್ನು ಒರೆಗೆ ಹಚ್ಚೋಣ. ಅದಕ್ಕೂ ಮೊದಲು ಶನಿ ಗ್ರಹದ ಉಂಗುರಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಶನಿಯು ಭೂಮಿಯಂತೆಯೇ ಸಮಭಾಜಕದಲ್ಲಿ ಉಬ್ಬಿಕೊಂಡಿದ್ದು, ಧ್ರುವಗಳಲ್ಲಿ ಚಪ್ಪಟೆಯಾಗಿದೆ. ಉಂಗುರಗಳಿಂದಾಗಿ ಶನಿಯು ಅತ್ಯಾಕರ್ಷಕ ಗ್ರಹ ಎನಿಸಿದೆ. 1610ರಲ್ಲಿ ಗೆಲಿಲಿಯೋ ಮೊದಲ ಬಾರಿಗೆ ದೂರದರ್ಶಕದಲ್ಲಿ ಇವುಗಳನ್ನು ವೀಕ್ಷಿಸಿದ. ಅವು ಉಂಗುರಗಳೆಂದು ಕಂಡುಹಿಡಿಯಲಾರದೆ, ಶನಿಗೆ ಕಿವಿಗಳಿವೆ ಎಂದು ಹೇಳಿದ. 1655ರಲ್ಲಿ ಕ್ರಿಸ್ಟಿಯಾನ್ ಹೇಗನ್ಸ್ ಶನಿಯು ಉಂಗುರಗಳಿಂದ ಆವೃತವಾಗಿದೆ ಎಂದು ಮೊದಲ ಬಾರಿಗೆ ಹೇಳಿದ. ಈ ಉಂಗುರಗಳು ಘನರೂಪದಲ್ಲಿರದೆ ಧೂಳು ಮತ್ತು ಒಣ ಮಂಜುಗಡ್ಡೆಯಿಂದ ಕೂಡಿವೆ ಎಂದು ಪತ್ತೆ ಹಚ್ಚಲಾಯಿತು. ಈ ಉಂಗುರಗಳು ಶನಿಯ ಸಮಭಾಜಕದಿಂದ 6,620ರಿಂದ 1,20,700 ಕಿ.ಮೀ. ದೂರದವರೆಗೂ ಹರಡಿಕೊಂಡಿವೆ. ಸುಮಾರು ಒಂದು ಕಿ.ಮೀ.ನಿಂದ ಹತ್ತಾರು ಕಿ.ಮೀ. ದಪ್ಪಇರುವ ಈ ಉಂಗುರಗಳಲ್ಲಿ ಸಿಲಿಕಾ, ಕಬ್ಬಿಣದ ಆಕ್ಸೈಡ್, ಧೂಳು, ನೀರಾವಿ ಮತ್ತು ಒಣ ಮಂಜುಗಡ್ಡೆಯ ತುಣುಕುಗಳಿವೆ. ಉಂಗುರಗಳು ಶನಿಯ ಗುರುತ್ವ ಬಲದ ಆಧಾರದ ಮೇಲೆ ಬಂಧಿತವಾಗಿವೆಯೇ ಅಥವಾ ಶನಿಯ ಕಾಂತಕ್ಷೇತ್ರದ ಆಧಾರದ ಮೇಲೆ ಬಂಧಿತವಾಗಿವೆಯೇ ಎಂಬುದು ಇನ್ನೂ ನಿಖರವಾಗಿಲ್ಲ. ಉಂಗುರಗಳ ಕಾರಣದಿಂದ ಶನಿಯ ಪ್ರಕಾಶತೆಯಲ್ಲಿ ವೈವಿಧ್ಯತೆಗಳು ಉಂಟಾಗುತ್ತವೆ.
