ಭಾರತ, ಪಾಕ್, ಬಾಂಗ್ಲಾ ವಿಮಾನಸಂಚಾರ ನಿರ್ಬಂಧ ಕನಿಷ್ಟ ಜುಲೈ 25ರವರೆಗೆ ವಿಸ್ತರಣೆ: ಎಮಿರೇಟ್ಸ್
ದುಬೈ, ಜು.18: ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪ್ರಯಾಣಿಕರ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧ ಕನಿಷ್ಟ ಜುಲೈ 25ರವರೆಗೆ ಮುಂದುವರಿಯಲಿದೆ ಎಂದು ದುಬೈಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಹೇಳಿದೆ.
ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಅಥವಾ ಗ್ಲೋಬಲ್ ವೀಸಾ ಹೊಂದಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಆದರೆ ಇವರು ವಿಮಾನ ಪ್ರಯಾಣಕ್ಕಿಂತ 48 ಗಂಟೆ ಮೊದಲು ಪಿಸಿಆರ್ ಪರೀಕ್ಷೆ ನಡೆಸಿದ ವರದಿ ಹೊಂದಿರಬೇಕು. ಕಳೆದ 14 ದಿನಗಳಲ್ಲಿ ಈ ನಾಲ್ಕು ದೇಶಗಳೊಂದಿಗೆ ಸಂಪರ್ಕ ಹೊಂದಿರುವ ಪ್ರಯಾಣಿಕರಿಗೂ, ಯಾವುದೇ ಸ್ಥಳದಿಂದ ಯುಎಇಗೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ 6 ದೇಶಗಳ ವಿಮಾನಗಳಿಗೆ ನಿರ್ಬಂಧವನ್ನು ಈ ಹಿಂದೆ ಜುಲೈ 21ರವರೆಗೆ ವಿಸ್ತರಿಸಲಾಗಿತ್ತು. ನಿರ್ಬಂಧ ಯಾವಾಗ ಅಂತ್ಯಗೊಳ್ಳಲಿದೆ ಎಂಬ ಬಗ್ಗೆ ಯುಎಇಯ ಜನರಲ್ ಏವಿಯೇಷನ್ ಅಥಾರಿಟಿ(ಜಿಸಿಎಎ) ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪ್ರಯಾಣಿಕರ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧ ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ಯುಎಇಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್ವೇಸ್ ಶುಕ್ರವಾರ ಹೇಳಿತ್ತು.