varthabharthi


ಕರಾವಳಿ

ವಿಶಾಲ ಗಾಣಿಗ ಕೊಲೆ ಪ್ರಕರಣ: ಸಾಕ್ಷಿ, ಸಾಕ್ಷ್ಯಗಳೇ ಇಲ್ಲದ ಪ್ರಕರಣವನ್ನು ಬೇಧಿಸಿದ ಉಡುಪಿ ಪೊಲೀಸರು

ವಾರ್ತಾ ಭಾರತಿ : 22 Jul, 2021

ಉಡುಪಿ, ಜು.21: ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಇದ್ದರೂ ಜನ ಸಂಚಾರವೇ ವಿರಳವಿರುವ ಪ್ರದೇಶದಲ್ಲಿರುವ ವಸತಿ ಸಂಕೀರ್ಣ ಅದು. 32 ಪ್ಲಾಟ್‌ಗಳಿರುವ ಈ ವಸತಿ ಸಂಕೀರ್ಣಕ್ಕೆ ವಾಚ್‌ಮೆನ್ ಇರುವುದಿಲ್ಲ. ಅಲ್ಲಿ ಒಂದೇ ಒಂದು ಸಿಸಿಟಿವಿಯನ್ನೂ ಅಳವಡಿಸಿಲ್ಲ. ಒಟ್ಟಾರೆ ಕೃತ್ಯ ನಡೆದ ಸ್ಥಳ ಹಾಗೂ ಆಸುಪಾಸಿನಲ್ಲಿ ಯಾವುದೇ ಪುರಾವೆಯೂ ಇಲ್ಲ, ಸಾಕ್ಷ್ಯವೂ ಇಲ್ಲ. ಅಲ್ಲಿಗೆ ಜು.12ರ ಅಪರಾಹ್ನದ ವೇಳೆ ಇಬ್ಬರು ಕೊಲೆಗಾರರು ಬಂದಿದ್ದನ್ನು ನೋಡಿದವರು ಯಾರೂ ಇಲ್ಲ. ಒಟ್ಟಾರೆ ಉಪ್ಪಿನಕೋಟೆ ಕುಮ್ರಗೋಡಿನ ಮಿಲನ ರೆಸಿಡೆನ್ಸಿಯಲ್ಲಿ ಅಂದು ನಡೆದ ಗೃಹಿಣಿಯೊಬ್ಬಳ ಕೊಲೆಗೆ ಯಾರೂ ಸಾಕ್ಷಿಗಳು ಇರಲಿಲ್ಲ... ಯಾವ ಸಾಕ್ಷ್ಯವೂ ಇರಲಿಲ್ಲ.

ಆದರೆ ಎಸ್ಪಿ ಎನ್. ವಿಷ್ಣುವರ್ಧನ್ ನೇತೃತ್ವದ ಉಡುಪಿ ಪೊಲೀಸ್‌ನ ನಾಲ್ಕು ಹಿರಿಯ ಅಧಿಕಾರಿಗಳ ತನಿಖಾ ತಂಡ, ಕೃತ್ಯ ನಡೆದ ಒಂದು ವಾರದ ಅಂತರದಲ್ಲೇ ಇಡೀ ಪ್ರಕರಣವನ್ನು ಬೇಧಿಸಿದ್ದಲ್ಲದೇ, ಇಡೀ ಪ್ರಕರಣದ ರೂವಾರಿಯಾದ ಕೊಲೆಯಾದ ಮಹಿಳೆಯ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಹಾಗೂ ಆತನಿಂದ ಕೃತ್ಯಕ್ಕೆ ಸುಪಾರಿ ಪಡೆದಿದ್ದ ಇಬ್ಬರು ಹಂತಕರ ಪೈಕಿ ಒಬ್ಬನನ್ನು ದೂರದ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಬಂಧಿಸಿ ಉಡುಪಿಗೆ ಕರೆ ತಂದಿರುವುದು ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೊಂದು ಬೆಳ್ಳಿ ತುರಾಯಿ ಎನ್ನಬಹುದು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದಂತೆ, ಇಡೀ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಉಡುಪಿ ಪೊಲೀಸ್ ತಂಡ, ನಾಲ್ಕು ತಂಡಗಳಾಗಿ ಜಿಲ್ಲೆಯಾದ್ಯಂತ ಇರುವ ಸಿಸಿಟಿವಿ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳ ಸಿಸಿಟಿವಿ, ಟ್ಯಾಕ್ಸಿಗಳ ವಿಚಾರಣೆ, ಎಲ್ಲಿಂದಲೂ ಪ್ರಕರಣ ತನಿಖೆಯನ್ನು ಮುಂದಕ್ಕೊಯ್ಯುವ ಯಾವುದೇ ಸಾಕ್ಷಿ ಸಿಗದೇ ಪೇಚಾಡುವಂತಾಗಿತ್ತು.