ಶನಿ ಮತ್ತು ಅದರ ಉಂಗುರಗಳ ಕುರಿತು ಅಧ್ಯಯನ ಮಾಡಲು 1979ರಲ್ಲಿ ಪಯೋನಿಯರ್-11, 1980ರಲ್ಲಿ ವಾಯೇಜರ್-1, 1981ರಲ್ಲಿ ವಾಯೇಜರ್-2, 2004ರಲ್ಲಿ ಕ್ಯಾಸಿನಿ ಹೇಗನ್ಸ್ ಉಪಗ್ರಹಗಳನ್ನು ಕಳಿಸಲಾಗಿದೆ. ಇವೆಲ್ಲವೂ ಶನಿಯ ವಿಭಿನ್ನ ಸ್ಥಳಗಳ ಅನ್ವೇಷಣೆಯಲ್ಲಿ ತೊಡಗಿವೆ ಮತ್ತು ಸಾಕಷ್ಟು ವೈವಿಧ್ಯಮಯ ಮಾಹಿತಿಯನ್ನು ಭೂಮಿಗೆ ಕಳಿಸಿವೆ. ಶನಿಯಂತೆ ಗುರು, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳೂ ಸಹ ಉಂಗುರಗಳನ್ನು ಹೊಂದಿವೆ. ಆದರೆ ಅವುಗಳ ಗಾತ್ರ, ಸಾಂದ್ರತೆ ಮತ್ತು ವಿಸ್ತಾರ ಶನಿ ಗ್ರಹಕ್ಕಿಂತ ಕಡಿಮೆ ಇವೆ. ಭೂಮಿಗೆ ಇಂತಹ ಉಂಗುರ ವ್ಯವಸ್ಥೆ ಇಲ್ಲ. ಒಂದು ವೇಳೆ ಭೂಮಿಗೆ ಉಂಗುರಗಳಿದ್ದರೆ ಏನಾಗುತ್ತಿತ್ತು? ಎಂಬ ಮುಖ್ಯ ಚರ್ಚೆಗೆ ಬರೋಣ. ಭೂಮಿಗೆ ಉಂಗುರಗಳಿದ್ದರೆ, ನೋಡಲು ಅತ್ಯಾಕರ್ಷಕವಾಗಿರುತ್ತಿತ್ತು. ಉಂಗುರಗಳು ಹಗಲು ಮತ್ತು ರಾತ್ರಿಗಳಲ್ಲಿ ಭೂಮಿಗೆ ವೈವಿಧ್ಯಮಯ ನೋಟವನ್ನು ನೀಡುತ್ತಿದ್ದವು. ಉಂಗುರಗಳ ನೆರಳು ಬೆಳಕಿನಾಟಕ್ಕೆ ವಸುಂಧರೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದ್ದಳು ಎಂದು ಊಹಿಸಬಹುದು.
ಭೂಮಿಗೆ ಉಂಗುರ ವ್ಯವಸ್ಥೆ ಇದ್ದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಗಮನಿಸಬಹುದು. ಏಕೆಂದರೆ ನಮ್ಮ ಭೂಮಿಯು ಶನಿಗಿಂತ ಸೂರ್ಯನಿಗೆ ಸಮೀಪದಲ್ಲಿದೆ. ಸೂರ್ಯನ ಶಾಖದಿಂದ ಉಂಗುರಗಳ ಒಣ ಮಂಜುಗಡ್ಡೆ ಮತ್ತು ನೀರಾವಿ ರೂಪಾಂತರಗೊಳ್ಳುತ್ತಿತ್ತು ಮತ್ತು ಉಂಗುರ ವ್ಯವಸ್ಥೆಗೆ ಕಾರಣವಾದ ಎಲ್ಲಾ ಅಂಶಗಳು ನಾಶವಾಗುತ್ತಿದ್ದವು. ಭೂಮಿಗೆ ಉಂಗುರಗಳಿದ್ದರೆ ಭೂಮಿಯ ಮೇಲಿನ ಕೆಲವು ಜೀವಿಗಳಿಗೆ ತೊಂದರೆಯಾಗುತ್ತಿತ್ತು. ಉಂಗುರಗಳು ಒಣ ಮಂಜುಗಡ್ಡೆಯ ರೂಪದಲ್ಲಿರುವುದರಿಂದ ರಾತ್ರಿ ವೇಳೆಯಲ್ಲಿಯೂ ಭೂ ಗ್ರಹದ ಮೇಲೆ ಬೆಳಕನ್ನು ಪ್ರತಿಫಲಿಸುತ್ತಿದ್ದವು. ಈ ಬೆಳಕು ಚಂದ್ರನ ಬೆಳಕಿಗಿಂತ ಹೆಚ್ಚು ಪ್ರಖರವಾಗಿರುತ್ತಿತ್ತು. ಚಂದ್ರನ ಮೇಲ್ಮೈ ಬಂಡೆಗಳಿಂದ ಆವೃತ್ತವಾಗಿದ್ದು, ಸೂರ್ಯನ ಬೆಳಕಿನ ಶೇಕಡಾ 12ರಷ್ಟನ್ನು ಮಾತ್ರ ಪ್ರತಿಫಲಿಸುತ್ತಿದೆ. ಉಂಗುರಗಳು ಮಂಜುಗಡ್ಡೆಯಿಂದ ಆವೃತ್ತವಾಗಿದ್ದು ಪ್ರತಿಫಲಿಸುವ ಬೆಳಕು ಚಂದ್ರನಿಗಿಂತ ಹೆಚ್ಚಾಗಿರುತ್ತಿತ್ತು. ಇದು ಒಂದು ರೀತಿಯಲ್ಲಿ ಭೂ ಗ್ರಹದ ಪ್ರಕಾಶಮಾನತೆಗೆ ಕಾರಣವಾದರೆ ಇನ್ನೊಂದು ರೀತಿಯಲ್ಲಿ ಕತ್ತಲೆಯಲ್ಲಿ ಜೀವನ ನಿರ್ವಹಿಸುವ ನಿಶಾಚರಿ ಜೀವಿಗಳಿಗೆ ಮಾರಕವಾಗುತ್ತಿತ್ತು.
