ಮದುವಣಗಿತ್ತಿಯಂತೆ ಸಿಂಗಾರಗೊಂಡು ವಿದ್ಯಾರ್ಥಿಗಳಿಗೆ ಸ್ವಾಗತ ಕೋರುತ್ತಿರುವ ಪರೀಕ್ಷಾ ಕೇಂದ್ರಗಳು
ಎಸೆಸೆಲ್ಸಿ ಪರೀಕ್ಷೆಗೆ ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಮೈಸೂರು,ಜು.18: ನಾಳೆ (ಜುಲೈ-19 ಮತ್ತು 22) ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ಸರ್ಕಾರಿ ಶಾಲೆಗಳನ್ನು ಮದುವಣಗಿತ್ತಿಯಿಂತೆ ಅಲಂಕರಿಸಲಾಗಿದೆ.
ಎಸೆಸೆಲ್ಸಿ ಪರೀಕ್ಷೆ ನಡೆಸಬೇಕೆ ಬೇಡವೆ ಎಂಬ ಜಿಜ್ಞಾಸೆಯಲ್ಲಿದ್ದ ರಾಜ್ಯ ಸರಕಾರ ಹಲವು ವಿರೋಧದ ನಡುವೆಯೂ ಪರೀಕ್ಷೆ ನಡೆಸಲು ತೀರ್ಮಾನ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ರಿಟ್ ಸಲ್ಲಿಸಿತ್ತಾದರೂ. ಕೋರ್ಟ್ ಎಸೆಸೆಲ್ಸಿ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು.
ಇದರ ಬೆನ್ನಲ್ಲೇ ಜು.21 ಮತ್ತು 22 ರಂದು ನಡೆಯಲಿರುವ ಪರೀಕ್ಷಾ ಕೇಂದ್ರಗಳನ್ನು ಹಬ್ಬದ ವಾತಾವರಣದಲ್ಲಿ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿದೆ. ಪರೀಕ್ಷಾ ಕೇಂದ್ರದ ಆವರಣಗಳಲ್ಲಿ ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಅಳವಡಿಸುವ ಮಾದರಿಯ ದೊಡ್ಡ ಬೋರ್ಡ್‍ಗಳನ್ನು ಹಾಕಿ “ಎಸೆಸೆಲ್ಸಿ ಪರೀಕ್ಷಾರ್ಥಿಗಳಿಗೆ ಸ್ವಾಗತ” ಎಂಬ ಕಮಾನುಗಳನ್ನು ಹಾಕಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಂತೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರ ನೇತೃತ್ವದಲ್ಲಿ ನಂಜನಗೂಡು ನಗರದ ಸರ್ಕಾರಿ ಶಾಲೆಗಳ ಪರೀಕ್ಷಾ ಕೇಂದ್ರಗಳನ್ನು ಬಹಳ ಸೊಗಸಾಗಿ ಸಿಂಗರಿಸಲಾಗಿದೆ. ಶಾಲಾ ಆವರಣದಲ್ಲಿ ಶಿಕ್ಷಕರುಗಳು ರಂಗೋಲಿ ಬಿಟ್ಟು, ವಿವಿಧ ಬಗೆಯ ಹೂವುಗಳನ್ನು ಕಟ್ಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ್ದಾರೆ.
ಜೊತೆಗೆ ರವಿವಾರ ನಂಜನಗೂಡು ತಾಲೂಕು ದಾಸನೂರು ಗ್ರಾಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಗೈರು ಹಾಜರಾಗುವ ಸಂಭವವಿರುವ ವಿದ್ಯಾರ್ಥಿಗಳ ಮನೆಗೆ ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮತ್ತು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಅಧ್ಯಕ್ಷರಗಳೊಂದಿಗೆ ಭೇಟಿ ನೀಡಿ ಹಾಗೂ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬಿ ಮನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿ ವಿದ್ಯಾರ್ಥಿಗಳಿಗೆ ಪೆನ್ ಮತ್ತು ಮಾಸ್ಕ್ ನೀಡಲಾಯಿತು.
ಪರೀಕ್ಷೆ ನಡೆಯುವ ಎರಡೂ ದಿನಗಳು ಹಲವು ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂಧಿಗಳಿಗೆ ಜಿಲ್ಲೆಯ ಹಲವು ಶಾಲೆಗಳಲ್ಲಿ ಹಬ್ಬದ ಊಟವನ್ನು ಹಾಕಲಾಗುತ್ತದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 237 ಪರೀಕ್ಷಾ ಕೇಂದ್ರಗಳಿದ್ದು, 38,989 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳ ಬಳಿ 144 ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ರೆಗ್ಯುಲರ್ 37.474, ಖಾಸಗಿ -1081, ವಿಶೇಷ ಮಕ್ಕಳು-434 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲಿದ್ದಾರೆ. ಒಂದೊಂದು ಕೊಠಡಿಗೆ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ.
ಪರೀಕ್ಷಾ ಪ್ರಕ್ರಿಯೆಗೆ 3,500 ಸಿಬ್ಬಂದಿ ನಿಯೋಜಿಸಲಾಗಿದೆ. ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳು, ಕೆಫೆ, ಕಂಪ್ಯೂಟರ್ ಕೇಂದ್ರಗಳನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಬಳಿ ಗುಂಪುಗೂಡುವುದು, ನಿಲ್ಲುವುದು ಮತ್ತು ವಾಹನಗಳನ್ನು ಪಾರ್ಕಿಂಗ್‍ಗೂ ನಿಷೇಧಿಸಲಾಗಿದೆ.
ಜಿಲ್ಲೆಯ ಹಲವು ಕೇಂದ್ರಗಳಲ್ಲಿ ಹಬ್ಬದ ವಾತಾವರಣದಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ಸರ್ಕಾರದ ನಿಯಮ ಅಲ್ಲ, ಆದರೂ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಆಯಾ ಶಿಕ್ಷಕರುಗಳೇ ಸ್ವಂತ ಹಣದಿಂದ ಖರ್ಚು ಮಾಡಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿರುವುದು ಸಂತಸವುಂಟು ಮಾಡಿದೆ.
-ಪಾಂಡು ರಂಗ,
ಡಿಡಿಪಿಐ ಮೈಸೂರು.
ನಂಜನಗೂಡು ತಾಲೂಕಿನ ಹಲವು ಗ್ರಾಮಗಳಿಗೆ ತೆರಳಿ ಎಸೆಸೆಲ್ಸಿ ಪರೀಕ್ಷೆಗೆ ಗೈರಾಗುವ ಸಂಭವವಿರುವ ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾರ್ಥಿಗಳ ಮನವೊಲಿಸಲಾಗಿದೆ. ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಈ ಬಾರಿ ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ಸಂಭವವಿದೆ.
ಸಿ.ಎನ್.ರಾಜು,-ಬಿಇಓ, ನಂಜನಗೂಡು ತಾಲೂಕು