ಜಿಲ್ಲಾ ಪೊಲೀಸ್ ಕಚೇರಿಯ ಆರ್‌ಡಿಸಿಯ ತಾಂತ್ರಿಕ ತಂಡ, ಇಡೀ ಪ್ರಕರಣವನ್ನು ತಾಂತ್ರಿಕ ಸಾಕ್ಷ್ಯಾಧಾರಗಳ ಮೇಲೆ ವಿಶ್ಲೇಷಣೆ ನಡೆಸಿತ್ತು. ಇದರಂತೆ ತಂಡಗಳು ಸಿಕ್ಕ ಕೆಲ ಲೀಡ್‌ಗಳ ಬೆನ್ನುಹತ್ತಿ ಹಾಸನ, ಬೆಂಗಳೂರು, ಮಂಗಳೂರು, ಹೈದರಾಬಾದ್, ಮಹಾರಾಷ್ಟ್ರ ಹಾಗೂ ಕೇರಳಕ್ಕೆ ತೆರಳಿ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಪ್ರಯತ್ನಿಸಿತ್ತು ಎಂದು ಎಸ್ಪಿ ತಿಳಿಸಿದರು.

ಕೊನೆಗೂ ತಾಂತ್ರಿಕ ವಿಶ್ಲೇಷಣೆಯ ಸಂದರ್ಭದಲ್ಲಿ ಸಿಕ್ಕಿದ ಮಹತ್ವದ ಸಣ್ಣ ಸುಳಿವನ್ನು ಹಿಂಬಾಲಿಸಿ ಮಣಿಪಾಲ ಪಿಐ ಮಂಜುನಾಥ, ಮಲ್ಪೆ ಸಿಪಿಐ ಶರಣ ಗೌಡ, ಕಾರ್ಕಳ ಪಿಎಸ್‌ಐ ಮಧು ಹಾಗೂ ಮಣಿಪಾಲ ಪಿಎಸ್‌ಐ ರಾಜಶೇಖರ ವಂದಲಿ ತಂಡ ಉತ್ತರ ಪ್ರದೇಶಕ್ಕೆ ತೆರಳಿತ್ತು. ಅಲ್ಲಿ ಸಿಕ್ಕ ಮಾಹಿತಿಯಂತೆ ಆರೋಪಿ ಗೋರಖಪುರದಲ್ಲಿರುವುದನ್ನು ಅರಿತು ಅಲ್ಲಿಗೆ ಹೋಗಿ, ಅಲ್ಲಿನ ಎಸ್‌ಎಸ್‌ಪಿ ದಿನೇಶ್‌ ಕುಮಾರ್ ಹಾಗೂ ಅವರ ತಂಡದ ಸಹಯೋಗದೊಂದಿಗೆ ಸಂಶಯಿತ ಆರೋಪಿ ಸ್ವಾಮಿನಾಥ ನಿಶಾದ (38)ನನ್ನು ನೇಪಾಳ ಗಡಿ ಸಮೀಪ ವಶಕ್ಕೆ ಪಡೆದಿತ್ತು ಎಂದು ವಿಷ್ಣುವರ್ಧನ್ ವಿವರಿಸಿದರು.