ಭೂಮಿಗೆ ಉಂಗುರಗಳಿದ್ದರೆ ತಾಪಮಾನದಲ್ಲಿ ಬದಲಾವಣೆಗಳಾಗುತ್ತಿದ್ದವು. ಭೂಮಿಯ ಉತ್ತರ ಧ್ರುವ ಅಧಿಕ ಶಾಖದಿಂದ ಕೂಡಿರುತ್ತಿತ್ತು ಮತ್ತು ಅದೇ ವೇಳೆ ದಕ್ಷಿಣ ಧ್ರುವ ಅತೀ ತಂಪಿನಿಂದ ಕೂಡಿರುತ್ತಿತ್ತು. ಸಾಗರಗಳಲ್ಲಿ ಹಿಮದ ಪ್ರಮಾಣ ಹೆಚ್ಚುತ್ತಿತ್ತು. ಉಂಗುರದ ನೆರಳಿನಿಂದ ಭೂಮಿಯ ದಕ್ಷಿಣದ ಭಾಗಗಳಿಗೆ ಬಿಸಿಲು ಬೀಳುತ್ತಿರಲಿಲ್ಲ. ಜೀವಿಗಳ ದೈನಂದಿನ ಜೀವನದಲ್ಲಿ ಉಷ್ಣತೆಯ ಪ್ರಮಾಣ ಕಡಿಮೆಯಾಗುತ್ತಿತ್ತು. ಇದರಿಂದ ಸಸ್ಯಗಳ ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ವ್ಯತ್ಯಯವಾಗುತ್ತಿತ್ತು. ಆಗ ಜೀವಿಗಳಿಗೆ ಅಗತ್ಯವಾದ ಆಹಾರ ಮತ್ತು ಆಮ್ಲಜನಕದ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗುತ್ತಿತ್ತು. ಆಹಾರ, ಆರೋಗ್ಯ ಮತ್ತು ಸಂತಾನೋತ್ಪತ್ತಿಗಾಗಿ ಮಾನವ ಸೇರಿದಂತೆ ಇತರ ಪ್ರಾಣಿಗಳೂ ಸಹ ಅಗತ್ಯ ವಾತಾವರಣದ ಕಡೆಗೆ ವಲಸೆ ಹೋಗಬೇಕಾಗುತ್ತಿತ್ತು. ಇದರಿಂದ ಸಸ್ಯ ಹಾಗೂ ಜೀವ ಸಂಕುಲಕ್ಕೆ ತೊಂದರೆಯಾಗುತ್ತಿತ್ತು. ಒಟ್ಟಾರೆ ಭೂಮಿಯ ಮೇಲಿನ ಹವಾಮಾನ ಮಾದರಿಗಳು ಬದಲಿಯಾಗುತ್ತಿದ್ದವು. ಭೂಮಿಯ ತಾಪಮಾನವು ಉಂಗುರಗಳ ದಪ್ಪವನ್ನು ಅವಲಂಬಿಸಿರುತ್ತಿತ್ತು. ಭೂಮಿಗೆ ಉಂಗುರಗಳಿದ್ದರೆ ವಿಮಾನ ಹಾರಾಟಕ್ಕೆ ತೊಂದರೆಯಾಗುತ್ತಿತ್ತು. ಅಥವಾ ವಿಮಾನ ಹಾರಾಟದಿಂದ ಉಂಗುರಗಳಿಗೆ ಹಾನಿಯಾಗುತ್ತಿತ್ತು.
ಭೂಮಿಗೆ ಉಂಗುರಗಳಿದ್ದರೆ ಕೃತಕ ಉಪಗ್ರಹಗಳು ಕಾರ್ಯ ನಿಖರವಾಗಿ ಕೆಲಸ ಮಾಡುತ್ತಿರಲಿಲ್ಲ. ಅಲ್ಲದೆ ಕೃತಕ ಉಪಗ್ರಹಗಳನ್ನು ಹಾರಿಸುವಾಗಲೂ ಕೆಲವು ತೊಂದರೆಗಳು ಎದುರಾಗುತ್ತಿದ್ದವು. ಉಂಗುರಗಳಿದ್ದರೆ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾಗುತ್ತಿತ್ತು. ಈಗ ಭೂಮಿಯನ್ನು ಸುತ್ತುವ ಭೂಸ್ಥಾಯಿ ಕೃತಕ ಉಪಗ್ರಹಗಳ ಕಾರ್ಯ ನಿರ್ವಹಣೆಯಲ್ಲಿಯೂ ಬದಲಾವಣೆಗಳಾಗುತ್ತಿದ್ದವು. ಭೂಮಿಗೆ ಉಂಗುರಗಳಿದ್ದರೆ ಉತ್ತರ ಮತ್ತು ದಕ್ಷಿಣ ಧ್ರುವಗಳ ನಡುವೆ ರೇಡಿಯೊ ಸಂಕೇತಗಳ ಸರಬರಾಜು ವ್ಯತ್ಯಯವಾಗುತ್ತಿತ್ತು. ಏಕೆಂದರೆ ಸಮಭಾಜಕ ಕಕ್ಷೆಯಲ್ಲಿ ಹರಡಿಕೊಂಡಿರುವ ಉಂಗುರ ವ್ಯವಸ್ಥೆಯನ್ನು ದಾಟಿ ರೇಡಿಯೊ ಸಂಕೇತಗಳು ವಿನಿಮಯ ಆಗಬೇಕಾದರೆ ಸ್ವಲ್ಪ ತೊಂದರೆಯಾಗುತ್ತಿತ್ತು. ಅಲ್ಲದೇ ಉಂಗುರಗಳು ಭೂಕಾಂತ ಕ್ಷೇತ್ರದ ಮೇಲೂ ಪ್ರಭಾವ ಬೀರುತ್ತಿದ್ದವು. ಇದರಿಂದ ಪರಸ್ಪರ ಧ್ರುವಗಳ ಸಂಪರ್ಕ ವ್ಯವಸ್ಥೆಯಲ್ಲಿ ತೊಂದರೆಗಳಾಗುತ್ತಿದ್ದವು. ಆಗ ಸಂಪರ್ಕ ಮತ್ತು ಸಂವಹನಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಅವಲಂಬಿಸಬೇಕಾಗುತ್ತಿತ್ತು. ಭೂಮಿಗೆ ಉಂಗುರಗಳಿದ್ದರೆ ಖಗೋಳ ಅಧ್ಯಯನಕ್ಕೆ ಅಡ್ಡಿಯಾಗುತ್ತಿತ್ತು.