ಸುಪಾರಿ ಕಿಲ್ಲರ್ ಬಾಯ್ಬಿಟ್ಟ ಸತ್ಯ: ಜು.19ರಂದು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕೊಲೆಯಾದ ವಿಶಾಲ ಗಾಣಿಗರ ಗಂಡ ರಾಮಕೃಷ್ಣನೇ ಕೊಲೆಗೆ ಸುಪಾರಿ ನೀಡಿರುವುದನ್ನು ಬಹಿರಂಗ ಪಡಿಸಿದ್ದು, ಅದುವರೆಗೆ ಹಲವು ಬಾರಿ ಪೊಲೀಸರಿಂದ ವಿಚಾರಣೆಗೊಳಗಾದರೂ ಯಾವುದೇ ಗುಟ್ಟು ಬಿಟ್ಟುಕೊಡದ ರಾಮಕೃಷ್ಣ ಗಾಣಿಗನನ್ನು ತನಿಖಾಧಿಕಾರಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ಹಾಗೂ ಪಿಎಸ್‌ಐ ಗುರುನಾಥ ಬಿ.ಹಾದಿಮನಿ ತಂಡ ಜು.19ರಂದೇ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಶಕ್ಕೆ ಪಡೆದು ಬಂಧಿಸಿತ್ತು ಎಂದರು.

ವಿಚಾರಣೆಯ ವೇಳೆ ಆತ ನಮ್ಮಿಬ್ಬರ ಮಧ್ಯ ಇದ್ದ ವೈಮನಸ್ಸೇ ಕೊಲೆಗೆ ಕಾರಣ ಎಂದು ಹೇಳಿದ್ದ. ಕೊಲೆಗಾಗಿ ಆರು ತಿಂಗಳಿನಿಂದ ಸಂಚು ನಡೆಸಿ ಸುಪಾರಿ ಹಂತಕರಿಗೆ ಸುಮಾರು ಎರಡು ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಬ್ಯಾಂಕ್ ಮೂಲಕ ನೀಡಿ ದುಬೈಯಲ್ಲೇ ಕುಳಿತು ಯೋಜನೆ ರೂಪಿಸಿ ಜು.12ರಂದು ಹಂತಕರನ್ನು ಪೂರ್ವಯೋಜಿತದಂತೆ ವಿಶಾಲ ಗಾಣಿಗ ಏಕಾಂಗಿಯಾಗಿದ್ದ ಫ್ಲ್ಯಾಟ್‌ಗೆ ಕಳುಹಿಸಿ ಕೊಲೆ ಮಾಡಿಸಿದ ವಿಚಾರವನ್ನು ತನಿಖೆ ವೇಳೆ ಬಹಿರಂಗ ಪಡಿಸಿದ ಎಂದು ಎಸ್ಪಿ ತಿಳಿಸಿದರು.

ಇದೀಗ ಕೊಲೆ ಕೃತ್ಯದಲ್ಲಿ ಭಾಗಿಯಾದ ಗೋರಖಪುರದವನೇ ಆದ ಇನ್ನೊಬ್ಬ ಸುಪಾರಿ ಹಂತಕ ಹಾಗೂ ಇಬ್ಬರು ಹಂತಕರನ್ನು ರಾಮಕೃಷ್ಣನಿಗೆ ಪರಿಚಯಿಸಿದ ವ್ಯಕ್ತಿಯನ್ನು ಬಂಧಿಸಬೇಕಿದೆ. ಇಬ್ಬರ ಬಗ್ಗೆಯೂ ಖಚಿತ ಮಾಹಿತಿ ಇದ್ದು, ಒಂದೆರಡು ದಿನಗಳಲ್ಲಿ ಬಂಧಿಸುವುದಾಗಿ ಎಸ್ಪಿ ವಿಶ್ವಾಸ ವ್ಯಕ್ತಪಡಿಸಿದರು.

ಇಬ್ಬರು ಹಂತಕರು ಮೊದಲು ಬೆಂಗಳೂರಿನಲ್ಲಿದ್ದು, ಕಳೆದ ಲಾಕ್‌ಡೌನ್ ಸಮಯದಲ್ಲಿ ಹುಟ್ಟೂರು ಗೋರಖ್‌ಪುರಕ್ಕೆ ತೆರಳಿದ್ದರು. ಅಲ್ಲಿ ನಿರುದ್ಯೋಗಿಯಾಗಿದ್ದ ಅವರು ನಿರ್ದಿಷ್ಟ ಮೊತ್ತಕ್ಕಾಗಿ ಸುಪಾರಿ ಹಂತಕರಾಗಲು ಉಡುಪಿಗೆ ಬಂದಿದ್ದರು ಎಂದರು.

ಮಾರ್ಚ್‌ನಲ್ಲೇ ಹತ್ಯೆಗೆ ಸಂಚು: ವಿಶಾಲ ಗಾಣಿಗರ ಹತ್ಯೆಗೆ ರಾಮಕೃಷ್ಣ ಕಳೆದ ಮಾರ್ಚ್‌ನಲ್ಲೇ ಸಂಚು ರೂಪಿಸಿದ್ದ. ಆಗ ಹೆಂಡತಿ, ಮಗುವಿನೊಂದಿಗೆ ತನ್ನು ಊರಿನ ಮನೆಯ ಪಾಲು ಹಂಚಿಕೆ ನೆಪದಲ್ಲಿ ಊರಿಗೆ ಬಂದಿದ್ದ ರಾಮಕೃಷ್ಣ ಕುಮ್ರಗೋಡಿನ ಫ್ಲ್ಯಾಟ್‌ನಲ್ಲೇ ಉಳಿದು ಕೊಂಡಿದ್ದ. ಆಗಲೇ ಇಬ್ಬರು ಹಂತಕರನ್ನು ಫ್ಲ್ಯಾಟ್‌ ಗೆ ಕರೆಸಿ ತನ್ನ ಸ್ನೇಹಿತರೆಂದು ಪರಿಚಯಿಸಿದ್ದ.

ಯೋಜನೆಯ ಮುಂದಿನ ಭಾಗವಾಗಿ ಕಳೆದ ಜೂ.30ರಂದು ಮಗುವಿನೊಂದಿಗೆ ಊರಿಗೆ ಕಳುಹಿಸಿದ ಆತ, ಗುಜ್ಜಾಡಿ ಗ್ರಾಮದ ನಾಯಕನವಾಡಿ ತಂದೆ ವಾಸು ಗಾಣಿಗರ ಮನೆಯಲ್ಲಿದ್ದ ವಿಶಾಲರನ್ನು ವಾರದ ಹಿಂದೆ ದುಬೈಯಿಂದ ಬಂದ ಸ್ನೇಹಿತನ ಬಳಿ ಮಕ್ಕಳಿಗಾಗಿ ಪಾರ್ಸೆಲ್ ಒಂದನ್ನು ಕಳುಹಿಸಿದ್ದು, ಅದನ್ನು ಒಬ್ಬಳೇ ಫ್ಲ್ಯಾಟ್‌ ಗೆ ಹೋಗಿ ತೆಗೆದುಕೊಂಡು ಬಾ ಎಂದು ಕಳುಹಿಸಿದ್ದ. ಆಕೆ ತಾನು ಹೇಳಿದರೆ ಏಕಾಂಗಿಯಾಗಿ ಹೋಗುತ್ತಾಳೋ ಎಂಬುದನ್ನು ಪರೀಕ್ಷಿಸಲು ಹೀಗೆ ಮಾಡಿದ್ದ ಅವರು ಎಸ್ಪಿ ವಿವರಿಸಿದರು.