ರಾತ್ರಿ ಆಕಾಶ ವೀಕ್ಷಣೆಗೆ ಉಂಗುರಗಳು ಹಾಗೂ ಅವುಗಳ ನೆರಳು ಅಡ್ಡಿಯಾಗುತ್ತಿತ್ತು. ಜೊತೆಗೆ ಆಗಸದಲ್ಲಿ ನಡೆಯುವ ಕೆಲ ವಿದ್ಯಮಾನಗಳನ್ನು ನಿಖರವಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಭೂಮಿಗೆ ಉಂಗುರಗಳಿದ್ದರೆ ಅವು ಕಾಲಸೂಚಕ ಹಾಗೂ ಮಾರ್ಗ ಸೂಚಕಗಳಾಗಿರುತ್ತಿದ್ದವು. ಪ್ರಯಾಣ, ಪರಿಶೋಧನೆಗೆ ಹೆಗ್ಗುರುತಾಗಿರುತ್ತಿದ್ದವು. ಕಾಲ ನಿರ್ಧಾರ ಮತ್ತು ಹವಾಮಾನ ಸೂಚಕಗಳಾಗುತ್ತಿದ್ದವು. ಸಮುದ್ರ ಪ್ರಯಾಣಕ್ಕೆ ದಿಕ್ಸೂಚಿ, ಅಕ್ಷಾಂಶ ಮತ್ತು ರೇಖಾಂಶಗಳು ಮಾರ್ಗ ಸೂಚಕಗಳಾದಂತೆ ಉಂಗುರಗಳು ಮಾರ್ಗ ಸೂಚಕಗಳಾಗುತ್ತಿದ್ದವು. ಅಲ್ಲದೆ ಉಂಗುರಗಳು ಪ್ರತಿಫಲಿಸುವ ಬೆಳಕಿನ ಆಧಾರದ ಮೇಲೆ ಕಾಲ ನಿರ್ಧರಿಸುವ ಸಂಪ್ರದಾಯ ಬೆಳೆಯುತ್ತಿತ್ತು. ಭೂಮಿಗೆ ಉಂಗುರಗಳಿದ್ದರೆ ಅವು ಭೂಮಿಗೆ ಮುಳ್ಳು ಬೇಲಿಗಳಾಗುತ್ತಿದ್ದವು. ಬಾಹ್ಯಾಕಾಶ ಸಂಶೋಧನೆ ಮತ್ತು ಇನ್ನಿತರ ಗ್ರಹಗಳತ್ತ ನಮ್ಮ ಪಯಣ ತೊಂದರೆಯಾಗುತ್ತಿತ್ತು. ಉಂಗುರ ವ್ಯವಸ್ಥೆಯನ್ನು ಸೀಳಿಕೊಂಡು ಹೋಗುವಂತಹ ಕೃತಕ ಉಪಗ್ರಹ ವಾಹಕಗಳನ್ನು ಸೃಷ್ಟಿಸಬೇಕಾಗುತ್ತಿತ್ತು. ಭೂಮಿಗೆ ಉಂಗುರಗಳಿದ್ದರೆ ಚಂದ್ರನ ಸ್ಥಾನ ಮತ್ತು ಅಂತರದಲ್ಲಿ ವ್ಯತ್ಯಾಸಗಳಾಗುತ್ತಿದ್ದವು. ಭೂಮಿ ಮತ್ತು ಚಂದ್ರರ ನಡುವಿನ ಗುರುತ್ವ ಬಲದಲ್ಲಿ ವ್ಯತ್ಯಾಸಗಳಾಗಿ ಗ್ರಹಣಗಳಲ್ಲಿ ಬದಲಾವಣೆಗಳಾಗುತ್ತಿದ್ದವು. ಅಲ್ಲದೆ ಸಾಗರಗಳ ಉಬ್ಬರವಿಳಿತಕ್ಕೆ ಉಂಗುರಗಳ ನೆರಳು ಅಡ್ಡಿಯಾಗಿ, ಉಬ್ಬರವಿಳಿತದ ಮೇಲೂ ಪ್ರಭಾವ ಬೀರುತ್ತಿದ್ದವು. ಅಲ್ಲದೆ ಉಂಗುರಗಳಿಂದ ಅನೇಕ ಪೌರಾಣಿಕ ದಂತ ಕತೆಗಳು ರೂಪುಗೊಳ್ಳುತ್ತಿದ್ದವು. ರಾಹು ಕೇತುಗಳು ಕಾಲ್ಪನಿಕ ಗ್ರಹಗಳಾಗಿರುವಂತೆ ಉಂಗುರಗಳೂ ಸಹ ಕಾಲ್ಪನಿಕತೆಯ ಬಣ್ಣ ಪಡೆಯುತ್ತಿದ್ದವು. ದೇಶದ ಆಗು ಹೋಗುಗಳನ್ನು ನಿರ್ಧರಿಸುವ ಸೂಚಕಗಳಾಗುತ್ತಿದ್ದವು. ಭೂಮಿಯ ಕಾಲ್ಪನಿಕ ಉಂಗುರಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನು ನೀವೇ ನಿರ್ಧರಿಸಿ.