ಯೋಜನೆಯ ಪರೀಕ್ಷೆ:  ಆಕೆ ಏಕಾಂಗಿಯಾಗಿ ಕುಮ್ರಗೋಡು ಫ್ಲ್ಯಾಟ್‌ ಗೆ ಹೋಗಿ ಸ್ನೇಹಿತನನ್ನು ಭೇಟಿ ಮಾಡಿ ಪಾರ್ಸೆಲ್ ತಂದಿದ್ದರಿಂದ, ನಿಜವಾದ ಯೋಜನೆಯನ್ನು ಕಾರ್ಯಗತ ಗೊಳಿಸಲು ಮುಂದಾದ ಎಂದ ಅವರು, ಜು.12ರ ಬೆಳಗ್ಗೆ ಫ್ಲ್ಯಾಟ್‌ ನಲ್ಲಿದ್ದು ತಂದೆ, ತಾಯಿ, ಮಗುವಿನೊಂದಿಗೆ ರಿಕ್ಷಾದಲ್ಲಿ ಗುಜ್ಜಾಡಿಗೆ ಬಂದಿದ್ದ ವಿಶಾಲರ ಬಳಿ, ನನ್ನ ಸ್ನೇಹಿತರಿಬ್ಬರು ಫ್ಲ್ಯಾಟ್‌ ಗೆ ಬರಲಿದ್ದು, ಏಕಾಂಗಿಯಾಗಿ ಹೋಗಿ ಅವರು ನೀಡುವ ಪಾರ್ಸೆಲ್‌ ತೆಗೆದುಕೊಳ್ಳುವಂತೆ ಹೇಳಿದ್ದರಿಂದ ಗುಜ್ಜಾಡಿಗೆ ಹೋದ ರಿಕ್ಷಾದಲ್ಲೇ ವಿಶಾಲ ಗಾಣಿಗ ಮರಳಿ ಫ್ಲ್ಯಾಟ್‌ ಗೆ ಹೋಗಿದ್ದರು.

ಪತ್ನಿಗೆ ಫೋನಾಯಿಸಿ ಎಲ್ಲಿರುವುದಾಗಿ ವಿಚಾರಿಸಿದ ರಾಮಕೃಷ್ಣ, ಬಳಿಕ ಹಂತಕರಿಗೆ ಕರೆ ಮಾಡಿ ಫ್ಲ್ಯಾಟ್‌ ಗೆ ತೆರಳುವಂತೆ ತಿಳಿಸಿದ್ದ. ಅದರಂತೆ ವಿಶಾಲ ಫ್ಲ್ಯಾಟ್‌ ತಲುಪಿದ ಕೆಲವೇ ಹೊತ್ತಿನಲ್ಲಿ ಹಂತಕರಿಬ್ಬರು ಅಲ್ಲಿಗೆ ಬಂದಿದ್ದರು. ಅವರು ಸ್ನೇಹಿತರೆಂದು ಮೊದಲೇ ಪರಿಚಯಿಸಿದ್ದರಿಂದ ಅವರನ್ನು ಒಳಗೆ ಕರೆದಾಗ, ಬಂದವರಿಬ್ಬರು ತಮ್ಮ ಕೆಲಸ ಮುಗಿಸಿ ತನಿಖೆಯ ದಾರಿ ತಪ್ಪಿಸಲು ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದರು ಎಂದವರು ಹೇಳಿದರು.

ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಒಂದು ವಾರ ತುಂಬಾ ಕಷ್ಟಪಟ್ಟು ತನ್ನ ಸಮರ್ಥ ತಂಡ ಪ್ರಕರಣವನ್ನು ಬೇಧಿಸಿದ್ದಲ್ಲದೇ ಆರೋಪಿಗಳಿಬ್ಬರನ್ನು ಬಂಧಿಸಿದೆ. ಆದರೆ ಕೊಲೆಗೆ ನಿಜವಾದ ಕಾರಣ ಮಾತ್ರ ಇನ್ನೂ ಪೂರ್ಣವಾಗಿ ಹೊರಬಂದಿಲ್ಲ. ರಾಮಕೃಷ್ಣ ಹಾಗೂ ಸುಪಾರಿ ಕಿಲ್ಲರ್‌ನ ವಿಚಾರಣೆಯಿಂದ ಇದು ಸ್ಪಷ್ಟವಾಗಲಿದೆ ಎಂದು ವಿಷ್ಣುವರ್ಧನ್ ತಿಳಿಸಿದರು.

ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಇತ್ತೀಚಿಗೆ ಭಾರೀ ಸಂಚಲನ ಉಂಟು ಮಾಡಿದ್ದ ವಿಶಾಲ ಗಾಣಿಗ ಕೊಲೆ ಕೇಸ್‌ಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಸಿನಿಮಾ ಕತೆಯಂತೆ ಇಲ್ಲಿ ಅತಿ ಬುದ್ಧಿವಂತ ಪತಿಯೇ ಕೊಲೆಗಾರ. ದೂರ ದುಬೈಯಲ್ಲಿ ಕುಳಿತು ಸೂತ್ರದಾರನಂತೆ, ದೇಶದ ಇನ್ನೊಂದು ಮೂಲೆಯ ಹಂತಕರನ್ನು ಛೂಬಿಟ್ಟರೆ ತಾನು ಸುರಕ್ಷಿತ ಎಂದು ಭಾವಿಸಿದ್ದ ಆತನ ಬುದ್ಧಿವಂತಿಕೆ ಉಡುಪಿ ಪೊಲೀಸರ ವೃತಿಪರತೆಯ ಮುಂದೆ ಸೋತು, ಸುಖದ ಸುಪ್ಪತ್ತಿಗೆಯಲ್ಲಿದ್ದ ಈತ ಈಗ ಜೈಲು ಪಾಲಾಗುವಂತಾಗಿದೆ.

ಸುಪಾರಿ ಯಾಕಾಗಿ?:  ಇದು ಸದ್ಯ ತನಿಖಾಧಿಕಾರಿಗಳನ್ನು ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಜೊತೆಯಾಗಿ ಸಪ್ತಪದಿ ತುಳಿದವಳಿಗೆ ಸುಪಾರಿ ಕೊಡುವಷ್ಟು ಕೋಪ ಯಾಕೆ ಇರಬಹುದು ಎಂದರೆ ಪೊಲೀಸರು ಹೇಳೋದು ಕೌಟುಂಬಿಕ ಸಮಸ್ಯೆ ಎಂದು. ಆದರೆ ಅಸಲಿ ಕಾರಣ ಇನ್ನಷ್ಟೆ ಸ್ಪಷ್ಟಗೊಳ್ಳಬೇಕು ಎಂದವರು ಸೇರಿಸುತ್ತಾರೆ. ತನಿಖೆ ಮುಂದುವರಿದರೆ ಆರ್ಥಿಕ ವ್ಯವಹಾರ, ಆಸ್ತಿ ಗಲಾಟೆ, ಅಕ್ರಮ ಸಂಬಂಧಗಳೆಲ್ಲವೂ ಇದಕ್ಕೆ ಸೇರಿಕೊಳ್ಳುವ ಸಾಧ್ಯತೆಯನ್ನು ಅವರು ನಿರಾಕರಿಸುವುದಿಲ್ಲ.

ಕತ್ತಲಲ್ಲಿ ಕಣ್ಣು ಕಟ್ಟಿ ಬಿಟ್ಟಂತೆ ಇದ್ದ ಪ್ರಕರಣವನ್ನು ಒಂದೇ ವಾರದಲ್ಲಿ ಬೇಧಿಸಿ, ಕೊಲೆಗಾರರನ್ನು ಪತ್ತೆ ಹಚ್ಚಿ ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸರ ತಂಡಕ್ಕೆ ಡಿಜಿ-ಐಜಿಪಿ ಪ್ರವೀಣ್ ಸೂಧ್ 50 ಸಾವಿರ ರೂ ನಗದು ಬಹುಮಾನ ಘೋಷಿಸಿದ್ದು, ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಯಿ ಸಾವು, ತಂದೆ ಜೈಲುಪಾಲು. ಇದರ ಮಧ್ಯೆ ಜಗತ್ತೇ ಅರಿಯದ ಪುಟ್ಟ ಮಗು ಮಾತ್ರ ತಬ್ಬಿಲಿಯಾಗಿದ್ದು ಇಡೀ ಪ್ರಕರಣದ ದೊಡ್ಡ ದುರಂತ ಎನ್ನಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)